Kannada News Education Karnataka government forms new committees to revise school textbooks in time for next academic year
ಬಿಜೆಪಿ ಸರ್ಕಾರದ ಅವಧಿಯ ಪಠ್ಯಪುಸ್ತಕಗಳ ಪುನರ್ ಪರಿಷ್ಕರಣೆಗೆ ತಜ್ಞರ ಸಮಿತಿ ರಚನೆ: ಸಮಿತಿಯಲ್ಲಿ ಯರ್ಯಾರು?
ಕರ್ನಾಟಕದಲ್ಲಿ ಮತ್ತೆ ಪಠ್ಯಪುಸ್ತಕಗಳ ಪರಿಸ್ಕರಣೆಯ ಸುದ್ದಿ ಮುನ್ನೆಲೆಗೆ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯ ಪಠ್ಯಪುಸ್ತಕಗಳ ಪುನರ್ ಪರಿಷ್ಕರಣೆಗೆ ಕಾಂಗ್ರೆಸ್ ಸರ್ಕಾರ ತಜ್ಞರ ಸಮಿತಿ ರಚನೆಯನ್ನು ರಚಿಸಿದೆ. ಐವರು ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಉಪ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಎರಡರಿಂದ ಮೂರು ತಿಂಗಳೊಳಗೆ ಪಠ್ಯಪುಸ್ತಕಗಳ ಪರಿಷ್ಕರಣಾ ಕಾರ್ಯ ಪೂರ್ಣಗೊಳಿಸಲು ಸೂಚಿಸಿದೆ.
ಬೆಂಗಳೂರು, (ಸೆಪ್ಟೆಂಬರ್ 27): ವಿವಿಧ ತರಗತಿಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ(textbooks revise) ರಾಜ್ಯ ಸರ್ಕಾರ (Karnataka governmentವ)ತಜ್ಞರ ಸಮಿತಿ ರಚಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಸಮಿತಿಯ ಮಾಡಿದ್ದ ಪರಿಷ್ಕರಣೆಯನ್ನು ರಾಷ್ಟ್ರೀಯ ಪಠ್ಯಚೌಕಟ್ಟಿನಡಿ ಸಮಗ್ರವಾಗಿ ಪುನರ್ ಪರಿಷ್ಕರಿಸಲು ಡಾ. ಮಂಜುನಾಥ್ ಜಿ. ಹೆಗಡೆ ನೇತೃತ್ವದಲ್ಲಿ 37 ವಿಷಯ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಆದೇಶಿಸಿದೆ.
ಪಠ್ಯ ಪರಿಷ್ಕರಣಾ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ಉತ್ತರ ಕನ್ನಡದ ಕುಮಟಾದ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ್ ಜಿ. ಹೆಗಡೆ ಅವರನ್ನು ನೇಮಿಸಲಾಗಿದೆ. ಇವರ ನೇತೃತ್ವದಲ್ಲಿ ವಿವಿಧ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐವರು ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಉಪ ಸಮಿತಿಗಳನ್ನು ರಚಿಸಿ 37 ವಿಷಯ ತಜ್ಞರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
1ರಿಂದ 10ನೇ ತರಗತಿ ಕನ್ನಡ ಪ್ರಥಮ, ದ್ವಿತೀಯ ಭಾಷೆ, 9 ರಿಂದ 10ನೇ ತರಗತಿ ಕನ್ನಡ ತೃತೀಯ ಭಾಷೆ, 6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಈ ಸಮಿತಿ ರಚನೆ ಮಾಡಲಾಗಿದ್ದು, 2024-25ನೇ ಸಾಲಿಗೆ ಜಾರಿಗೊಳಿಸಲು ಅನುಕೂಲವಾಗುವಂತೆ ಎರಡರಿಂದ ಮೂರು ತಿಂಗಳೊಳಗೆ ಪಠ್ಯಪುಸ್ತಕಗಳ ಪರಿಷ್ಕರಣಾ ಕಾರ್ಯ ಪೂರ್ಣಗೊಳಿಸಿ ಕೊಡುವಂತೆ ಸರ್ಕಾರ ಸೂಚಿಸಿದೆ.
ಯಾರ ಅಧ್ಯಕ್ಷತೆ ಯಾವ ಸಮಿತಿ?
1ರಿಂದ 10ನೇ ತರಗತಿ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಆಂಜನಪ್ಪ ಅವರ ಅಧ್ಯಕ್ಷತೆಯಲ್ಲಿ 8 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಚಿಕ್ಕಮಗಳೂರಿನ ಬಸವನಹಳ್ಳಿಯ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಚ್.ಎನ್. ಸತ್ಯನಾರಾಯಣ್ ಅವರ ಅಧ್ಯಕ್ಷತೆಯಲ್ಲಿ 7 ಸದಸ್ಯರ ಸಮಿತಿ.,
9 ಮತ್ತು 10ನೇ ತರಗತಿ ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ದಾವಣಗೆರೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆಯ ಉಪನ್ಯಾಸಕ ಡಾ. ಮಂಜಣ್ಣ ಅವರ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರನ್ನೊಳಗಡ ಸಮಿತಿ.
6 ಮತ್ತು 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಕಲಬುರಗಿಯ ಕೇಂದ್ರೀಯ ವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ ಎಂ. ಅವರ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಮಿತಿ.
8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯ ಸಮಿತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಡಾ. ಅಶ್ವತ್ಥನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಇತರೆ ಎಂಟು ಸದಸ್ಯರ ಸಮಿತಿ ರಚಿಸಲಾಗಿದೆ.ಈ ಸಮಿತಿಗಳ ಸದಸ್ಯ ಕಾರ್ಯದರ್ಶಿಯಾಗಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ.