Kannada News Education Career Option: After Second PUC, What are the courses are available? Kannada News
Career Option : ಪಿಯುಸಿ ನಂತರ ಮುಂದೇನು? ಈ ಕೋರ್ಸ್ ಮಾಡಿದ್ರೆ ಸುಲಭವಾಗಿ ಕೆಲಸ ಸಿಗುತ್ತೆ
ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆಗಳು ಹೆಚ್ಚಿನ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತದೆ. ಕೆಲವರು ಪರೀಕ್ಷೆ ಏನೋ ಮುಗಿಯಿತು ರಿಸಲ್ಟ್ ಬರಲಿ, ಆಮೇಲೆ ನೋಡಿದರಾಯಿತು ಎಂದುಕೊಳ್ಳುತ್ತಾರೆ. ಅಂಕಗಳ ಆಧಾರದ ಮೇಲೆ ಕೋರ್ಸ್ ಮಾಡ್ಬೇಕಾ ಅಥವಾ ಡಿಗ್ರಿ ಶಿಕ್ಷಣ ಪಡೆಯುವುದಾ? ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಪಿಯುಸಿ ಬಳಿಕ ನೀವು ಮಾಡುವ ಕೋರ್ಸ್ ಅಥವಾ ಪಡೆಯುವ ಡಿಗ್ರಿ ನಿಮ್ಮ ಉದ್ಯೋಗವನ್ನು ನಿರ್ಧರಿಸುತ್ತದೆ. ಹೀಗಾಗಿ ಪಿಯುಸಿ ಬಳಿಕ ಮುಂದೇನು ಎನ್ನುವ ಬಗ್ಗೆ ಹೆಚ್ಚು ಯೋಚಿಸಬೇಕು, ವಿದ್ಯಾರ್ಥಿಗಳಿಗೆ ಈ ಕುರಿತಾದ ಕೆಲವು ಟಿಪ್ಸ್ ಇಲ್ಲಿದೆ.
ಎಸ್ ಎಸ್ ಎಲ್ ಸಿ (SSLC) ಹಾಗೂ ಪಿಯುಸಿ (PUC) ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟಗಳಲ್ಲಿ ಒಂದು. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಬಂದ ಬಳಿಕ ಮುಂದೆ ಏನು ಮಾಡಬೇಕೆಂದು ಮತ್ತು ಏನು ಓದಬೇಕೆಂದು ಗೊಂದಲಕ್ಕೊಳಗಾಗುತ್ತಾರೆ. ಆದರೆ ಈ ಹಂತದಲ್ಲಿ ಆಯ್ಕೆ ಮಾಡಿಕೊಳ್ಳುವ ಕೋರ್ಸ್ (Course) ಗಳು ನಿಮ್ಮ ವೃತ್ತಿ ಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಳ್ಳುತ್ತದೆ. ವಿಜ್ಞಾನ (Science) , ವಾಣಿಜ್ಯ (Commerce) ಅಥವಾ ಕಲಾ (Arts) ವಿಷಯಗಳೊಂದಿಗೆ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಪಿಯುಸಿ ಬಳಿಕ ಈ ಕೋರ್ಸ್ ಮಾಡಿದರೆ ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.
ವಾಣಿಜ್ಯ ವಿಷಯದಲ್ಲಿ ಪಿಯುಸಿ ಮಾಡಿದ್ದರೆ : ವಾಣಿಜ್ಯ ವಿದ್ಯಾರ್ಥಿಗಳು ಬಿಬಿಎ, ಬಿಕಾಂ ಪದವಿ ಪಡೆದು ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಇದೇ ಕ್ಷೇತ್ರದಲ್ಲಿ ಉನ್ನತ್ತ ಶಿಕ್ಷಣ ಪಡೆಯುವ ಆಯ್ಕೆಗಳು ಇವೆ. ಅದಲ್ಲದೇ, ಕಂಪನಿ ಸೆಕ್ರೆಟರಿ, ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ (ಸಿಪಿಎ), ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್, ಡಿಜಿಟಲ್ ಮಾರ್ಕೆಟರ್, ಬ್ಯಾಂಕಿಂಗ್ ಮತ್ತು ಅಕೌಂಟೆನ್ಸಿ ಹೀಗೆ ಹತ್ತಾರು ವೃತ್ತಿ ಆಯ್ಕೆಗಳಿವೆ.
ವಿಜ್ಞಾನದಲ್ಲಿ ಪಿಯುಸಿ ಮಾಡಿದ್ದರೆ :ವಿಜ್ಞಾನ ವಿಷಯದಲ್ಲಿ ಪಿಯುಸಿ ಪೂರ್ಣಗೊಳಿಸುವ ವಿದ್ಯಾರ್ಥಿಗಳು ಬಿ ಎಸ್ಸಿ ಅಥವಾ ಬಿಸಿಎ ಯಲ್ಲಿ ಪದವಿ ಪಡೆಯುವ ಮೂಲಕ ಅದೇ ಹಂತದಲ್ಲಿ ಮುಂದುವರೆಯುತ್ತಾರೆ. ಆದರೆ ವಿಜ್ಞಾನ ಓದಿರುವ ವಿದ್ಯಾರ್ಥಿಗಳಿಗೆ ಆಯ್ಕೆಗಳು ಹಲವಾರು ಇದ್ದು, ಎಂಬಿಬಿಎಸ್, ಆರ್ಕಿಟೆಕ್ಚರ್, ಏವಿಯೇಷನ್‌ನಲ್ಲಿ ಸೌಂಡ್ ಇಂಜಿನಿಯರಿಂಗ್, ಬಯೋಮೆಡಿಕಲ್ ವೃತ್ತಿಗಳು, ಓಸಿಯೋನೋಗ್ರಫಿ, ಬಯೋಕೆಮಿಸ್ಟ್ರಿ, ಫೋರೆನ್ಸಿಕ್ ಸೈನ್ಸ್, ನರ್ಸಿಂಗ್, ಪ್ಯಾರಾ ಮೆಡಿಕಲ್, ಡಿಪ್ಲೋಮ ಇಂಜಿನಿಯರಿಂಗ್ ನಂತಹ ಕೋರ್ಸ್ ಗಳನ್ನು ಮಾಡಿದರೆ ನೂರಕ್ಕೆ ನೂರರಷ್ಟು ಉದ್ಯೋಗ ಸಿಗುತ್ತದೆ.
ಕಲಾ ವಿಭಾಗದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರೆ : ಕಲಾ ವಿಭಾಗದ ವಿದ್ಯಾರ್ಥಿಗಳು ಬಿಎ ಪದವಿ ಪಡೆದು ಕೊಂಡು ಬಿಎಡ್ ಸೇರಿದಂತೆ ಇನ್ನಿತ್ತರ ಕೋರ್ಸ್ ಗಳನ್ನು ಮಾಡಿ ಶಿಕ್ಷಕರಾಗಿ ಉದ್ಯೋಗ ಪಡೆದುಕೊಳ್ಳಬಹುದು. ಅದಲ್ಲದೇ, ಹೋಟೆಲ್ ಮ್ಯಾನೇಜ್‌ಮೆಂಟ್, ಪ್ರಾಡಕ್ಟ್ ಡಿಸೈನ್, ಪ್ರತಿಕೋದ್ಯಮ, ಅನಿಮೇಷನ್, ವೆಬ್ ಡಿಸೈನಿಂಗ್ ಹೀಗೆ ವಿವಿಧ ಕೋರ್ಸ್ ಗಳಂತಹ ಆಯ್ಕೆಗಳಿವೆ.
ಚಾರ್ಟೆಡ್ ಅಕೌಂಟೆನ್ಸಿ : ಪಿಯುಸಿಯಲ್ಲಿ ವಾಣಿಜ್ಯ ವಿಷಯ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಬೆಸ್ಟ್ ಆಯ್ಕೆಯೆಂದರೆ ಸಿಎ. ಆದರೆ ಈ ಕೋರ್ಸ್ ನಲ್ಲಿ ಮೂರು ಹಂತದಲ್ಲಿ ಪರೀಕ್ಷೆಗಳನ್ನು ಎದುರಿಸಬೇಕಾಗಿದ್ದರೂ ಶ್ರಮ ಹಾಕಿ ಪರೀಕ್ಷೆ ಪಾಸ್ ಆದರೆ ಹೆಚ್ಚಿನ ಸಂಬಳ ಉದ್ಯೋಗ ನಿಮ್ಮ ಕೈ ಸೇರುತ್ತದೆ
ಫ್ಯಾಷನ್ ಡಿಸೈನಿಂಗ್ : ಇತ್ತೀಚೆಗಿನ ದಿನಗಳಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಗೆ ಹೆಚ್ಚು ಬೇಡಿಕೆಯಿದೆ. ಫ್ಯಾಷನ್ ಡಿಸೈನಿಂಗ್ ನಲ್ಲಿ ವಿವಿಧ ಕ್ಷೇತ್ರಗಳು ಇದ್ದು, ಇದರಲ್ಲಿ ಆಭರಣಗಳ ಡಿಸೈನಿಂಗ್ ಕೂಡ ಕಲಿಯಬಹುದು. ಬಟ್ಟೆಗಳ ವಿನ್ಯಾಸ ಹಾಗೂ ಒಡವೆಗಳ ವಿನ್ಯಾಸದ ಬಗ್ಗೆ ಹೆಚ್ಚು ಆಸಕ್ತಿಯಿರುವ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು.