PU Exams: ಯಾವ ಅಪರಾಧಕ್ಕಾಗಿ ಕ್ರಿಮಿನಲ್ ಕೇಸ್ ಹಾಕ್ತೀರಿ; ಉಡುಪಿಯ ಆಲಿಯಾ ಅಸಾದಿ ಟ್ವೀಟ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 23, 2022 | 10:36 AM

ಪರೀಕ್ಷೆಗೆ ಗೈರಾಗಿದ್ದ ಆಲಿಯಾ ಅಸಾದಿ ಈ ಕುರಿತು ಟ್ವೀಟ್ ಮಾಡಿದ್ದು ತಮ್ಮ ಆಕ್ರೋಶ ಮತ್ತು ಅಸಮಾಧಾನ ಹೊರಹಾಕಿದ್ದಾರೆ.

PU Exams: ಯಾವ ಅಪರಾಧಕ್ಕಾಗಿ ಕ್ರಿಮಿನಲ್ ಕೇಸ್ ಹಾಕ್ತೀರಿ; ಉಡುಪಿಯ ಆಲಿಯಾ ಅಸಾದಿ ಟ್ವೀಟ್
(ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಕರ್ನಾಟಕದ ವಿವಿಧೆಡೆ ಪಿಯುಸಿ ಪರೀಕ್ಷಾ (Karnataka PU Exams) ಕೇಂದ್ರಗಳತ್ತ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಮೊದಲ ದಿನವಾದ ನಿನ್ನೆ 11,311 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಹಿಜಾಬ್​ಗೆ ಅವಕಾಶ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರು ಮಂದಿಯ ಪೈಕಿ ಇಬ್ಬರು ನಿನ್ನೆ ಪರೀಕ್ಷೆ ಬರೆಯಬೇಕಿತ್ತು. ಅವರು ಪರೀಕ್ಷಾ ಕೇಂದ್ರಗಳಿಗೆ ತೆರಳಿ ಹಾಲ್ ಟಿಕೆಟ್ ಸ್ವೀಕರಿಸಿದರೂ, ಪರೀಕ್ಷೆ ಬರೆಯದೆ ಮನೆಗಳಿಗೆ ಹಿಂದಿರುಗಿದರು. ಪರೀಕ್ಷೆಗೆ ಗೈರಾಗಿದ್ದ ಆಲಿಯಾ ಅಸಾದಿ ಈ ಕುರಿತು ಟ್ವೀಟ್ ಮಾಡಿದ್ದು ತಮ್ಮ ಆಕ್ರೋಶ ಮತ್ತು ಅಸಮಾಧಾನ ಹೊರಹಾಕಿದ್ದಾರೆ.

‘ನನಗೆ ಮತ್ತು ರೇಷಂಗೆ ಪರೀಕ್ಷೆ ಬರೆಯಲು ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ. ಇದರಿಂದ ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದೇವೆ. ಬಿಜೆಪಿ ಶಾಸಕ ರಘುಪತಿ ಭಟ್ ನಮಗೆ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್, ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ. ನಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ. ನಮ್ಮ ದೇಶ ಎತ್ತ ಸಾಗುತ್ತಿದೆ’ ಎಂದು ಆಲಿಯಾ ಅಸಾದಿ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

ಹಿಜಾಬ್ ಹೋರಾಟದಲ್ಲಿ ಸಕ್ರಿಯರಾಗಿರುವ ಮೂವರು ವಿದ್ಯಾರ್ಥಿನಿಯರಿಗೆ ಗಣಿತ ಪರೀಕ್ಷೆ ಇತ್ತು. ಈ ಪೈಕಿ ಅಲ್ಮಾಸ್ ಮಾತ್ರ ಹಾಲ್​ ಟಿಕೆಟ್ ಪಡೆದಿದ್ದರು. ಮತ್ತಿಬ್ಬರು ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಕೂಡ ಪಡೆದಿಲ್ಲ. 10.45 ರವರೆಗೆ ಹಾಲ್ ಟಿಕೆಟ್ ಪಡೆಯಲು ಇದೆ ಅವಕಾಶ. ಇವರೂ ಪರೀಕ್ಷೆ ಬರೆಯುವುದು ಅನುಮಾನ ಎನ್ನಲಾಗುತ್ತಿದೆ.

ಮಲ್ಲೇಶ್ವರ ಎಂಇಎಸ್ ಕಾಲೇಜು ಸೇರಿದಂತೆ ರಾಜ್ಯ ಹಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದರೆ ಕೊಠಡಿಯೊಳಗೆ ಹೋಗುವ ಮುನ್ನ ನಿನ್ನೆಯಂತೆಯೇ ಹಿಜಾಬ್ ತೆಗೆಗಿಡುತ್ತಿದ್ದಾರೆ. ನಿನ್ನೆಯ ಮಾದರಿಯನ್ನೇ ಇಂದೂ ವಿದ್ಯಾರ್ಥಿನಿಯರು ಅನುಸರಿಸುತ್ತಿದ್ದಾರೆ.

ಪಿಯು ಪರೀಕ್ಷೆಯ 2ನೇ ದಿನವಾದ ಇಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರದ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿರುವ ಪರೀಕ್ಷೆಗೆ 2 ಲಕ್ಷದ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. 200 ಮೀಟರ್ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳು ಬಂದ್ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗಲು ಸಮವಸ್ತ್ರ ಪಾಲನೆ ಕಡ್ಡಾಯಗೊಳಿಸಲಾಗಿದೆ. ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಗೈರು ಹಾಜರಾದವರ ವಿವರ

ಈ ಬಾರಿ ಕರ್ನಾಟಕದಲ್ಲಿ ಪಿಯು ಪರೀಕ್ಷೆಗೆ ಒಟ್ಟು 2,38,764 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 2,27,457 ಮಂದಿ ಪರೀಕ್ಷೆ ಬರೆದಿದ್ದರೆ, 11,311 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ತರ್ಕಶಾಸ್ತ್ರ ಪರೀಕ್ಷೆ ಬರೆಯಬೇಕಿದ್ದ 620 ವಿದ್ಯಾರ್ಥಿಗಳ ಪೈಕಿ 68 ವಿದ್ಯಾರ್ಥಿಗಳು ಗೈರಾಗಿದ್ದರು.

ನಿನ್ನೆಯ ವ್ಯವಹಾರ ಅಧ್ಯಯನ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳ ಶೈಕ್ಷಣಿಕ ಜಿಲ್ಲಾವಾರು ಮಾಹಿತಿ ಹೀಗಿದೆ… ಬೆಂಗಳೂರು ಉತ್ತರ 1,303, ಬೆಂಗಳೂರು ದಕ್ಷಿಣ 1,276, ಬೆಂಗಳೂರು ಗ್ರಾಮಾಂತರ 289, ರಾಮನಗರ 236, ಬಳ್ಳಾರಿ 326, ಚಿಕ್ಕೋಡಿ 246, ಬೆಳಗಾಂ 350, ಬಾಗಲಕೋಟೆ 157, ವಿಜಯಪುರ 193, ಬೀದರ್ 357, ದಾವಣಗೆರೆ 516, ಚಿತ್ರದುರ್ಗ 294, ಚಿಕ್ಕಮಗಳೂರು 151, ಗದಗ 119, ಹಾವೇರಿ 185, ಧಾರವಾಡ 142, ಕಲಬುರ್ಗಿ 306, ಯಾದಗಿರಿ 90, ಹಾಸನ 421, ಚಿಕ್ಕಬಳ್ಳಾಪುರ 366, ಕೋಲಾರ 592, ಚಾಮರಾಜನಗರ 106, ಮೈಸೂರು 543, ಮಂಡ್ಯ 308, ಉತ್ತರ ಕನ್ನಡ 216, ಕೊಪ್ಪಳ 136, ರಾಯಚೂರು 273, ದಕ್ಷಿಣ ಕನ್ನಡ 337, ಉಡುಪಿ 141, ಶಿವಮೊಗ್ಗ 235, ತುಮಕೂರು 739, ಕೊಡಗು 142.

ಗೈರು ಹಾಜರಿಗೂ ಹಿಜಾಬ್​ಗೂ ಇಲ್ಲ ನಂಟು

ನಿನ್ನೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಾಕಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಪರಿಶೀಲಿಸಿರುವ ಪಿಯು ಮಂಡಳಿ ಅಧಿಕಾರಿಗಳು ಬೇರೆಯೇ ಕಾರಣ ಮುಂದಿಡುತ್ತಿದ್ದಾರೆ. ಕಳೆದ ವರ್ಷದಂತೆ ಎಲ್ಲರನ್ನೂ ಪಾಸ್ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿರಬಹುದು. ಇಂಥವರೇ ಗೈರು ಹಾಜರಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಿದ್ದಾರೆ.

ಇದನ್ನೂ ಓದಿ: Karnataka 2nd PUC Exam 2022: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದೀರಾ?; ಈ ನಿಯಮಗಳನ್ನು ಮರೆಯಬೇಡಿ

ಇದನ್ನೂ ಓದಿ: Karnataka Second PU Exams: ಸೆಕೆಂಡ್ ಪಿಯುಸಿ ಪರೀಕ್ಷೆಗೆ ಕೌಂಟ್ಡೌನ್, ಪರೀಕ್ಷೆಗೆ ಹಿಜಾಬ್ ಧರಿಸಿದ್ರೆ ನೋ ಎಂಟ್ರಿ

Published On - 10:27 am, Sat, 23 April 22