Bengaluru Stampede: ಆರ್ಸಿಬಿ ವಿರುದ್ಧ 3ನೇ ಎಫ್ಐಆರ್, ಹೆಚ್ಚಿದ ಸಂಕಷ್ಟ
Bengaluru RCB Victory Celebrations Stampede: ಆರ್ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಈ ಪ್ರಕರಣ ಸಂಬಂಧ ಆರ್ಸಿಬಿ ವಿರುದ್ಧ ಮೂರನೇ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು, ಜೂನ್ 06: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ (Chinnaswamy stampede) ಪ್ರಕರಣ ಸಂಬಂಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ಸಿಬಿ (RCB), ಕೆಎಸ್ಸಿಎ, ಡಿಎನ್ಎ ಕಂಪನಿ ವಿರುದ್ಧ ಮೂರನೇ ಎಫ್ಐಆರ್ ದಾಖಲಾಗಿದೆ. ಗಾಯಾಳು ಬಿಕಾಂ ವಿದ್ಯಾರ್ಥಿ ಸಿ.ವೇಣು ಅವರು ನೀಡಿದ ದೂರು ಆಧಾರಸಿ, ಎಫ್ಐಆರ್ ದಾಖಲಾಗಿದೆ.
ಆರ್ಸಿಬಿಯ ಉಚಿತ ಟಿಕೆಟ್ ಜಾಹೀರಾತು ನೋಡಿ ಕ್ರೀಡಾಂಗಣಕ್ಕೆ ಬಂದಿದ್ದೆ. ಕ್ರೀಡಾಂಗಣದ ಗೇಟ್ ನಂಬರ್ 6ರ ಬಳಿ ನೂಕುನುಗ್ಗಲು ಉಂಟಾಗಿತ್ತು. ನೂಕುನುಗ್ಗಲಿನಲ್ಲಿ ಬಲಗಾಲಿನ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಇದರಿಂದ ಗಾಯಗೊಂಡು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ಎರಡು ಕೇಸ್ ದಾಖಲು
ಕಾಲ್ತುಳಿತದಲ್ಲಿ ಗಾಯಗೊಂಡ ರೋಲನ್ ಗೊಮೆಸ್ ಎಂಬುವರು ಶುಕ್ರವಾರ ಸಂಜೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆರ್ಸಿಬಿ ಫ್ರಾಂಚೈಸಿ, ಕೆಎಸ್ಸಿಎ ಮತ್ತು ಡಿಎನ್ಎ ಕಂಪನಿ ವಿರುದ್ಧ ಬಿಎನ್ಎಸ್ ಕಾಯ್ದೆ 2023 (U/s-125(a)) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಜಾಲತಾಣದಲ್ಲಿ ಆರ್ಸಿಬಿ ಪೋಸ್ಟ್ ನೋಡಿ ನನ್ನ ಗೆಳೆಯರ ಜೊತೆ ಸಂಭ್ರಮಾಚರಣೆ ವೀಕ್ಷಿಸಲು ಬಂದಿದ್ದೆ. ತೆರದ ಬಸ್ ಮೂಲಕ ಮೆರಬಣಿಗೆ ಇದೆ ಎಂದು ತಿಳಿಸಲಾಗಿತ್ತು. ಗೇಟ್ ನಂಬರ್ 17ರಲ್ಲಿ ನಾನು ಹೋಗುವಾಗ ನೂಕುನುಗ್ಗಲು ಆಯ್ತು. ಈ ವೇಳೆ ನನ್ನ ತೋಳಿಗೆ ಪೆಟ್ಟಾಗಿದೆ ಎಂದು ಗಾಯಾಳು ರೋಲನ್ ಗೊಮೆಸ್ ದೂರು ನೀಡಿದ್ದರು.
ಇದನ್ನೂ ಓದಿ: ಕಾಲ್ತುಳಿತ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, ಗುಪ್ತಚರ ಇಲಾಖೆಗೆ ಹೊಸ ಮುಖ
ಪ್ರಕರಣ ಸಂಬಂಧ ನಾಲ್ವರ ಬಂಧನ
ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಗಿರೀಶ್ ದೂರು ನೀಡಿದ್ದ ದೂರಿನ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 105, 115, 118ರಡಿ ಮೊಕದ್ದಮೆ ದಾಖಲಾಗಿತ್ತು. ಆರ್ಸಿಬಿ ಮ್ಯಾನೇಜ್ಮೆಂಟ್ A-1 ಆಗಿದ್ದರೆ, ಕಾರ್ಯಕ್ರಮ ಆಯೋಜನೆ ಮಾಡಿದ್ದ DNA ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ A-2 ಆಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ A3 ಯನ್ನಾಗಿ ಮಾಡಿ ಎಫ್ಐಆರ್ ದಾಖಲಿಸಲಾಗಿತ್ತು. ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು.







