ನೀಟ್ ಪರೀಕ್ಷೆ ಹಗರಣ ಬಹಿರಂಗಗೊಳಿಸಿದ ಸಿಬಿಐ; ಮಹಾರಾಷ್ಟ್ರದ ಕೋಚಿಂಗ್ ಸೆಂಟರ್ನ ಮಹಾ ಮೋಸ ಬಯಲು
ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಯಲ್ಲಿ ವಿಫಲವಾಗುವ ಭಯದಿಂದಲೇ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವಾರ 17 ವರ್ಷದ ಹುಡುಗಿಯೊಬ್ಬಳು ನೀಟ್ ಪರೀಕ್ಷೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ದೆಹಲಿ: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ (NEET Medical Entrance Examination)ಯಲ್ಲಿ ದೊಡ್ಡಮಟ್ಟದ ಹಗರಣ ಆಗಿದೆ ಎಂದು ಸಿಬಿಯ ತನಿಖಾ ದಳದ ಮೂಲಗಳು ತಿಳಿಸಿವೆ. ನಿಜವಾದ ಪರೀಕ್ಷಾರ್ಥಿಗಳ ಬದಲಿಗೆ ಅವರ ಹೆಸರಲ್ಲಿ ಬೇರೊಬ್ಬರಿಂದ ಪರೀಕ್ಷೆ ಬರೆಸುವ (ಪ್ರಾಕ್ಸೀಸ್ಗಳಿಂದ ) ಪ್ರಯತ್ನಗಳು ನಡೆದಿದ್ದಲ್ಲದೆ, ಅಭ್ಯರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಭರವಸೆ ನೀಡಿ, 50 ಲಕ್ಷ ರೂ. ಶುಲ್ಕ ನೀಡಲು ಕೇಳಲಾಗಿದೆ ಎಂದು ಸಿಬಿಐ (CBI)ಹೇಳಿದೆ. ಈಗಾಗಲೇ ನೀಟ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ತಮಿಳುನಾಡಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಸಿಬಿಐ ಇಂಥದ್ದೊಂದು ಹಗರಣದ ಬಗ್ಗೆ ಮಾಹಿತಿ ನೀಡಿದೆ.
ಮಹಾರಾಷ್ಟ್ರ ಮೂಲದ ಆರ್.ಕೆ.ಎಜ್ಯುಕೇಶನ್ ಕರಿಯರ್ ಗೈಡೆನ್ಸ್ ಸೆಂಟರ್ ಎಂಬ ಕೋಚಿಂಗ್ ಸೆಂಟರ್, ಅದರ ನಿರ್ದೇಶಕ ಪರಿಮಳ್ ಕೊಟ್ಪಲ್ಲಿವಾರ್ ಮತ್ತು ಹಲವು ವಿದ್ಯಾರ್ಥಿಗಳ ವಿರುದ್ಧ ಆರೋಪ ಮಾಡಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಈ ಪರಿಮಳ್ ಕೊಟ್ಪಲ್ಲಿವಾರ್ ಸೆ.12ರಂದು ನಡೆಯಲಿರುವ ನೀಟ್ ಪರೀಕ್ಷೆಗಾಗಿ ಐವರು ಪ್ರಾಕ್ಸಿಗಳನ್ನು (ಪ್ರತಿನಿಧಿಗಳು) ಸಜ್ಜುಗೊಳಿಸಿದ್ದ. ಅದಕ್ಕೂ ಮೊದಲು ನೀಟ್ ಪರೀಕ್ಷಾರ್ಥಿಗಳಿಗೆ ಸರ್ಕಾರಿ ಉನ್ನತ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಪ್ರವೇಶಾತಿ ಭರವಸೆ ನೀಡುವ ಜತೆ, ಪ್ರತಿಯೊಬ್ಬರಿಗೂ 50 ಲಕ್ಷ ರೂ. ಶುಲ್ಕ ಕೇಳಲಾಗಿತ್ತು. ಇನ್ನು ಅಂಥ ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ, ಹಣ ನೀಡಿದರೆ ನಿಮ್ಮ ಮಕ್ಕಳ ಪರವಾಗಿ ಪ್ರಾಕ್ಸಿಗಳ ಬಳಿ ಪರೀಕ್ಷೆ ಬರೆಸುವ ಭರವಸೆಯನ್ನೂ ನೀಡಿದ್ದ. ಇನ್ನು ಅಂಥ ಪರೀಕ್ಷಾರ್ಥಿಗಳ ಬಳಿ ಪೋಸ್ಟ್ ಡೇಟೆಡ್ ಚೆಕ್ ಜತೆಗೆ, ಅವರ 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳ ಒರಿಜಿನಲ್ ಪ್ರತಿಯನ್ನೇ ಕೊಡುವಂತೆ ಕೇಳಲಾಗಿತ್ತು ಎಂದು ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಅದರಂತೆ ಐವರು ಪ್ರಾಕ್ಸಿಗಳು ರೆಡಿ ಆಗಿದ್ದರು. ಆದರೆ ಸಿಬಿಐ ಅವರನ್ನು ಸಾಕ್ಷಿ ಸಮೇತ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಹೀಗಾಗಿ ಅವರು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲಿಲ್ಲ ಎಂದೂ ಹೇಳಲಾಗಿದೆ. ಇನ್ನು ನಂತರ ಅವರನ್ನು ಹುಡುಕಿ ಬಂಧನ ಮಾಡಲಾಗಿದೆ ಎಂದೂ ಸಿಬಿಐ ಹೇಳಿದೆ.
ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಯಲ್ಲಿ ವಿಫಲವಾಗುವ ಭಯದಿಂದಲೇ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವಾರ 17 ವರ್ಷದ ಹುಡುಗಿಯೊಬ್ಬಳು ನೀಟ್ ಪರೀಕ್ಷೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದಕ್ಕೂ ಮೊದಲು 19 ವರ್ಷದ ಹುಡುಗಿ ಸಾವನ್ನಪ್ಪಿದ್ದಳು. ಹೀಗೆ ಪದೇಪದೆ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ತಮಿಳುನಾಡಿನ ವಿಧಾನಸಭೆಯಲ್ಲಿ ನೀಟ್ ರದ್ದುಗೊಳಿಸುವ ಮಸೂದೆ ಅಂಗೀಕಾರ ಆಗಿದೆ.
ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ ನೀಟ್‌ನಿಂದ ಶಾಶ್ವತ ವಿನಾಯಿತಿ ಕೋರುವ ಮಸೂದೆ ಮಂಡಿಸಿದ ಮುಖ್ಯಮಂತ್ರಿ ಸ್ಟಾಲಿನ್
Published On - 12:29 pm, Thu, 23 September 21