Instant Justice: ಅತ್ಯಾಚಾರಿಗಳ ವಿರುದ್ಧ ಆಂಧ್ರ ಸ್ಟೈಲ್ ಕ್ರಮಕ್ಕೆ ಒತ್ತಾಯಿಸಿದ ಸಾರಾ ಮಹೇಶ್: ಆಂಧ್ರ ಸ್ಟೈಲ್ ಅಂದ್ರೆ ಏನು? ಇಲ್ಲಿದೆ ಮಾಹಿತಿ
‘ಒಬ್ಬ ಗೃಹ ಸಚಿವನಾಗಿ ಸದನದಲ್ಲಿ ನಾನು ಆಂಧ್ರ ಸ್ಟೈಲ್ ಅನುಸರಣೆ ಬಗ್ಗೆ ಏನನ್ನೂ ಹೇಳಲು ಆಗುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಾ.ರಾ.ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ವಿಧಾನಸಭೆಯಲ್ಲಿ ಬುಧವಾರ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್, ‘ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಆಂಧ್ರ ಸ್ಟೈಲ್ನಲ್ಲಿ ಏನಾದ್ರೂ ಮಾಡ್ತೀರಿ ಅಂದುಕೊಂಡಿದ್ದೆ. ಆದರೆ ಏನೂ ಮಾಡಲಿಲ್ಲ. ಹಾಗೆ ಮಾಡಿದ್ರೆ ನಿಮ್ಮನ್ನು ಅಭಿನಂದಿಸುತ್ತಿದ್ದೆವು’ ಎಂದು ಹೇಳಿದರು.
ಕರ್ನಾಟಕದಲ್ಲಿ ಇನ್ನೊಮ್ಮೆ ಇಂಥ ಪ್ರಕರಣ ನಡೆಯುವುದು ಬೇಡ ಎಂದೇ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಒಂದು ವೇಳೆ ಆದರೆ ನೀವು ಆಂಧ್ರ ಮಾದರಿ ಅನುಸರಿಸಬೇಕು. ಎಲ್ಲವನ್ನೂ ನಾನು ವಿವರಿಸಲು ಆಗುವುದಿಲ್ಲ. ಆದರೆ ನಾನು ಏನು ಮಾತಾಡುತ್ತಿದ್ದೇನೆ ಎಂಬುದು ನಿಮಗೂ ಅರ್ಥವಾಗುತ್ತೆ. ಇನ್ನೊಮ್ಮೆ ರಾಜ್ಯದಲ್ಲಿ ಇಂಥ ಪ್ರಕರಣ ನಡೆದರೆ ನೀವು ಆಂಧ್ರ ಸ್ಟೈಲ್ ಮಾಡಲೇಬೇಕು. ಇಲ್ಲದಿದ್ದರೆ ನೀವು ರಾಜೀನಾಮೆ ಕೊಡುವವರೆಗೆ ಬಿಡುವುದಿಲ್ಲ ಎಂದು ಮುಗುಂ ಆಗಿ ಹೇಳಿದರು.
ಸಾ.ರಾ.ಮಹೇಶ್ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಒಬ್ಬ ಗೃಹ ಸಚಿವನಾಗಿ ಸದನದಲ್ಲಿ ನಾನು ಆಂಧ್ರ ಸ್ಟೈಲ್ ಅನುಸರಣೆ ಬಗ್ಗೆ ಏನನ್ನೂ ಹೇಳಲು ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು. ಆದರೆ ಮುಂದಿನ ದಿನಗಳಲ್ಲಿ ಈ ಕ್ರಮವನ್ನು ಸರ್ಕಾರ ಅನುಸರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಿಲ್ಲ.
ಏನಿದು ಆಂಧ್ರ ಸ್ಟೈಲ್? ಸಾ.ರಾ.ಮಹೇಶ್ ಪ್ರಸ್ತಾಪಿಸಿರುವ ಆಂಧ್ರ ಸ್ಟೈಲ್ ಎನ್ನುವುದು ಸೂಕ್ಷ್ಮವಾಗಿ ಗಮನಿಸಿದಾಗ ತೆಲಂಗಾಣ ಸ್ಟೈಲ್ ಎನ್ನುವುದು ಅರ್ಥವಾಗುತ್ತದೆ. ತೆಲಂಗಾಣದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಇಂಥ ಕೃತ್ಯ ಎಸಗಿದವರಲ್ಲಿ ಭೀತಿ ಹುಟ್ಟಿಸಲು ಪೊಲೀಸರು ಎನ್ಕೌಂಟರ್ ಮಾಡಲು ಆರಂಭಿಸಿದರು.
2019ರಲ್ಲಿ ಹೈದರಾಬಾದ್ ಹೊರವಲಯದಲ್ಲಿ ಪಶುವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಸುಟ್ಟುಹಾಕಿದ್ದ ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು. ಮಹಜರು ವೇಳೆ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದರು. ಹೀಗಾಗಿ ಗುಂಡು ಹಾರಿಸಬೇಕಾಯಿತು ಎಂದು ನಂತರ ಪೊಲೀಸರು ಸಮಜಾಯಿಷಿ ಕೊಟ್ಟಿದ್ದರು. ಹೈದರಾಬಾದ್ ಪೊಲೀಸ್ ಆಯುಕ್ತ ಸಜ್ಜನರ್ ಈ ಹಿಂದೆಯೂ ಇಂಥ ಎನ್ಕೌಂಟರ್ಗಳನ್ನು ಮಾಡಿದ್ದ ಮಾಹಿತಿ ಆಗ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಈ ಎನ್ಕೌಂಟರ್ ನಂತರ ತೆಲಂಗಾಣದ ಬಹುತೇಕ ಪೊಲೀಸ್ ಠಾಣೆಗಳಿಗೆ ಮಹಿಳೆಯರು ತೆರಳಿ, ಪೊಲೀಸರಿಗೆ ಸಿಹಿಹಂಚಿದ್ದರು. ಆದರೆ ಪೊಲೀಸರ ಎನ್ಕೌಂಟರ್ ಪ್ರವೃತ್ತಿ ತಪ್ಪು, ಇದು ಕಾನೂನುಬಾಹಿರ ಕ್ರಮ ಎಂಬ ಆಕ್ಷೇಪಗಳೂ ಕೇಳಿ ಬಂದಿದ್ದವು. ಮಾನವಹಕ್ಕುಗಳ ಆಯೋಗವೂ ವಿಚಾರಣೆ ನಡೆಸಿತ್ತು. ಸುಪ್ರೀಂಕೋರ್ಟ್ನಲ್ಲಿಯೂ ಪೊಲೀಸರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ಹೈದರಾಬಾದ್ ಸಮೀಪದ ಸೈದಾಬಾದ್ನಲ್ಲಿ ಕಳೆದ ಸೆಪ್ಟೆಂಬರ್ 9ರಂದು 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ರಾಜು (30) ಶವ ಸೆಪ್ಟೆಂಬರ್ 16ರಂದು ರೈಲು ಹಳಿಯ ಪಕ್ಕ ಪತ್ತೆಯಾಗಿತ್ತು. ಈ ಸಾವಿನ ಹಿಂದೆಯೂ ಪೊಲೀಸರ ಹಸ್ತಕ್ಷೇಪ ಇದೆ ಎಂಬ ಮಾತುಗಳು ಕೇಳಿಬಂದಿತ್ತು. ಆರೋಪಿಯ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದ ತೆಲಂಗಾಣ ಪೊಲೀಸರು ಮಾಹಿತಿ ನೀಡಿದವರಿಗೆ ₹ 10 ಲಕ್ಷ ಬಹುಮಾನ ಎಂದು ಘೋಷಿಸಿದ್ದರು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮಗ ಮತ್ತು ತೆಲಂಗಾಣ ಸರ್ಕಾರದ ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಆರೋಪಿ ಸಾವಿನ ದಿನ ಮಾಡಿದ್ದ ಟ್ವೀಟ್ ಹಲವರ ಗಮನ ಸೆಳೆದಿತ್ತು. ಮಾತ್ರವಲ್ಲ ಹಲವು ಅನುಮಾನಗಳಿಗೂ ಕಾರಣವಾಗಿತ್ತು. ತೆಲಂಗಾಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮೊದಲು ಟ್ವೀಟ್ ಮಾಡಿದ್ದರು, ನಂತರ ಅದು ತಪ್ಪು ಮಾಹಿತಿ, ಆರೋಪಿಯ ಪತ್ತೆಗಾಗಿ ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ತಿದ್ದುಪಡಿ ಹಾಕಿದ್ದರು. ಈ ಎರಡೂ ಟ್ವೀಟ್ಗಳ ನಂತರ ಆರೋಪಿಯ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಾವಿನ ಹಿಂದೆಯೂ ಪೊಲೀಸರ ಹಸ್ತಕ್ಷೇಪ ಇರಬಹುದು ಎಂಬ ಆರೋಪಗಳು ಕೇಳಿಬಂದಿದ್ದವು.
ಆಂಧ್ರ ಸ್ಟೈಲ್ ಸರಿಯೇ? ಅತ್ಯಾಚಾರದ ಆರೋಪಿಗಳನ್ನು ಬಂಧಿಸಿ, ಆರೋಪ ಹೊರಿಸಿ, ನ್ಯಾಯಾಲಯಗಳಲ್ಲಿ ಅಪರಾಧ ಸಾಬೀತುಪಡಿಸುವುದು ಶ್ರಮದಾಯಕ ಕೆಲಸ. ಬಹುತೇಕ ಸಂದರ್ಭಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ ಆರೋಪಿಗಳನ್ನು ಎನ್ಕೌಂಟರ್ ಮಾಡುವುದು ಸರಿ ಎಂಬುದು ಜನಪ್ರಿಯವಾಗಿರುವ ವಾದ.
ಆದರೆ ಒಮ್ಮೆ ಪೊಲೀಸರಿಗೆ ಬೇಕಾಬಿಟ್ಟಿ ಎನ್ಕೌಂಟರ್ ಮಾಡಲು ಅವಕಾಶಕೊಟ್ಟರೆ ನಿರಪರಾಧಿಗಳೂ ಪೊಲೀಸರಿಗೆ ಬಂದೂಕಿಗೆ ಆಹುತಿಯಾಗುವ ಅಪಾಯವಿದೆ. ಪೊಲೀಸರೂ ರೌಡಿಗಳಂತೆ ವರ್ತಿಸಲು ಆರಂಭಿಸಲು ಸರ್ಕಾರವೇ ಅನುಮತಿ ನೀಡಿದಂತೆ ಎಂಬ ಪ್ರತಿವಾದವೂ ಚಾಲ್ತಿಯಲ್ಲಿದೆ. ಪ್ರಭಾವಿಗಳು ತಪ್ಪು ಮಾಡಿದರೆ ಅವರನ್ನು ಉಳಿಸಲು ಅಮಾಯಕರ ಮೇಲೆ ದೂರು ಹೊರಿಸಿ, ಅವರನ್ನು ಕೊಲ್ಲುವ ಸಾಧ್ಯತೆಯೂ ಇರುತ್ತದೆ ಎಂದು ಹಲವರು ಆಕ್ಷೇಪಿಸಿದ್ದರು.
ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಮಹಿಳಾ ಶಾರ್ಪ್ ಶೂಟರ್ಗಳನ್ನು ಸೇರಿಸಿಕೊಳ್ಳಬೇಕು; ಪರಿಷತ್ ಕಲಾಪದಲ್ಲಿ ತೇಜಸ್ವಿನಿ ಗೌಡ ಒತ್ತಾಯ
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೈಸೂರು ಅತ್ಯಾಚಾರ ಪ್ರಕರಣ: ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್
(Sa Ra Mahesh Demands Andhra Style instant justice in Mysore Rape Case This is how it affects police function)
Published On - 6:45 pm, Wed, 22 September 21