IISc: ಜಂಟಿ ಸಂಶೋಧನೆಗಾಗಿ ಐಐಎಸ್​ಸಿಯೊಂದಿಗೆ ನೌಕಾಪಡೆ ಒಪ್ಪಂದ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 31, 2022 | 1:57 PM

‘ಆತ್ಮನಿರ್ಭರ್ ಭಾರತ’ದ ಆಶಯದೊಂದಿಗೆ ನೌಕಾಪಡೆಯನ್ನು ಸ್ವಾವಲಂಬಿಯಾಗಿಸುವ ಪ್ರಯತ್ನಕ್ಕೆ ಈ ಒಪ್ಪಂದವು ಹೊಸ ವೇಗ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

IISc: ಜಂಟಿ ಸಂಶೋಧನೆಗಾಗಿ ಐಐಎಸ್​ಸಿಯೊಂದಿಗೆ ನೌಕಾಪಡೆ ಒಪ್ಪಂದ
ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್
Follow us on

ಬೆಂಗಳೂರು: ಭಾರತೀಯ ನೌಕಾಪಡೆಯು (Indian Navy) ವೈಮಾನಿಕ ಕ್ಷೇತ್ರದಲ್ಲಿ ವೈವಿಧ್ಯಮಯ ಸಂಶೋಧನೆಗಾಗಿ (Aviation Research) ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ (Indian Institute of Science – IISc) ಒಪ್ಪಂದ ಮಾಡಿಕೊಂಡಿದೆ. ‘ಆತ್ಮನಿರ್ಭರ್ ಭಾರತ’ದ ಆಶಯದೊಂದಿಗೆ ನೌಕಾಪಡೆಯನ್ನು ಸ್ವಾವಲಂಬಿಯಾಗಿಸುವ ಪ್ರಯತ್ನಕ್ಕೆ ಈ ಒಪ್ಪಂದವು ಹೊಸ ವೇಗ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ನೌಕಾಪಡೆಯ ತಂತ್ರಜ್ಞರು ಐಐಎಸ್​ಸಿಯಲ್ಲಿರುವ ವಿಷಯ ತಜ್ಞರೊಂದಿಗೆ ನೇರವಾಗಿ ಚರ್ಚಿಸಲು, ಜಂಟಿಯಾಗಿ ಸಂಶೋಧನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಒಪ್ಪಂದ ನೆರವಾಗಲಿದೆ ಎಂದು ನೌಕಾಪಡೆ ಮತ್ತು ಐಐಎಸ್​ಸಿ ಹೊರಡಿಸಿರುವ ಜಂಟಿ ಹೇಳಿಕೆಯು ತಿಳಿಸಿದೆ.

ವೈಮಾನಿಕ ವಿನ್ಯಾಸ ಮತ್ತು ತಾಂತ್ರಿಕ ಶಿಕ್ಷಣ, ಪ್ರೊಪಲ್ಷನ್, ಉಕ್ಕಿನ ತಂತ್ರಜ್ಞಾನ, ಖನಿಜ ಮತ್ತು ಭೌತ ವಿಜ್ಞಾನ, ಲೋಹ ಅಥವಾ ಯಾವುದೇ ಸವೆಯುವಿಕೆಯ ಅಧ್ಯಯನ, ಸೆನ್ಸಾರ್​ಗಳು ಮತ್ತು ಇನ್​ಸ್ಟ್ರುಮೆಂಟೇಶನ್, ಪರಿಸರ ವಿಜ್ಞಾನ ಮತ್ತು ಎಂಜಿನಿಯರಿಂಗ್, ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್, ನ್ಯಾನೊ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಷ್ಲೇಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಐಐಎಸ್​ಸಿ ಮತ್ತು ನೌಕಾಪಡೆಯು ಮುಂದಿನ ದಿನಗಳಲ್ಲಿ ಜಂಟಿಯಾಗಿ ಸಂಶೋಧನೆ ನಡೆಸಲಿವೆ.

ಐಐಎಸ್​ಸಿಯ ಬೋಧಕರು ಮತ್ತು ನೌಕಾಪಡೆ ಅಧಿಕಾರಿಗಳ ನಡುವೆ ಅರ್ಥಪೂರ್ಣ, ನಿಯಮಿತ ಸಂವಾದಕ್ಕೂ ಈ ಒಪ್ಪಂದವು ಅವಕಾಶ ಕಲ್ಪಿಸಿಕೊಡಲಿದೆ. ಜ್ಞಾಪನಾ ಪತ್ರಕ್ಕೆ (Memorandum of Understanding – MoU) ಐಐಎಸ್​ಸಿ ರಿಜಿಸ್ಟ್ರಾರ್​ ಕ್ಯಾಪ್ಟನ್ ಶ್ರೀಧರ್ ವಾರಿಯರ್, ನೌಕಾಪಡೆಯ ಕ್ಯಾಪ್ಟನ್ ಪಿ.ವಿನಾಯಗನ್ ಅವರು ಸಹಿ ಹಾಕಿದರು. ಈ ವೇಳೆ ನೌಕಾಪಡೆಯ ಹಿರಿಯ ಅಧಿಕಾರಿಗಳಾದ ರೇರ್ ಅಡ್ಮಿರಲ್ ದೀಪಕ್ ಬನ್ಸಾಲ್, ಕಮೋಡರ್ ರಾಜಾ ವಿನೋದ್ ಉಪಸ್ಥಿತರಿದ್ದರು.

Published On - 1:57 pm, Sun, 31 July 22