MBA Course Career Guidance: ಕಾಸಿಗೊಂದು ಕೊಸರಿಗೊಂದು ಆಗುತ್ತಿರುವ ಎಂಬಿಎ ಕೋರ್ಸ್ ಭವಿಷ್ಯ ಏನು?

| Updated By: ಸಾಧು ಶ್ರೀನಾಥ್​

Updated on: Mar 27, 2021 | 3:32 PM

ಎಂಬಿಎ ಕೋರ್ಸ್ ಅಂದಾಕ್ಷಣ ಹುಬ್ಬೇರಿಸುತ್ತಿದ್ದ ಕಾಲ ಇತ್ತು. ಈಗಲೂ ಹುಬ್ಬೇರಿಸಬಹುದು, ಆದರೆ ಅರ್ಥ ಬೇರೆ ಇರುತ್ತದೆ. ಈಚೆಗೆ ಎಲಾನ್ ಮಸ್ಕ್ ಮಾಡಿದ ಭಾಷಣವೊಂದು ಈ ಬಗ್ಗೆ ಗಮನ ಸೆಳೆಯುವಂತಿದೆ.

MBA Course Career  Guidance: ಕಾಸಿಗೊಂದು ಕೊಸರಿಗೊಂದು ಆಗುತ್ತಿರುವ ಎಂಬಿಎ ಕೋರ್ಸ್ ಭವಿಷ್ಯ ಏನು?
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us on

ಬಿಜಿನೆಸ್ ಅಡ್ಮಿನೇಸ್ಟ್ರಷನ್ ವಿಷಯದಲ್ಲಿ ಮಾಸ್ಟರ್ಸ್, ಅಂದರೆ ಸ್ನಾತಕೋತ್ತರ ಪದವಿ ಪಡೆಯುವುದು ಜಾಬ್ ಕಾರ್ಡ್​​ನಂತೆ ಎಂದು ಭಾವಿಸುತ್ತಿದ್ದ ಸಮಯ ಇತ್ತು. ಆದರೆ ಈಗ ಹಾಗಿಲ್ಲವಾ ಅನ್ನೋದು ಪ್ರಶ್ನೆ. ಈ ಲೇಖನವನ್ನು ಓದಿ, ಆ ಬಗ್ಗೆ ನೀವೇ ನಿರ್ಧಾರ ಮಾಡಿ. ಏಕೆಂದರೆ ಎಂಬಿಎ ಕೋರ್ಸ್ ಅಂದರೆ ತನ್ನ ಹೊಳಪು ಕಳೆದುಕೊಂಡು, ಬೇಡಿಕೆ ಕುಸಿಯುತ್ತಿರುವ ಕಾಲಮಾನದಲ್ಲಿ, “ಎಂಬಿಎ ಮಾಡಿಲ್ಲದಿದ್ದರೂ ಜನರನ್ನ ಕೆಲಸಕ್ಕೆ ತೆಗೆದುಕೊಳ್ತೇನೆ, ಪದವಿ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ತೀನಿ ಅಂತಲ್ಲ,” ಎಂದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವ ಎಲಾನ್ ಮಸ್ಕ್ ಹೇಳಿರುವುದು ಚರ್ಚೆಗೆ ಕಾರಣ ಆಗಿದೆ. ಇದನ್ನು ಆತ ಹೇಳಿರುವುದು ವಾಲ್ ಸ್ಟ್ರೀಟ್ ಜರ್ನಲ್ ಆಯೋಜಿಸಿದ್ದ ಆನ್​ಲೈನ್ ಸಮಾವೇಶದಲ್ಲಿ. ಅಲ್ಲಿಗೆ ಎಂಬಿಎ (ಮಾಸ್ಟರ್ಸ್ ಇನ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್) ಕೋರ್ಸ್​ಗೆ ಆಗುತ್ತಿರುವ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಪುಣ್ಯಾತ್ಮ ಮಸ್ಕ್ ಅಷ್ಟಕ್ಕೇ ನಿಲ್ಲಿಸಿಲ್ಲ. ಎಂಬಿಎ ಮುಗಿಸಿ ಬಂದವರೇ ಸಿಕ್ಕಾಪಟ್ಟೆ ಜನ ಕಂಪೆನಿಗಳನ್ನು ನಡೆಸುತ್ತಿದ್ದಾರೆ. ಈಗಿನ ಅಮೆರಿಕನ್ ಕಾರ್ಪೊರೇಟ್​ನ ದುಃಸ್ಥಿತಿಗೆ ಕೂಡ ಅದೇ ಕಾರಣ ಎಂದಿದ್ದಾರೆ. ನಿಮಗೆ 2008ನೇ ಇಸವಿಯ ಲೆಹ್ಮನ್ ಬ್ರದರ್ಸ್ ಕುಸಿತ ನೆನಪಿದೆ ಅನ್ನೋದಾದರೆ, ಈಗಿನ ಎಂಬಿಎ ಕೋರ್ಸ್ ಶಿಕ್ಷಣದ ಬಗ್ಗೆ ಯಾಕಿಷ್ಟು ಚರ್ಚೆ ಎಂಬುದು ಇನ್ನಷ್ಟು ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಸೊಗಸಾಗಿದ್ದ ವಲಯವನ್ನು ಹಳ್ಳ ಹಿಡಿಸಿದವರೇ ಈ ಎಂಬಿಎಗಳು ಎಂಬುದು ಆಳವಾಗಿ ಬೇರೂರಿಬಿಟ್ಟಿದೆ.

ಶ್ರೀಕಾಂತ್ ದಾತಾರ್ ಅವರ ರೀಥಿಂಕಿಂಗ್ ದ ಎಂಬಿಎ ಪುಸ್ತಕ
ಶ್ರೀಕಾಂತ್ ದಾತಾರ್ ಎಂಬುವರು, ರೀಥಿಂಕಿಂಗ್ ದ ಎಂಬಿಎ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಕಂಪೆನಿಗಳು ಮತ್ತು ನೇಮಕಾತಿ, ಅನುಭವಿ ಎಂಬಿಎ ಪದವೀಧರರು, ನೀತಿ ನಿರೂಪಕರು ಮತ್ತು ಎಂಬಿಎ ಸ್ಕೂಲ್​​ಗಳಲ್ಲಿ ಪಠ್ಯಕ್ರಮ ಮತ್ತು ಪಾಠ ಮಾಡುವವರು ಇತ್ಯಾದಿ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ಮಾಡುತ್ತಾರೆ. ಎಂಬಿಎ ಶಿಕ್ಷಣದಲ್ಲಿ ತುರ್ತಾಗಿ ಮಾಡಬೇಕಾದ ಮಾರ್ಪಾಟುಗಳೇನು ಎಂಬ ಬಗ್ಗೆ ಕೂಡ ಚರ್ಚೆ ಮಾಡಿದ್ದಾರೆ. ಜಾಗತಿಕ ಮಟ್ಟದ ಎಂಬಿಎ ಶಿಕ್ಷಣದ ಕಾರ್ಯಸೂಚಿ ಏನಾಗಬೇಕು ಎಂಬುದನ್ನೂ ಪ್ರಸ್ತಾಪಿಸಿದ್ದಾರೆ.

ಈ ಪುಸ್ತಕ ಬಂದ ಮೇಲೆ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ಸೇರಿದಂತೆ ಹಲವು ಬಿಜಿನೆಸ್ ಸ್ಕೂಲ್​ಗಳು ನೀತಿಸಂಹಿತೆಗಳನ್ನು ಅಳವಡಿಸಿಕೊಂಡಿದೆ. ಉದ್ಯಮ ನಾಯಕರಾಗಿ ಸಮಾಜದಲ್ಲಿ ನಮ್ಮ ಪಾತ್ರವನ್ನು ಗುರುತಿಸುತ್ತೇವೆ ಮತ್ತು ನಾನು ಕೈಗೊಳ್ಳುವ ಕೆಲಸಗಳಿಗೆ ಪ್ರತಿಸ್ಪರ್ಧಿಗಳು ಹಾಗೂ ಸಮಾಜಕ್ಕೆ ಉತ್ತರದಾಯಿ ಆಗಿರುತ್ತೇನೆ ಎಂಬ ಪ್ರಮಾಣವನ್ನು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ಪದವಿ ಪೂರ್ಣಗೊಳಿಸಿದ ಮೇಲೆ ಸ್ವೀಕರಿಸಬೇಕಿದೆ. ಪಶ್ಚಿಮ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ ಸಮಸ್ಯೆ ಸ್ವಲ್ಪ ಭಿನ್ನ. ನಮ್ಮಲ್ಲಿನ ಎರಡು ವರ್ಷದ ಎಂಬಿಎ ಕೋರ್ಸ್​ಗೆ ಸೇರುವವರು ಬಹುತೇಕ ಹೊಸಬರು ಮತ್ತು ಯಾವುದೇ ಉದ್ಯೋಗ ಅನುಭವ ಇಲ್ಲದವರು. ಕೆಲಸ ಹುಡುಕುವುದನ್ನು ಮುಂದೂಡಬಹುದಲ್ಲಾ ಅಂತ ಎಂಬಿಎ ಮಾಡುವವರು ಹೆಚ್ಚು.

ಪಾಸ್​ಪೋರ್ಟ್​ನಲ್ಲಿ ಠಸ್ಸೆ ಬಿದ್ದರೆ ಮದುವೆ ಮಾರ್ಕೆಟ್​ನಲ್ಲಿ ಬೇಡಿಕೆ
ಕೆಲವು ಸಮುದಾಯದಲ್ಲಿ ಎಂಥ ಭಾವನೆ ಇದೆ ಅಂದರೆ, ಪಾಸ್​ಪೋರ್ಟ್​ನಲ್ಲಿ ಒಂದು ಠಸ್ಸೆ ಬಿದ್ದರೆ ಮದುವೆ ಮಾರ್ಕೆಟ್​ನಲ್ಲಿ ಭರ್ಜರಿ ಬೇಡಿಕೆ ಇರುತ್ತದೆ ಎಂಬ ಲೆಕ್ಕಾಚಾರ ಅವರದು. ಇದೇ ಕಾರಣಕ್ಕೆ ಭಾರತದಲ್ಲಿ 4000 ಬಿಜಿನೆಸ್ ಸ್ಕೂಲ್​ಗಳಿದ್ದು, ಸುಮಾರಾದ ಗುಣಮಟ್ಟದ ಅಪಾರ ಸಂಖ್ಯೆಯ ಎಂಬಿಎ ಪದವೀಧರರು ಹೊರಬರುತ್ತಿದ್ದಾರೆ.

ವಿಶ್ಲೇಷಕರು ಹೇಳುವ ಪ್ರಕಾರ, ಎಂಬಿಎ ಮಾಡಿ ಮುಗಿಸಿದವರು ತಕ್ಷಣವೇ ಒಂದು ಕೆಲಸ, ಸಂಬಳ ಅಂತ ಯೋಚಿಸುವುದಕ್ಕೆ ಆರಂಭಿಸುತ್ತಾರೆ. ಅದರ ಬದಲಿಗೆ ಕೆಲ ಸಮಯ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ತಾಳ್ಮೆಯೋ ಅಥವಾ ತಾವಿನ್ನೂ ಹೆಚ್ಚು ಕಲಿಯಬೇಕು ಎಂಬ ತಾಳ್ಮೆಯೋ ಇರುವುದಿಲ್ಲ ಎನ್ನುತ್ತಾರೆ. ನಾಲ್ಕು ದಶಕಗಳಿಂದ ಇದೇ ಸ್ಥಿತಿ ಇದೆ. ಆದರೆ ಕಳೆದ ಹತ್ತು ವರ್ಷದಲ್ಲಿ ದೊಡ್ಡ ಧ್ವನಿಯಲ್ಲಿ ಕೇಳಿಸುತ್ತಿದೆ.

ಇನ್ನು ಎಂಬಿಎ ಪೂರ್ಣಗೊಳಿಸಿದವರಲ್ಲಿ ಬಹುಪಾಲು ಜನರಲ್ಲಿ ಹೆಚ್ಚಿನ ಸಂಬಳದ ಕೆಲಸಕ್ಕೆ ಹೋಗಬೇಕು ಅನ್ನೋದು ಇರುತ್ತದೆಯೇ ವಿನಾ ಅದೆಂಥ ಉದ್ಯೋಗ ಎಂಬ ಕಡೆಗೆ ಲಕ್ಷ್ಯ ಇರುವುದಿಲ್ಲ. ಅದಕ್ಕೆ ಕಾರಣ ಏನೆಂದರೆ, ಒಂದು ಅಂದಾಜಿನ ಪ್ರಕಾರ ಎಂಬಿಎ ಶಿಕ್ಷಣಕ್ಕಾಗಿ ಶೇಕಡಾ 50ರಷ್ಟು ಮಂದಿ ಸಾಲ ಪಡೆದುಕೊಂಡಿರುತ್ತಾರೆ. ಅದನ್ನು ತೀರಿಸುವ ಒತ್ತಡ ಇರುತ್ತದೆ.

ಆದರೆ ಭವಿಷ್ಯ ಹಾಗೂ ತಮ್ಮ ಆಯ್ಕೆಯ ವಿಚಾರದಲ್ಲಿ ಸ್ಪಷ್ಟತೆ ಇರುವಂಥವರು ಹೆಚ್ಚಿನ ಪಕ್ಷ ಯಶಸ್ಸು ಪಡೆದುಕೊಳ್ಳುತ್ತಾರೆ. ಕ್ಯಾಂಪಸ್ ಇಂಟರ್​ವ್ಯೂಗಳಲ್ಲಿ ಆಯ್ಕೆ ಆಗಲಿಲ್ಲ ಅಥವಾ ತಾವು ಅಂದುಕೊಂಡಂಥ ಕಂಪೆನಿ ಬರಲಿಲ್ಲ ಎಂದು ರಾಜೀ ಮಾಡಿಕೊಂಡು, ಸಿಕ್ಕ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವವರೇ ಹೆಚ್ಚು.

ಬೇರೆ ಆಯ್ಕೆಗಳು ಏನಾದರೂ ಇವೆಯಾ?
ಮತ್ತೆ ಎಲಾನ್ ಮಸ್ಕ್ ಹೇಳಿದ್ದ ಮಾತಿಗೆ ಬರುವುದಾದರೆ, ಕಂಪೆನಿಗಳಿಗೆ ಬೇರೆ ಆಯ್ಕೆಗಳು ಏನಾದರೂ ಇವೆಯಾ? ಏಕೆಂದರೆ ಹೀಗೆ ಹೇಳುತ್ತಿರುವುದರಲ್ಲಿ ಎಲಾನ್ ಮಸ್ಕ್ ಒಬ್ಬರೇ ಅಂತಲ್ಲ. ಜೋಶ್ ಕಾಫ್​ಮನ್ ಎಂಬ ಎಂಬಿಎ ಪದವೀಧರ ಅಲ್ಲದ ವ್ಯಕ್ತಿಯೊಬ್ಬರು ಪ್ರಾಕ್ಟರ್ ಅಂಡ್ ಗ್ಯಾಂಬಲ್​ನಿಂದ ಆಯ್ಕೆ ಆದವರು. ಅವರ ಉದ್ದೇಶವೇ ಎಂಬಿಎ ಮಾಡಬೇಕು ಅಂದುಕೊಂಡವರಿಗೆ ಪರ್ಯಾಯ ಮಾರ್ಗಗಳನ್ನು ತಿಳಿಯುವುದಕ್ಕೆ ಸಹಾಯ ಮಾಡುವುದು.

ಅವರ ಬೆಸ್ಟ್ ಸೆಲ್ಲಿಂಗ್ ಪುಸ್ತಕ ದ ಪರ್ಸನಲ್ ಎಂಬಿಎ ಎಂಬುದರಲ್ಲಿ, ಒಂದು ಸಂಪುಟದಲ್ಲಿ ನಿಮಗೆ ವಿಶ್ವ ದರ್ಜೆಯ ಬಿಜಿನೆಸ್ ಎಜುಕೇಷನ್ ನೀಡುತ್ತೇನೆ ಎಂಬ ಮಾತನ್ನು ಹೇಳುತ್ತಾರೆ. ಕಾಫ್​ಮನ್ ಪ್ರಕಾರ, ಅಮೆರಿಕದಲ್ಲಿ ಎಂಬಿಎ ಶಿಕ್ಷಣ ತುಂಬ ದುಬಾರಿ. ನಿವ್ವಳ ಲಾಭ ತುಂಬ ಮಹತ್ವದ್ದಲ್ಲ. ಏಕೆಂದರೆ ಅಷ್ಟೇನೂ ಹೆಸರಿಲ್ಲದ ವಿಶ್ವವಿದ್ಯಾಲಯಗಳಲ್ಲಿ ಎಂಬಿಎ ಮಾಡಿದವರಿಗೆ ಹೆಚ್ಚಿನ ವೇತನವಾಗಲಿ, ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಾಗಲಿ ಸಿಗಲ್ಲ.

ಭಾರತದಲ್ಲೂ ಸಹ ಎಂಬಿಎ ಬಗ್ಗೆ ಪುನರಾವಲೋಕನ ಮಾಡಬೇಕಾಗಿದೆ. ಏಕೆಂದರೆ ಭಾರತ ಹಾಗೂ ಅಮೆರಿಕ ಬಿಜಿನೆಸ್ ಸ್ಕೂಲ್​ಗಳ ಮಧ್ಯೆ ಮುಖ್ಯ ವ್ಯತ್ಯಾಸ ಏನೆಂದರೆ, ಭಾರತದಲ್ಲಿ ಪದವಿಪೂರ್ವ ಹಂತದ ವಿದ್ಯಾರ್ಥಿಗಳ ಸ್ಥಿತಿ ಮತ್ತೂ ಚಿಂತಾಜನಕವಾಗಿದೆ. ಉದಾರ ಶಿಕ್ಷಣ ನೀತಿ ಎಂಬುದೇ ಬಹುತೇಕ ನಾಪತ್ತೆ. ಆದರೆ ಇಲ್ಲೂ ಕೂಡ ಅದೇ ಪ್ರಶ್ನೆ. ಎಂಬಿಎ ಶಿಕ್ಷಣಕ್ಕೆ ಯಾಕಿಷ್ಟು ಹಣ ಪಾವತಿಸಬೇಕು? ಅದು ಎರಡು ವರ್ಷ ಯಾವುದೇ ಕೆಲಸಕ್ಕೆ ಹೋಗದೆ, ದುಡಿಮೆ ಇಲ್ಲದೆ ಏಕಾಗಿ ಮಾಡಬೇಕು ಎಂಬ ಪ್ರಶ್ನೆ ಎತ್ತುತ್ತಾರೆ ತಜ್ಞರು.

ಈಚೆಗೆ ಉತ್ತಮ ಬಿ- ಸ್ಕೂಲ್​ಗಳಿಂದಲೇ ಎಕ್ಸ್​ಕ್ಯೂಟಿವ್ ಕೋರ್ಸ್​ಗಳನ್ನು ಆಫರ್ ಮಾಡಲಾಗುತ್ತಿದೆ. ವಾರಾಂತ್ಯದ ತರಗತಿಗಳನ್ನು (ಇ-ಕ್ಲಾಸ್) ಕೇಳಿಸಿಕೊಳ್ಳಬಹುದು. ಒಂದು ವೇಳೆ ಉತ್ತಮ ಬಿ- ಸ್ಕೂಲ್​ಗಳು ಈ ದೂರಶಿಕ್ಷಣ ಎಂಬಿಎ ಕೋರ್ಸ್ ಅನ್ನು ಗಂಭೀರವಾಗಿ ತೆಗೆದುಕೊಂಡರೆ ಕಡಿಮೆ ಶ್ರೇಯಾಂಕದ ಬಿ- ಸ್ಕೂಲ್​ಗಳನ್ನೇ ಹಿಂದಿಕ್ಕುವುದರಲ್ಲಿ ಅನುಮಾನವಿಲ್ಲ.

ಇನ್ನು ವಿಶೇಷ ವಿಷಯ ಪರಿಣತಿ ಗಳಿಸವುದಕ್ಕೆ ಎಂಬಿಎ ಕೋರ್ಸ್​​ಗಳಿವೆ. ಐಐಎಂ ಕಲ್ಕತ್ತಾ ಹಾಗೂ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್​​ಸ್ಟಿಟ್ಯೂಟ್ ಆಫ್ ಕೋಲ್ಕತ್ತಾ ಮತ್ತು ಐಐಟಿ ಖರಗ್​ಪುರ್​ನಿಂದ ಬಿಜಿನೆಸ್ ಅನಲಿಟಕ್ಸ್ ಕೋರ್ಸ್ ಶುರುವಾಗಿದೆ. ಈ ವಿಷಯಗಳಿಗೆ ಮಾಮೂಲಿ ಎಂಬಿಎಗಳಿಗಿಂತ ಹೆಚ್ಚು ಬೇಡಿಕೆ ಇರುತ್ತದೆ. ಭಾರತದ ಕಾರ್ಪೊರೇಟ್ ವಲಯಗಳಿಗೆ ನಿರ್ದಿಷ್ಟವಾಗಿ ಬೇಕಾಗುವ- ಗುಣಮಟ್ಟದಲ್ಲಿ ಯಾವುದೇ ರಾಜೀ ಆಗದ ಇಂಥ ಟೇಲರ್ ಮೇಡ್ ಕೋರ್ಸ್​ಗಳಿಗೆ ಬೇಡಿಕೆ ಹೆಚ್ಚಾಗಲಿದೆ.

ಇಷ್ಟನ್ನೂ ಓದಿದ ಮೇಲೆ, ಭಾರತದಲ್ಲಿ ಎಂಬಿಎ ಕೋರ್ಸ್​ನ ಹೊಳಪು ಕಡಿಮೆ ಆಗುತ್ತಾ ಎಂಬ ಪ್ರಶ್ನೆ ಮತ್ತೆ ಸುಳಿದಾಡುತ್ತದೆ. ಕಾರ್ಪೊರೇಟ್ ವಲಯಕ್ಕೆ ಬೇಕು ಅನ್ನೋ ಕಾರಣಕ್ಕೆ ಎಂಬಿಎಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಬಿಜಿನೆಸ್ ಸ್ಕೂಲ್​ಗಳು ನಿರ್ದಿಷ್ಟ ವಲಯಗಳ ಮೇಲೆ ಗಮನ ಕೇಂದ್ರೀಕರಿಸಿವೆ. ನಗರಗಳು ಮತ್ತು ಪಟ್ಟಣಗಳಲ್ಲಿ ಕೈಗೆಟುಕುವ ದರದಲ್ಲಿ ಶಿಕ್ಷಣ ನೀಡುವ ಮೂಲಕ ಹೊಸ ಬಗೆಯ ವಿಷಯಗಳು ಕಲಿಸುವುದಕ್ಕೆ ಪ್ರಾಮುಖ್ಯ ನೀಡಿದೆ. ಹಣಕಾಸು ಸೇವೆ, ಮಾಹಿತಿ ತಂತ್ರಜ್ಞಾನ, ರೀಟೇಲ್/ಹಾಸ್ಪಿಟಾಲಿಟಿ, ಹೆಲ್ತ್​ಕೇರ್, ಮಾರ್ಕೆಟಿಂಗ್ ಕಮ್ಯುನಿಕೇಷನ್, ಉದ್ಯಮಶೀಲತೆ ಮತ್ತಿತರ ವಿಷಯಗಳಲ್ಲಿ ಕೋರ್ಸ್​ಗಳು ಶುರು ಮಾಬಹುದ. ಈಗಾಗಲೇ ಕೆಲಸ ಮಾಡುತ್ತಿರುವರು ಅವುಗಳಲ್ಲಿ ಭಾಗವಹಿಸಬಹುದು.

(ಮಾಹಿತಿ ಮೂಲ: ಸಿಟಿಜನ್ ಮ್ಯಾಟರ್ಸ್)

ಇದನ್ನೂ ಓದಿ: Google career certificate courses: ಭಾರತದ ಉದ್ಯೋಗ ಮಾರುಕಟ್ಟೆಯ ಆಟವೇ ಬದಲಿಸುತ್ತಾ ಗೂಗಲ್?