ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣ: ಪೊಲೀಸರ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿಗಳು

| Updated By: Rakesh Nayak Manchi

Updated on: Jul 19, 2022 | 12:24 PM

ಶಿವಮೊಗ್ಗದಲ್ಲಿ ನಡೆದ ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬರ್ಬರ ಹತ್ಯೆ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳು ತಡರಾತ್ರಿ ಚಿಕ್ಕಮಗಳೂರಿನ ಎಸ್​ಪಿ ಕಚೇರಿಗೆ ಬಂದು ಶರಣಾಗಿದ್ದಾರೆ.

ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣ: ಪೊಲೀಸರ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿಗಳು
ಬರ್ಬರವಾಗಿ ಹತ್ಯೆಯಾಗದ್ದ ರೌಡಿಶೀಟರ್ ಹಂದಿ ಅಣ್ಣಿ
Follow us on

ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ನಡೆದ ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬರ್ಬರ ಹತ್ಯೆ ಪ್ರಕರಣ ಸಂಬಂಧ ಕೊಲೆ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ತಡರಾತ್ರಿ ಎಸ್​ಪಿ ಅಕ್ಷಯ್ ಕಚೇರಿಗೆ ಆಗಮಿಸಿದ ಎಂಟು ಮಂದಿ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಅರೋಪಿಗಳು ಚಿಕ್ಕಮಗಳೂರು ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಗೃಹ ಸಚಿವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ಹಂದಿ ಅಣ್ಣಿಯ ಬರ್ಬರ ಹತ್ಯೆ ಬೆಚ್ಚಿಬೀಳಿಸಿತ್ತು. ಬೈಕ್​ನಲ್ಲಿ ಹೋಗುತ್ತಿದ್ದ ಹಂದಿ ಅಣ್ಣಿಯನ್ನು ಅಡ್ಡಗಟ್ಟಿದಾಗ ತನ್ನ ಮೇಲೆ ದಾಳಿ ನಡೆಸುವ ಬಗ್ಗೆ ತಿಳಿದು ಪೊಲೀಸ್ ಚೌಕಿ ಕಡೆ ಓಡಲು ಆರಂಭಿಸುತ್ತಾನೆ. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಹಂದಿ ಅಣ್ಣಿಯ ಬೆನ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಹಂದಿ ಅಣ್ಣಿ ನೆಲಕ್ಕೆ ಬಿದ್ದಾಗ ದುಷ್ಕರ್ಮಿಗಳು ಮನಬಂದಂತೆ ತಲೆಯನ್ನು ಲಾಂಗು, ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ತಲೆಗೆ ಗಂಭಿರವಾಗಿ ಗಾಯಗೊಂಡಿದ್ದ ಹಂದಿ ಅಣ್ಣಿ ರಕ್ತದ ಮಡುವಿನಲ್ಲಿ ಹೊರಳಾಡುತ್ತಾ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಈ ಘಟನೆ ನಡೆದಿತ್ತು. ಹಂದಿ ಅಣ್ಣಿ ತನ್ನ 18ನೇ ವಯಸ್ಸಿಗೆ ರೌಡಿಶೀಟರ್ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದನು. ಕುಖ್ಯಾತ ರೌಡಿಗಳಾಗಿದ್ದ ಲವ ಹಾಗೂ ಕುಶ ಎಂಬ ಸಹೋದರರನ್ನು ಹತ್ಯೆ ಮಾಡಿದ ಹಂದಿ ಅಣ್ಣಿ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ನಂತರ ಮತ್ತೋರ್ವ ರೌಡಿ ಹೆಬ್ಬೆಟ್ಟು ಮಂಜನ ಶಿಷ್ಯನಾಗಿ ಸೇರ್ಪಡೆಗೊಂಡು ಕೊಲೆಗಳನ್ನು ಮಾಡಲು ಆರಂಭಿಸಿದ್ದನು.

ಶಿವಮೊಗ್ಗ ಬಿಟ್ಟು ಚಿಕ್ಕಮಗಳೂರಿಗೆ ಯಾಕೆ ಬಂದ್ರು?

ಆರೋಪಿಗಳು ಶಿವಮೊಗ್ಗ ಬಿಟ್ಟು ಚಿಕ್ಕಮಗಳೂರಿಗೆ ಬರಲು ಕಾರಣ ಏನು ಎಂದು ಎಸ್​ಪಿ ಅಕ್ಷಯ್ ಮುಂದೆ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್​ಪಿ ಅಕ್ಷಯ್, ಹತ್ಯೆ ಬಳಿಕ ಎಲ್ಲೆಲ್ಲಿ ಹೋಗಿದ್ದರು, ಏನೇನು ಮಾಡಿದರು ಎಂದು ಆರೋಪಿಗಳು ಹೇಳಿದ್ದಾರೆ. ಶಿವಮೊಗ್ಗಕ್ಕೆ ಹೋದರೆ ನಮಗೆ ಭಯವಿದೆ, ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ನಮ್ಮನ್ನ ಶರಣಾಗತಿ ಎಂದು ಪರಿಗಣಿಸಿ ಎಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ಸಿಕ್ಕಿರುವ ಮಾಹಿತಿ ಪ್ರಕಾರ ಇವರೇ ಆರೋಪಿಗಳು ಎಂಬುದು ಮೇಲ್ನೋಟಕ್ಕೆ ಖಚಿತವಾಗಿದೆ. ನಮ್ಮಲ್ಲಿ ಶರಣಾಗತಿ ಆದ ಬಳಿಕ ಆರೋಪಿಗಳ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ತಿಳಿಸಿದ್ದಾಗಿ ಹೇಳಿದ್ದಾರೆ.

KSRTC ಬಸ್ ಚಾಲಕನಿಂದ ಹಲ್ಲೆ ಆರೋಪ

ಕೋಲಾರ: ಕೆಎಸ್​ಆರ್​ಟಿಸಿ ಬಸ್ ಚಾಲಕನೊರ್ವ ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿರು ಆರೋಪ ಕೇಳಿಬಂದಿದೆ. ಕೋಲಾರ ತಾಲೂಕು ಬೆಣ್ಣಂಗೂರು ಗ್ರಾಮದ ನಿವಾಸಿ ಶ್ರೀನಿವಾಸಪುರ ಬಸ್ ಡಿಪೋ ಚಾಲಕ ನಾಗರಾಜ್ ಎಂಬವರು ಶಂಕರ್ ಹಾಗೂ ನಾಗೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಮದ್ಯ ಸೇವನೆ ಮಾಡಿ ಬಂದು ಇಬ್ಬರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಶಂಕರ್ ಹಾಗೂ ನಾಗೇಶ್ ಅವರ ತಲೆ ಮತ್ತು ಮೈಕೈಗಳಿಗೆ ಗಾಯಗಳಾಗಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ನಾಗರಾಜ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

Published On - 9:35 am, Tue, 19 July 22