ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (RTE) ದಾಖಲಾದ ವಿದ್ಯಾರ್ಥಿಗಳಿಂದ ತಲಾ 40,000 ರೂ. ಶುಲ್ಕ ವಸೂಲಿ ಮಾಡಿದ ಆರೋಪ ಸಂಬಂಧ ಬೆಂಗಳೂರಿನ ಉಲ್ಲಾಳ ಮುಖ್ಯರಸ್ತೆಯ ಜ್ಞಾನಗಂಗನಗರದಲ್ಲಿರುವ ಹೆಚ್ಎಂಆರ್ ಶಾಲೆ (HMA School) ವಿರುದ್ಧ ದೂರು ದಾಖಲಾಗಿದೆ. ಆರ್ಟಿಇ ಮಕ್ಕಳು 40 ಸಾವಿರ ರೂ. ಶುಲ್ಕ ಕಟ್ಟುವಂತೆ ಕಿರುಕುಳ ನೀಡಲಾಗುತ್ತಿದೆ, ಶುಲ್ಕ ಪಾವತಿಸದ ಮಕ್ಕಳಿಗೆ ಪರೀಕ್ಷೆ ಬರೆಯಲು ಬಿಡಲಿಲ್ಲ ಎಂದು ಆರೋಪಿಸಿ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ-1 ಬಿಇಒ ರಾಜಶೇಖರ್ ಅವರಿಗೆ ಆರ್ಟಿಇ ಮಕ್ಕಳ ಪೋಷಕರು ದೂರು ನೀಡಿದ್ದಾರೆ.
ನಮ್ಮ ಮಕ್ಕಳಿಗೆ ಆರ್ಟಿಇ ಅಡಿಯಲ್ಲಿ ಪ್ರವೇಶ ಪಡೆದಿದ್ದು, ಶುಲ್ಕ ಕಟ್ಟುವುದಿಲ್ಲ ಅಂತ ಪೋಷಕರು ಪಟ್ಟು ಹಿಡಿದಿದ್ದಾರೆ. ಪರಿಣಾಮ ವಿದ್ಯಾರ್ಥಿಗಳು ಶುಲ್ಕ ಪಾವತಿಸಿಲ್ಲವೆಂದು ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಿದ್ದು, ಪೋಷಕರ ಗಲಾಟೆ ಬಳಿಕ 11 ಗಂಟೆಗೆ RTE ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡಲಾಗಿದೆ. ಅದರಂತೆ ಒಂದೂವರೆ ತಾಸಿನ ಪರೀಕ್ಷೆಗೆ ಕೇವಲ 30 ನಿಮಿಷ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: NEET MDS 2023: ನೀಟ್ ಎಂಡಿಎಸ್ ಫಲಿತಾಂಶ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ
ಆರ್ಟಿಇ ಯೋಜನೆ ಅಡಿ 7 ವಿದ್ಯಾರ್ಥಿಗಳು ಹೆಚ್ಎಂಆರ್ ಶಾಲೆಗೆ ಪ್ರವೇಶ ಪಡೆದಿದ್ದರು. ಆದರೆ ಶುಲ್ಕ ವಸೂಲಾತಿಗೆ ಇಳಿದ ಶಾಲಾ ಆಡಳಿತ ಮಂಡಳಿ, ಕೊರೊನಾ ವರ್ಷದ ಶುಲ್ಕವನ್ನೂ ನೀಡುವಂತೆ ಪೋಷಕರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಶುಲ್ಕ ಪಾವತಿಸಿದ ಪೋಷಕರಿಗೆ ರಶೀದಿ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಖಾಸಗಿ ಶಾಲೆ ಹಣದ ದಾಹದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರೀಕ್ಷೆ ಬಂದಾಗೆಲ್ಲ ಶುಲ್ಕ ಕಟ್ಟಿ ಅಂತ ಒತ್ತಾಯಿಸುತ್ತಿದ್ದಾರೆ. ಕೊರೋನಾ ಸಮಯದಿಂದಲೂ ಫೀಸ್ ಕೇಳುತ್ತಿದ್ದಾರೆ. ಒಟ್ಟು 40 ಸಾವಿರ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಹಾಲ್ ಟಿಕೆಟ್ ಕೊಟ್ಟಿಲ್ಲ ಎಂದು ನನ್ನ ಮಗಳು ಅಳುತ್ತಾ, ನಡುಗುತ್ತಿದ್ದಳು. ಈಗ ಕೊಟ್ಟಿದ್ದಾರೆ ಎಂದು ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ.
ಶುಲ್ಕ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿಯಲಾಗುತ್ತಿದ್ದರೂ ಮತ್ತೆ ಶನಿವಾರ ಫೀಸ್ ಕಟ್ಟಲು ಸೂಚಿಸಿದ್ದಾಗಿ ಪೋಷಕರ ಅಸಹಾಯಕತೆ ತೋಡಿಕೊಂಡಿದ್ದಾರೆ. ಅಲ್ಲದೆ ಶಾಲೆ ಮುಂದೆ ಸೇರಿದ ಆರ್ಟಿಇ ವಿದ್ಯಾರ್ಥಿಗಳ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಆಡಳಿತ ಮಂಡಳಿಯ ಕಾರ್ಯದರ್ಶಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲೂ ನಿರಾಕರಿಸಿದ್ದಾರೆ. ರಶೀದಿ ನೀಡದ ಬಗ್ಗೆ ಪ್ರಶ್ನಿಸಿದಾಗ ರಶೀದಿ ಕೊಡಲು ಆಗಲ್ಲ ಎಂದು ಹೇಳಿದ ಕಾರ್ಯದರ್ಶಿ ರಾಜಕುಮಾರ್, ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ಉಡಾಫೆ ಉತ್ತರ ನೀಡಿ ತೆರಳಿದ್ದಾರೆ.
ಶಾಲಾ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ತನ್ನ ಮಗಳ ಭವಿಷ್ಯಕ್ಕಾಗಿ ಶುಲ್ಕ ಕಟ್ಟಲು ವಿದ್ಯಾರ್ಥಿನಿ ತಾಯಿ ಶೇ.5ರಷ್ಟು ಬಡ್ಡಿಗೆ 5 ಸಾವಿರ ರೂ. ಸಾಲ ಪಡೆದು ಶಾಲೆಗೆ ತಂದಿದ್ದಾರೆ. ಆರ್ಟಿಇ ಮಕ್ಕಳು ಸಹ 40 ಸಾವಿರ ಪಾವತಿಸಬೇಕಂತೆ. ಬಾಕಿ ಉಳಿಸಿಕೊಂಡ ಕಾರಣ ನನ್ನ ಮಗಳಿಗೆ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಫೀಸ್ ಕೊಟ್ಟ ಮೇಲೆ ಪರೀಕ್ಷೆ ಅವಕಾಶ ಕೊಟ್ಟಿದ್ದಾರೆ. ಆರ್ಟಿಇ ಮಕ್ಕಳು ಫೀಸ್ ಕಟ್ಟಬೇಕಂತೆ ಇದು ಯಾವ ನ್ಯಾಯ? ಎಂದು ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Mon, 13 March 23