NEET Reservation: ನೀಟ್ ಅಖಿಲ ಭಾರತ ಮೀಸಲಾತಿ ಬಗ್ಗೆ ಮದ್ರಾಸ್ ಹೈಕೋರ್ಟ್ ವ್ಯಾಖ್ಯಾನಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ
ಅಖಿಲ ಭಾರತ ಕೋಟಾ ನಿಯಮಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ಮಾಡಿರುವ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ಶುಕ್ರವಾರ ತಳ್ಳಿಹಾಕಿತು.
ದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (National Eligibility cum Entrance Test – NEET) ಆರ್ಥಿಕವಾಗಿ ಹಿಂದುಳಿದ ವರ್ಗಗಳ (Economically Weaker Sections – EWS) ಅಖಿಲ ಭಾರತ ಕೋಟಾ ನಿಯಮಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ಮಾಡಿರುವ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ಶುಕ್ರವಾರ ತಳ್ಳಿಹಾಕಿತು. ಸಂವಿಧಾನದ 102ನೇ ತಿದ್ದುಪಡಿಯ ಸಿಂಧುತ್ವ ಪರಿಶೀಲಿಸುತ್ತಿರುವ ಸುಪ್ರೀಂಕೋರ್ಟ್ನ ಸಂವಿಧಾನ ಪೀಠದ ಅನುಮೋದನೆ ನಂತರ ಈ ವಿಚಾರದ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.
ಈ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ನ ವ್ಯಾಖ್ಯಾನಗಳು ಅನಗತ್ಯವಾಗಿದ್ದವು ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಮತ್ತು ಬಿ.ವಿ.ನಾಗರತ್ನಾ ಅವರಿದ್ದ ನ್ಯಾಯಪೀಠವು ನೀಟ್-ಅಖಿಲ ಭಾರತೀಯ ಕೋಟಾಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಬಗ್ಗೆ ಅವರ ವ್ಯಾಖ್ಯೆ ಅನಗತ್ಯ ಎಂದು ಹೇಳಿತು.
ನ್ಯಾಯಾಂಗ ನಿಂದನೆ ಆಗಿಲ್ಲ ಎಂಬುದನ್ನು ಕಂಡುಕೊಂಡ ಹೈಕೋರ್ಟ್ ವಿಶಾಲವಾಗಿ ಪ್ರಕರಣವನ್ನು ಪರಿಶೀಲಿಸಲು ಯತ್ನಿಸಿತು. ಈ ವೇಳೆ ಹೈಕೋರ್ಟ್ ತಪ್ಪು ಮಾಡಿದೆ. ನೀವು ನ್ಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸುವಾಗ, ಸಂಬಂಧಿಸಿದ ಆದೇಶವು ಸಂವಿಧಾನಾತ್ಮಕವಾಗಿದೆಯೇ? ಇಲ್ಲವೇ ಎಂಬುದನ್ನು ಮಾತ್ರ ಗಮನಿಸಬೇಕಿತ್ತು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಆರ್ಥಿಕವಾಗಿ ಹಿಂದುಳಿದವರ ಕೋಟಾಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ವ್ಯಾಖ್ಯಾನವನ್ನು ಕೇಂದ್ರ ಸರ್ಕಾರವು ಪ್ರಶ್ನಿಸಿತ್ತು. ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮೇಲಿನಂತೆ ಅಭಿಪ್ರಾಯಪಟ್ಟಿತು. ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ಗೆ ಇಂಥ ವ್ಯಾಖ್ಯಾನಗಳನ್ನು ಮಾಡುವ ಅಧಿಕಾರವಿಲ್ಲ ಎಂದು ಹೇಳಿದರು.
‘ಕೇಂದ್ರ ಸರ್ಕಾರದಿಂದ ನ್ಯಾಯಾಂಗ ನಿಂದನೆ ಆಗಿಲ್ಲ’ ಎಂಬ ಮದ್ರಾಸ್ ಹೈಕೋರ್ಟ್ ಅಭಿಪ್ರಾಯವನ್ನು ಡಿಎಂಕೆ ಪಕ್ಷದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಪಿ.ವಿಲ್ಸನ್ ಅಲ್ಲಗಳೆಯಲಿಲ್ಲ.
(NEET Reservation Supreme Court Sets Aside Madras High Court Direction on EWS Reservation In NEET AIQ)
ಇದನ್ನೂ ಓದಿ: ನೀಟ್ ಪರೀಕ್ಷೆ ಹಗರಣ ಬಹಿರಂಗಗೊಳಿಸಿದ ಸಿಬಿಐ; ಮಹಾರಾಷ್ಟ್ರದ ಕೋಚಿಂಗ್ ಸೆಂಟರ್ನ ಮಹಾ ಮೋಸ ಬಯಲು
ಇದನ್ನೂ ಓದಿ: NEET Exam: ನೀಟ್ ಪರೀಕ್ಷೆ ಬೇಡ ಎಂದರೆ ಸೋಲು ಯಾರದ್ದು? ಮಕ್ಕಳದ್ದೇ? ಇಲ್ಲಿದೆ ನೋಡಿ ಕಾರಣಗಳು
Published On - 5:32 pm, Fri, 24 September 21