KCET Exam 2021: ಇಂದಿನಿಂದ ಸಿಇಟಿ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ; ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ? ಇಲ್ಲಿದೆ ಮಾಹಿತಿ
KCET Exam 2021 Registration: ಇಂದಿನಿಂದ ಜುಲೈ 10ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಶುಲ್ಕ ಪಾವತಿಸಲು ಜುಲೈ 13 ಕೊನೆಯ ದಿನಾಂಕವಾಗಿದೆ. ಮುಂಬರುವ ಆಗಸ್ಟ್ 28 ಮತ್ತು ಆಗಸ್ಟ್ 29ರಂದು 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿರುವ ಬಗ್ಗೆ ದಿನಾಂಕ ಘೋಷಿಸಲಾಗಿದೆ.
ಎಂಜಿನಿಯರಿಂಗ್ ಕೋರ್ಸ್ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಕೆಸಿಇಟಿಗೆ ಇಂದಿನಿಂದ (ಜೂನ್ 15) ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ-Karnataka Common Entrance Test -KCET) ಗೆ ಇಂದಿನಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಕೃತ ಪೋರ್ಟಲ್ನಲ್ಲಿ ಸದರಿ ಪ್ರಕ್ರಿಯೆ ಆರಂಭವಾಗಿದೆ. ಇಂದಿನಿಂದ ಜುಲೈ 10ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಶುಲ್ಕ ಪಾವತಿಸಲು ಜುಲೈ 13 ಕೊನೆಯ ದಿನಾಂಕವಾಗಿದೆ. ಮುಂಬರುವ ಆಗಸ್ಟ್ 28 ಮತ್ತು ಆಗಸ್ಟ್ 29ರಂದು 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿರುವ ಬಗ್ಗೆ ದಿನಾಂಕ ಘೋಷಿಸಲಾಗಿದೆ.
ಇದೀಗ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ನಲ್ಲಿ ನಿಗದಿತ ಲಿಂಕ್ ಕ್ಲಿಕ್ ಮಾಡಿಕೊಂಡು (KCET Exam 2021 Registration) ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವಾಗ 750 ರೂ.ಗಳನ್ನು ನೊಂದಣಿ ಶುಲ್ಕವನ್ನಾಗಿ ಕಟ್ಟಬೇಕಿದೆ.
ಕರ್ನಾಟ ರಾಜ್ಯದ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಜೂನ್ 8ರಂದೇ KCET -2021ರ ಪರೀಕ್ಷಾ ದಿನಾಂಕವನ್ನು ಘೋಷಿಸಿದ್ದರು. ಅಧಿಕೃತ ಘೋಷಣೆ ಪ್ರಕಾರ, ಕರ್ನಾಟಕದ ಸಿಇಟಿ ಪರೀಕ್ಷೆ ಇದೇ ಆಗಸ್ಟ್ ಅಂತ್ಯದಲ್ಲಿ ರಾಜ್ಯಾದ್ಯಂತ ಸುಮಾರು 500 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಇದೀಗ ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಕೆಸಿಇಟಿಗೆ ಅರ್ಜಿ ಸಲ್ಲಿಸುವುದು ಹೇಗೆ? 1. ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ KCET 2021 ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
2. ವೆಬ್ಸೈಟ್ನಲ್ಲಿ KCET 2021ರ ಹೋಂ ಪೇಜ್ಗೆ ಭೇಟಿ ನೀಡಿದ ನಂತರ ನ್ಯೂ ಯೂಸರ್ ಎಂಬ ಟ್ಯಾಬ್ ಕ್ಲಿಕ್ ಮಾಡಿ. ಅದು ತೆರೆದುಕೊಂಡ ನಂತರ ಅಲ್ಲಿ ಕೇಳಲಾದ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡುವ ಮೂಲಕ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ.
3. KCET 2021 ಪರೀಕ್ಷೆಗೆ ಸಂಬಂಧಿಸಿದ ಅಪ್ಲಿಕೇಶನ್ ನಂಬರ್ ಮತ್ತು ಯೂಸರ್ ಐಡಿಯನ್ನು ನಿಮ್ಮ ನೋಂದಾಯಿತ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ಗೆ ಕಳುಹಿಸಲಾಗುತ್ತದೆ.
4. ಅಧಿಕೃತ ಸಂದೇಶ ಬಂದ ನಂತರ KCET 2021 ಅರ್ಜಿಯನ್ನು ಸಂಪೂರ್ಣ ಪರಿಶೀಲಿಸಿ ಮುಂದುವರೆಯಿರಿ. ಜತೆಗೆ ಅದರಲ್ಲಿ ಕೇಳಲಾದ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ, ವಿಳಾಸ ಸೇರಿದಂತೆ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿ.
5. ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಸಹಿ, ಐಡಿ ಪ್ರೂಫ್ (ದಾಖಲೆ) ಮತ್ತು ಶೈಕ್ಷಣಿಕ ದಾಖಲೆ ಪತ್ರಗಳನ್ನು ಅಲ್ಲಿ ನೀಡಲಾದ ನಿರ್ದಿಷ್ಟ ರೀತಿಯಲ್ಲಿ ನಮೂದಿಸಲಾದ ಗಾತ್ರದಲ್ಲಿ ಅಪ್ಲೋಡ್ ಮಾಡಿ.
6. ಅರ್ಜಿ ಶುಲ್ಕವನ್ನು ಆನ್ಲೈನ್ ಅಥವಾ ಆಫ್ಲೈನಲ್ಲಿ ಪಾವತಿಸಬೇಕಿದೆ. ಆನ್ಲೈನ್ ಆದರೆ ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಉಪಯೋಗಿಸಿಕೊಂಡು ಹಣ ಕಟ್ಟಬಹುದು. ಇಲ್ಲವೇ ಆಫ್ಲೈನ್ನ ಮೂಲಕ ಕಟ್ಟುವವರು ಆಲ್ಲಿ ನೀಡಲಾದ ಚಲನ್ ಡೌನ್ಲೋಡ್ ಮಾಡಿಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಐಸಿಐಸಿಐ ಬ್ಯಾಂಕ್ನಲ್ಲಿ ಶುಲ್ಕ ಕಟ್ಟಲು ಅವಕಾಶವಿದೆ.
7. ಎಲ್ಲಾ ಹಂತಗಳನ್ನು ಪೂರೈಸಿ, ಹಣ ಪಾವತಿಸಿದ ನಂತರ ನಿಮ್ಮ ಅರ್ಜಿಯನ್ನು ಸೇವ್ ಮಾಡಿಕೊಳ್ಳಿ. ಅದು ಮುಂದಿನ ದಿನಗಳಲ್ಲಿ ನಿಮಗೆ ಉಪಯೋಗಕ್ಕೆ ಬರಬಹುದಾಗಿದ್ದು, ಬೇಕಾದಾಗ ಬಳಸಿಕೊಳ್ಳಬಹುದು.
KCET Exam 2021 Registration ಕುರಿತ ಹೆಚ್ಚಿನ ಮಾಹಿತಿಗಾಗಿ kea.kar.nic.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ಸಿಇಟಿ ಪರೀಕ್ಷೆಯನ್ನು ಬೆಳಗ್ಗೆ 10.30-11.50 ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ಎರಡು ಶಿಫ್ಟ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.