ಸೆನ್ಸೇಷನಲ್ ಕ್ರೈಮ್ ಕತೆಗಳು: ನಿತಾರಿ ಸರಣಿ ಹತ್ಯೆ ದೋಷಿಗಳು-ಸಿಂಗ್ ಮತ್ತು ಕೊಲಿ ಇನ್ನೂ ಬದುಕಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 16, 2022 | 8:02 AM

20-ವರ್ಷ ವಯಸ್ಸಿನ ಪಾಯಲ್ ಹೆಸರಿನ ತರುಣಿಯನ್ನು ಅಪಹರಿಸಿ, ಅವಳ ಮೇಲೆ ಅತ್ಯಾಚಾರ ನಡೆಸಿದ ನಂತರ ಕೊಂದಿದ್ದಾಗಿ ಕೊಲಿ ಪೊಲೀಸರ ಮುಂದೆ ಬಾಯಿಬಿಟ್ಟ! ಪೊಲೀಸರು ಚರಂಡಿಯನ್ನು ಮತ್ತಷ್ಟು ಅಗೆದಾಗ ಅವರಿಗೆ ಸಿಕ್ಕಿದ್ದು ಮಹಿಳೆಯರ ಮತ್ತು ಮಕ್ಕಳ ದೇಹದ ಭಾಗಗಳು! ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು 19 ತಲೆಬುರುಡೆಗಳು!!

ಸೆನ್ಸೇಷನಲ್ ಕ್ರೈಮ್ ಕತೆಗಳು: ನಿತಾರಿ ಸರಣಿ ಹತ್ಯೆ ದೋಷಿಗಳು-ಸಿಂಗ್ ಮತ್ತು ಕೊಲಿ ಇನ್ನೂ ಬದುಕಿದ್ದಾರೆ!
ಸುರಿಂದರ್ ಕೊಲಿ ಮತ್ತು ಮೊನಿಂದರ್ ಸಿಂಗ್ ಪಂಧೇರ್
Follow us on

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಿಮಗಿಂದು ಅತ್ಯಂತ ಹೇಯ, ಭಯಾನಕ ಮತ್ತು ಮನುಕುಲವನ್ನು ಆಘಾತಕ್ಕೊಳಪಡಿಸುವ ‘ನಿತಾರಿ ಕಾಂಡ್’ (Nithari Kand) ಬಗ್ಗೆ ಹೇಳಲಿದ್ದೇವೆ. ಈ ಪ್ರಕರಣ ಬೆಳಕಿಗೆ ಬಂದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಸದರಿ ಪ್ರಕರಣವು ಅಪಹರಣ, ರೇಪ್ (rape), ಕೊಲೆ, ಶಿಶುಕಾಮ ಮತ್ತು ಶವಸಂಭೋಗ (necrophilia) ಮೊದಲಾದ ಹೀನ ಅಪರಾಧಗಳನ್ನು ಒಳಗೊಂಡಿತ್ತು. ಆ ಕೃತ್ಯಗಳೆಲ್ಲ ನಡೆದಿದ್ದು ದೆಹಲಿಗೆ ಹತ್ತಿರವಿರುವ ನೋಯ್ಡಾದ ಸೆಕ್ಟರ್ 31 ರಲ್ಲಿನ ಡಿ-5 ಮನೆಯಲ್ಲಿ.

ಅಸಲಿಗೆ ಅಲ್ಲಿ ನಡೆದಿದ್ದೇನು?

ಅವತ್ತು ಡಿಸೆಂಬರ್ 29, 2006. ನಿತಾರಿ ಗ್ರಾಮದ ಇಬ್ಬರು ನಿವಾಸಿಗಳು ಡಿ-5 ಮನೆಯ ಹಿತ್ತಲ ಚರಂಡಿಯಲ್ಲಿ ಕಾಣೆಯಾಗಿದ್ದರೆಂದು ಹೇಳಲಾಗಿದ್ದ ಮಕ್ಕಳ ದೇಹಗಳನ್ನು ನೋಡಿದ್ದಾಗಿ ಹೇಳಿದರು. ಡಿ-5 ಮನೆಯ ಹಿತ್ತಲನಿಂದ ನೇರವಾಗಿ ಹೋದರೆ ಅದು ನಿಮ್ಮನ್ನು ನಿತಾರಿ ಗ್ರಾಮಕ್ಕೆ ಕರೆದೊಯ್ಯುತ್ತದೆ. ಈ ಮನೆಯಲ್ಲಿ ವಾಸವಾಗಿದ್ದ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಅವನ ಕೆಲಸದಾಳು ಸುರಿಂದರ್ ಕೊಲಿ ಪ್ರಕರಣದಲ್ಲಿ ಶಂಕಿತರಾಗಿದ್ದರು.

ಚರಂಡಿಯಲ್ಲಿ ದೇಹಗಳು ಕಣ್ಣಿಗೆ ಬಿದ್ದ ಸುದ್ದಿ ಊರಲ್ಲಿ ಹಬ್ಬುವುದು ತಡವಾಗಲಿಲ್ಲ. ನಿವಾಸಿಗಳ ಯೋಗಕ್ಷೇಮ ಸಂಸ್ಥೆಯ ಅಧ್ಯಕ್ಷರಾಗಿದ್ದ ಎಸ್ ಸಿ ಮಿಶ್ರಾ ಮತ್ತು ಬೇರೆ ಒಂದಷ್ಟು ಜನ ಚರಂಡಿಯನ್ನು ಶೋಧಿಸಿದಾಗ ಅವರಿಗೆ ಮಕ್ಕಳ ಕೊಳೆತ ಕೈಗಳು ಸಿಕ್ಕವು. ಪೊಲೀಸರು ಸಿಂಗ್ ಮತ್ತು ಕೊಲಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು.

20-ವರ್ಷ ವಯಸ್ಸಿನ ಪಾಯಲ್ ಹೆಸರಿನ ತರುಣಿಯನ್ನು ಅಪಹರಿಸಿ, ಅವಳ ಮೇಲೆ ಅತ್ಯಾಚಾರ ನಡೆಸಿದ ನಂತರ ಕೊಂದಿದ್ದಾಗಿ ಕೊಲಿ ಪೊಲೀಸರ ಮುಂದೆ ಬಾಯಿಬಿಟ್ಟ! ಪೊಲೀಸರು ಚರಂಡಿಯನ್ನು ಮತ್ತಷ್ಟು ಅಗೆದಾಗ ಅವರಿಗೆ ಸಿಕ್ಕಿದ್ದು ಮಹಿಳೆಯರ ಮತ್ತು ಮಕ್ಕಳ ದೇಹದ ಭಾಗಗಳು! ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು 19 ತಲೆಬುರುಡೆಗಳು!!

ಕೊಂದಿದ್ದು ಯಾಕೆ?

ಪೊಲೀಸ್ ಮತ್ತು ಕೇಂದ್ರ ತನಿಖಾ ದಳದ ಅಧಿಕಾರಿಗಳಿಗೆ ಸಿಂಗ್ ಮತ್ತು ಕೊಲಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಅವರಿಬ್ಬರ ವಿರುದ್ಧ ಅಪಹರಣ, ರೇಪ್, ಕೊಲೆ, ಸಾಕ್ಷ್ಯಗಳ ನಾಶ ಮೊದಲಾದ ಆರೋಪಗಳನ್ನು ಹೇರಲಾಗಿತ್ತು. ಕೊಲಿ ನರಭಕ್ಷಕ ಕೂಡ ಆಗಿದ್ದನೆಂದು ಸಿಬಿಐ ತನ್ನ ವರದಿಯಲ್ಲಿ ಹೇಳಿತ್ತು. ಪೊಲೀಸರ ವಿಚಾರಣೆಯಲ್ಲಿ ಅವನು ಮಹಿಳೆಯರನ್ನು ಕೊಂದ ನಂತರವೂ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಭೀಭತ್ಸ ಮತ್ತು ಹೇವರಿಕೆ ಹುಟ್ಟಿಸುವ ಸಂಗತಿಯನ್ನು ಹೇಳಿದ್ದ.

ಪ್ರಕರಣದ ಸದ್ಯದ ಸ್ಥಿತಿ ಏನು?

ಸಿಂಗ್ ಮತ್ತು ಕೊಲಿ ವಿರುದ್ಧ ಒಂದಾದ ನಂತರ ಒಂದರಂತೆ 16 ಪ್ರಕರಣಗಳನ್ನು ದಾಖಲಿಸಲಾಯಿತು. ಅವರಿಬ್ಬರನ್ನು ಕಸ್ಟಡಿಗೆ ತೆಗೆದುಕೊಂಡ ಬಳಿಕ ಬ್ರೇನ್ ಮ್ಯಾಪಿಂಗ್, ಪಾಲಿಗ್ರಾಫ್ ಟೆಸ್ಟ್ ಮತ್ತು ನಾರ್ಕೊ ಅನಾಲಿಸಿಸ್ ಮಾಡಲಾಯಿತು. ಫೆಬ್ರುವರಿ 13, 2009ರಂದು ರಿಂಪಾ ಹಲ್ದಾರ್ ಕೊಲೆ ಪ್ರಕರಣದಲ್ಲಿ ಮೊನಿಂದರ್ ಸಿಂಗ್ ಪಂಧೇರ್ ಮತ್ತ್ತು ಸುರಿಂದರ್ ಕೊಲಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.

ಆದರೆ, ಅಲಹಾಬಾದ್ ಹೈಕೋರ್ಟ್ ಪಂಧೇರ್ ನನ್ನು ಖುಲಾಸೆಗೊಳಿಸಿತು. ಅದಾದ ಮೇಲೆ ಹಲವಾರು ಪ್ರಕರಣಗಳಲ್ಲಿ ಕೊಲಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಮಾರ್ಚ್ 2019ರಲ್ಲಿ ಘಾಜಿಯಾಬಾದ್ ಸಿಬಿಐ ಕೋರ್ಟ್ ನಿತಾರಿ ಕಾಂಡದ ಹತ್ತನೇ ಮತ್ತು 14-ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ ಕೊಲಿಗೆ ಗಲ್ಲು ಶಿಕ್ಷೆ ವಿಧಿಸಿತು.

ಕಾಂಡದ ಇನ್ನೂ ಕೆಲ ಪ್ರಕರಣಗಳ ವಿಚಾರಣೆ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ನಲ್ಲಿ ನಡೆಯುತ್ತಿವೆ. 2014 ರಲ್ಲಿ ಕೆಲ ವಕೀಲರು ಸುಪ್ರೀಮ್ ಕೋರ್ಟ್ ಕದ ತಟ್ಟಿ ಮಧ್ಯರಾತ್ರಿಯಲ್ಲಿ ಕೋರ್ಟ್ ಕಲಾಪ ನಡೆಸಿ ಕೊಲಿಯ ಗಲ್ಲು ಶಿಕ್ಷೆ ವಿರುದ್ಧ ತಡೆಯಾಜ್ಞೆ ಪಡೆಯುವಲ್ಲಿ ಸಫಲರಾಗಿದ್ದರು.

2017ರಲ್ಲಿ, 25-ವರ್ಷ-ವಯಸ್ಸಿನ ಮನೆಗೆಲಸದ ಮಹಿಳೆಯನ್ನು ಕೊಂದ ಅಪರಾಧದಲ್ಲಿ ಕೊಲಿಯ ಜೊತೆ ಮೊನಿಂದರ್ ಸಿಂಗ್ ಗೂ ಗಲ್ಲು ಶಿಕ್ಷೆ ವಿಧಿಸಲಾಯಿತು. ಇದು ಅವರಿಬ್ಬರ ವಿರುದ್ಧ ದಾಖಲಾದ 16 ಪ್ರಕರಣಗಳಲ್ಲಿ 9ನೇಯದಾಗಿತ್ತು. ಈ ಎಲ್ಲ ಪ್ರಕರಣಗಳನ್ನು ಸಿಬಿಐ ‘ವಿರಳಾತಿ ವಿರಳ’ ಪ್ರಕರಣಗಳೆಂದು ಉಲ್ಲೇಖಿಸಿದೆ.

ಸದ್ಯಕ್ಕೆ ಸಿಂಗ್ ಮತ್ತು ಕೊಲಿ ಇಬ್ಬರೂ ಜೈಲಿನಲ್ಲಿದ್ದಾರೆ.

ಭಾರತೀಯ ಮೂಲದ ಸಿನಿಮಾ ನಿರ್ಮಾಪಕ ರಾಮ್ ದೇವಿನೇನಿ ಅವರು 2017ರಲ್ಲಿ ನಿತಾರಿ ಕಾಂಡ್ ಪ್ರಕರಣಗಳನ್ನು ಆಧರಿಸಿ ‘ದಿ ಕರ್ಮ ಕಿಲ್ಲಿಂಗ್ಸ್’ ಹೆಸರಲ್ಲಿ ಒಂದು ಸಾಕ್ಷ್ಯಚಿತ್ರವನ್ನು ತಯಾರಿಸಿದ್ದರು. ಅದು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಿತ್ತು.