NEET Exam: ನೀಟ್ ಪರೀಕ್ಷೆ ಬೇಡ ಎಂದರೆ ಸೋಲು ಯಾರದ್ದು? ಮಕ್ಕಳದ್ದೇ? ಇಲ್ಲಿದೆ ನೋಡಿ ಕಾರಣಗಳು
ತಮಿಳು ನಾಡು NEET ಪರೀಕ್ಷೆಯಿಂದ ಹೊರಬರಲು ನಿರ್ಧರಿಸದೆ. ಆಯಾ ರಾಜ್ಯಗಳಲ್ಲಿನ ಪಠ್ಯಕ್ರಮವನ್ನು ಬದಲಾಯಿಸುವುದು ಸೂಕ್ತವೇ ಹೊರತು ಪರೀಕ್ಷೆಯಿಂದ ಹೊರಬರುವ ನಿರ್ಧಾರ ಅಲ್ಲ.
ತಮಿಳು ಅಸ್ಮಿತೆಗೆ ಸ್ವಲ್ಪ ಜಾಸ್ತಿಯೇ ಒತ್ತು ಕೊಟ್ಟು, ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ ತಮಿಳುನಾಡಿನ ಜನಕ್ಕೆ ಡಿಎಂಕೆ ಸರಕಾರ ನೀಟ್ (NEET) ಪರೀಕ್ಷೆಯಿಂದ ಹೊರ ಬರುವ ನಿರ್ಧಾರ ಮಾಡಿರುವುದು ತುಂಬಾ ಖುಷಿ ತಂದಿರಬಹುದು. ಇದು ಸ್ವಾಭಾವಿಕ ಕೂಡ. ಇನ್ನು ಮುಂದೆ 12 ನೇ ತರಗತಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ತಮಿಳುನಾಡು ಸರಕಾರ ಘೋಷಿಸಿದೆ. ಅಷ್ಟೇ ಅಲ್ಲ, ಈ ಕುರಿತು ವಿಧೇಯಕವನ್ನು ತಮಿಳುನಾಡಿನ ವಿಧಾನಸಭೆ ನಿನ್ನೆ ಪಾಸು ಮಾಡಿದೆ. ಇದೇ ಹೊತ್ತಿನಲ್ಲಿ ತಮಿಳುನಾಡಿನಲ್ಲಿ ಎರಡು ಅಮಾಯಕ ಮಕ್ಕಳು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆಯನ್ನು ನೋಡಿದ ಅಲ್ಲಿನ ರಾಜಕಾರಣಿಗಳು ನೀಟ್ ಪರೀಕ್ಷೆಯ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.
ನೀಟ್ಗೆ ತಮಿಳುನಾಡು ಎಳ್ಳು ನೀರು ಬಿಟ್ಟ ಹಾಗೇನಾ? ಸಂವಿಧಾನದ ಪ್ರಕಾರ, ಒಂದು ವಿಧೇಯಕ ಕಾನೂನು ಆಗಬೇಕೆಂದರೆ, ಈ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರಕಬೇಕು. ಈಗ ತಮಿಳುನಾಡಿಗೆ ಹೊಸ ರಾಜ್ಯಪಾಲರ ನೇಮಕಾತಿ ಆಗಿದೆ. ನಾಗಾಲ್ಯಾಂಡಿನ ರಾಜ್ಯಪಾಲರಾಗಿ ಕೆಲಸ ಮಾಡಿದ, ಬಿಹಾರ ಮೂಲದ ಆರ್.ಎನ್.ರವಿ ಈಗ ತಮಿಳುನಾಡಿಗೆ ರಾಜ್ಯಪಾಲರಾಗಿ ಬರುತ್ತಿದ್ದಾರೆ. ಅವರು ನಿವೃತ್ತ ಐಪಿಎಸ್ ಅಧಿಕಾರಿ. ಅವರು ಈ ವಿಧೇಯಕಕ್ಕೆ ಅಂಕಿತ ಹಾಕುತ್ತಾರೋ ಇಲ್ಲವೋ ಎಂಬ ಈಗಲೇ ಹೇಳಲಾಗದು.
ಸಾಮಾನ್ಯವಾಗಿ, ಒಂದು ವಿಧೇಯಕ ಕೇಂದ್ರ ಸರಕಾರದ ನೀತಿ, ಸಂವಿಧಾನದ ಯಾವುದಾದರೂ ಅಂಶಕ್ಕೆ ವಿರೋಧ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ, ಅದನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳಿಸುತ್ತಾರೆ. ಪ್ರಾಯಶಃ, ನೀಟ್ ವಿರೋಧಿ ವಿಧೇಯಕವನ್ನು ಸಹ, ರವಿಯವರು ರಾಷ್ಟ್ರಪತಿಗಳಿಗೆ ಕಳಿಸುವ ಸಾಧ್ಯತೆ ಜಾಸ್ತಿ ಇದೆ. ಹಾಗೇನಾದರೂ ಮಾಡಿದರೆ ಈ ವಿಧೇಯಕಕ್ಕೆ ಸದ್ಯ ಮುಕ್ತಿ ಸಿಗದು. ಯಾಕೆಂದರೆ ರಾಷ್ಟ್ರಪತಿಗಳು ಇಂತಿಷ್ಟೇ ದಿನದಲ್ಲಿ ಈ ವಿಧೇಯಕಕ್ಕೆ ಅಂಕಿತ ಹಾಕಬೇಕು ಎಂಬ ಗರಿಷ್ಠ ಸಮಯಯದ ಮಿತಿ ಇಲ್ಲ. ರಾಷ್ಟ್ರಪತಿಗಳು ಈ ವಿಧೇಯಕವನ್ನು ಅಧ್ಯಯನ ಮಾಡಿ ಮಾಡಿ ಪರಾಮರ್ಶೆ ಮಾಡಲು ಕೇಂದ್ರ ಗೃಹ ಇಲಾಖೆಗೆ ಕಳಿಸುತ್ತಾರೆ.
ಯಾವ ಇಲಾಖೆಗೆ ಸಂಬಂಧಿಸಿದ ವಿಷಯವಾಗಿರುತ್ತದೆಯೋ ಆ ಇಲಾಖೆಗೆ, ಆ ವಿಧೇಯಕವನ್ನು ಕೇಂದ್ರ ಗೃಹ ಇಲಾಖೆ ಕಳಿಸುತ್ತದೆ. ಇದನ್ನು ನೋಡಿದರೆ ಈ ವಿಚಾರ ಬೇಗ ನಿರ್ಧಾರವಾಗುತ್ತದೆ ಎಂದು ಹೇಳಲಾಗದು. ಈ ತಾಂತ್ರಿಕ ವಿಚಾರ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಗೊತ್ತಿಲ್ಲ ಅಂತಲ್ಲ. ಅಲ್ಲಿನ ಜನರ ಮನಸ್ಸು ಗೆಲ್ಲಲು ಹೀಗೊಂದು ಆಟ ಆಡಿರಬಹುದು.
ನೀಟ್ ಎಂಬ ಖಳನಾಯಕ? ತಮಿಳುನಾಡಿನ ವಿಧಾನಸಭೆಯಲ್ಲಿ ನಡೆದ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರು ಯಾಕೆ ನೀಟ್ ವಿರೋಧಿಸಿದ್ದರು ಎಂಬ ಅಂಶವನ್ನು ಹೇಳಬಹುದು. ತಮ್ಮ ರಾಜ್ಯದ ಗ್ರಾಮೀಣ ಭಾಗದಲ್ಲಿ ಓದುವ ಮಕ್ಕಳಿಗೆ ನೀಟ್ ತುಂಬಾ ಕಠಿಣವಾಗಿದೆ. ಅದನ್ನು ಪಾಸು ಮಾಡುವುದೇ ಕಷ್ಟ. ಹಾಗಾಗಿ, ಅವರು ಓದಿದರೂ ನೀಟ್ ಪರೀಕ್ಷೆ ಪಾಸ್ ಮಾಡಲು ಆಗುವುದಿಲ್ಲ. ಗ್ರಾಮೀಣ ಭಾಗದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂಬುದು ಅಲ್ಲಿಯ ರಾಜಕಾರಣಿಗಳ ಪಕ್ಷಾತೀತ ವಾದ. ಆದರೆ ನಿಜವೇ? ಮೂರು ಅಂಶವನ್ನು ಗಮನಿಸಿದರೆ ಇದು ನಿಜವೇ ಅಥವಾ ಸುಳ್ಳೇ ಎಂಬುದು ಗೊತ್ತಾಗುತ್ತದೆ.
1. ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆ ಕಷ್ಟ. ಹಾಗಾಗಿ ಅದನ್ನು ವಿರೋಧಿಸಬೇಕು ಪ್ರತಿಷ್ಠಿತ ಐಐಟಿಗೆ ಪ್ರವೇಶ ಪಡೆಯಲು ಜೆಇಇ (JEE) ಪರೀಕ್ಷೆ ಎಷ್ಟೋ ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಅದೂ ಕೂಡ ಇಂಗ್ಲೀಷಿನಲ್ಲಿ. ಹಾಗೆ ನೋಡಿದರೆ ಜೆಇಇ ಕೂಡ ಅಖಿಲ ಭಾರತ ಮಟ್ಟದ ಪರೀಕ್ಷೆ. ಈ ಪರೀಕ್ಷೆಗೆ ವಿರುದ್ಧ ಬಾರದಿರುವ ಅಸಮಾಧಾನ ಮತ್ತು ಬಂಡಾಯ ಅಂಥದೇ ಮತ್ತೊಂದು ರಾಷ್ಟ್ರೀಯ ಪರೀಕ್ಷೆ- ನೀಟ್ಗೆ ಬಂದಿರುವುದು ಏಕೆ? ಹಾಗಾದರೆ ತಮಿಳುನಾಡಿನ ಜನರಿಗೆ ತಮ್ಮ ಮಕ್ಕಳಿಗೆ ಐಐಟಿಗೆ ಪ್ರವೇಶ ಸಿಕ್ಕಿಲ್ಲ ಎಂಬ ಚಿಂತೆ ಕಾಡುವುದಿಲ್ಲವೇ? ಅಲ್ಲಿ ಇರುವ ಅಖಿಲ ಭಾರತ ಮಟ್ಟದ ಪರೀಕ್ಷೆ ಓಕೆ. ಇಲ್ಲಿ ಹೇಗೆ ತಪ್ಪಾಗುತ್ತದೆ?
2. ನೀಟ್ ಪರೀಕ್ಷೆಯ ಪಠ್ಯಕ್ರಮ ತಮಿಳು ವಿದ್ಯಾರ್ಥಿಗಳಿಗೆ ಕಠಿಣವಾಗಿದ್ದು ಜೆಇಇ ಪರೀಕ್ಷೆ ಕೂಡ ಯಾವುದೇ ರಾಜ್ಯದಲ್ಲಿರುವ ವಿಜ್ಞಾನದ ಪಠ್ಯಕ್ರಮದ ಆಧಾರದ ಮೇಲೆ ನಡೆಯುವುದಿಲ್ಲ. ಅಥವಾ ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶಕ್ಕೋಸ್ಕರ ಕ್ಲಾಟ್ ಪರೀಕ್ಷೆ (CLAT) ಎಂಬ ನಡೆಸುತ್ತಾರೆ. ಆರ್ಕಿಟೆಕ್ಚರ್ ಕೋರ್ಸಗೆ ನಾಟಾ (NATA) ಎಂಬ ರಾಷ್ಟ್ರೀಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ರೀತಿಯ ಪ್ರವೇಶ ಪರೀಕ್ಷೆಯಲ್ಲಿ ಬರಿ ತಮಿಳುನಾಡು ಮಾತ್ರವಲ್ಲ, ಇಡೀ ದೇಶದ ಎಲ್ಲ ರಾಜ್ಯದ ಗ್ರಾಮೀಣ ಭಾಗದ ಮಕ್ಕಳಿಗೂ ಸ್ವಲ್ಪ ಹಿನ್ನಡೆಯಾಗುವ ಸನ್ನಿವೇಶ ಇರುವುದು ನಿಜ. ಹಾಗಂತ ಈ ಎಲ್ಲ ಪರೀಕ್ಷೆಯನ್ನು ನಿಲ್ಲಿಸುವುದು ಅಥವಾ ರಾಜ್ಯಗಳು ಈ ಪರೀಕ್ಷೆಗಳಿಂದ ಹೊರ ಬರುವುದು ಉತ್ತರವೇ? ಒಂದು ಮಾತನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು-ನಮ್ಮ ಮಕ್ಕಳಿಗೆ ಸಿಗದ ಕೋರ್ಸ್ಗೆ ಇರುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯೇ ತಪ್ಪು, ಅದನ್ನು ತೆಗೆಯಬೇಕು ಎಂದು ಹೇಳುವುದರಲ್ಲಿ ನ್ಯಾಯ ಇದೆಯೇ? ಒಂದು ಮಾತನ್ನು ಒಪ್ಪಿಕೊಳ್ಳೋಣ-ಬೇರೆಬೇರೆ ರಾಜ್ಯದ ವಿಜ್ಞಾನದ ಪಠ್ಯಕ್ರಮವನ್ನು ಬದಲಾಯಿಸದೇ ಹಳೇ ಪದ್ಧತಿ ಇಟ್ಟುಕೊಂಡು, ನೀಟ್ ಕಷ್ಟ, ಜೆಇಇ ಕಷ್ಟ ಎಂದು ಹೇಳುವುದು ಸರಿಯೇ?
3. ಬೇರೆ ದಾರಿ ಇಲ್ಲ ನೀಟ್ ಪರೀಕ್ಷೆ ಬಂದಾಗ ಕರ್ನಾಟಕ ಕೂಡ ತುಂಬಾ ವಿರೋಧಿಸಿತ್ತು. ಆದರೆ ಕರ್ನಾಟಕ ಇದರಿಂದ ಹೊರಬರಲು ಯೋಚಿಸದಿದ್ದುದು ತುಂಬಾ ಒಳ್ಳೆಯದೇ ಆಯ್ತು ಅಲ್ಲವೇ? ನಮ್ಮ ಮಕ್ಕಳಿಗೆ ವೈದ್ಯಕೀಯ ಸೀಟು ಸಿಗದ ಇಂತಹ ಪರೀಕ್ಷೆ ಕಟ್ಟುಕೊಂಡು ನಾವೇನು ಮಾಡಬೇಕು? ನಿಜ. ಮೇಲ್ನೋಟಕ್ಕೆ ಇದು ಸರಿ ಎನ್ನಿಸುತ್ತದೆ. ನಿಧಾನವಾಗಿ ಯೋಚಿಸೋಣ. ಕಂಡ ಕಂಡಲ್ಲಿ ವೈದ್ಯಕೀಯ ಕಾಲೇಜು ತೆರೆದಿರುವ ರಾಜಕಾರಿಣಿಗಳಿಗೆ ಈ ನೀಟ್ ಪರೀಕ್ಷೆ ಒಂದು ಕಬ್ಬಿಣದ ಕಡಲೆ. ಇದು ಇದ್ದಷ್ಟು ದಿನ, ತಮ್ಮ ಕಾಲೇಜುಗಳ ಎಲ್ಲ ಸೀಟುಗಳ ಮೇಲೆ ಅವರ ಹಕ್ಕು ಇರುವುದಿಲ್ಲ. ಇದು ಈ ನೀಟ್ ಪರೀಕ್ಷೆ ವಿರೋಧಿಸುವವರ ಒಳಗುಟ್ಟು.
ಈ ಹಿಂದೆ, ಅನೇಕ ವೈದ್ಯಕೀಯ ಕಾಲೇಜುಗಳು ಪ್ರವೇಶ (admission) ನೀಡುವಾಗ ಮಾಡಿರುವ ಅವ್ಯವಹಾರವನ್ನು ನೋಡಿಯೇ ಯುಪಿಎ ಸರ್ಕಾರ ಇದ್ದಾಗ ನೀಟ್ ಪರೀಕ್ಷೆಯನ್ನು ತರಲಾಯ್ತು. ಆದರೆ ಕೋರ್ಟ್ ಅದನ್ನು ನಿಲ್ಲಿಸಿತ್ತು. ಮತ್ತೆ ಅದು 2016 ರಲ್ಲಿ ಜಾರಿಗೆ ಬಂತು. ಇಲ್ಲಿ ಒಂದು ಪ್ರಶ್ನೆ ಏಳಬಹುದು-ಎಂಜಿನಿಯರಿಂಗ್ ಕಾಲೇಜುಗಳು ಕೂಡ ಈ ರಾಜಕಾರಿಣಿಗಳ ಕೈಯಲ್ಲಿಯೇ ಇದೆ. ಕೇಂದ್ರ ಸರಕಾರ ಅದಕ್ಕೆ ಯಾಕೆ ರಾಷ್ಟ್ರ ಮಟ್ಟದ ಪರೀಕ್ಷೆ ಮಾಡಿಲ್ಲ? ಈ ವೈದ್ಯಕೀಯಕ್ಕೆ ಏಕೆ? ವೈದ್ಯಕೀಯ ಶಿಕ್ಷಣಕ್ಕೆ ಸೀಟು ಕಡಿಮೆ, ಆಕಾಂಕ್ಷಿಗಳು ಜಾಸ್ತಿ. ಸೀಟು ಸಿಗದಿದ್ದರೆ ಗೋಲ್ಮಾಲ್ ಆಗಬಹುದು. ಈ ಹಿಂದೆ ಈ ರೀತಿ ಆಗುತ್ತಿತ್ತು. ಇಂಜಿನಿಯರಿಂಗ್ ಕಾಲೇಜು ತೆರೆಯುವುದು ಸುಲಭ, ಖರ್ಚು ಕಡಿಮೆ. ಸೀಟು ಜಾಸ್ತಿ. ಹಾಗಾಗಿ ಗೋಲ್ಮಾಲ್ ಆಗುವು ಸಾಧ್ಯತೆ ಸ್ವಲ್ಪ ಕಡಿಮೆ. ಇಲ್ಲಯೂ ಐಐಟಿಗಳು ಇವೆ. NITಗಳು ಇವೆ. ಅವುಗಳಿಗೆ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ ಇದೆ ನೋಡಿ.
ವೈದ್ಯಕೀಯ ಕೋರ್ಸ್ಗಳಿಗೆ ಹೋಲಿಸಿದರೆ, ಎಂಜಿನಿಯರಿಂಗ್ ಕೋರ್ಸ್ ನಡೆಸಲು ಹೆಚ್ಚು ಖರ್ಚು ಮಾಡಬೇಕಿಲ್ಲ. ಇಡೀ ಭಾರತದಲ್ಲಿ 7100 ಎಂಜಿನಿಯರಿಂಗ್ ಕಾಲೇಜುಗಳು (ಪಾಲಿಟೆಕ್ನಿಕ್ಗಳು ಮತ್ತು ಆರ್ಕಿಟೆಕ್ಚ್ರ್ ಕಾಲೇಜುಗಳು ಸೇರಿ) ಇವೆ. ಅದೇ ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 560 ವೈದ್ಯಕೀಯ ಕಾಲೇಜುಗಳು ಮತ್ತು 64 ಅಖಿಲ ಭಾರತ ಮಟ್ಟದ ವೈದ್ಯಕೀಯ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಈಗ ಗೊತ್ತಾಗುತ್ತದೆ. ಇಷ್ಟು ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಸರಿ ಸುಮಾರು 85,000 ವೈದ್ಯಕೀಯ ಸೀಟುಗಳಿದ್ದರೆ, ಪ್ರತಿವರ್ಷ ವೈದ್ಯರಾಗುವ ಕನಸು ಕಾಣುವವರು ಲಕ್ಷ ಲಕ್ಷ ಮಕ್ಕಳು. ಹಾಗಾಗಿ, ಇಲ್ಲಿ ಈ ರೀತಿಯ ಸ್ಪರ್ಧೆ ಸ್ವಾಭಾವಿಕ. ಸೀಟು ಸಿಗದ ಮಕ್ಕಳನ್ನು ನೋಡಿ ಈ ರೀತಿಯ ನಿರ್ಧಾರವನ್ನು ತಮಿಳುನಾಡು ಮಾಡಿರುಬಹುದು.
ಆದರೆ ನೀಟ್ನಿಂದ ಹೊರಬರುವುದು ಇದಕ್ಕೆ ಉತ್ತರವೇ? ಎಲ್ಲ ರಾಜ್ಯಗಳು ಈ ರೀತಿ ಮಾಡಬಹುದು. ಮೇಲ್ನೋಟಕ್ಕೆ ಇದು ಸರಿ. ಜನ ಇದನ್ನು ಸ್ವಾಗತಿಸಬಹುದು. ಆಗ ಏನಾಗುತ್ತದೆ? ಪ್ರತಿ ರಾಜ್ಯ ಬೇರೆ ಬೇರೆ ಪ್ರವೇಶ ಪರೀಕ್ಷೆ ನಡೆಸುತ್ತದೆ. ಒಂದು ಮಗುವಿಗೆ ತಾನು ದೆಹಲಿಯ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (All India Institute of Medical Science – AIIMS) ಅಥವಾ ಚಂಡೀಗಢದ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಗೆ ( Post Graduate Institute of Medical Education and Research – PGIMR) ಸೇರಬೇಕೆಂದರೆ ಅಲ್ಲಿಯ ಪ್ರವೇಶ ಪರೀಕ್ಷೆಗೆ ಮತ್ತೆ ತಯಾರಾಗಬೇಕು.
ಒಂದು ಮಗು ಒಂದು ವರ್ಷದಲ್ಲಿ ಎಷ್ಟು ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಬೇಕು? ಇದನ್ನು ಪಾಲಕರು ವಿಚಾರ ಮಾಡಬೇಕಲ್ಲವೇ? ಮಕ್ಕಳು ಓದುವ ಆಯಾ ರಾಜ್ಯಗಳ ಪಠ್ಯಕ್ರಮವನ್ನು ಬದಲಾಯಿಸಬೇಕು. ಪಠ್ಯಕ್ರಮ application-oriented ಆಗಿದ್ದರೆ, ಆಗ ಮಕ್ಕಳಿಗೆ ಇಂಥ ಪರೀಕ್ಷೆ ಎದುರಿಸುವುದು ಕಷ್ಟವಾಗದು ಎಂಬುದು ವಿಷಯ ತಜ್ಞರ ಅಭಿಮತ. ರಾಜಕೀಯಕ್ಕೋಸ್ಕರ ಮಕ್ಕಳ ಭಾವನೆಯ ಜೊತೆ ಆಟ ಆಡಿದರೆ, ಸೋಲುವುದು ಮಕ್ಕಳ ಭವಿಷ್ಯವೇ ಹೊರತು ರಾಜಕಾರಿಣಿಗಳ ಭವಿಷ್ಯ ಅಲ್ಲ.
ಇದನ್ನೂ ಓದಿ: ನೀಟ್ ರದ್ದುಗೊಳಿಸುವ ಮಸೂದೆಗೆ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ
ಇದನ್ನೂ ಓದಿ: ತಮಿಳುನಾಡು: ನೀಟ್ ಪರೀಕ್ಷೆಯಲ್ಲಿ ಸೋಲುವ ಭಯದಿಂದ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ
(Tamil Nadu anti NEET bill defeats the future of children and benefit private medical colleges)
Published On - 7:38 pm, Tue, 14 September 21