‘ಲೀಗಲ್’ ಆಗಿಯೇ ನಡೆಯುತ್ತಿದ್ದ ‘ಇಲ್ಲೀಗಲ್’ ಕೆಲಸಕ್ಕೆ ಪೊಲೀಸರ ಕುಮ್ಮಕ್ಕಿನ ಶಂಕೆ: ಕೋರ್ಟ್ ಡಿಕ್ರಿ ಅವ್ಯವಹಾರದಲ್ಲಿ ಅಮಾಯಕರ ಕಣ್ಣೀರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 23, 2022 | 6:10 AM

ಅಮಾಯಕರನ್ನು ಕಿತ್ತು ತಿಂದಿರುವ ಈ ರಿಯಲ್ ಎಸ್ಟೇಟ್ ಅವ್ಯಹಾರಕ್ಕೆ ಸಂಬಂಧಿಸಿದಂತೆ ನಗರದ ವಿವಿಧೆಡೆ 118 ಪ್ರಕರಣಗಳು ದಾಖಲಾಗಿವೆ.

‘ಲೀಗಲ್’ ಆಗಿಯೇ ನಡೆಯುತ್ತಿದ್ದ ‘ಇಲ್ಲೀಗಲ್’ ಕೆಲಸಕ್ಕೆ ಪೊಲೀಸರ ಕುಮ್ಮಕ್ಕಿನ ಶಂಕೆ: ಕೋರ್ಟ್ ಡಿಕ್ರಿ ಅವ್ಯವಹಾರದಲ್ಲಿ ಅಮಾಯಕರ ಕಣ್ಣೀರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಯಾರದ್ದೋ ಆಸ್ತಿಗೆ ಇನ್ಯಾರದ್ದೋ ಹೆಸರಿನಲ್ಲಿ ರಾಜಿಸಂಧಾನದ ಡಿಕ್ರಿ ಪಡೆದುಕೊಂಡು ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು ಸಿಐಡಿ ಬಯಲಿಗೆಳೆದಿದೆ. ಖಾದಿ, ಖಾಕಿ, ಕೋಟು, ನೋಟು (ರಾಜಕಾರಿಣಿಗಳು, ಪೊಲೀಸ್ ಅಧಿಕಾರಿಗಳು, ವಕೀಲರು ಮತ್ತು ಉದ್ಯಮಿಗಳು) ಸೇರಿ ನಡೆಸುತ್ತಿದ್ದ ಈ ದೊಡ್ಡ ದಂದೆಯಲ್ಲಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಕೇಳಿ ಬಂದಿದೆ. ಅಮಾಯಕರನ್ನು ಕಿತ್ತು ತಿಂದಿರುವ ಈ ರಿಯಲ್ ಎಸ್ಟೇಟ್ ಅವ್ಯಹಾರಕ್ಕೆ ಸಂಬಂಧಿಸಿದಂತೆ ನಗರದ ವಿವಿಧೆಡೆ 118 ಪ್ರಕರಣಗಳು ದಾಖಲಾಗಿವೆ.

ಹಲಸೂರು ಗೇಟ್, ಬಾಣಸವಾಡಿ, ಪುಲಕೇಶಿ ನಗರ ಠಾಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಪ್ರಕರಣಗಳ ತನಿಖೆಯನ್ನು ಇದೀಗ ಸಿಐಡಿ ನಿರ್ವಹಿಸುತ್ತಿದ್ದು, ಅವ್ಯವಹಾರದ ಸೂತ್ರಧಾರ (ಕಿಂಗ್​ಪಿನ್) ಎನ್ನಲಾದ ಕಲ್ಯಾಣ ನಗರದ ನಿವಾಸಿ ಜಾನ್ ಮೋಸೆಸ್ ಮತ್ತು ಅವನಿಗೆ ನೆರವಾಗುತ್ತಿದ್ದ ಆರೋಪಿ ಸುಭಾಷ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಕೇಸ್ ಆಳಕ್ಕೆ ಇಳಿದ ಸಿಐಡಿ ಅಧಿಕಾರಿಗಳು ವಂಚಕರ ಜಾಲ ಬಿಟ್ಟುಕೊಂಡಿದ್ದ ಬೇರಿನ ಆಳ ನೋಡಿ ಗಾಬರಿಯಾಗಿತ್ತು. ನ್ಯಾಯಾಲಯ, ಪೊಲೀಸ್ ಇಲಾಖೆ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳ ವ್ಯವಸ್ಥೆಗಳಿಗೆ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿತ್ತು. ನಕಲಿ ದಾಖಲೆಗಳನ್ನು ವ್ಯವಸ್ಥಿತವಾಗಿ ರೂಪಿಸಿದ ನಂತರ ನಿವೇಶನ, ಮನೆ ಹಾಗೂ ಜಮೀನು ಮಾಲೀಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿತ್ತು. ನ್ಯಾಯಾಲಯದ ಆದೇಶ ಮತ್ತು ಇತರ ಕಾರಣಗಳಿಂದ ಈ ಕೆಲಸದಲ್ಲಿ ಭಾಗಿಯಾದ ಎಷ್ಟೋ ಸರ್ಕಾರಿ ಅಧಿಕಾರಿಗಳಿಗೆ ಇದು ವಂಚನೆ ಎನ್ನುವುದೇ ತಿಳಿದಿರಲಿಲ್ಲ.

ಹೀಗೆ ನಡೆಯುತ್ತಿತ್ತು ವಂಚನೆ

ಒಂದು ಮನೆ ಅಥವಾ ನಿವೇಶನವನ್ನು ಮೊದಲು ಗುರುತು ಮಾಡುತ್ತಿದ್ದ ಜಾನ್ ಮೋಸೆಸ್, ನಂತರ ಆ ಮನೆ ನಮ್ಮದು. ಈಗ ಅದರಲ್ಲಿ ವಾಸ ಇರುವ ಮಾಲಿಕರು ನಿಜವಾದ ಮಾಲೀಕರೇ ಅಲ್ಲ. ಅವರು ಬಾಡಿಗೆಗೆ ಇದ್ದಾರೆ ಎನ್ನುವಂತೆ ದಾಖಲೆ ಸೃಷ್ಟಿಸುತ್ತಿದ್ದರು. ಮನೆ ಮಾಲೀಕನಿಗೆ ಆರೋಪಿಗಳು ಬಾಡಿಗೆ ಕೊಟ್ಟ ಹಾಗೆ ಒಂದು ರೆಂಟ್ ಅಗ್ರಿಮೆಂಟ್ ಮಾಡುತ್ತಿದ್ದರು. ಬಳಿಕ ಅಗ್ರಿಮೆಂಟ್ ಪ್ರಕಾರ ಆತ ಮನೆಯನ್ನು ಖಾಲಿ ಮಾಡುತ್ತಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದರು.

ನ್ಯಾಯಾಲಯದ ಮೂಲಕ ಮನೆ ಖಾಲಿ ಮಾಡುವಂತೆ ಡಿಕ್ರಿ ಆದೇಶ ಪಡೆಯುತ್ತಿದ್ದ ಆರೋಪಿಗಳು ನಂತರ ಲೀಗಲ್ ಆಗಿಯೇ ಇಲ್ಲೀಗಲ್ ಕೆಲಸ ಶುರು ಮಾಡುತ್ತಿದ್ದರು. ಆದೇಶ ಪ್ರತಿ ಸಹಿತ ಕೋರ್ಟ್ ಅಮೀನ ಜತೆಗೆ ಸ್ಥಳಕ್ಕೆ ಹೋಗಿ, ನ್ಯಾಯಾಲಯದ ಆದೇಶದಂತೆ ಮನೆ ಖಾಲಿ ಮಾಡುವಂತೆ ತಾಕೀತು ಮಾಡುತ್ತಿದ್ದರು. ಒಪ್ಪದ್ದಿದ್ದಾಗ ಬಲವಂತವಾಗಿ ಖಾಲಿ ಮಾಡಿಸುವ ಯತ್ನ ಮಾಡುತ್ತಿದ್ದರು. ಕೊನೆಗೆ ಇಂತಿಷ್ಟು ಹಣ ಕೊಟ್ಟರೆ ಸುಮ್ಮನಾಗುವುದಾಗಿ ಡೀಲ್ ಕುದುರಿಸುತಿದ್ದರು. ಡೀಲ್ ಬಳಿಕ ನ್ಯಾಯಾಲಯಕ್ಕೆ ನಾವು ‘ಔಟ್ ಆಫ್ ದ ಕೋರ್ಟ್’ ಸೆಟಲ್ ಮೆಂಟ್ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ಸಲ್ಲಿಸುತ್ತಿದ್ದರು. ಆ ಆಸ್ತಿಯ ನಿಜವಾದ ಮಾಲೀಕರು ಕೊನೆಗೆ ತಮ್ಮದಲ್ಲದ ಜಾಗಕ್ಕೆ ಹಣ ನೀಡಿ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುತ್ತಿದ್ದರು. ಅಷ್ಟು ಬಿಗಿಯಾಗಿರುತ್ತಿತ್ತು ವಂಚಕರು ಹೆಣೆಯುತ್ತಿದ್ದ ಬಲೆ.

ವಂಚಕರ ಜಾಲ

ಜಾನ್ ಮೋಸೆಸ್ ಹೆಣೆದಿದ್ದ ಜಾಲದಲ್ಲಿ ಎಲ್ಲ ರೀತಿಯ ಜನರು ಇದ್ದರು. ವಕೀಲರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಈ ವಂಚನೆಯಲ್ಲಿ ಶಾಮೀಲಾಗಿದ್ದ ಬಗ್ಗೆ ಪ್ರಬಲವಾಗಿ ಕೇಳಿ ಬರುತ್ತಿದೆ. ಬೆಂಗಳೂರು ಪೂರ್ವ ವಿಭಾಗದಲ್ಲಿ ಕೆಲಸ ಮಾಡಿದ್ದ ಇಬ್ಬರು ಹಿರಿಯ ಐಪಿಎಸ್​ ಅಧಿಕಾರಿಗಳ ಹೆಸರನ್ನು ಕಿಂಗ್​ಪಿನ್ ಜಾನ್ ಮೋಸೆಸ್ ತನ್ನ ಹೇಳಿಕೆಯಲ್ಲಿ ಬಹಿರಂಗ ಪಡಿಸಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಇವರಿಬ್ಬರೂ ನಗರ ಪೊಲೀಸ್ ವ್ಯವಸ್ಥೆಯಿಂದ ಬೇರೆಯೇ ಆಗಿರುವ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಮನೆ ಅಥವಾ ಆಸ್ತಿಯ ನಿಜವಾದ ಮಾಲೀಕರನ್ನು ಬೆದರಿಲು ವಂಚಕರು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದರು. ಪೊಲೀಸರ ಬಳಕೆಗೆ ಹಿರಿಯ ಅಧಿಕಾರಿಗಳಿಂದ ಸೂಚನೆ ನೀಡಿಸುತ್ತಿದ್ದರು. ಇಂಥದ್ದೊಂದು ನಿರ್ದೇಶನ ನೀಡಿದ್ದಕ್ಕಾಗಿ ನಂತರ ಅವರಿಬ್ಬರಿಗೂ ಹಣ ಸಂದಾಯ ಆಗುತ್ತಿತ್ತು ಎಂದು ವಂಚಕ ಮೊಸೆಸ್ ತಪ್ಪೊಪ್ಪಿಗೆ ವೇಳೆ ಹೇಳಿದ್ದಾನೆ ಎಂದು ಮೂಲಗಳು ಹೇಳಿವೆ.

ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಬಂಧನದ ನಂತರ ಮತ್ತಿಬ್ಬರ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಕೇಳಿ ಬಂದಿರುವ ಪ್ರಮುಖ ಪ್ರಕರಣ ಇದು. ಹೀಗಾಗಿ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟಾಗಿದೆ ಎನ್ನಲಾಗುತ್ತಿದೆ.