ಶಿಕ್ಷಕರಿಂದಲೇ ಲೈಂಗಿಕ ದೌರ್ಜನ್ಯ: ಚಿಂಚೋಳಿ ವಸತಿ ಶಾಲೆಯ ಶಿಕ್ಷಕನಿಗೆ ಧರ್ಮದೇಟು, ಪ್ರಾಚಾರ್ಯನ ವಿರುದ್ಧ ಪೊಕ್ಸೊ ಪ್ರಕರಣ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 13, 2022 | 8:59 AM

ಮೈ ಕೈ ಮುಟ್ಟುವುದು ಸೇರಿದಂತೆ ಹಲವು ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಶಿಕ್ಷಕರಿಂದಲೇ ಲೈಂಗಿಕ ದೌರ್ಜನ್ಯ: ಚಿಂಚೋಳಿ ವಸತಿ ಶಾಲೆಯ ಶಿಕ್ಷಕನಿಗೆ ಧರ್ಮದೇಟು, ಪ್ರಾಚಾರ್ಯನ ವಿರುದ್ಧ ಪೊಕ್ಸೊ ಪ್ರಕರಣ
ಸಾಂಧರ್ಬಿಕ ಚಿತ್ರ
Follow us on

ಕಲಬುರ್ಗಿ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (Sexual harassment) ನೀಡುತ್ತಿದ್ದಾರೆ ಎಂದು ವಸತಿ ಶಾಲೆಯ ಪ್ರಾಚಾರ್ಯ ಹಾಗೂ ಕಂಪ್ಯೂಟರ್​​ ಆಪರೇಟರ್​ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಟ್ಟಿನಲ್ಲಿ ವಸತಿ ಶಾಲೆಯ ಸಿಬ್ಬಂದಿಯನ್ನು ಕೆಲವರು ಥಳಿಸಿದ ಘಟನೆ ಚಿಂಚೋಳಿ ತಾಲ್ಲೂಕಿನಲ್ಲಿ ನಡೆದಿದೆ. ವಿದ್ಯಾರ್ಥಿನಿಯರು ನೀಡಿರುವ ದೂರು ಆಧರಿಸಿ ಚಿಂಚೋಳಿ ತಾಲ್ಲೂಕು ಕುಂಚಾವರಂ ಠಾಣೆ ಪೊಲೀಸರು ಪ್ರಾಚಾರ್ಯ ಸೇರಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೈ ಕೈ ಮುಟ್ಟುವುದು, ಮಲಗಿರುವಾಗ ಕಿಟಕಿಗಳಿಂದ ಇಣುಕಿ ನೋಡುವುದು, ಅಸಭ್ಯವಾಗಿ ವರ್ತಿಸುವುದು, ಅಶ್ಲೀಲವಾಗಿ ಮಾತನಾಡುವುದು ಸೇರಿದಂತೆ ಹಲವು ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದ ಪೋಷಕರು ವಸತಿ ಶಾಲೆಗೆ ಬಂದು ಕೈಗೆ ಸಿಕ್ಕ ಕಂಪ್ಯೂಟರ್ ಆಪರೇಟರ್​ನನ್ನು ಹಿಡಿದು ಥಳಿಸಿದರು. ಇಬ್ಬರ ವಿರುದ್ಧ ಕಠೀಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದರು. ಸಮಾಜ ಕಲ್ಯಾಣ ಇಲಾಖೆಯು ಈ ವಸತಿ ಶಾಲೆಯನ್ನು ನಿರ್ವಹಿಸುತ್ತಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ವಿದ್ಯಾರ್ಥಿಗಳ ಆರೋಪದ ಬಗ್ಗೆ ಮಾಹಿತಿ ಪಡೆದ ಸಮಾಜ ಕಲ್ಯಾಣ ಇಲಾಖೆಯ ಚಿಂಚೋಳಿ ತಾಲ್ಲೂಕಿನ ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ, ಶಾಲೆಯ ಪ್ರಾಚಾರ್ಯ ಮತ್ತು ಕಂಪ್ಯೂಟರ್ ಶಿಕ್ಷಕನ ವಿರುದ್ದ ಕುಂಚಾವರಂ ಠಾಣೆಗೆ ದೂರು ನೀಡಿದ್ದಾರೆ. ಇಬ್ಬರ ವಿರುದ್ಧವೂ ಪೊಕ್ಸೊ, ಅಟ್ರಾಸಿಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನು ಕೂಡಾ ಕುಂಚಾವರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇನ್ನು ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ತಮಗೆ ಲೈಂಗಿಕ ಕಿರುಕುಳವಾಗುತ್ತಿದೆ ಅಂತ ಆರೋಪಿಸಿ ನಿನ್ನೆ ಸಂಜೆಯವರಗೆ ಊಟ ಮಾಡದೆ ಕುಳಿತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಚಿಂಚೋಳಿ ತಹಶಿಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕಲಬುರಗಿ ಎಸ್​ಪಿ ಇಶಾ ಪಂತ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಸ್ಟೆಲ್​ಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಕೌನ್ಸಲಿಂಗ್ ಮಾಡಿ ಧೈರ್ಯ ಹೇಳಿದರು. ವಿದ್ಯಾರ್ಥಿಗಳಿಗೆ ಊಟ ಮಾಡುವಂತೆ ಮನವೊಲಿಸಿ, ತಾವೇ ಮುಂದೆ ನಿಂತು ಬಡಿಸಿದರು.

ವಸತಿ ಶಾಲೆಯ ಪ್ರಾಚಾರ್ಯ ಮತ್ತು ಕಂಪ್ಯೂಟರ್ ಶಿಕ್ಷಕನ ವಿರುದ್ದ ದೂರು ದಾಖಲಾಗಿದೆ. ಇಬ್ಬರನ್ನು ಕೂಡಾ ಬಂಧಿಸಲಾಗಿದೆ. ಕಾನೂನು ರೀತಿ ಇಬ್ಬರ ವಿರುದ್ದ ಕ್ರಮ ಕೈಗೊಳ್ಳಲಾಗುವು ಎಂದು ಎಸ್​ಪಿ ಇಶಾ ಪಂತ್ ಹೇಳಿದರು.

ಮಂಡ್ಯದ ಮೊರಾರ್ಜಿ ಶಾಲೆಯಿಂದ ವಿದ್ಯಾರ್ಥಿ ನಾಪತ್ತೆ

ಮಂಡ್ಯ: ಜಿಲ್ಲೆಯ ತಂಗಳಗೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ವಿದ್ಯಾರ್ಥಿಯೊಬ್ಬ 20 ದಿನಗಳಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಆಘಾತಕಾರಿ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ವಾರ್ಡನ್​ ಯೋಗಾನಂದ, ಮುಖ್ಯಶಿಕ್ಷಕ ಲೋಕೇಶ್ ಅವರನ್ನು ಅಮಾನತು ಮಾಡಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ದೇಸಾಯಿ ಅಮಾನತು ಆದೇಶ ಹೊರಡಿಸಿದ್ದಾರೆ. ಕಿಶೋರ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಈತ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹೀರೆಮರಳ್ಳಿ ನಿವಾಸಿ.

ಹಬ್ಬಕ್ಕೆ ಮಗನನ್ನು ಕರೆದೊಯ್ಯಲು ತಂದೆ ವಿದ್ಯಾರ್ಥಿ ನಿಲಯಕ್ಕೆ ಬಂದಾಗ ಪ್ರಕರಣವು ಬೆಳಕಿಗೆ ಬಂದಿದೆ. 20 ದಿನಗಳಿಂದ ವಿದ್ಯಾರ್ಥಿಯು ಶಾಲೆಗೆ ಬಂದಿರಲಿಲ್ಲ. ಆದರೆ ಈ ವಿಷಯವನ್ನು ಶಾಲಾ ವಾರ್ಡನ್ ಹಾಗೂ ಮುಖ್ಯ ಶಿಕ್ಷಕರು ವಿದ್ಯಾರ್ಥಿಯ ಪೋಷಕರ ಗಮನಕ್ಕೂ ತಂದಿರಲಿಲ್ಲ. ಪ್ರಸ್ತುತ ಈ ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕೆರೆಗೋಡು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Published On - 8:59 am, Tue, 13 September 22