ಚೆನ್ನೈ: ವೈದ್ಯಕೀಯ ಪ್ರವೇಶ ಪರೀಕ್ಷೆ ವಿರೋಧಿಸುವ ತಮ್ಮ ನಿರ್ಧಾರಕ್ಕೆ ಬೆಂಬಲ ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರಗಳಿಗೆ ಶಿಕ್ಷಣ ಕ್ಷೇತ್ರದ ಹೊಣೆಗಾರಿಕೆಯಿದೆ. ಇದನ್ನು ಎತ್ತಿಹಿಡಿಯಲು ವಿವಿಧ ರಾಜ್ಯಗಳು ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ.
ಆಂಧ್ರ ಪ್ರದೇಶ, ಛತ್ತೀಸಗಡ, ದೆಹಲಿ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ್, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಸ್ಟಾಲಿನ್ ಪತ್ರ ಬರೆದಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ಪ್ರಯತ್ನದಲ್ಲಿ ಸಹಯೋಗ ಬೇಕು ಎಂದು ಅವರು ಕೋರಿದ್ದಾರೆ.
ರಾಜ್ಯಗಳು ಸ್ಥಾಪಿಸಿರುವ ಮತ್ತು ನಿರ್ವಹಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಯಾರಿಗೆ ಪ್ರವೇಶ ಸಿಗಬೇಕು ಎಂದು ನಿರ್ಧರಿಸುವ ಅವಕಾಶವನ್ನು ನೀಟ್ ಮೂಲಕ ಕೇಂದ್ರ ಸರ್ಕಾರ ತನ್ನ ಬಳಿ ಇರಿಸಿಕೊಂಡಿದೆ. ಇದು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿದೆ. ಅಧಿಕಾರ ಹಂಚಿಕೆಯ ಆಶಯದೊಂದಿಗೆ ಸಂವಿಧಾನವು ನೀಡಿರುವ ಅವಕಾಶಗಳನ್ನೂ ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮೇಲೆ ನೀಟ್ ಪರೀಕ್ಷೆ ಬೀರಿರುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ತಮಿಳುನಾಡು ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಎ.ಕೆ.ರಾಜನ್ ಸಮಿತಿಯ ವರದಿಯನ್ನು ಸ್ಟಾಲಿನ್ ತಮ್ಮ ಪತ್ರದೊಂದಿಗೆ ಲಗತ್ತಿಸಿದ್ದಾರೆ.
ನೀಟ್ಗೆ ಪರ್ಯಾಯವಾಗಿ ಅನುಸರಿಸಬಹುದಾದ ವಿಧಾನಗಳ ಬಗ್ಗೆ ಶಿಫಾರಸು ಮಾಡುವಂತೆಯೂ ಈ ಸಮಿತಿಯನ್ನು ತಮಿಳುನಾಡು ಸರ್ಕಾರ ಕೋರಿತ್ತು. ಸಮಿತಿಯ ಶಿಫಾರಸಿನ ಮೇರೆಗೆ ತಮಿಳುನಾಡು ವಿಧಾನಸಭೆಯು ಈಚೆಗೆ, ‘ತಮಿಳುನಾಡು ವೈದ್ಯಕೀಯ ಪದವಿ ಕೋರ್ಸ್ಗಳ ಕಾಯ್ದೆ 2021’ (Tamil Nadu Admission to Undergraduate Medical Degree Courses Act, 2021) ಅಂಗೀಕರಿಸಿತ್ತು.
(Tamilnadu CM MK Stalin writes to chief ministers of 12 states to seeks support against NEET exams)
ಇದನ್ನೂ ಓದಿ: ನೀಟ್ ರದ್ದುಗೊಳಿಸುವ ಮಸೂದೆಗೆ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ
ಇದನ್ನೂ ಓದಿ: NEET Reservation: ನೀಟ್ ಅಖಿಲ ಭಾರತ ಮೀಸಲಾತಿ ಬಗ್ಗೆ ಮದ್ರಾಸ್ ಹೈಕೋರ್ಟ್ ವ್ಯಾಖ್ಯಾನಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ