ಮುರುಘಾ ಶ್ರೀಗಳ ವಿರುದ್ಧ ದೂರು ದಾಖಲಿಸಿದ ಮಠದ ಅಡುಗೆ ಸಹಾಯಕಿ ಆಗಿದ್ದ ಮಹಿಳೆ
ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಮುರುಘಾ ಶ್ರೀಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಒಟ್ಟು ನಾಲ್ವರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಹೆಚ್ಚುತ್ತಿದ್ದು, ಇದೀಗ ಮಠದಲ್ಲಿ ಅಡುಗೆ ಸಹಾಯಕಿ ಆಗಿದ್ದ ಮಹಿಳೆಯಿಂದ ದೂರು ದಾಖಲಾಗಿದೆ. ತನ್ನ ಓರ್ವ ಮಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡುಹೋಗಿ ದೂರು ದಾಖಲಿಸಿದ್ದು, ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇನ್ನಿಬ್ಬರು ಬಾಲಕಿಯರು ಸೇರಿದಂತೆ ಒಟ್ಟು ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಮೈಸೂರಿನಿಂದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಆಗಲಿದೆ.
ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ತಡರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು.
ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ಮುರುಘಾ ಶ್ರೀ ಅವರನ್ನು ಪೋಕ್ಸೋ ಕಾಯ್ದೆಯಡಿ (POCSO case) ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್, ಮೊಳಕಾಲ್ಮೂರು ಠಾಣೆ ಸಿಪಿಐ ಸತೀಶ್ ಅವರುಗಳು ಮಠದ ಒಳಗೆ ಪ್ರವೇಶಿಸಿ, ಪ್ರಕರಣ ದಾಖಲಾಗಿ 6 ದಿನಗಳ ನಂತರ ಬಂಧನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಶ್ರೀಗಳನ್ನು ಬಂಧಿಸಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ