ನವದೆಹಲಿ: NEET PG 2023 ಪರೀಕ್ಷೆ ಮುಂದೂಡಿಕೆ ಅರ್ಜಿ ವಿಚಾರಣಡೆ ನಡೆಸಿದ ಸುಪ್ರೀಂ ಕೋರ್ಟ್, ಯಾವುದೇ ಆದೇಶ ನೀಡದೇ ಸೋಮವಾರಕ್ಕೆ (ಫೆಬ್ರವರಿ 27) ಈ ವಿಚಾರಣೆಯನ್ನು ಮುಂದೂಡಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, NEET PG 2023 ಪರೀಕ್ಷೆಯನ್ನು ಮುಂದೂಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದರು. ಆದರೆ ಪರೀಕ್ಷೆಯನ್ನು ಮುಂದೂಡುವುಡು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟನೆ ನೀಡಿದ್ದರು. ಅಂತಿಮವಾಗಿ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಮುಂದಿನ ವಿಚಾರಣೆಯನ್ನು ಫೆ. 27 ಮುಂದೂಡಿದೆ. ಈ ಹಿನ್ನೆಲೆಯಲ್ಲಿ NEET PG ಆಕಾಂಕ್ಷಿಗಳು ಸೋಮವಾರದವರೆಗೆ ಕಾಯಬೇಕಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ಲೋಕಸಭೆಗೆ NEET-PG ಪರೀಕ್ಷೆ 2023 ಮಾರ್ಚ್ 05, 2023 ರಂದು ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಹೇಳಿದ್ದರು. “ಪರೀಕ್ಷಾ ದಿನಾಂಕ ಮಾರ್ಚ್ 5 ಎಂದು ಐದು ತಿಂಗಳುಗಳ ಹಿಂದೆಯೇ ಘೋಷಿಸಲಾಗಿದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ.” ಎಂದು ತಿಳಿಸಿದ್ದರು.
ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮುಂದೂಡುವಂತೆ NEET ಪಿಜಿ ಆಕಾಂಕ್ಷಿಗಳು ಮತ್ತು ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (ಎಫ್‌ಎಐಎಂಎ) ನಿಯೋಗವು ಪ್ರತಿಭಟನೆ ನಡೆಸುತ್ತಿದೆ. NEET PG 2023 ಮತ್ತು ಕೌನ್ಸೆಲಿಂಗ್ ದಿನಾಂಕದ ನಡುವಿನ ಅಂತರವನ್ನು ಕಡಿಮೆ ಮಾಡಲು ಪರೀಕ್ಷೆಯನ್ನು ಮುಂದೂಡಬೇಕೆಂದು ಆಕಾಂಕ್ಷಿಗಳು ಬಯಸುತ್ತಿದ್ದಾರೆ.
ಮಾರ್ಚ್‌ನಲ್ಲಿ ಪ್ರವೇಶ ಪರೀಕ್ಷೆ ನಡೆಸಿ ಆಗಸ್ಟ್‌ನಲ್ಲಿ ಕೌನ್ಸೆಲಿಂಗ್ ನಡೆಸಿದರೆ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಸಮಯದಲ್ಲಿ ಸರಿಯಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದು ನೀಟ್ ಪಿಜಿ ಆಕಾಂಕ್ಷಿಗಳು ಹೇಳಿಕೊಳ್ಳುತ್ತಿದ್ದಾರೆ. ಪರೀಕ್ಷೆಯನ್ನು ಮುಂದೂಡಿದರೆ, ಆಕಾಂಕ್ಷಿಗಳಿಗೆ ಅಧ್ಯಯನ ಮಾಡಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೆಚ್ಚಿನ ಸಮಯ ಸಿಗುತ್ತದೆ.
ಇದನ್ನೂ ಓದಿ: NEP 2020 ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್ ಶಾಲೆ ಮರುನಾಮಕರಣದೊಂದಿಗೆ ಪುನರಾರಂಭ
ಪರೀಕ್ಷೆಗೆ ಹಾಜರಾಗಲಿರುವ ನೀಟ್-ಪಿಜಿ ಆಕಾಂಕ್ಷಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮುಂದೂಡಲು ಮತ್ತೊಂದು ಕಾರಣ, ಮಾರ್ಚ್ 1 ರಂದು NEET MDS ಪರೀಕ್ಷೆ ನಡೆಸಲಾಗುತ್ತಿದೆ ಹಾಗು ಮಾರ್ಚ್ 5 ರಂದು NEET PG ಪರೀಕ್ಷೆ ನಿಗದಿಪಡಿಸಲಾಗಿದೆ. ಒಂದರ ನಂತರ ಒಂದು ಪರೀಕ್ಷೆ ಇರುವುದರಿಂದ ಅಭ್ಯರ್ಥಿಗಳು ಚಿಂತೆಗೀಡಾಗಿದ್ದಾರೆ.
Published On - 5:39 pm, Fri, 24 February 23