ಬೆಂಗಳೂರು: ನವೆಂಬರ್ 30 ರಂದು ನೇಣು ಬಿಗಿದುಕೊಂಡಿದ್ದಳೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
6 ವರ್ಷಗಳ ಹಿಂದೆ ಚಿತ್ರದುರ್ಗದ ರವಿ ಎಂಬಾತನೊಂದಿಗೆ ಆಶಾರಾಣಿ(30) ವಿವಾಹವಾಗಿದ್ದರು. ಪೀಣ್ಯದ ಎಸ್ಆರ್ಎಸ್ ರಸ್ತೆಯ ಮನೆಯೊಂದರಲ್ಲಿ ದಂಪತಿ ವಾಸವಿದ್ದರು. ಇಬ್ಬರೂ ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆಗಾಗ ದಂಪತಿ ನಡುವೆ ಜಗಳವಾಗ್ತಿತ್ತು.
ನ. 30 ರಂದು ಪತ್ನಿ ನೇಣು ಬಿಗಿದುಕೊಂಡಿದ್ದಾಳೆಂದು ರವಿ ಆಸ್ಪತ್ರೆಗೆ ದಾಖಲಿಸಿದ್ದ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಶಾರಾಣಿ ಮೃತಪಟ್ಟಿದ್ದಾರೆ. ಈ ಸಂಬಂಧ ಆರ್ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.