Syllabus Books Costlier: ಪೋಷಕರಿಗೆ ಶಾಕ್, ಶಾಲಾ ಪಠ್ಯ ಪುಸ್ತಕ ದರ ಏರಿಕೆ

|

Updated on: Mar 17, 2023 | 12:17 PM

ಶಾಲೆಗಳಿಗೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (ಕೆಟಿಬಿಎಸ್) ಪೂರೈಸುವ ಪುಸ್ತಕ ಬೆಲೆ ಏರಿಕೆ ಮಾಡಲಾಗಿದ್ದು, ಪೋಷಕರಿಗೆ ಮತ್ತಷ್ಟು ಹೊರೆಯಾಗಲಿದೆ.

Syllabus Books Costlier: ಪೋಷಕರಿಗೆ ಶಾಕ್, ಶಾಲಾ ಪಠ್ಯ ಪುಸ್ತಕ ದರ ಏರಿಕೆ
Follow us on

ಬೆಂಗಳೂರು: ದೇಶದಲ್ಲಿ ಗ್ಯಾಸ್​ ಸಿಲಿಂಡರ್, ಪೆಟ್ರೋಲ್​-ಡೀಸೆಲ್​, ಊಟ, ತಿಂಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ಖಾಸಗಿ ಶಾಲಾ, ಕಾಲೇಜುಗಳ ಮಕ್ಕಳ ಪಠ್ಯ ಪುಸ್ತಕಕ್ಕೂ(Karnataka syllabus books) ಬಲೆ ಏರಿಕೆ ಬಿಸಿ ತಟ್ಟಿದೆ. ಇದರಿಂದ ಪೋಷಕರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಹೌದು.. ಖಾಸಗಿ ಶಾಲೆಗಳಲ್ಲಿ(private school) ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (ಕೆಟಿಬಿಎಸ್) ಒದಗಿಸುವ ಖಾಸಗಿ ಶಾಲಾ, ಕಾಲೇಜುಗಳ ಮಕ್ಕಳ ಪಠ್ಯ ಪುಸ್ತಕದ ದರ ಶೇಕಡ 25ರಷ್ಟು ದುಬಾರಿ ಆಗಿದೆ. 19000 ಶಾಲೆ-ಕಾಲೇಜುಗಳ 52 ಲಕ್ಷ ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗಲಿದೆ. ರಾಜ್ಯ ಪಠ್ಯಕ್ರಮ ಬೋಧನೆ ಮಾಡುವ ಖಾಸಗಿ ಶಾಲೆ ಮತ್ತು ಪಿಯು ಕಾಲೇಜುಗಳ ಮಕ್ಕಳಿಗೆ ಸರ್ಕಾರದಿಂದ ಪಠ್ಯಪುಸ್ತಕ ಪೂರೈಕೆ ಮಾಡಲಿದ್ದು, ಈ ಪುಸ್ತಕಗಳ ಬೆಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶೇಕಡ 25ರಷ್ಟು ಹೆಚ್ಚಳ ಆಗಲಿದೆ. ಶಿಕ್ಷಣ ಇಲಾಖೆ ವತಿಯಿಂದ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುದ್ರಣ ಮಾಡಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ. ಪಿಯು ಕಾಲೇಜುಗಳಿಗೆ ಪೂರೈಕೆ ಮಾಡಲಾಗುತ್ತದೆ.

ಇದನ್ನೂ ಓದಿ: Exam Preparation: ಪರೀಕ್ಷೆ ಎದುರಿಸಬೇಕಾದ ಯುದ್ಧವಲ್ಲ, ಸಂಭ್ರಮಿಸಬೇಕಾದ ಹಬ್ಬ- ಪಿ.ಎನ್ ಭಟ್

ಸರ್ಕಾರಿ ಮತ್ತು ಅನುದಾನಿತ ಶಾಲೆ ಕಾಲೇಜುಗಳಿಗೆ ಉಚಿತವಾಗಿ ಪಠ್ಯಪುಸ್ತಕ ಪೂರೈಕೆ ಮಾಡಲಾಗುವುದು. ಖಾಸಗಿ ಶಾಲೆ, ಕಾಲೇಜುಗಳು ಒಂದರಿಂದ 12ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನ ಸರ್ಕಾರಕ್ಕೆ ಶೇಕಡ 10ರಷ್ಟು ಮುಂಗಡ ಹಣ ಪಾವತಿಸಿ ಬೇಡಿಕೆ ಸಲ್ಲಿಸಬೇಕಿದೆ. ಇದಕ್ಕೆ ಅನುಗುಣವಾಗಿ ಪಠ್ಯಪುಸ್ತಕ ಮುದ್ರಣ ಮಾಡಿ ಪೂರೈಕೆ ಮಾಡಲಾಗುವುದು.

2023 -24ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳಿಗೆ ಕಳೆದ ವರ್ಷಕ್ಕಿಂತ ಶೇಕಡ 20 ರಿಂದ 25 ರಷ್ಟು ದರ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 46 ರೂಪಾಯಿ ಇದ್ದ ಗಣಿತ ಭಾಗ -2 ಪುಸ್ತಕದ ಮಾರಾಟ ಬೆಲೆ 60 ರೂಪಾಯಿಗೆ ಏರಿಕೆಯಾಗಿದೆ. ಬೆಲೆ ಏರಿಕೆ ಮತ್ತು ಜಿ.ಎಸ್.ಟಿ. ಕಾರಣದಿಂದ ಪಠ್ಯಪುಸ್ತಕ ದರ ಹೆಚ್ಚಳವಾಗಿದೆ. ಕಾಗದದ ಬೆಲೆ, ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ನಾವು 10ನೇ ತರಗತಿಯ ಪಠ್ಯಪುಸ್ತಕಗಳಿಗೆ KTBS ಗೆ ಇಂಡೆಂಟ್ ಹಾಕಿದಾಗ, ಗಣಿತ ಭಾಗ-2ರ ಬೆಲೆ 46 ರೂ. ಇತ್ತು. ಈಗ ಅದರ ದರ ಬೆಲೆ 60 ರೂ ಆಗಿದೆ. ಗಣಿತ ಭಾಗ-1 45 ರೂ ಇದ್ದ ಬೆಲೆ ಈಗ 58 ರೂ.ಗೆ ಏರಿದೆ. ವಿಜ್ಞಾನ ಭಾಗ-2 34 ರೂ.ನಿಂದ 44 ರೂ.ಗೆ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಕಾಗದದ ಕೊರತೆಯಿದೆ. ಹೀಗಾಗಿ ಕಾಗದದ ಬೆಲೆ 65% ರಷ್ಟು ಏರಿಕೆಯಾಗಿದೆ. ಅದೇ ರೀತಿ, ಜಿಎಸ್​ಟಿಯಲ್ಲಿ ಕೂಡ 12% ರಿಂದ 18%ರಷ್ಟು ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆ ಅದು ಕೇವಲ 5% ಆಗಿತ್ತು ಎಂದು ಕರ್ನಾಟಕ ರಾಜ್ಯ ಪಠ್ಯಪುಸ್ತಕ ಮುದ್ರಕರ ಸಂಘದ ಅಧ್ಯಕ್ಷ ಸತ್ಯಕುಮಾರ್ ಹೇಳಿದ್ದಾರೆ.

Published On - 12:06 pm, Fri, 17 March 23