ಹೂತಿಟ್ಟಿದ್ದ ಪೆಟ್ಟಿಗೆಯಲ್ಲಿನ ಬೆಳ್ಳಿ ದೋಚಲು ಈ ಕಳ್ಳರು ಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಿದರು!
ಜೈಪುರದಲ್ಲಿ ಕೂದಲು ಕಸಿ ಮಾಡುವ ಕ್ಲಿನಿಕ್ ನಡೆಸುವ ಡಾ ಸುನಿತ್ ಸೋನಿ ಹೂತಿಟ್ಟಿದ್ದ ಅ ಮೂರು ಪೆಟ್ಟಿಗೆಗಳಲ್ಲಿ ಅಂಥದೇನಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಜೈಪುರ ನಗರದ ಪೊಲೀಸರು ಅದೇ ಪ್ರಶ್ನೆಯನ್ನು ವೈದ್ಯರಿಗೆ ಕೇಳಿದಾಗ, ಒಂದರಲ್ಲಿ ಬೆಳ್ಳಿಯ ಸಾಮಾನುಗಳಿದ್ದವು ಮತ್ತೆರಡು ಖಾಲಿಯಿದ್ದವು ಎಂದು ಹೇಳಿದ್ದಾರೆ.
ಜೈಪುರ: ಮನಸ್ಸೊಂದಿದ್ದರೆ ಮಾರ್ಗವುಂಟು ಅಂತ ನಮ್ಮ ಹಿರಿಯರು ಹೇಳಿದ್ದಾರೆ, ಆದರೆ, ಜೈಪುರದ ಕಳ್ಳರು ದರೋಡೆ ಮಾಡುವ ಮನಸ್ಸಿದ್ದರೆ ಸುರಂಗ ಮಾರ್ಗವೂ ಉಂಟು ಅಂತ ಹೇಳುತ್ತಿದ್ದಾರೆ. ಹೌದು, ಈ ಕಳ್ಳರ ಎದೆಗಾರಿಕೆ ನಿಜಕ್ಕೂ ಸಾಮಾನ್ಯವಾದುದಲ್ಲ. ನಗರದ ವೈದ್ಯನೊಬ್ಬನ ಮನೆ ಹಿಂಭಾಗದಲ್ಲಿ ಹೂತಿಟ್ಟದ್ದ ಪೆಟ್ಟಿಗೆಗಳಲ್ಲಿದ್ದ ಬೆಳ್ಳಿಯನ್ನು ದೋಚಲು ಅವರು ಮಾಡಿರುವ ಸಾಹಸದ ಕತೆ ಕೇಳಿದರೆ ಬೆರಗು ಮೂಡುತ್ತದೆ. ಯಾಕೆ ಗೊತ್ತಾ? ಕಳ್ಳತನ ಮಾಡುವ ಮೊದಲು ಅವರು ಆ ವೈದ್ಯನ ಮನೆ ಹಿಂಭಾಗದಲ್ಲಿ ರೂ. 87 ಲಕ್ಷ ನೀಡಿ ಮನೆಯನ್ನು ಖರೀದಿಸಿದ್ದಾರೆ! ನೀವು ಓದಿದ್ದು ಸರಿ. ಅವರು ಮನೆ ಕೊಳ್ಳಲು ಆ ಪರಿ ಹಣ ಖರ್ಚು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ತಾವು ಖರೀದಿಸಿದ ಮನೆಯಿಂದ ಡಾಕ್ಟರ್ ಮನೆಯ ಹಿತ್ತಲಿನವರೆಗೆ 20 ಅಡಿ ಉದ್ದ ಮತ್ತು 15 ಅಡಿ ಆಳದ ಸುರಂಗಮಾರ್ಗವನ್ನು ಕೊರೆದು ಹೂತಿಟ್ಟಿದ್ದ ಮೂರು ಪೆಟ್ಟಿಗೆಗಳನ್ನು ಎತ್ತಿಕೊಂಡು ಹೋಗಿದ್ದಾರೆ.
ಹಾಗಾದರೆ, ಜೈಪುರದಲ್ಲಿ ಕೂದಲು ಕಸಿ ಮಾಡುವ ಕ್ಲಿನಿಕ್ ನಡೆಸುವ ಡಾ ಸುನಿತ್ ಸೋನಿ ಹೂತಿಟ್ಟಿದ್ದ ಅ ಮೂರು ಪೆಟ್ಟಿಗೆಗಳಲ್ಲಿ ಅಂಥದೇನಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಜೈಪುರ ನಗರದ ಪೊಲೀಸರು ಅದೇ ಪ್ರಶ್ನೆಯನ್ನು ವೈದ್ಯರಿಗೆ ಕೇಳಿದಾಗ, ಒಂದರಲ್ಲಿ ಬೆಳ್ಳಿಯ ಸಾಮಾನುಗಳಿದ್ದವು ಮತ್ತೆರಡು ಖಾಲಿಯಿದ್ದವು ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಕಳ್ಳರು ಜನೆವರಿ ತಿಂಗಳಲ್ಲಿ ವೈದ್ಯರ ಮನೆ ಹಿಂಭಾಗದಲ್ಲಿರುವ ಮನೆಯನ್ನು ಖರೀದಿಸಿದ್ದಾರೆ ಮತ್ತು ತಾವು ಸುರಂಗ ಮಾರ್ಗ ಅಗೆಯುತ್ತಿರುವುದು ಬೇರೆಯವರಿಗೆ ಕಾಣದಂತಿರಲು ಮನೆಯ ಸುತ್ತ ಟಿನ್ ಶೆಡ್ಗಳನ್ನು ನಿರ್ಮಿಸಿದ್ದಾರೆ. ಅವರು ಅದೆಷ್ಟು ನಿಖರವಾಗಿ ಸುರಂಗ ಮಾರ್ಗ ಅಗೆದಿದ್ದಾರೆಂದರೆ, ಅದು ಕೊನೆಗೊಂಡಿದ್ದು ಸರಿಯಾಗಿ ವೈದ್ಯರು ಪೆಟ್ಟಿಗೆಗಳನ್ನು ಹೂತಿಟ್ಟಿದ್ದ ಸ್ಥಳದಲ್ಲಿ!
ನಂತರ ಅವರು ಬಾಕ್ಸ್ಗಳನ್ನು ಒಡೆದು ಬೆಳ್ಳಿ ಸಾಮಾನುಗಳನ್ನು ಕದ್ಯೊಯ್ದಿದ್ದಾರೆ. ಬುಧುವಾರದಂದು ತಮ್ಮ ಮನೆಯ ಅಡಿಪಾಯ ಮೇಲೆ ಕೆಳಗೆ ಆಗಿರುವುದನ್ನು ಡಾ ಸೋನಿ ಗಮನಿಸಿ ಅದನ್ನು ಅಗೆಸಿದ ನಂತರ ಪೆಟ್ಟಿಗೆಯಲ್ಲಿದ್ದ ಬೆಳ್ಳಿ ಮಾಯವಾಗಿದ್ದನ್ನು ಕಂಡುಕೊಂಡಿದ್ದಾರೆ. ಕೂಡಲೇ ಹತ್ತಿರದ ಪೊಲೀಸ್ ಸ್ಟೇಷನ್ಗೆ ಹೋಗಿ ದೂರು ದಾಖಲಿಸಿದ್ದಾರೆ.
‘ಪ್ರಾಥಮಿಕ ತನಿಖೆಯ ಪ್ರಕಾರ ಡಾ ಸೋನಿಯವರ ಸ್ನೇಹಿತನೊಬ್ಬ ದರೋಡೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಅವನಿಗೆ ವೈದ್ಯರು ಮನೆ ಹಿಂಭಾಗದಲ್ಲಿ ಬೆಳ್ಳಿ ಹೂತಿಟ್ಟಿದ್ದು ಗೊತ್ತಿತ್ತು. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಈ ದರೋಡೆಯಲ್ಲಿ ಇನ್ನೂ ನಾಲ್ವರು ಭಾಗಿಯಾಗಿದ್ದಾರೆ,’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಚಿನ್ನ-ಬೆಳ್ಳಿ ವ್ಯಾಪಾರ ಮಾಡಿಕೊಂಡಿದ್ದಾನಂತೆ.
ಡಾ ಸೋನಿ ಅವರು ಪೊಲೀಸರ ವಿಚಾರಣೆ ವೇಳೆ ಒಂದು ಪೆಟ್ಟಿಗೆಯಲ್ಲಿ ಮಾತ್ರ ಬೆಳ್ಳಿಯಿತ್ತು, ಮತೆರಡು ಖಾಲಿಯಿದ್ದವು ಅಂತ ಹೇಳಿದ್ದಾರೆ. ಎರಡು ಪೆಟ್ಟಿಗೆಗಳು ಖಾಲಿಯಿದ್ದರೆ ಅವುಗಳನ್ನು ಹೂತಿಡುವ ಪ್ರಮೇಯ ಯಾಕೆ ಉದ್ಭವಿಸಿತು ಅಂತ ಕೇಳಿದ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲವಂತೆ.
ಇದನ್ನೂ ಓದಿ: Serial theft: ಮೇಲ್ಚಾವಣಿ ಮೇಲೆ ಮಲಗಿದ್ದ ಮನೆಯವರು! ಅಂಗಡಿ, ಮನೆಗಳ ಸರಣಿ ಕಳ್ಳತನ: ಬೈಕ್, ನಗದು, ಚಿನ್ನಾಭರಣ ದೋಚಿ ಪರಾರಿ
Published On - 9:12 pm, Sat, 27 February 21