ನೊಯ್ಡಾ: ಹೊಸ ವರ್ಷದ (New Year Celebration) ದಿನ ರಾತ್ರಿ ದೆಹಲಿಯಲ್ಲಿ ಯುವತಿಯನ್ನು ಕಾರು ಕಿಲೋಮೀಟರ್ಗಟ್ಟಲೆ ಎಳೆದುಕೊಂಡು ಹೋದ ಭಯಾನಕ ಘಟನೆಯಂತೆಯೇ (Shocking News) ಅದೇ ದಿನ ಇನ್ನೊಂದು ಆಘಾತಕಾರಿ ಘಟನೆ ನಡೆದಿದೆ. ಫುಡ್ ಡೆಲಿವರಿ (Swiggy Delivery Agent) ಏಜೆಂಟ್ನ ಬೈಕ್ಗೆ ಕಾರು ಡಿಕ್ಕಿ ಹೊಡೆದು ಸುಮಾರು 500 ಮೀಟರ್ವರೆಗೆ ಎಳೆದೊಯ್ದ ಪರಿಣಾಮ ಡೆಲಿವರಿ ಏಜೆಂಟ್ ಸಾವನ್ನಪ್ಪಿರುವ ಘಟನೆ ನೊಯ್ಡಾದಲ್ಲಿ (Noida) ನಡೆದಿದೆ.
ಭಾನುವಾರ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಕೌಶಲ್ ಎಂಬ ಯುವಕ ಹೊಸ ವರ್ಷದ ರಾತ್ರಿ ಫುಡ್ ಡೆಲಿವರಿ ನೀಡಲು ಹೊರಟಿದ್ದಾಗ ನೋಯ್ಡಾ ಸೆಕ್ಟರ್ 14ರ ಫ್ಲೈಓವರ್ ಬಳಿ ಕಾರೊಂದು ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿರುವ ದೇವಸ್ಥಾನದ ಬಳಿ ಚಾಲಕ ಕಾರನ್ನು ನಿಲ್ಲಿಸಿ ಕೌಶಲ್ನ ಶವ ಕಾರಿನಿಂದ ಹೊರಬಿದ್ದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ 1 ಗಂಟೆಗೆ ಕೌಶಲ್ಗೆ ಅವರ ಸಹೋದರ ಅಮಿತ್ ಫೋನ್ ಮಾಡಿದಾಗ ದಾರಿಹೋಕರೊಬ್ಬರು ಆ ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ತಿಳಿಸಿದ್ದರು. ಬಳಿಕ, ಅಮಿತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ತಮಿಳುನಾಡಿನ ಕಡಲೂರಿನಲ್ಲಿ ಭೀಕರ ಅಪಘಾತ; 5 ವಾಹನಗಳ ನಡುವೆ ಡಿಕ್ಕಿಯಾಗಿ ಐವರು ಸಾವು
ದೆಹಲಿಯಲ್ಲಿ 20 ವರ್ಷದ ಯುವತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಸುಮಾರು 13 ಕಿಮೀ ದೂರಕ್ಕೆ ಎಳೆದೊಯ್ದಿತ್ತು. ಈ ಘಟನೆಯಲ್ಲಿ ಆಕೆಯ ಬಟ್ಟೆಯೆಲ್ಲ ಹರಿದುಹೋಗಿ, ಮೈತುಂಬ ಗಾಯಗಳಾಗಿ ಮೃತಪಟ್ಟಿದ್ದಳು. ಅದಾದ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹೊಸ ವರ್ಷದ ರಾತ್ರಿ ನಡೆದ ಈ ಎರಡೂ ಹಿಟ್ ಆ್ಯಂಡ್ ರನ್ ಪ್ರಕರಣಗಳು ಆತಂಕ ಹೆಚ್ಚಿಸಿವೆ.