ಹರ್ಷ ಹತ್ಯೆಗೆ ಸಂಚು ರೂಪಿಸಿ ನಿತ್ಯ ಫಾಲೋ ಮಾಡುತ್ತಿದ್ದ ಹಂತಕರು; ಬೆಚ್ಚಿ ಬೀಳಿಸುತ್ತೆ ಹತ್ಯೆ ಹಿಂದಿನ ಸಂಚು

| Updated By: Rakesh Nayak Manchi

Updated on: Oct 24, 2022 | 11:48 AM

ಹರ್ಷ ಹತ್ಯೆ ಪ್ರಕರಣದ ಸ್ಫೋಟಕ ಸಂಚು ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ. ನಾಲ್ಕು ದಿನಗಳ ಹಂತಕರ ನಡೆ ಬಗ್ಗೆ ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ.

ಹರ್ಷ ಹತ್ಯೆಗೆ ಸಂಚು ರೂಪಿಸಿ ನಿತ್ಯ ಫಾಲೋ ಮಾಡುತ್ತಿದ್ದ ಹಂತಕರು; ಬೆಚ್ಚಿ ಬೀಳಿಸುತ್ತೆ ಹತ್ಯೆ ಹಿಂದಿನ ಸಂಚು
ಕೊಲೆಯಾದ ಹರ್ಷ
Follow us on

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಸ್ಫೋಟಕ ಸಂಚು ಬಯಲಾಗಿದ್ದು, ಜಿಲ್ಲೆಯಲ್ಲಿ ಹಂತಕರು ಎಷ್ಟು ದಿನ ತಯಾರಿ ನಡೆಸಿದ್ದರು? ಹರ್ಷ ಹತ್ಯೆಗೆ ಮಾರಕಾಸ್ತ್ರ ಖರೀದಿಸಿ ತಂದಿದ್ದು ಎಲ್ಲಿಂದ? ಹರ್ಷನನ್ನು ಬೆನ್ನಟ್ಟಿದ್ದೇಗೆ? ಕೊಲೆ ನಡೆಸಿದ್ದು ಹೇಗೆ? ಈ ಎಲ್ಲಾ ಮಾಹಿತಿಗಳು ಬೆಚ್ಚಿ ಬೀಳಿಸುವಂತಿದೆ. ಪ್ರಕರಣದಲ್ಲಿ ಮೊದಲ ಆರೋಪಿಯೇ ರಿಹಾನ್ ಶರೀಷ್. ಈತನೇ ಹರ್ಷ ಕೊಲೆಗೆ ಸಂಚು ರೂಪಿಸಿದವನು. ಈತ ಹರ್ಷನಿಗೆ ಪರಿಚಯ ಇದ್ದಿದ್ದರಿಂದ ಬೇರೊಬ್ಬನ ಮೂಲಕ ಹರ್ಷನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದನು. ಅದರಂತೆ ಆರು ಮಂದಿ ದುಷ್ಕರ್ಮಿಗಳು ಒಟ್ಟು ಸೇರಿ ಹತ್ಯೆ ಸಂಚು ರೂಪಿಸಿ ಹತ್ಯೆ ಮಾಡಿಯೇ ಬಿಟ್ಟರು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಿಹಾನ್ ಹರ್ಷ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಬಟ್ಟೆ ವ್ಯಾಪಾರದ ಜೊತೆಗೆ ಅಪರಾಧ ಕೃತ್ಯಗಳಲ್ಲೂ ಭಾಗಿಯಾಗಿದ್ದನು. 2022ರ ಫೆ.16ರಂದು ಈತ ಹರ್ಷನ ಹತ್ಯೆ ಬಗ್ಗೆ ಜಿಲಾನ್, ಆಸಿಫ್, ನಿಹಾಲ್, ಅಫ್ವಾನ್, ಖಾಸಿಫ್ ಜೊತೆ ಮಾತುಕತೆ ನಡೆಸಿದ್ದಾನೆ. ಈ ವೇಳೆ ಎಲ್ಲರೂ ಕೈಜೋಡಿಸುವುದಾಗಿ ಹೇಳಿದ್ದಾರೆ. ಎನ್‌ಟಿ ರಸ್ತೆಯ ರೆಡ್ ಪಾಂಡಾ ಎದುರಿನ ಸಾಬಿಕೇತ್‌ನಲ್ಲಿ ಮೊದಲ ಚರ್ಚೆ ನಡೆದಿದ್ದು, ಭದ್ರಾವತಿಯ ಕುಲುಮೆಯಿಂದ ಲಾಂಗ್ ಖರೀದಿಸಲು ನಿರ್ಧರಿಸಲಾಯಿತು. ಕುಲುಮೆಯಲ್ಲಿ ಹರಿತವಾದ ಬ್ಯಾಟ್ ಸಿಗುತ್ತದೆ ಎಂದು ರೋಶನ್ ಎಂಬಾತ ಹೇಳಿದ್ದ. ಲಾಂಗ್‌ಗೆ ಆರೋಪಿಗಳು ಬ್ಯಾಟ್ ಎಂಬ ಪದ ಬಳಸುತ್ತಿದ್ದರು. ಇದೇ ವೇಳೆ ಖಾಸಿಫ್, ನಿಹಾಲ್ ತಮ್ಮ ಬಳಿಯಿದ್ದ ಡ್ಯಾಗರ್ ತೋರಿಸಿದ್ದರು.

ಹರ್ಷ ಕೊಲೆಗೆ ದಿನಾಂಕ ನಿಗದಿ ಮಾಡಿದ ಹಂತಕರು

ಕೊಲೆ ಸಂಚು ರೂಪಿಸಿದಂತೆ ಫೆ.20ರ ಭಾನುವಾರ ಹರ್ಷ ಹತ್ಯೆಗೆ ನಿಗದಿ ಮಾಡಿದ ದಿನಾಂಕವಾಗಿದೆ. ಹತ್ಯೆಗೈದ ಬಳಿಕ ಬೇರೆ ಕಡೆ ಎಸ್ಕೇಪ್ ಆಗಲು ಫೆ.17ರಂದು ಮಂಡಗದ್ದೆಗೆ ಹೋಗಿ ಸ್ಥಳ ನೋಡಿದ್ದರು. ಫೆ.19ಕ್ಕೆ ಮತ್ತೆ ವಾಪಾಸ್ ಶಿವಮೊಗ್ಗಕ್ಕೆ ಬಂದಿದ್ದರು. ಫೆ.20 ರಂದು ಲಾಂಗ್​ ತರಲು ಭದ್ರಾವತಿಗೆ ತೆರಳಿದ್ದರು. ಛತ್ತೀಸ್‌ಗಢ ನೋಂದಣಿಯ ಬಿಳಿ ಬಣ್ಣದ ಸ್ವಿಫ್ಟ್ ಕಾರ್​ ಮೂಲಕ ಹೋದ ಆರೋಪಿಗಳು ಭದ್ರಾವತಿಯ ರಂಗಪ್ಪ ಸರ್ಕಲ್ ಬಳಿ ರೋಷನ್ ಭೇಟಿಯಾಗಿ ಬಸವೇಶ್ವರ ಸರ್ಕಲ್ ಬಳಿಯ ಕುಲುಮೆಗೆ ಹೋಗಿದ್ದರು. ಅಲ್ಲಿ 1,300 ರೂ. ಕೊಟ್ಟು ಮೂರು ಲಾಂಗ್ ಖರೀದಿ ಮಾಡಿ ಶಿವಮೊಗ್ಗಕ್ಕೆ ವಾಪಸ್ ಆಗಿದ್ದರು. ಶಿವಮೊಗ್ಗ ಬೈಪಾಸ್ ರಸ್ತೆಯ ಸೂಳೆಬೈಲು ಬಳಿ ಕಾರ್‌ಗೆ 500 ರೂ. ಡೀಸೆಲ್ ಹಾಕಿ ಅಲ್ಲಿಂದ ನೇರವಾಗಿ ಸಾಬಿಕೇತ್‌ಗೆ ಬಂದಿದ್ದರು.

ಹರ್ಷನ ಹತ್ಯೆ ಯಾಕಾಯ್ತು?

ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆಯುವ ಹಿಂದಿನ ಉದ್ದೇಶ ಹಿಂದೂಗಳಲ್ಲಿ ಭಯ ಹುಟ್ಟಿಸುವುದಾಗಿದೆ. ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನಗಳನ್ನು ಭಜರಂಗದಳದ ಕಾರ್ಯಕರ್ತರು ತಡೆಯುತ್ತಿದ್ದರು. ಕಸಾಯಿ ಖಾನೆಗೆ ಹೋಗುತ್ತಿದ್ದ ಗೂಡ್ಸ್ ವಾಹನಗಳನ್ನು ಅಡ್ಡಗಟ್ಟಲಾಗಿತ್ತು. ಇದರಿಂದಾಗಿ ಮುಸ್ಲಿಮರ ಆದಾಯಕ್ಕೆ ತೊಂದರೆ ಆಗಿತ್ತು. ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ಹಿಂದೂವನ್ನು ಹತ್ಯೆ ಮಾಡಿ ಅವರಲ್ಲಿ ಮುಸ್ಲಿಮರ ಬಗ್ಗೆ ಭಯ ಹುಟ್ಟುತ್ತದೆ ಎಂಬ ಭಾವಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿದಾಗ ಮುನ್ನಲೆಗೆ ಬಂದ ಹೆಸರು ಹರ್ಷ. ಈತ ಜಾಲತಾಣದಲ್ಲಿ ಸಕ್ರಿಯನಾಗಿದ್ದಲ್ಲದೆ ಮುಸ್ಲಿಮರನ್ನು ಬಗ್ಗೆ ಟೀಕಿಸಿ ಪೋಸ್ಟ್ ಹಾಕುತ್ತಿದ್ದನು. ಹೀಗಾಗಿ ಈತನ ಹೆಸರನ್ನೇ ಅಂತಿಮಗೊಳಿಸಿದ್ದಾರೆ.

ಬೇರೊಬ್ಬನನ್ನು ಹರ್ಷನ ಹಿಂದೆ ಬಿಟ್ಟ ರಿಹಾನ್

ಹರ್ಷ ಹತ್ಯೆಗೆ ಸಂಚು ರೂಪಿಸಿದ ರಿಹಾನ್ ಮತ್ತು ಸಹಚರರು ಆತನ ಚಲನವಲನಗಳ ಮೇಲೆ ಕಣ್ಣಿಡಲು ಮುಂದಾಗಿದ್ದಾರೆ. ರಿಹಾನ್ ಹರ್ಷನಿಗೆ ಪರಿಚಯ ಇರುವುದರಿಂದ ರಿಹಾನ್ ಬೇರೊಬ್ಬನನ್ನು ಹರ್ಷನ ಹಿಂದೆ ಬಿಟ್ಟಿದ್ದನು. ಅದರಂತೆ ಜಿಲಾನ್​ ಸ್ನೇಹಿತ ಫರಾಜ್​ ಪಾಷಾನನ್ನ ಹರ್ಷ ಹಿಂದೆ ಬಿಟ್ಟಿದ್ದರು. ಹತ್ಯೆಗೂ ಮುನ್ನ ನಾಲ್ಕು ದಿನ ಹರ್ಷನ ಮೇಲೆ ನಿಗಾ ಇಟ್ಟಿದ್ದರು.

ಬೆಚ್ಚಿಬೀಳಿಸುತ್ತದೆ ಹರ್ಷ ಹತ್ಯೆಯ ಕೊನೆ ಕ್ಷಣಗಳ ಸಂಚು

ಸಾಬಿಕೇತ್‌ನಲ್ಲಿ ಕುಳಿತು ಹರ್ಷ ಹತ್ಯೆಗೆ ಹಂತಕರು ಅಂತಿಮ ನಿರ್ಧಾರ ಮಾಡಿಕೊಂಡಿದ್ದರು. ಸೀಗೆಹಟ್ಟಿ ಸರ್ಕಲ್ ಬಳಿ ಫರಾಜ್​ಗೆ ಡ್ರಾಪ್ ಮಾಡಿದ್ದ ಜಿಲಾನ್, ರಾತ್ರಿ 8.30ರಿಂದ ಹರ್ಷನನ್ನು ಹಿಂಬಾಲಿಸಲು ಫರಾಜ್ ಆರಂಭಿಸಿದ್ದನು. ಸಾಬಿಕೇತ್‌ನಿಂದ ಒಂದೇ ಕಾರಿನಲ್ಲಿ 6 ಹಂತಕರು ಕಾರಿನಲ್ಲಿ ಸೀಗೆಹಟ್ಟಿ ಸರ್ಕಲ್ ತಲುಪುತ್ತಿದ್ದಂತೆ ಫರಾಜ್‌ ಫೋನ್ ಕಾಲ್ ಮಾಡಿದ್ದಾನೆ. ಅವರಿಗೆ ಹರ್ಷನ ಜೊತೆ ಮೂವರು ಸ್ನೇಹಿತರು ಇರುವ ಬಗ್ಗೆ ಮಾಹಿತಿ ತಲುಪಿಸಿದ್ದಾನೆ.

ಅಲ್ಲದೆ, ಸಪ್ತಗಿರಿ ಬಾರ್ ಪಕ್ಕದ ರಸ್ತೆಯಲ್ಲಿ ಹಂತಕರು ಕಾರು ನಿಲ್ಲಿಸಿ ಲಾಂಗ್ ತೆಗೆದುಕೊಂಡು ಎನ್​ಟಿ ರಸ್ತೆ ಕಡೆ ಹೋಗಿದ್ದರು. ಆಗ ಲಾಂಗ್ ಹಿಡಿದಿದ್ದ ಹಂತಕರನ್ನು ಹರ್ಷ ಸ್ನೇಹಿತರು ನೋಡಿದ್ದರು. ಅಲ್ಲಿಂದ ಭಾರತಿ ಕಾಲೋನಿ 1ನೇ ಮುಖ್ಯರಸ್ತೆಗೆ ಹರ್ಷ ಹೋಗಿದ್ದಾನೆ. ಈ ವೇಳೆ ಹರ್ಷ ಒಬ್ಬನೇ ಇರುವುದನ್ನು ಗಮನಿಸಿದ ಹಂತಕರು ದಾಳಿಗೆ ಮುಂದಾಗಿದ್ದರು.

ಕೂಡಲೇ ಎಚ್ಚೆತ್ತ ಹರ್ಷ ದುರ್ಗಾ ಗ್ಯಾರೇಜ್ ಹಿಂದಿನಿಂದ ಎನ್‌ಟಿ ರಸ್ತೆಗೆ ಓಡಿದ್ದಾನೆ. ಈ ವೇಳೆ ರಿಹಾನ್ ಮತ್ತು ಅಫ್ವಾನ್ ಹರ್ಷನ ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಅತ್ತ ಜಿಲಾನ್, ನಿಹಾಲ್ ಮತ್ತು ಆಸಿಫ್‌ ಕಾರಿನಲ್ಲಿ ಬಂದಿದ್ದಾರೆ. ಎನ್‌ಟಿ ರಸ್ತೆಯಲ್ಲಿ ರಿಹಾನ್‌ಗೆ ಕಾರು ಡಿಕ್ಕಿ ಸ್ವಲ್ಪದರಲ್ಲೇ ತಪ್ಪಿತ್ತು. ಭಾರತಿ ಕಾಲೋನಿ 2ನೇ ಮೇನ್ ಕ್ರಾಸ್ ಬಳಿ ಇದ್ದ ಖಾಸಿಫ್ ಓಡಿ ಹೋಗುತ್ತಿದ್ದ ಹರ್ಷನಿಗೆ ಹಿಂಬದಿಯಿಂದ ಡ್ಯಾಗರ್​ನಿಂದ ಇರಿದಿದ್ದಾನೆ. ರಕ್ತ ಸ್ರಾವದಿಂದ ಓಡುತ್ತಿದ್ದ ಹರ್ಷನ ಮೇಲೆ ರಿಹಾನ್, ಖಾಸಿಫ್, ಅಫ್ವಾನ್​ ಮಾರಕಾಸ್ತ್ರಗಳಿಂದ ದಾಳಿ ನಡೆಸುತ್ತಾರೆ. ಅಷ್ಟರಲ್ಲಿ ಆಸೀಫ್ ಮತ್ತು ನಿಹಾಲ್ ಸಹ ಅಲ್ಲಿಗೆ ಬಂದಿದ್ದರು. ಬಳಿಕ 6 ಮಂದಿ ಹಂತಕರು ಡ್ಯಾಗರ್ ಮತ್ತು ಲಾಂಗ್‌ನಿಂದ ಹಲ್ಲೆಗೈದಿದ್ದರು. ಹರ್ಷನ ದೇಹದ 23 ಕಡೆ ಲಾಂಗ್, ಡ್ಯಾಗರ್​ನಿಂದ ಇರಿದು ಪರಾರಿಯಾಗಿದ್ದರು.

ರಕ್ತ ಸಿಗ್ದ ದೇಹದೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಹಂತಕರು

ಹರ್ಷನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್ಷನ ದೇಹದೊಂದಿಗೆ ಹಂತಕರು ಫೋಟೋ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ಫರಾಜ್ ಪಾಷಾ ರಕ್ತಸಿಕ್ತ ಲಾಂಗ್ ಹಿಡ್ಕೊಂಡು ಸೆಲ್ಫಿಯೂ ತೆಗೆದುಕೊಂಡಿದ್ದಾನೆ. ಬಳಿಕ ಆರೋಪಿಗಳು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್ಷನ ಇನ್ನೂ ಉಸಿರಾಡುತ್ತಲೇ ಇದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದನು.

ಕೊಲೆ ನಂತರ ಹಂತಕರು ಹೋಗಿದ್ದೆಲ್ಲಿಗೆ?

ಹತ್ಯೆ ಬಳಿಕ ಆಟೋದಲ್ಲಿ ಇಮಾಮ್‌ಬಡಾಕ್ಕೆ ತೆರಳಿದ್ದ ರಿಹಾನ್ ಅಲ್ಲಿಂದ ಬೈಕ್‌ನಲ್ಲಿ ಜೆ.ಪಿ ನಗರ ಸಮೀಪದ ಮಸೀದಿ ಹತ್ತಿರ ಹೋಗಿದ್ದ. ಮಸೀದಿ ಬಳಿ ಆಸಿಫ್ ಮತ್ತು ನಿಹಾಲ್, ನದೀಂ ಜೊತೆ ನಿಂತಿದ್ದರು. ಹರ್ಷ ಹತ್ಯೆ ವೇಳೆ ಹಂತಕರ ಬಟ್ಟೆಗಳಿಗೆ ರಕ್ತ ತಗುಲಿತ್ತು. ಅದರಂತೆ ಎಲ್ಲಾ ಹಂತಕರಿಗೂ ಬಟ್ಟೆ ಬದಲಾಯಿಸಲು ಸೈಯದ್ ನದೀಂ ನೆರವಾಗಿದ್ದನು. ಕೃತ್ಯಕ್ಕೆ ಬಳಸಿದ್ದ ಲಾಂಗ್ ಅನ್ನು ಹಳೆ ಬಟ್ಟೆಯೊಳಗೆ ಸುತ್ತಿಟ್ಟಿದ್ದರು. ನಂತರ ಬಟ್ಟೆ ಸಹಿತ ಮಾರಕಾಸ್ತ್ರಗಳನ್ನು ತುಂಗಾ ನದಿ ತೀರದ ಪೊದೆಯಲ್ಲಿ ಬಚ್ಚಿಟ್ಟಿದ್ದರು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:48 am, Mon, 24 October 22