CET 2021: ಮಕ್ಕಳಿಗೆ ಆನ್​ಲೈನ್​ ಮೂಲಕ ಉಚಿತ ಸಿಇಟಿ ತರಬೇತಿ; ಹೆಸರು ನೋಂದಾಯಿಸಿಕೊಳ್ಳಲು ಹೀಗೆ ಮಾಡಿ

| Updated By: ಡಾ. ಭಾಸ್ಕರ ಹೆಗಡೆ

Updated on: Jun 15, 2021 | 4:06 PM

KCET 2021 Online Coaching: ಎಸ್​ಸಿಹೆಚ್​ ಫೌಂಡೇಶನ್ ಯೂಟ್ಯೂಬ್ ಚಾನೆಲ್ ಮುಖಾಂತರ ಉಚಿತ ಸಿಇಟಿ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಗಿದ್ದು, ಪ್ರತಿನಿತ್ಯ ಮೂರು ಅವಧಿಯಲ್ಲಿ ಬೋಧನೆ ಮಾಡಲಾಗುತ್ತಿದೆ. ಸಂಜೆ 5ರಿಂದ 5.45, 6ರಿಂದ 6.45 ಹಾಗೂ 7ರಿಂದ 7.45 ಎಂದು ಮೂರು ಸೆಶನ್ ನಡೆಯಲಿದ್ದು, ಪಿಸಿಎಂಬಿ ವಿಷಯಗಳಿಗೆ ಸಿಇಟಿ ಪರೀಕ್ಷೆಯಲ್ಲಿ ಹೇಗೆ ತಯಾರಾಗಬೇಕು ಎಂಬುದನ್ನು ಹೇಳಿಕೊಡಲಾಗುತ್ತದೆ.

CET 2021: ಮಕ್ಕಳಿಗೆ ಆನ್​ಲೈನ್​ ಮೂಲಕ ಉಚಿತ ಸಿಇಟಿ ತರಬೇತಿ; ಹೆಸರು ನೋಂದಾಯಿಸಿಕೊಳ್ಳಲು ಹೀಗೆ ಮಾಡಿ
ಸಾಂಕೇತಿಕ ಚಿತ್ರ
Follow us on

ಕೊರೊನಾ ಆರಂಭವಾದ ನಂತರ ಶೈಕ್ಷಣಿಕ ಚಟುವಟಿಕೆಗಳಲ್ಲವೂ ತಲೆಕೆಳಗಾಗಿವೆ. ಮೊದಲ ಅಲೆಯ ನಂತರ ಎಲ್ಲವೂ ಹತೋಟಿಗೆ ಬಂತು ಎಂದು ಭಾವಿಸಿ ಶಾಲಾ ಕಾಲೇಜು ಆರಂಭಿಸಲಾಯಿತಾದರೂ ಎರಡನೇ ಅಲೆ ಬಂದ ನಂತರ ಮತ್ತೆ ಎಲ್ಲವೂ ಸ್ಥಗಿತಗೊಂಡಿವೆ. ಕೆಲವೆಡೆ ಆನ್​ಲೈನ್​ ಮೂಲಕ ಮಕ್ಕಳಿಗೆ ಶಿಕ್ಷಣ ತಲುಪಿಸುವ ಪ್ರಯತ್ನ ಆಗುತ್ತಿದ್ದರೂ ಹೆಚ್ಚುವರಿ ತರಬೇತಿ ಅವಶ್ಯಕತೆ ಇರುವ ವಿಷಯಗಳಿಗೆ ಹಣ ಕೊಟ್ಟು ಆನ್​ಲೈನ್​ ಕೋಚಿಂಗ್ ಕೊಡಿಸುವುದು ಕೆಲ ಪೋಷಕರಿಗೆ ಹೊರೆಯಾಗಿದೆ. ಅದರಲ್ಲೂ ಈ ಬಾರಿ ಪಿಯುಸಿ ಪರೀಕ್ಷೆ ಸ್ಥಗಿತಗೊಂಡಿರುವ ಕಾರಣ ಸಿಇಟಿ ಪರೀಕ್ಷೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ, ಸೂಕ್ತ ತರಬೇತಿ ಇಲ್ಲದೇ ಸಿಇಟಿ ಬರೆಯುವುದು ಕಷ್ಟವಾಗಿರುವುದರಿಂದ ಕೆಲ ಮಕ್ಕಳಿಗೆ ಅದೇ ದೊಡ್ಡ ಚಿಂತೆಯಾಗಿದೆ.

ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗಬೇಕು ಹಾಗೂ ಪೋಷಕರಿಗೆ ಹೊರೆಯೂ ಆಗಬಾರದು ಎಂಬ ಸದುದ್ದೇಶ ಇಟ್ಟುಕೊಂಡು ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕಿನ ಗೋವನಕೊಪ್ಪದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನ (SCH Foundation) ಉಚಿತ ಆನ್​ಲೈನ್ ತರಬೇತಿ ಆರಂಭಿಸಿದೆ.

ಎಸ್​ಸಿಹೆಚ್​ ಫೌಂಡೇಶನ್ ಯೂಟ್ಯೂಬ್ ಚಾನೆಲ್ ಮುಖಾಂತರ ಉಚಿತ ಸಿಇಟಿ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಗಿದ್ದು, ಪ್ರತಿನಿತ್ಯ ಮೂರು ಅವಧಿಯಲ್ಲಿ ಬೋಧನೆ ಮಾಡಲಾಗುತ್ತಿದೆ. ಸಂಜೆ 5ರಿಂದ 5.45, 6ರಿಂದ 6.45 ಹಾಗೂ 7ರಿಂದ 7.45 ಎಂದು ಮೂರು ಸೆಶನ್ ನಡೆಯಲಿದ್ದು, ಪಿಸಿಎಂಬಿ ವಿಷಯಗಳಿಗೆ ಸಿಇಟಿ ಪರೀಕ್ಷೆಯಲ್ಲಿ ಹೇಗೆ ತಯಾರಾಗಬೇಕು ಎಂಬುದನ್ನು ಹೇಳಿಕೊಡಲಾಗುತ್ತದೆ.

ಪ್ರತಿ ವಿಷಯಕ್ಕೆ 25 ಸೆಷನ್​ ನಡೆಸಲು ನಿರ್ಧರಿಸಲಾಗಿದ್ದು, ಮಾದರಿ ಪ್ರಶ್ನೆ ಪತ್ರಿಕೆಗಳ ಮೂಲಕ ಪರೀಕ್ಷೆಯನ್ನೂ ಬರೆಯಬಹುದಾಗಿದೆ. ಅದರಿಂದಾಗಿ ಸಿಇಟಿ ಪರೀಕ್ಷೆಗೆ ತಯಾರಾಗಲು ಅನುಕೂಲವಾಗಲಿದೆ. ಜತೆಗೆ, ಇಲ್ಲಿ ಕಲಿಸುವವರು ಸರ್ಕಾರಿ ಕಾಲೇಜುಗಳ ಶಿಕ್ಷಕರೇ ಆಗಿರುವುದರಿಂದ ಉತ್ತಮ ಗುಣಮಟ್ಟದ ತರಬೇತಿಯೂ ಸಿಗಲಿದೆ. ನಿನ್ನೆಯಿಂದ (ಜೂನ್ 14) ತರಬೇತಿ ಆರಂಭವಾಗಿದ್ದು, ಕೇವಲ ಒಂದೇ ಒಂದು ದಿನದಲ್ಲಿ 60 ಸಾವಿರಕ್ಕೂ ಹೆಚ್ಚು ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ, ಮೊದಲ ದಿನ 40 ಸಾವಿರಕ್ಕೂ ಹೆಚ್ಚು ಮಕ್ಕಳು ಲೈವ್ ಕಾರ್ಯಕ್ರಮ ವೀಕ್ಷಿಸಿದ್ದಾರೆ. ಈ ಬಗ್ಗೆ ಪಿಯು ಮಂಡಳಿ ಸಹಾಯಕ ನಿರ್ದೇಶಕ ಜಿ.ಎಮ್​.ಗಣಾಚಾರಿ ಮಾಹಿತಿ ನೀಡಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ಬಹುಮುಖ್ಯವಾಗಿ ಇಲ್ಲಿ ನೀಡಲಾಗುವ ತರಬೇತಿಗೆ ಒಂದು ನಯಾಪೈಸೆಯೂ ಖರ್ಚು ಮಾಡುವ ಅವಶ್ಯಕತೆ ಇಲ್ಲವಾಗಿದ್ದು, ಕೇವಲ ಹೆಸರು ನೋಂದಾಯಿಸಿಕೊಂಡು, ಎಸ್​ಸಿಹೆಚ್​ ಫೌಂಡೇಶನ್ ಯೂಟ್ಯೂಬ್ ಚಾನೆಲ್ ಸಬ್​ಸ್ಕ್ರೈಬ್ ಮಾಡಿಕೊಳ್ಳುವ ಮೂಲಕ ಅನುಕೂಲ ಪಡೆಯಬಹುದಾಗಿದೆ. ಇದಕ್ಕಾಗಿ ಯಾವ ಮೂಲದಿಂದಲೂ ಹಣ ಪಡೆಯದೇ SCH Foundation ಸಂಸ್ಥೆಯ ತಾಂತ್ರಿಕ ಸಹಾಯದಿಂದಲೇ ತರಬೇತಿ ನಡೆಯಲಿದೆ. ಸುಮಾರು 38 ದಿನಗಳ ಕಾಲ ನಡೆಯಲಿರುವ ಈ ತರಬೇತಿಯ ಸದುಪಯೋಗವನ್ನು ರಾಜ್ಯದ ಎಲ್ಲಾ ವಿದ್ಯಾರ್ಥಿಗಳೂ ಪಡೆಯಬಹುದಾಗಿದ್ದು ಇಲ್ಲಿ ಕ್ಲಿಕ್​ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:
KCET Exam 2021: ಇಂದಿನಿಂದ ಸಿಇಟಿ​ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ; ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ? ಇಲ್ಲಿದೆ ಮಾಹಿತಿ

Published On - 4:03 pm, Tue, 15 June 21