AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಯಾನಂದ್​ ಮತ್ತು ಅಧಿಕಾರಿಗಳ ಅಮಾನತು: ಭಾವನಾತ್ಮಕ ಆಕ್ರೋಶ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸದು

ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತ ವಿಚಾರವಾಗಿ ಬೆಂಗಳೂರಿನ ಪೊಲೀಸ್​ ಕಮಿಷನರ್​ ಆಗಿದ್ದ ದಯಾನಂದ್​ ಮತ್ತು ಇನ್ನಿತರೇ ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಿರುವ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಕಟವಾಗುತ್ತಿರುವ ಸಿಟ್ಟು, ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗದು. ಇದನ್ನು ಸಾರ್ವಜನಿಕರು ಮೊದಲು ಗಮನಿಸಬೇಕು.

ದಯಾನಂದ್​ ಮತ್ತು ಅಧಿಕಾರಿಗಳ ಅಮಾನತು: ಭಾವನಾತ್ಮಕ ಆಕ್ರೋಶ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸದು
ಸಾಂದರ್ಭಿಕ ಚಿತ್ರ
ಡಾ. ಭಾಸ್ಕರ ಹೆಗಡೆ
| Updated By: Ganapathi Sharma|

Updated on: Jun 07, 2025 | 4:31 PM

Share

ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಸಂಭವಿಸಿದ ಕಾಲ್ತುಳಿತದಲ್ಲಿ  (Chinnaswamy Stadium Stampede11 ಜನರ ಸಾವು ರಾಜ್ಯದ ಜನರ ಸಿಟ್ಟಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣವನ್ನು ತೆರೆದರೆ, ಒಂದೆಡೆ ಸೂತಕದ ಭಾವನೆ ನಮ್ಮನ್ನು ಅಪ್ಪಿಕೊಳ್ಳುತ್ತದೆ. ಮತ್ತೊಂದೆಡೆ, ಇನ್ನೊಂದಿಷ್ಟು ಜನ ರಾಜ್ಯ ಸರ್ಕಾರದ ವಿರುದ್ಧದ ಟೀಕಾ ಪ್ರಹಾರ ಮುಂದುವರಿಸಿದ್ದು ಕಾಣಸಿಗುತ್ತದೆ.

ಈ ನಡುವೆ, ತನ್ನ ಮೇಲೆ ಬಂದಿರುವ ಸಾರ್ವಜನಿಕ ಆಕ್ರೋಶ ಮತ್ತು ಟೀಕೆಯಿಂದ ಬಚಾವಾಗಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರನ್ನು ಸೇರಿದಂತೆ, ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಿದೆ. ಗುಪ್ತಚರ ಇಲಾಖೆಯ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿದೆ. ತಮ್ಮದೇ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ಸ್ಥಾನದಿಂದ ಇಳಿಸಿರುವ ಸಿದ್ದರಾಮಯ್ಯ, ಯಾರೆಲ್ಲ ತಪ್ಪು ಮಾಡಿದ್ದಾರೋ ಅವರಿಗೆಲ್ಲ ನಿರ್ದಾಕ್ಷಿಣ್ಯವಾಗಿ ಶಿಕ್ಷೆಯನ್ನು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ತುಂಬಾ ವಿರೋಧ ವ್ಯಕ್ತವಾಗಿದೆ. ಈ ವಿರೋಧಕ್ಕೆ ಮೂಲ ಕಾರಣ: ವಿಜಯೋತ್ಸವ ಸಮಾರಂಭದ ತಯಾರಿ ಮಾಡುವಾಗ ಪೊಲೀಸರು ತಪ್ಪೆಸಗಿದ್ದಾರೆ ಎನ್ನುವ ಆರೋಪ. ಬರೀ ಪೊಲೀಸರು ಮಾತ್ರ ತಪ್ಪೆಸಗಿದ್ದರೆ, ಅವರ ಮೇಲಿನ ಕಠಿಣ ಕ್ರಮ ತೆಗೆದುಕೊಂಡಿದ್ದರ ಬಗ್ಗೆ ಯಾರೂ ಚಕಾರ ಎತ್ತುತ್ತಿರಲಿಲ್ಲ. ಘಟನೆ ನಡೆದು ಮೂರು ದಿನ ಕಳೆದರೂ ಜನರಿಗೆ ಇನ್ನೂ ಇರುವ ಗುಮಾನಿ ಒಂದೇ; ಈ ಘಟನೆಯ ಹಿಂದೆ ರಾಜ್ಯದ ಚುಕ್ಕಾಣಿ ಹಿಡಿದಿರುವ ಕೆಲ ‘ಕೈ’ ನಾಯಕರ ಪಾತ್ರ ಇದೆ. ಇದೇ ಕಾರಣಕ್ಕಾಗಿಯೇ, ಜನರಿಗೆ ‘ಕೈ’ ನಾಯಕರು ಮೇಲಿರುವ ಸಿಟ್ಟು ಇಳಿದಿಲ್ಲ. ತಮ್ಮ ಮೇಲೆ ಬಂದಿರುವ ಆರೋಪ ಮುಚ್ಚಿ ಹಾಕಲು ‘ಕೈ’ ಪಡೆಯ ನಾಯಕರು ಪೊಲೀಸರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ ಎನ್ನುವ ಶಂಕೆ ಜನರಲ್ಲಿದೆ. ಚುಕ್ಕಾಣಿ ಹಿಡಿದವರ ಮೇಲೆ ಆಗದ ಕ್ರಮ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಮಾತ್ರ ಏಕೆ? ಎಂಬುದು ವಿರೋಧ ಪಕ್ಷಗಳ ಪ್ರಶ್ನೆ. ಇದು ವಿವೇಚನಾಯುಕ್ತ ಪ್ರಶ್ನೆ. ಈ ಕುರಿತು ಎರಡು ಮಾತಿಲ್ಲ.

ಇದನ್ನೂ ಓದಿ
Image
ಬೆಂಗಳೂರು ಕಾಲ್ತುಳಿತ: ಕೆಎಸ್​ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
Image
ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ
Image
Stampede: ಆರ್​ಸಿಬಿ ವಿರುದ್ಧ 3ನೇ ಎಫ್​ಐಆರ್​, ಹೆಚ್ಚಿದ ಸಂಕಷ್ಟ
Image
RCB ವಿಜಯೋತ್ಸವದಲ್ಲಿ ಕಾಲ್ತುಳಿತ; ಮೃತರ ಆತ್ಮಕ್ಕೆ ನ್ಯಾಯ ನೀಡುವುದು ಹೇಗೆ?

ಪೊಲೀಸ್​ ನೈತಿಕ ಸ್ಥೈರ್ಯ ಕುಸಿದಿದ್ದು ನಿಜವೇ?

ಕೂಲಂಕುಶವಾಗಿ ವಿಶ್ಲೇಷಿಸುತ್ತಾ ಹೋದರೆ ಎರಡು ಪ್ರಮುಖ ಅಂಶಗಳು ಮುನ್ನೆಲೆಗೆ ಬರುತ್ತವೆ; ಕಮಿಷನರ್ ಬಿ. ದಯಾನಂದ್ ಅವರ ಅಮಾನತು ತಪ್ಪು ಮತ್ತು ಇದರಿಂದಾಗಿ ರಾಜ್ಯ ಪೊಲೀಸ್ ಪಡೆಯ ನೈತಿಕ ಸ್ಥೈರ್ಯ ಕುಸಿದಿದೆ ಎಂಬುದು. ಈ ಕುರಿತು ವಿವರವಾಗಿ ವಿಶ್ಲೇಷಿಸುವ ಅಗತ್ಯ ಇದೆ.

ಇತ್ತೀಚೆಗೆ ಬೆಳಗಾವಿಯಲ್ಲಿ, ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿತ್ತು. ಮುಖ್ಯಮಂತ್ರಿಗಳ ಭಾಷಣಕ್ಕೆ ಕೆಲ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ಆರೋಪಿಸಿ ಕಾಂಗ್ರೆಸ್​​ನ ಹಿರಿಯ ನಾಯಕರು ಸಿಡಿಮಿಡಿಗೊಂಡರು. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹಿರಿಯ ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾಗಿದ್ದು ಜನರ ತೀವ್ರ ಟೀಕೆಗೆ ಗುರಿಯಾಗಿತ್ತು. ಮುಖ್ಯಮಂತ್ರಿಗಳೇ ಭಾಗವಹಿಸಿದ್ದ ಸಮಾವೇಶಕ್ಕೆ ಸರಿಯಾದ ಭದ್ರತೆ ನೀಡಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಜಿಲ್ಲಾ ವರಿಷ್ಠಾಧಿಕಾರಿಯವರು ಸಿಪಿಐ ಅಲ್ತಾಫ್ ಹುಸೇನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ದಯಾನಂದ್​ ಅವರ ಬಗ್ಗೆ ಸಾರ್ವಜನಿಕರಿಗೆ ಇರುವ ಅತಿಯಾದ ಪ್ರೀತಿ ಅಲ್ತಾಫ್ ಹುಸೇನ್ ಅವರ ಬಗ್ಗೆ ಯಾಕಿಲ್ಲ? ಹಾಗಾದರೆ ಅಲ್ತಾಫ್ ಹುಸೇನ್ ಮಾಡಿದ ತಪ್ಪಾದರೂ ಏನಿತ್ತು?

ದಯಾನಂದ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತಿನ ಕಾರಣಕ್ಕಾಗಿ ಪೊಲೀಸರಲ್ಲಿ ನೈತಿಕ ಸ್ಥೈರ್ಯ ಕುಸಿದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೊಂದು ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು ಇದರ ಹಿಂದೆ ಯಾವ ಪ್ರಬಲ ಕಾರಣಗಳೂ ಕಾಣುತ್ತಿಲ್ಲ. ಆದ್ದರಿಂದ ಇದೊಂದು ವಿವೇಚನಾಯುಕ್ತ ಮಾತೆಂದು ಅನ್ನಿಸುವುದಿಲ್ಲ. ಪೊಲೀಸರಲ್ಲಿ ಮೊದಲಿನ ಧೈರ್ಯ ಇಲ್ಲ ಮತ್ತು ಇಡೀ ಪೊಲೀಸ್​ ಪಡೆಯ ನೈತಿಕ ಧೈರ್ಯ, ಸ್ಥೈರ್ಯ ಕುಸಿದು ಬಹಳ ದಿನಗಳೇ ಕಳೆದಿವೆ. ಕೆಲ ವರ್ಷಗಳಿಂದ ನೇಮಕಾತಿ ಆಗದೆ ಕರ್ನಾಟಕದ ಪೊಲೀಸ್ ದಳ ಬಹಳ ದೊಡ್ಡ ಬಿಕ್ಕಟ್ಟಿನಲ್ಲಿದೆ. ಪ್ರತಿ ದಿನ ಹನ್ನೆರಡು ತಾಸು ಕೆಲಸ ಮಾಡುವ ಸ್ಥಿತಿಗೆ ಅವರನ್ನು ನಾವು ತಳ್ಳಿದ್ದೇವೆ. ಇಂಥ ಸಂದರ್ಭದಲ್ಲಿ ಅವರಲ್ಲಿ ನೈತಿಕ ಸ್ಥೈರ್ಯ ಉಳಿಯುವುದಾದರೂ ಹೇಗೆ?

ಒಬ್ಬ ಉನ್ನತ ಪೊಲೀಸ್ ಅಧಿಕಾರಿ ಅಮಾನತುಗೊಂಡಾಗ ಮಾತ್ರ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುತ್ತದೆಯೇ? ಹಾಗಾದರೆ ಅಲ್ತಾಫ್ ಹುಸೇನ್​ ಎಂಬ ಕೆಳಮಟ್ಟದ ಅಧಿಕಾರಿ, ಅಥವಾ ಇನ್ನು ಯಾವುದೋ ಪೇದೆ ಅಮಾನತುಗೊಂಡಾಗ ನೈತಿಕ ಬಲ ಕುಸಿಯುವ ಪ್ರಶ್ನೆ ಉದ್ಭವಿಸುವುದಿಲ್ಲ ಏಕೆ? ಕೆಳ ವರ್ಗದ ಪೇದೆ, ಠಾಣಾಧಿಕಾರಿಗಳ ಅಮಾನತಿಗೆ ನಾವು ಯಾವತ್ತೂ ಸ್ಪಂದಿಸದೆ ಐಪಿಎಸ್ ಅಧಿಕಾರಿಗಳ ಅಮಾನತಿಗೆ ಮಾತ್ರ ಸ್ಪಂದಿಸುವುದು ವಿಚಿತ್ರವಲ್ಲವೇ?

ದಯಾನಂದ್​ 2023ರ ಚುನಾವಣೆಯ ಹೊತ್ತಿನಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಅವರು ಕೊಟ್ಟ ಚುನಾವಣಾ ಪೂರ್ವ ವರದಿಯನ್ನಿಟ್ಟುಕೊಂಡು ಅಂದಿನ ಬಿಜೆಪಿ ತಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆಂಬ ಹುಸಿ ನಂಬಿಕೆಯಲ್ಲಿದ್ದರು. ಮುಂದೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಮೇ 20ನೇ ತಾರೀಕು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಮತ್ತು ಹತ್ತೇ ದಿನದಲ್ಲಿ ದಯಾನಂದ್​ ಅವರು ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ನಿಯುಕ್ತಿಗೊಳ್ಳುತ್ತಾರೆ. ಅವರು ಯಾವ ರೀತಿಯಲ್ಲಿ ಆ ಹುದ್ದೆಗೆ ನೇಮಕವಾದರು ಅಥವಾ ಹೇಗೆ ನೇಮಕಗೊಂಡರು ಎಂಬುದಕ್ಕಿಂತ ಜವಾಬ್ದಾರಿ ವಹಿಸಿಕೊಂಡ ನಂತರ ಅವರು ನಡೆದುಕೊಂಡ ರೀತಿ ಜನಮೆಚ್ಚುಗೆಗೆ ಪಾತ್ರವಾಗಿದ್ದಂತೂ ನಿಜ. ಆದರೆ, ರಾಜ್ಯದ ಆಡಳಿತವನ್ನು ಅಧ್ಯಯನ ಮಾಡುವವರಿಗೆಲ್ಲ ಅವರ ನೇಮಕ ಆಶ್ಚರ್ಯವಾಗಿ ಕಂಡಿದೆ.

ಇದಕ್ಕೊಂದು ಕಾರಣ ಇದೆ!

ಚುನಾವಣೆ ಮುಗಿದು ಹೊಸ ಪಕ್ಷವೊಂದು ಅಧಿಕಾರಕ್ಕೆ ಬಂದಾಗ, ಹಿಂದಿನ ಸರಕಾರದ ಕಾರ್ಯಕಾಲದಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಹಿರಿಯ ಅಧಿಕಾರಿಗಳನ್ನು, ಸ್ವಲ್ಪ ಕಾಲ ದೂರ ಇಡುವುದು ವಾಡಿಕೆ. ಆದರೆ ದಯಾನಂದ್​ ಅವರ ವಿಷಯದಲ್ಲಿ ಹಾಗೆ ಆಗಲೇ ಇಲ್ಲ. ಅವರು ಹೇಗೆ ಪೊಲೀಸ್ ಕಮಿಷನರ್ ಹುದ್ದೆ ಪಡೆದರು ಎನ್ನುವ ಕುರಿತು ವಿಧಾನಸೌಧದ ಮೊಗಸಾಲೆಯಲ್ಲಿ ಹಲವಾರು ರೀತಿಯ ಸಂಕಥನಗಳು ಇನ್ನೂ ಓಡಾಡುತ್ತಿವೆ. ಹಾಗೆ ಅನ್ನಿಸಲು ಕಾರಣವೊಂದಿದೆ. ಆದ್ದರಿಂದ ಹಿರಿಯ ಅಧಿಕಾರಿಗಳ ಅಮಾನತ್ತಿನ ಕುರಿತು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಖಂಡಿತ ತಪ್ಪು.

ಮುಖ್ಯ ಕಾರ್ಯದರ್ಶಿ ಬಗ್ಗೆ

ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ವಿಚಾರಗಳು ಹೊರಗೆ ಬರುತ್ತಿವೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶಿಷ್ಟಾಚಾರ ಇಲಾಖೆಯ ಮುಖ್ಯಸ್ಥರು. ವಿಧಾನಸೌಧದ ಎದುರು ಕಾರ್ಯಕ್ರಮವನ್ನು ನಡೆಸಬೇಕಾದರೆ ಅವರ ಒಪ್ಪಿಗೆ ಬೇಕೇ ಬೇಕು. ಇಡೀ ಘಟನಾವಳಿಯ ಹಿಂದೆ ಅವರ ನಿರ್ಧಾರಗಳು ಇರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಈಗ ಬರುತ್ತಿರುವ ಮಾಹಿತಿ ಏನಾದರೂ ನಿಜವಾಗಿದ್ದಲ್ಲಿ ಅವರ ವಿರುದ್ಧವೂ ಶಿಸ್ತಿನ ಕ್ರಮ ಆಗಬೇಕಲ್ಲವೇ?

ಇದನ್ನೂ ಓದಿ: ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ಮೃತರ ಆತ್ಮಕ್ಕೆ ನ್ಯಾಯ ನೀಡುವುದು ಹೇಗೆ?

ಆಡಳಿತ ನಡೆಸುವವರು ಭಾವನಾತ್ಮಕವಾಗಿ ನಿರ್ಧಾರ ಕೈಗೊಳ್ಳುವುದಿಲ್ಲ. ಅಧಿಕಾರಿಗಳಂತೂ ಯಾವತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲ ಮತ್ತು ಯಾರನ್ನೂ ಅತಿ ಹೆಚ್ಚು ನೆಚ್ಚಿಕೊಳ್ಳುವುದಿಲ್ಲ. ಹಿರಿಯ ಅಧಿಕಾರಿಗಳ ಅಮಾನತು ಮತ್ತು ರಾಜಕಾರಣಿಗಳ ನಿರ್ಧಾರದ ಬಗ್ಗೆ ಸಾರ್ವಜನಿಕರು ಮಾತ್ರ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಇರುತ್ತಾರೆ. ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ ವಿವೇಚನೆಯಿಂದ ಪ್ರತಿಕ್ರಿಯಿಸಿದರೆ ಮಾತ್ರ, ಪ್ರೌಢ ಅಭಿಪ್ರಾಯವೊಂದು ಸಾರ್ವಜನಿಕವಾಗಿ ರೂಪಿತವಾಗಲು ಸಾಧ್ಯ.

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್