ಸೆಂಟ್ ವಾಲೆಂಟೈನ್ಸ್ ಡೇ ಹತ್ಯಾಕಾಂಡ ಕೇವಲ ಚಿಕ್ಯಾಗೋ ನಗರ ಮಾತ್ರವಲ್ಲ, ಅಮೆರಿಕವನ್ನೇ ತಲ್ಲಣಿಸಿಬಿಟ್ಟಿತ್ತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 8:04 AM

ಗೋದಾಮಿನ ಮೇಲೆ ರೇಡ್ ಮಾಡಲೆಂದೇ ಪೊಲೀಸರು ಬಂದಿದ್ದಾರೆ ಅನ್ನೋದು ಮೋರನ್ ಮತ್ತವನ ಗುಂಪಿನ ಸದಸ್ಯರಿಗೆ ಮನವರಿಕೆಯಾಗಿತ್ತು. ತಮ್ಮನ್ನು ಬಂಧಿಸುವುದು ನಿಶ್ಚಿತ ಅಂದುಕೊಂಡ ಅವರು ತಮ್ಮ ಬಾಸ್ ನನ್ನು ಉಳಿಸಲು ಮತ್ತು ಅವನ ಮುಖ ಪೊಲೀಸರಿಗೆ ಕಾಣಿಸಿದಂತಿರಲು ಪೊಲೀಸರಿಗೆ ಬೆನ್ನು ಹಾಕಿ ಅವನನ್ನು ಸುತ್ತುವರಿದರು.

ಸೆಂಟ್ ವಾಲೆಂಟೈನ್ಸ್ ಡೇ ಹತ್ಯಾಕಾಂಡ ಕೇವಲ ಚಿಕ್ಯಾಗೋ ನಗರ ಮಾತ್ರವಲ್ಲ, ಅಮೆರಿಕವನ್ನೇ ತಲ್ಲಣಿಸಿಬಿಟ್ಟಿತ್ತು!
ಸೆಂಟ್ ವಾಲೈಂಟೈನ್ಸ್ ಡೇ ಹತ್ಯಾಕಾಂಡ
Follow us on

ಅಮೆರಿಕಾದ ಭೂಗತ ಲೋಕವನ್ನೇ ನಡುಗಿಸಿದ ಪಾತಕವಿದು. 1920 ರಲ್ಲಿ ಚಿಕ್ಯಾಗೋ ನಗರ ಭೂಗತ ಚಟುವಟಿಕೆಗಳ ಕೇಂದ್ರವಾಗಿತ್ತು ಮತ್ತು ಗ್ಯಾಂಗ್ ವಾರ್ ಗಳು ಚರಮಸೀಮೆಯಲ್ಲಿದ್ದ ದಿನಗಳವು. ಸೆಂಟ್ ವಾಲೆಂಟೈನ್ಸ್ ಡೇ ಹತ್ಯಾಕಾಂಡ (St Valentines Day Massacre) ನಡೆದಿದ್ದು ಅದೇ ದಿನಗಳಲ್ಲಿ. ಅಲ್ ಸ್ಕ್ಯಾರ್ ಫೇಸ್ ಕಪೋನೆ (Al Scar Face Capone) ಹೆಸರಿನ ಅಂಡರ್ ವರ್ಲ್ಡ್ ಡಾನ್ ತನ್ನ ಶತ್ರು ಪಾಳೆಯದ 7 ಸದಸ್ಯರನ್ನು ಒಂದೇ ದಿನ ಸಾಲುಸಾಲಾಗಿ ಕೊಲ್ಲಿಸಿದ್ದ. ಜಾರ್ಜ್ ಬಗ್ಸ್ ಮೋರನ್ ನ (George Bugs Moran) ಗುಂಪನ್ನು ಮಟ್ಟಹಾಕಿ ಚಿಕ್ಯಾಗೋ ನಗರದ ಭೂಗತ ಪ್ರಪಂಚಕ್ಕೆ ತಾನೊಬ್ಬನೇ ಡಾನ್ ಆಗಿ ಮೆರೆಯಬೇಕೆನ್ನುವುದು ಅವನ ಉದ್ದೇಶವಾಗಿತ್ತು.

ಮೋರನ್ ಗೋದಾಮಿನಲ್ಲಿ ಕಪೋನೆ ಬಂಟರು!

ಫೆಬ್ರುವರಿ 14, 1929 ರಂದು ಕಪೋನೆಯ ನಾಲ್ವರು ಬಂಟರು, ಮೋರನ್ ಅಕ್ರಮವಾಗಿ ವಿಸ್ಕಿ ಮಾರಾಟ ಮಾಡುತ್ತಿದ್ದ ಉಗ್ರಾಣಕ್ಕೆ ಬಂದರು. ಕೆನಡಾದ ಪ್ರದೇಶವೊಂದರಲ್ಲಿ ತಾನು ನಡೆಸುತ್ತಿದ್ದ ಕಾನೂನುಬಾಹಿರ ಮದ್ಯದ ವ್ಯವಹಾರಕ್ಕೋಸ್ಕರ ಗೋದಾಮನ್ನು ತನಗೆ ಕೊಡಬೇಕೆಂದು ಕಪೋನೆ ಬಹಳ ದಿನಗಳಿಂದ ಮೊರನ್ನನ್ನು ಆಗ್ರಹಿಸುತ್ತಿದ್ದ.
ಮೋರನ್ ಗ್ಯಾಂಗ್ ನ 5 ಜನ ಮತ್ತು ಇಬ್ಬರು ಮೆಕ್ಯಾನಿಕ್ ಗೋದಾಮಿನ ಬಳಿಗೆ ಬಂದರು. ಗೋದಾಮಿನ ಆವರಣ ಪ್ರವೇಶಿಸುವಾಗ ಕಪೋನೆಯ ಜನ ತಮಗಾಗಿ ಕಾಯುತ್ತಿದ್ದಾರೆ ಎಂಬ ಅರಿವು ಅವರಿಗಿತ್ತು.

ಅವರು ಪೊಲೀಸರಲ್ಲ!

ಅಲ್ಲಿಗೆ ಆಗಮಿಸಿದ ಕೊನೆಯ ವ್ಯಕ್ತಿಯೆಂದರೆ ಮೋರನ್ ಗುಂಪಿನ ಸದಸ್ಯ ಆಲ್ಬರ್ಟ್ ವೀನ್ ಶಂಕ್. ಅವನು ಗೋದಾಮು ಆವರಣವನ್ನು ತನ್ನ ಕ್ಯಾಡಿಲ್ಯಾಕ್ ಸೆಡಾನ್ ಕಾರಲ್ಲಿ ಪ್ರವೇಶಿಸುವಾಗ ಇಬ್ಬರು ಪೊಲೀಸ್ ಅಧಿಕಾರಿಗಳು ಅವನನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ, ಅವನು ಕಾರಿನ ವೇಗ ಹೆಚ್ಚಿಸಿ ಒಳನುಗ್ಗಿಬಿಟ್ಟಿದ್ದ.

ಗೋದಾಮಿನ ಮೇಲೆ ರೇಡ್ ಮಾಡಲೆಂದೇ ಪೊಲೀಸರು ಬಂದಿದ್ದಾರೆ ಅನ್ನೋದು ಮೋರನ್ ಮತ್ತವನ ಗುಂಪಿನ ಸದಸ್ಯರಿಗೆ ಮನವರಿಕೆಯಾಗಿತ್ತು. ತಮ್ಮನ್ನು ಬಂಧಿಸುವುದು ನಿಶ್ಚಿತ ಅಂದುಕೊಂಡ ಅವರು ತಮ್ಮ ಬಾಸ್ ನನ್ನು ಉಳಿಸಲು ಮತ್ತು ಅವನ ಮುಖ ಪೊಲೀಸರಿಗೆ ಕಾಣಿಸಿದಂತಿರಲು ಪೊಲೀಸರಿಗೆ ಬೆನ್ನು ಹಾಕಿ ಅವನನ್ನು ಸುತ್ತುವರಿದರು.

ಅಸಲಿಗೆ ಆಲ್ಬರ್ಟ್ ವೀನ್ ಶಂಕ್ ನನ್ನು ಗೇಟಿನ ಬಳಿ ಅಡ್ಡಗಟ್ಟಿದ್ದು ಪೊಲೀಸರಲ್ಲ, ಅವರ ವೇಷದಲ್ಲಿದ್ದ ಕಪೋನೆ ತಂಡದ ಸದಸ್ಯರು!

ಗುಂಡಿನ ಸುರಿಮಳೆ!

ಕಪೋನೆ ಗ್ಯಾಂಗ್ ನ ಇನ್ನಿಬ್ಬರು ಸದಸ್ಯರು ಕೈಯಲ್ಲಿ ಸಬ್ ಮಶೀನ್ ಗಳನ್ನು ಹಿಡಿದುಕೊಂಡು ಗೋದಾಮಿನೊಳಗೆ ಬಂದರು. ಅವರು ಒಳಗಡೆ ಹೋದಾಗ ಮೋರನ್ ಗ್ಯಾಂಗ್ ಸದಸ್ಯರು ಗೋಡೆ ಕಡೆ ಮುಖ ಮಾಡಿಕೊಂಡು ನಿಂತಿದ್ದು ಕಾಣಿಸಿತು. ಕೂಡಲೇ ಕಪೋನೆಯ ಜನ ಅವರ ಮೇಲೆ ಗುಂಡಿನ ಸುರಿಮಳೆಗೈದರು.

ಮೋರನ್ ಗ್ಯಾಂಗ್ ನ ಆರು ಸದಸ್ಯರು ಸ್ಥಳದಲ್ಲೇ ಕೊನೆಯುಸಿರೆಳೆದರೆ ಇನ್ನೊಬ್ಬ ಆಸ್ಪತ್ರೆಯಲ್ಲಿ ಹಲವು ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ.
ಕಪೋನೆ ಗ್ಯಾಂಗ್ ನ ಅಸಲು ಟಾರ್ಗೆಟ್ ಬಗ್ಸ್ ಮೋರ್ಗನ್ ಆಗಿದ್ದರೂ ಅವರ ಕೈಗೆ ಅವನು ಸಿಗಲೇ ಇಲ್ಲ. ಅವರು ಆಲ್ಬರ್ಟ್ ವೀನ್ ಶಂಕ್ ನನ್ನೇ ಮೋರನ್ ಅಂತ ಭಾವಿಸಿದ್ದರು. ಅವರ ತಪ್ಪು ಗ್ರಹಿಕೆ ಮೋರನ್ ನ ಪ್ರಾಣ ಉಳಿಸಿತ್ತು. ಮೋರನ್ ಎಲ್ಲಿ ಹೋದ, ಏನಾದ ಅಂತ ಕೊನೆವರೆಗೆ ಗೊತ್ತಾಗಲೇ ಇಲ್ಲ.

ಕಪೋನೆ ಜವಾಬ್ದಾರಿ ಹೊತ್ತುಕೊಳ್ಳಲಿಲ್ಲ!

ಸೆಂಟ್ ವಾಲೆಂಟೈನ್ಸ್ ಡೇ ಹತ್ಯಾಕಾಂಡದಲ್ಲಿ ಕಪೋನೆಯೇ ಪ್ರಮುಖ ಆರೋಪಿಯಾಗಿದ್ದರೂ ಅವನು ಪೊಲೀಸರ ಕೈಗೆ ಸಿಗಲಿಲ್ಲ. ನ್ಯಾಯಾಲಯ ಯಾರನ್ನೂ ಸಾಮೂಹಿಕ ಹತ್ಯೆಯ ಆರೋಪಿ ಎಂದು ಪರಿಗಣಿಸಲಿಲ್ಲ.

ಸೆಂಟ್ ವಾಲೆಂಟೈನ್ಸ್ ಡೇ ಹತ್ಯಾಕಾಂಡದ ಕ್ರೌರ್ಯತೆ ಮತ್ತು ರಕ್ತಪಾತಕ್ಕೆ ತಾನೇ ಜವಾಬ್ದಾರ ಅಂತ ಕಪೋನೆ ಕೂಡ ಯಾವತ್ತೂ ಒಪ್ಪಿಕೊಳ್ಳಲಿಲ್ಲ.