ಬೆಂಗಳೂರು: ಹೈಟೆಕ್ ವೇಶ್ಯಾವಾಟಿಕೆ ಪ್ರಕರಣದ ಮುಖ್ಯ ಆರೋಪಿ ಸ್ಯಾಂಟ್ರೋ ರವಿ (Santro Ravi) ಆರೋಗ್ಯದಲ್ಲಿ ಏರುಪೇರಾಗಿದ್ದು ಸಿಐಡಿ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ ಮುಂದುವರಿದಿದೆ. ಶುಗರ್ ಪ್ರಮಾಣ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಅವನನ್ನು ಅಬ್ಸರ್ವೇಶನ್ನಲ್ಲಿ ಇಟ್ಟಿದ್ದಾರೆ.
ವಿಚಾರಣೆ ಎದುರಿಸಲು ಇಷ್ಟವಿಲ್ಲದ ಸ್ಯಾಂಟ್ರೋ ರವಿ ಊಟ ಬಿಟ್ಟು ನಾಟಕವಾಡಿದ್ದಾನೆ. ಪ್ರತಿದಿನ 12 ರಿಂದ 14 ಮಾತ್ರೆ, ಎರಡು ಶಾಟ್ ಇನ್ಸುಲಿನ್ ತೆಗದುಕೊಳ್ಳುತ್ತಾನೆ. ಶುಗರ್, ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಊಟ ಮಾಡದೇ ಮಾತ್ರೆ ತೆಗೆದುಕೊಳ್ಳುತ್ತಿರುವುದರಿಂದ ಲೋ ಬಿಪಿ, ಸುಸ್ತಿನಿಂದ ಕೆಳಗೆ ಬಿದ್ದ. ತಕ್ಷಣ ಪೊಲೀಸರು ಅವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು ಎಂದು ಮೂಲಗಳು ತಿಳಿಸಿವೆ.
ಮೈಸೂರು ಮೂಲದ ಸ್ಯಾಂಟ್ರೋ ರವಿ ಮೇಲೆ 2ನೇ ಪತ್ನಿ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬೇರೆಯವರೊಂದಿಗೆ ದೇಹ ಸಂಪರ್ಕ ಬೆಳೆಸುವಂತೆ ರವಿ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿದ್ದರು.
ಪೊಲೀಸರು ತನಿಖೆ ಆರಂಭಿಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದವು. ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ರವಿ ಹಲವು ಹೆಣ್ಣುಮಕ್ಕಳನ್ನು ದಂಧೆಗೆ ನೂಕಿದ್ದ, ಈ ಹಿಂದೆ ಜೈಲುವಾಸ ಅನುಭವಿಸಿದ್ದ ಅಂಶಗಳೂ ಬೆಳಕಿಗೆ ಬಂದಿತ್ತು. ಪೊಲೀಸ್ ವರ್ಗಾವಣೆಯಲ್ಲಿ ಸ್ಯಾಂಟ್ರೋ ರವಿ ಸಕ್ರಿಯ ಪಾತ್ರ ನಿರ್ವಹಿಸಿದ್ದ ಸಂಗತಿ ರಾಜಕೀಯದ ದಾಳವಾಗಿತ್ತು. ಹಲವು ಸಚಿವರು ಹಾಗೂ ಶಾಸಕರೊಂದಿಗೆ ಸ್ಯಾಂಟ್ರೋ ರವಿ ಇರುವ ಚಿತ್ರಗಳು ವೈರಲ್ ಆಗಿದ್ದವು.
ವೇಶ್ಯಾವಾಟಿಕೆಗಾಗಿ ರಷ್ಯಾ, ಇರಾನ್, ಮುಂಬೈ, ಕೊಲ್ಕೊತ್ತಾ ಗಳಿಂದ ಯುವತಿಯರನ್ನು ಕರೆಸುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲಿ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಕಾರಣ ಇವನಿಗೆ ಸ್ಯಾಂಟ್ರೋ ರವಿ ಎನ್ನುವ ಹೆಸರು ಬಂದಿತ್ತು. ಇಂದಿನ ಐಜಿ ಪ್ರವೀಣ್ ಸೂದ್ 2005ರಲ್ಲಿ ಮೈಸೂರು ಕಮಿಷನರ್ ಆಗಿದ್ದಾಗ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದರು. ಮೈಸೂರಿನಿಂದ ಗಡಿಪಾರು ಮಾಡಿದ್ದರು.
ಇದನ್ನೂ ಓದಿ: ಸ್ಯಾಂಟ್ರೋ ರವಿಗಾಗಿ ರಾಯರ ಸನ್ನಿಧಿಯಲ್ಲಿ ಭಕ್ತರಂತೆ ಹೆಜ್ಜೆ ಹಾಕಿದ ಪೊಲೀಸರು
ಮತ್ತಷ್ಟು ಅಪರಾಧ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:52 am, Fri, 27 January 23