ನೂರಕ್ಕೆ ನೂರು ಅಂಕಗಳಿಸಿದವರು ಮಾತ್ರ ಕಾಲೇಜು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ದೆಹಲಿ ಕಾಲೇಜೊಂದರ ನಿಯಮ ಗಮನಿಸಿದ ಖ್ಯಾತ ಲೇಖಕ ಬಿಕ್ರಮ್ ವೊಹ್ರಾ, ವಿಪರೀತ ಅಂಕ ಕೊಡುವ, ಅಷ್ಟೊಂದು ಅಂಕ ಪಡೆದವರಿಗೆ ಮಾತ್ರ ಅವಕಾಶಗಳು ಸಿಗುವ ಬೆಳವಣಿಗೆಯ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಈ ಬರಹದಲ್ಲಿ ದಾಖಲಿಸಿದ್ದಾರೆ. ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳಿಗೆ ಶಾಲೆ-ಕಾಲೇಜುಗಳೇ ಕಾರಣವಾಗುತ್ತಿರುವ ವಿಪರ್ಯಾಸವನ್ನು ವಿಶದವಾಗಿ ಪರಿಶೀಲಿಸಿದ್ದಾರೆ.
ದೆಹಲಿಯ ಹಲವು ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನೂರಕ್ಕೆ ನೂರು ಅಂಕಗಳಿಸಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದನ್ನು ದುರಂತ ಎಂದು ಹೇಳಲು ಆಗದಿದ್ದರೂ ಹುಚ್ಚು ಎಂದು ಖಂಡಿತ ಹೇಳಬಹುದು. ಶೇ 99 ಅಂಕಗಳಿಸಿಯೂ ಪ್ರಯೋಜನಕ್ಕೆ ಬರಲಿಲ್ಲ ಎಂಬ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ನನ್ನ ತಲೆಮಾರಿನಲ್ಲಿ ಅಷ್ಟು ಅಂಕಗಳಿಸುವುದು ಎಂದೂ ಈಡೇರದ ಕನಸಿನಂತಾಗಿತ್ತು. ಕಲಾ ವಿಭಾಗದಲ್ಲಿಯಂತೂ ಅದು ಈಡೇರುವ ಸಂಭವ ಇರಲೇ ಇಲ್ಲ.
ನಾನು ಒಂದು ಪರೀಕ್ಷೆಯಲ್ಲಿ ಶೇ 62ರಷ್ಟು ಅಂಕ ಪಡೆದಿದ್ದೆ. ನನ್ನ ಪೋಷಕರಿಗೆ ಅದೆಷ್ಟು ಸಂತೋಷವಾಗಿತ್ತೆಂದರೆ, ಸಂಭ್ರಮಾಚರಣೆಗಾಗಿ ನಾವೆಲ್ಲರೂ ಸ್ಟೀವ್ ಮೆಕ್ಕ್ವೀನ್ ಅಭಿನಯದ ದಿ ಗ್ರೇಟ್ ಎಸ್ಕೇಪ್ ಸಿನಿಮಾ ನೋಡಲು ಹೋಗಿದ್ದೆವು. ಅಕ್ಕಪಕ್ಕದ ಮನೆಯವರನ್ನೂ ಟೀಗೆಂದು ಆಹ್ವಾನಿಸಿ ಬೀಗಿದ್ದೆವು. ನಮ್ಮ ತರಗತಿಯ ಅತ್ಯುತ್ತಮ ವಿದ್ಯಾರ್ಥಿ ಶೇ 60ರಷ್ಟು ಅಂಕ ಗಳಿಸುತ್ತಿದ್ದ. ಅದು ಮೊದಲ ದರ್ಜೆ ಎಂಬ ಕಾರಣಕ್ಕೆ ಹೆಮ್ಮೆಯ ವಿಷಯ ಎನಿಸಿತ್ತು. 50ರ ದಶಕದಲ್ಲಿ ಇದು ಅತ್ಯುತ್ತಮ ಸಾಧನೆ ಎಂದು ಪರಿಗಣಿಸಲ್ಪಡುತ್ತಿತ್ತು.
ಆದರೆ ಈಗಿನ ಅಂಕ ನೀಡುವ ಪದ್ಧತಿಯು ಶಿಕ್ಷಣ ವ್ಯವಸ್ಥೆಯ ಅಣಕವಾಗಿದೆ. ಮಕ್ಕಳಿಗೆ ಈ ಹೊಸ ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲವೇನೂ ಆಗುತ್ತಿಲ್ಲ. ನೂರಕ್ಕೆ ನೂರು ಅಂಕ ಪಡೆದ ಮಕ್ಕಳು ಹೊರಗಿನ ಕ್ರೂರ ಪ್ರಪಂಚ ಎದುರಿಸಲು ಎಂಥ ಸಿದ್ಧತೆ ಮಾಡಿಕೊಳ್ಳಲು ಸಾಧ್ಯ. ಬದುಕಿನ ಕ್ರೂರ ಸವಾಲುಗಳನ್ನು ಎದುರಿಸಲು ಈ ಅಂಕಗಳಿಂದ ಯಾವುದೇ ಭದ್ರತೆ ಅಥವಾ ಖಾತ್ರಿ ಸಿಗುವುದಿಲ್ಲ ಎಂದು ಅರಿವಾದಾಗ ಅವರಿಗೆ ಭ್ರಮನಿರಸನವಾಗುತ್ತದೆ. ಅಂದುಕೊಂಡಿದ್ದೆಲ್ಲವೂ ಜೀವನದಲ್ಲಿ ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ಈ ಹುಡುಗರು ಭ್ರಮನಿರಸನಗೊಂಡು ಮಂಕು ಹಿಡಿದವರಂತೆ ಖಿನ್ನತೆಗೆ ಜಾರುತ್ತಾರೆ.
ನೂರಕ್ಕೆ ನೂರು ಅಂಕ ನೀಡುವುದರಿಂದ ಆಗುವ ಮತ್ತೊಂದು ದೊಡ್ಡ ಅಪಾಯವೆಂದರೆ, ಕಲಿಯಲು ಇನ್ನೇನೂ ಬಾಕಿ ಉಳಿದಿಲ್ಲ, ನಾವು ಕಲಿಯಬೇಕಾದ್ದನ್ನು ಕಲಿತು ಪರಿಪೂರ್ಣರಾಗಿದ್ದೇವೆ ಎಂಬ ಭ್ರಮೆ ಈ ಮಕ್ಕಳಿಗೆ ತಮ್ಮ ಚಿಕ್ಕವಯಸ್ಸಿಗೇ ಮೂಡುತ್ತದೆ.
ಮಗುವಿನ ಉತ್ತರ ಪತ್ರಿಕೆಗೆ ಸಿಗಬೇಕಾದ ಅಂಕಗಳಿಗಿಂತಲೂ ಹೆಚ್ಚಿನ ಅಂಕ ಕೊಡುವ ಈ ಪರೀಕ್ಷಕರು ಯಾರು ಎಂಬ ಬಗ್ಗೆ ಪ್ರಶ್ನಿಸುವುದು ಸರಿ. ವಿದ್ಯಾರ್ಥಿಗಳು ಬರೆದ ಪ್ರಬಂಧಕ್ಕೆ ಇವರು ಯಾವ ಆಧಾರದ ಮೇಲೆ ಪರಿಪೂರ್ಣತೆಯನ್ನು ನಿರ್ಣಯಿಸುತ್ತಾರೆ. ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗೆ ಅವಕಾಶದ ಬಾಗಿಲು ತೆರೆಯುವುದಿಲ್ಲ ಎಂದು ಸಾರಿ ಹೇಳುವ ವಿಶ್ವವಿದ್ಯಾಲಯಗಳ ಹುಂಬತನ ಇದು ಎಂದು ಹಲವರಿಗೆ ಅನ್ನಿಸಬಹುದು.
ಈ ಕೃತಕ ಫಲಿತಾಂಶದಿಂದ ಯಾರಿಗೆ ಉಪಯೋಗವಾಗುತ್ತಿದೆ. ನೂರಕ್ಕೆ ನೂರು ಅಂಕಪಡೆದ ಮಕ್ಕಳಲ್ಲಿ ಪೊಳ್ಳು ಆತ್ಮವಿಶ್ವಾಸ ಮನೆ ಮಾಡುತ್ತದೆ. ನೀನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಹೇಳುವ ಇಂಥ ಅಂಕಪಟ್ಟಿಗಳಿಂದ ಮಕ್ಕಳು ಮುಂದಿನ ದಿನಗಳಲ್ಲಿ ಬದುಕು ಎದುರಿಸುವ ಸಂದರ್ಭದಲ್ಲಿ ಹಲವು ಅಪಾಯಗಳನ್ನೂ ಎದುರಿಸಬೇಕಾಗುತ್ತದೆ. ಯಾರೊಬ್ಬರೂ ಪರಿಪೂರ್ಣ ಆಗಿಲ್ಲ, ಮುಂದೆಯೂ ಆಗಲು ಆಗುವುದಿಲ್ಲ.
ನಮ್ಮ ಶಿಕ್ಷಣ ವ್ಯವಸ್ಥೆಯ ಪಾವಿತ್ರ್ಯವನ್ನು ಮರಳಿ ತರಲು ಇದು ಸಕಾಲ. ನಮ್ಮ ದೇಶದ ಸಾವಿರಾರು ಮಕ್ಕಳನ್ನು ಒಮ್ಮೆ ನೋಡಿ. ತಕ್ಕಮಟ್ಟಿಗೆ ಬುದ್ಧಿವಂತರೇ ಆಗಿರುವ ಅವರು ಶೇ 80 ಅಥವಾ ಶೇ 90ರಷ್ಟು ಅಂಕಗಳನ್ನು ಕಷ್ಟಪಟ್ಟು ಗಳಿಸುತ್ತಾರೆ. ಆದರೂ ಈಗಿನ ವ್ಯವಸ್ಥೆಯಲ್ಲಿ ಅವರನ್ನು ನಿರ್ಲಕ್ಷಿಸಲಾಗುತ್ತಿದೆ. ಅವರ ಆಕಾಂಕ್ಷೆಗಳು ಒಡೆದ ಗಾಜಿನ ಚೂರುಗಳಂತೆ ಆಗುತ್ತಿವೆ. ಇದು ನೈಜ ಪ್ರತಿಭೆಯ ಸಾರಾಸಗಟು ನಿರ್ಲಕ್ಷ್ಯ ಅಲ್ಲವೇ? ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ನಿರಾಕರಿಸುವ ಮತ್ತು ಕೇವಲ ಅಂಕಪಟ್ಟಿಯನ್ನಷ್ಟೇ ಪರಿಗಣಿಸುವ ವಿಶ್ವವಿದ್ಯಾಲಯದ ವಿರುದ್ಧ ಹಾನಿ ಮಾಡುವ ಉದ್ದೇಶ ಇರುವವರ ವಿರುದ್ಧ ಮಾಡಲಾಗುವ ಆರೋಪಗಳನ್ನು ಹೊರಿಸಿ, ವಿಚಾರಣೆಗೆ ಮುಂದಾಗಬೇಕು.
ಕುರಿಗಳಂಥ ಪೋಷಕರು ಇಂಥ ಆಟದಲ್ಲಿ ಸುಲಭವಾಗಿ ಬಲಿಬೀಳುತ್ತಾರೆ. ಶೇ 96ರಷ್ಟು ಅಂಕಪಡೆದ ನಿಮ್ಮ ಮಗು, ವಿಫಲನಾದೆ ಎಂದು ಒಂದೇ ಸಮನೆ ಅಳುತ್ತಿದೆ ಎಂದು ಊಹಿಸಿಕೊಳ್ಳಿ. ಶೇ 80ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಕಾಲೇಜನ್ನೇ ಬಿಟ್ಟುಬಿಡುವ ತೀರ್ಮಾನ ಮಾಡಿದರು ಎಂದುಕೊಳ್ಳಿ. ಸೈಕಲ್ ರಿಪೇರಿ ಅಂಗಡಿಯ ಮೇಲಿರುವ ಶಿಕ್ಷಣ ಸಂಸ್ಥೆಯ ಗೋಡೆಯ ಬಿರುಕಿನಿಂದ ಬದುಕು ನೋಡುವ ಅವರ ಪ್ರಯತ್ನ ಹೇಗಿರಬಹುದು?
ಮೆಲ್ಬರ್ನ್ ವಿಶ್ವವಿದ್ಯಾಲಯವು ನಡೆಸಿದ ಸಮೀಕ್ಷೆಯ ಪ್ರಕಾರ ಶೇ 79ರಷ್ಟು ವಿದ್ಯಾರ್ಥಿಗಳು ಉದ್ವಿಗ್ನತೆಯಿಂದ, ಶೇ 75.8ರಷ್ಟು ವಿದ್ಯಾರ್ಥಿಗಳು ಉತ್ಸಾಹಹೀನತೆಯಿಂದ, ಶೇ 59.2ರಷ್ಟು ವಿದ್ಯಾರ್ಥಿಗಳು ಆತ್ಮವಿಶ್ವಾಸದ ಕೊರತೆ ಹಾಗೂ ನಿರಾಶವಾದದಿಂದ ಬಳಲುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗೆ ಶಾಲೆಯೇ ಏಕೈಕ ಕಾರಣ. ಈ ಸವಾಲುಗಳು ಅವರ ಬದುಕಿನ ಇತರ ಆಯಾಮಗಳಿಗೂ ಇಣುಕುತ್ತಿದೆ. ಅವರ ಸಾಮಾಜಿಕ ಬದುಕು, ಮನೆಯ ಬದುಕು, ಭೌತಿಕ ಬದುಕು ಮತ್ತು ಭವಿಷ್ಯದ ವೃತ್ತಿ ಜೀವನ ಅಥವಾ ಅಧ್ಯಯನ ವಿಧಾನಗಳ ಮೇಲೆಯೂ ಅವರ ಮಾನಸಿಕ ಸವಾಲುಗಳು ಪರಿಣಾಮ ಬೀರುತ್ತವೆ. ಶೇ 90ರಷ್ಟು ಅಂಕಪಡೆದವರ ಬಗ್ಗೆ ಮಾತನಾಡುವುದು ನನ್ನ ಉದ್ದೇಶ.
ಶೇ 50ರಿಂದ ಶೇ 90ರ ನಡುವೆ ವ್ಯತ್ಯಾಸವಿಲ್ಲದಂಥ ಪರಿಸ್ಥಿತಿಗೆ ನಾವು ಬಂದಿದ್ದೇವೆ ಎಂದರೆ ವ್ಯವಸ್ಥೆಯು ಹಳಿತಪ್ಪಿದೆ ಎಂದೇ ಅರ್ಥ. ಇದೇ ಪರಿಸ್ಥಿತಿ ಮುಂದುವರಿದರೆ ಏನಾಗಬಹುದು? 100ಕ್ಕೆ 120, 100ಕ್ಕೆ 130 ಅಂಕ ನೀಡುವ ಕಾಲ ಬರಬಹುದು. 100ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಪಡೆಯುವ ಕಾಲವೂ ಬರಬಹುದು. ಈ ಆಘಾತಕಾರಿ ಬೆಳವಣಿಗೆಯು ನಮ್ಮ ಭವಿಷ್ಯದ ತಲೆಮಾರಿಗೆ ದೊಡ್ಡಶಾಪ. ಇದು ಖಂಡಿತ ವರ ಅಲ್ಲ.
ಇದನ್ನೂ ಓದಿ: DIMHANS report: ಧಾರವಾಡ ಜಿಲ್ಲೆಯಲ್ಲಿ ಯಶಸ್ವೀ ಆನ್‌ಲೈನ್ ಶಿಕ್ಷಣ -ಖ್ಯಾತ ಮನಶಾಸ್ತ್ರಜ್ಞರ ತಂಡದಿಂದ ಅಧ್ಯಯನ ವರದಿ ಸಲ್ಲಿಕೆ
ಇದನ್ನೂ ಓದಿ: Karnataka School Reopen: ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ: ಶಿಕ್ಷಣ ಸಚಿವ ಬಿ ಸಿ ನಾಗೇಶ್
Published On - 4:33 pm, Wed, 6 October 21