ಕೋಲಾರ, ಸೆ.23: ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಪ್ರೇಮಿಗಳು, ಪ್ರೀತಿಯ ಹೆಸರಲ್ಲಿ ಪ್ರೇಮಿಗಳಿಬ್ಬರು ಆಂಧ್ರದಿಂದ ಕರ್ನಾಟಕದ ಗಡಿಯ ಅರಣ್ಯ ಪ್ರದೇಶದಲ್ಲಿ ಒಂದು ಸುತ್ತಾಡಲೆಂದು ಬಂದಿದ್ದರು. ಆದರೆ ಪ್ರೇಮಿಗಳ ನಡುವೆ ಉಂಟಾದ ಅದೊಂದು ಮನಸ್ಥಾಪ ಅಲ್ಲಿ ಒಂದು ಪ್ರೇಮಿಯನ್ನೇ ಬಲಿಪಡೆದುಕೊಂಡಿದ್ದು, ಪ್ರಿಯಕರನೇ ಯುವತಿಯನ್ನು ಕೊಲೆ (Murder) ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಕಳೆದ ರಾತ್ರಿ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ಆಂಧ್ರದ ಪೀಲೇರು ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪಿರುವ ಘಟನೆ ಕೇಳಿ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ರಾಯಲ್ಪಾಡು ಪೊಲೀಸರಿಗೆ 20 ವರ್ಷದ ಹರ್ಷಿತ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಕಂಡು ಬಂದಿದೆ. ಅಲ್ಲದೆ ಹರ್ಷಿತ ಮೃತ ದೇಹದ ಬಳಿಯಲ್ಲೇ ಹರ್ಷಿತ ಪ್ರಿಯಕರ ಹಾಗೂ ಸಂಬಂಧಿ ಹೇಮಂತ್ ಎಂಬುವನು ಸಿಕ್ಕಿದ್ದಾನೆ.
ಸದ್ಯ ಕಳೆದ ರಾತ್ರಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ ರಾಯಲ್ಪಾಡು ಪೊಲೀಸರು ಮೃತ ಹರ್ಷಿತ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಜೊತೆಗೆ ಹರ್ಷಿತ ಜೊತೆಗೆ ಬಂದಿದ್ದ ಪ್ರಿಯಕರ ಹೇಮಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಹರ್ಷಿತಾ ಪೊಷಕರು ಮಾತ್ರ ಹೇಮಂತ್ ಪ್ರೀತಿ ಪ್ರೇಮದ ಹೆಸರೇಳಿಕೊಂಡು ಕರೆತಂದು ಕಾಡಿನಲ್ಲಿ ಹರ್ಷಿತಾಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಕೆಲಸಕ್ಕಿಟ್ಟಿದ್ದ ಯುವಕರಿಂದಲೇ ಭೀಕರವಾಗಿ ಕೊಲೆಯಾದ ಮಾಲೀಕ; ಆರೋಪಿಗಳು ಮಾಡಿದ್ದ ಖತರ್ನಾಕ್ ಪ್ಲ್ಯಾನ್ ಹೇಗಿತ್ತು ಗೊತ್ತಾ?
ಹರ್ಷಿತ ಹಾಗೂ ಹೇಮಂತ್ ಸಂಬಂಧಿಕರು ಜೊತೆಗೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ನಿನ್ನೆ ಇಬ್ಬರೂ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಆಂಧ್ರದ ಗಡಿಯಲ್ಲಿರುವ ಸುಣ್ಣಕಲ್ಲು ಅರಣ್ಯ ಪ್ರದೇಶಕ್ಕೆ ಬಂದಿದ್ದರು. ಈ ವೇಳೆ ಇಬ್ಬರೂ ಕೆಲ ಕಾಲ ಅರಣ್ಯ ಪ್ರದೇಶದಲ್ಲಿ ಕಾಲ ಕಳೆದಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.
ಇದರಿಂದ ಹರ್ಷಿತಾಳನ್ನು ಅಲ್ಲೇ ಬಿಟ್ಟು ಹೇಮಂತ್ ಹೊರಟಿದ್ದಾನೆ. ಇದರಿಂದ ಕೋಪಗೊಂಡಿರುವ ಹರ್ಷಿತ ತನ್ನ ವೇಲ್ನಲ್ಲಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ನಂತರ ಹೇಮಂತ್ ವಾಪಸ್ ನೋಡುವಷ್ಟರಲ್ಲಿ ಹರ್ಷಿತಾ ಸಾವನ್ನಪ್ಪಿರುವುದನ್ನು ಕಂಡು ಕಿರುಚಾಡಿದ ಹೇಮಂತ್ ಶವವನ್ನು ಕೆಳಗಿಳಿಸಿ ನಂತರ ತನ್ನ ಪೊಷಕರಿಗೆ ಹಾಗೂ ರಾಯಲ್ಪಾಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಸಾವಿನ ಬಗ್ಗೆ ಅನುಮಾನ ಮೂಡಿದೆ. ನಂತರ ಶವವನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಇಂದು ಬೆಳಿಗ್ಗೆ ಬಂದ ಹರ್ಷಿತಾ ಪೊಷಕರು ಹೇಮಂತ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಆದರೆ ಇದನ್ನು ಹೇಮಂತ್ ತಂದೆ ವಿರೋದಿಸಿದ್ದು ಹರ್ಷಿತಾ ಟ್ರಿಪ್ ಹೋಗಬೇಕು ಎಂದು ಹೇಳಿದ ಹಿನ್ನೆಲೆ ಅವಳನ್ನು ಕರೆತಂದಿದ್ದ. ಆದರೆ ಅವರಿಬ್ಬರು ಇಲ್ಲಿಗೆ ಏಕೆ ಬಂದಿದ್ದರು ಅನ್ನೋದು ಗೊತ್ತಿಲ್ಲ. ಇದು ಅಚಾನಕ್ಕಾಗಿ ನಡೆದಿರುವ ಘಟನೆ. ನನ್ನ ಮಗ ಕೊಲೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ಪ್ರೀತಿ ಪ್ರೇಮವೋ ಇಲ್ಲಾ ಅವರಿಬ್ಬರ ನಡುವೆ ನಡೆಯಿಯೋ ಗೊತ್ತಿಲ್ಲ. ಆದರೆ ಜಾಲಿ ಟ್ರಿಪ್ಗೆಂದು ಬಂದ ಇಬ್ಬರು ಪ್ರೇಮಿಗಳ ನಡುವೆ ಅಚಾನಕ್ಕಾಗಿ ಬಂದು ಆವರಿಸಿರುವ ಸಾವಿನ ಕಹಾನಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ಪೊಲೀಸರ ತನಿಖೆಯಿಂದಷ್ಟೇ ನಿಜಾಂಶ ಹೊರಬರಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ