ನೀಟ್ ಅಕ್ರಮದ ಬೆನ್ನಲ್ಲೇ ಪಾರದರ್ಶಕ, ನ್ಯಾಯಸಮ್ಮತ ಪರೀಕ್ಷೆಗಳಿಗಾಗಿ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ

|

Updated on: Jun 22, 2024 | 4:33 PM

ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನಿನ ಜಾರಿ ಬೆನ್ನಲ್ಲೇ ಇದೀಗ ಉನ್ನತ ಮಟ್ಟದ ಸಮಿತಿಯೊಂದನ್ನೂ ರಚನೆ ಮಾಡಿದೆ. ಈ ಸಮಿತಿಯು ಪಾರದರ್ಶಕ, ಸುಗಮ ಹಾಗೂ ನ್ಯಾಯಸಮ್ಮತ ಪರೀಕ್ಷೆಗಳಿಗಾಗಿ ಏನೇನು ಮಾಡಬೇಕು ಎಂಬ ವರದಿ ಸಿದ್ಧಪಡಿಸಲಿದ್ದು, 2 ತಿಂಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಲಿದೆ.

ನೀಟ್ ಅಕ್ರಮದ ಬೆನ್ನಲ್ಲೇ ಪಾರದರ್ಶಕ, ನ್ಯಾಯಸಮ್ಮತ ಪರೀಕ್ಷೆಗಳಿಗಾಗಿ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ
ನ್ಯಾಯಸಮ್ಮತ ಪರೀಕ್ಷೆಗಳಿಗಾಗಿ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ (ಸಾಂದರ್ಭಿಕ ಚಿತ್ರ)
Follow us on

ನವದೆಹಲಿ, ಜೂನ್ 22: ನೀಟ್​ ಪರೀಕ್ಷೆಯಲ್ಲಿ ಅಕ್ರಮದ ಆರೋಪದ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ಜಾರಿಗೊಳಿಸಲು ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಇದೀಗ ಪಾರದರ್ಶಕ, ಸುಗಮ ಹಾಗೂ ನ್ಯಾಯಸಮ್ಮತ ಪರೀಕ್ಷೆಗಳನ್ನು (Exams) ನಡೆಸುವುದಕ್ಕಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು (High-Level Committee) ರಚನೆ ಮಾಡಿದೆ. ಈ ಕುರಿತು ಕೇಂದ್ರ ಸರ್ಕಾರ ಶನಿವಾರ ಪ್ರಕಟಣೆ ಹೊರಡಿಸಿದ್ದು, ಸಮಿತಿಯ ಸದಸ್ಯರು ಹಾಗೂ ಕಾರ್ಯಗಳ ವಿವರ ನೀಡಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮೂಲಕ ಪರೀಕ್ಷೆಗಳನ್ನು ಪಾರದರ್ಶಕ, ಸುಗಮ ಮತ್ತು ನ್ಯಾಯಯುತವಾಗಿ ನಡೆಸಲು ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯವು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಪರೀಕ್ಷಾ ಪ್ರಕ್ರಿಯೆಯ ವ್ಯವಸ್ಥೆಯಲ್ಲಿ ಸುಧಾರಣೆ,​ ​ಡೇಟಾ ಭದ್ರತಾ ಪ್ರೋಟೋಕಾಲ್‌ಗಳಲ್ಲಿನ ಸುಧಾರಣೆಗಳು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ರಚನೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಬೇಕಿದೆ ಎಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ನೀಟ್​ ಪರೀಕ್ಷೆ ಅಕ್ರಮ: ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಕಾನೂನು ಜಾರಿ ಮಾಡಿದ ಕೇಂದ್ರ

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸುವ ಮೂಲಕವೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಸಮಿತಿಯು 2 ತಿಂಗಳೊಳಗೆ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಬೇಕಿದೆ.

ಕೇಂದ್ರದ ಎಕ್ಸ್​​ ಸಂದೇಶ

ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರು, ಸದಸ್ಯರು

ಇಸ್ರೋ ಮಾಜಿ ಅಧ್ಯಕ್ಷ, ಐಐಟಿ ಕಾನ್ಪುರ್ ಬೋರ್ಡ್ ಆಫ್​ ಗವರ್ನರ್ಸ್​ ಅಧ್ಯಕ್ಷರೂ ಆಗಿರುವ ಡಾ. ನ ರಾಧಾಕೃಷ್ಣನ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಉಳಿದಂತೆ ಏಮ್ಸ್ ಮಾಜಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವೈಸ್ ಚಾನ್ಸೆಲರ್ ಪ್ರೊ. ಬಿಜೆ ರಾವ್, ಐಐಟಿ ಮದ್ರಾಸ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಎಮೆರಿಟಸ್, ಕರ್ಮಯೋಗಿ ಭಾರತ್ಸಹ – ಸಂಸ್ಥಾಪಕ ಪಂಕಜ್ ಬನ್ಸಾಲ್, ಐಐಟಿ ದೆಹಲಿಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಡೀನ್ ಪ್ರೊ. ಆದಿತ್ಯ ಮಿತ್ತಲ್ ಹಾಗೂ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಸಮಿತಿಯ ಸದಸ್ಯರಾಗಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ