ಧರ್ಮ ಸಭೆ ಅಲ್ಲ, ಶಿಕ್ಷಣದಲ್ಲಿ ಮೌಲ್ಯಗಳನ್ನು ನೀಡುವ ಪ್ರಯತ್ನ ಇದು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಶಿಕ್ಷಣ ಇಲಾಖೆಯಿಂದ ನಡೆಯುವ ಸಭೆಯಲ್ಲಿ ಸ್ವಾಮೀಜಿಗಳು, ಶಿಕ್ಷಣ ತಜ್ಞರು ಭಾಗಿಯಾಗಲಿದ್ದಾರೆ. ಮುಸ್ಲಿಂ, ಕ್ರೈಸ್ತ ಧರ್ಮಗುರುಗಳಿಗೂ ಸಭೆಗೆ ಆಹ್ವಾನ ನೀಡಿದ್ದೇವೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಬೆಂಗಳೂರು: ನೈತಿಕ ಶಿಕ್ಷಣ (Moral Education) ಜಾರಿ ಕುರಿತು ಇಂದು ಸಭೆ (Education department meeting) ನಡೆಸುತ್ತಿದ್ದೇವೆ. ಸಭೆಯಲ್ಲಿ ಆದಿಚುಂಚನಗಿರಿ ಮಠ, ಸಿರಿಗೆರೆ ಮಠ, ಬೋವಿ ಮಠ, ಕನಕಪೀಠ, ಮಾದಿಗಚೆನ್ನಯ್ಯ ಸ್ವಾಮೀಗಳು ಸೇರಿದಂತೆ ಹಲವರು ಬರುತ್ತಾರೆ. ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಣ ತಜ್ಞರು ಕೂಡ ಭಾಗಿಯಾಗುತ್ತಿದ್ದು, ಆನ್ಲೈನ್ ಮೂಲಕ ರವಿಶಂಕರ್ ಗುರೂಜಿ ಸಹ ಭಾಗಿಯಾಗಲಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C.Nagesh) ಹೇಳಿದ್ದಾರೆ. ಸಭೆಗೂ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳಿಗೂ ಸಭೆಗೆ ಆಹ್ವಾನ ನೀಡಿದ್ದೇವೆ. ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ, ಶಿಕ್ಷಣದಲ್ಲಿ ಮೌಲ್ಯಗಳನ್ನು ನೀಡುವ ಪ್ರಯತ್ನವಾಗಿದೆ ಎಂದರು.
ಪ್ರಸ್ತುತ ದೇಶದಲ್ಲಿ ಶಿಕ್ಷಣದ ಮೌಲ್ಯ ಕುಸಿಯುತ್ತಾ ಇದೆ. ಸಾಮಾಜಿಕ ಮೌಲ್ಯಗಳು ಕೂಡ ಕಡಿಮೆ ಆಗುತ್ತಿವೆ. ಈ ಸಮಯದಲ್ಲಿ ಮಕ್ಕಳಿಗೆ ಮೌಲ್ಯಗಳ ಅಗತ್ಯತೆ ತುಂಬಾ ಇದೆ. ಹೀಗಾಗಿ ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯಗಳನ್ನು ನೀಡುವ ಪ್ರಯತ್ನ ಇದಾಗಿದೆ. ಇದು ಯಾವುದೇ ಧರ್ಮ ಸಭೆ ಅಲ್ಲ, ಇಂದು ನಡೆಯುತ್ತಿರುವ ಸಭೆ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಗಬೇಕಿದೆ: NEP ಅಧ್ಯಕ್ಷ ಕಸ್ತೂರಿ ರಂಗನ್
ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಾಲಾ ಆಡಳಿತ ಸೋತಿದೆ. ಹೀಗಾಗಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಗಬೇಕಿದೆ, ಐ ಕ್ಯಾನ್ ಆಟಿಟ್ಯೂಡ್ ಮಕ್ಕಳಲ್ಲಿ ಬೆಳೆಯಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಧ್ಯಕ್ಷ ಕಸ್ತೂರಿ ರಂಗನ್ ಹೇಳಿದ್ದಾರೆ. ರಾಜ್ಯದಲ್ಲಿ NEP ಜಾರಿಯಲ್ಲಿ ಶಿಕ್ಷಣ ಸಚಿವರ ಪಾತ್ರದ ಬಗ್ಗೆ ಶ್ಲಾಘಿಸಿದ ಕೆ.ಕಸ್ತೂರಿ ರಂಗನ್, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಶಿಕ್ಷಣ ಸಚಿವರ ಶ್ರಮದ ಬಗ್ಗೆ ಹೊಗಳಿದರು.
ಇದನ್ನೂ ಓದಿ: Delhi Cold Wave ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಚಳಿ, ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಣೆ
ಸರ್ವ ಧರ್ಮದ ಮುಖಂಡರು ಸಮಾಜದ ಅಭಿವೃದ್ಧಿಗೆ ಸಹಾಯಕವಾಗಲಿದ್ದಾರೆ. ದೇಶದ ಸಂಸ್ಕೃತಿಗೆ ಗುರುಗಳ ಪಾತ್ರ ಪ್ರಧಾನವಾಗಿರುತ್ತದೆ. ಹಾಗಾಗಿ ಇವತ್ತಿನ ಸಭೆಯಲ್ಲಿ ಭಾಗಿಯಾಗಿರುವ ಎಲ್ಲರ ಅಭಿಪ್ರಾಯ ಪ್ರಮುಖವಾಗುತ್ತದೆ ಎಂದು ಕೆ.ಕಸ್ತೂರಿ ರಂಗನ್ ಹೇಳಿದ್ದಾರೆ.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ