BMTC Bus Pass: ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್​ ಪಾಸ್ ವಿತರಣೆ

ಸೇವಾಸಿಂಧು ಪೋರ್ಟಲ್​ ಮತ್ತು ಬಿಎಂಟಿಸಿ ವೆಬ್​ಸೈಟ್​ನಲ್ಲಿ ಬಸ್​ಪಾಸ್​ನ ಆನ್​ಲೈನ್ ಅರ್ಜಿಗಳು ಲಭ್ಯ

BMTC Bus Pass: ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್​ ಪಾಸ್ ವಿತರಣೆ
ಬಿಎಂಟಿಸಿ ಬಸ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 12, 2021 | 11:41 AM

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (Bengaluru Metropolitan Transport Corporation – BMTC) ನವೆಂಬರ್ 14ರಿಂದ ವಿದ್ಯಾರ್ಥಿಗಳಿಗೆ ಬಸ್​ಪಾಸ್ ವಿತರಿಸಲಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಈ ಪಾಸ್ ಲಭ್ಯವಾಗಲಿವೆ. ಸೇವಾಸಿಂಧು ಪೋರ್ಟಲ್​ ಮತ್ತು ಬಿಎಂಟಿಸಿ ವೆಬ್​ಸೈಟ್​ನಲ್ಲಿ ಬಸ್​ಪಾಸ್​ನ ಆನ್​ಲೈನ್ ಅರ್ಜಿಗಳು ಲಭ್ಯ. ಬೆಂಗಳೂರು ಒನ್ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6.30ರವರೆಗೆ ಪಾಸ್​ಗಳನ್ನು ವಿತರಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಂದ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಅನುಮೋದಿಸಲಾಗುವುದು. ಈ ಕುರಿತು ಸೂಚನೆ ಲಭ್ಯವಾದ ನಂತರ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾಸ್ ವಿತರಣೆಗಾಗಿ ಬೆಂಗಳೂರು ಒನ್ ಕೇಂದ್ರದಲ್ಲಿ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಬೇಕು. ಬೆಂಗಳೂರು ಒನ್ ಕೇಂದ್ರಗಳಿಗೆ ಬರುವಾಗ ಶಿಕ್ಷಣ ಸಂಸ್ಥೆಯ ಗುರುತಿನ ಚೀಟಿ, ಶುಲ್ಕ ರಸೀದಿ, ಶಾಲಾ ಮುಖ್ಯಸ್ಥರು ನೀಡುವ ದೃಢೀಕರಣ ಪತ್ರವನ್ನು ತರಬೇಕು ಎಂದು ಬಿಎಂಟಿಸಿ ಹೇಳಿದೆ.

ವಿದ್ಯಾರ್ಥಿಗಳು ಒಂದು ವೇಳೆ ನೋಂದಣಿಯಾಗದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದರೆ, ಅಂಥವರು ತಮ್ಮ ಶಾಲೆಗಳನ್ನು ಬಿಎಂಟಿಸಿ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಬೇಕು. ಎಲ್ಲೆಲ್ಲಿ ಪಾಸ್ ವಿತರಿಸಲಾಗುವುದು ಎಂಬ ಪಟ್ಟಿಯು ಬಿಎಂಟಿಸಿ ವೆಬ್​ಸೈಟ್​ನಲ್ಲಿ ಲಭ್ಯವಿದೆ. ನಗರದ ಒಟ್ಟು 95 ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾಸ್​ಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಬಿಎಂಟಿಸಿ ಬಸ್​ ಮೇಲೆ ಬಿತ್ತು ರೈಲ್ವೇ ಬ್ರಿಡ್ಜ್​ಗೆ ಹಾಕಿದ್ದ ಕಬ್ಬಿಣದ ಶೀಟ್​; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಇದನ್ನೂ ಓದಿ: BMTC Revenue: ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿಯಿಂದ ಟಾರ್ಗೆಟ್ ಟಾರ್ಚರ್!

Published On - 11:39 am, Fri, 12 November 21