ಅಕ್ಷರಗಳನ್ನೂ ಮಾತನಾಡಿಸುವ ಬಾದಲ್ ನಂಜುಂಡಸ್ವಾಮಿ ಕೈಚಳಕಕ್ಕೆ ಪ್ರಧಾನಿ ಫಿದಾ; ಕನ್ನಡ ಒಂದು ಸುಂದರ ಭಾಷೆ ಎಂದ ನರೇಂದ್ರ ಮೋದಿ
ಬಾದಲ್ ನಂಜುಂಡಸ್ವಾಮಿ, ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಸರಿಹೊಂದುವ ಚಿತ್ರಗಳನ್ನು ಆಯಾ ಅಕ್ಷರದಲ್ಲಿ ಕೈಬರಹದಲ್ಲೇ ಬಿಡಿಸಿದ್ದರು. ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ಸೃಜನಾತ್ಮಕ ಕಲೆ ಇದೀಗ ವೈರಲ್ ಪಡೆದು ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದೆ.
ಬೆಂಗಳೂರು: ಕನ್ನಡ ಕಲಿಯುವ ಮಕ್ಕಳ ಅನುಕೂಲಕ್ಕಾಗಿ ಕಲೆಗಾರ ಬಾದಲ್ ನಂಡಜುಂಡಸ್ವಾಮಿ (Baadal Nanjunadaswamy) ಅವರು ಕನ್ನಡ ವರ್ಣಮಾಲೆಗಳ ಪ್ರತಿ ಅಕ್ಷರಕ್ಕೆ ಹೊಂದಿಕೆಯಾಗುವ ಚಿತ್ರಗಳನ್ನು ಜೋಡಿಸಿ ರಚಿಸಿದ ವಿಶೇಷ ಕಲೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Photo) ಪಡೆದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಗಮನಸೆಳೆದಿದೆ. ಕಿರಣ್ ಕುಮಾರ್ ಎಸ್ ಎಂಬವರು ಹಂಚಿಕೊಂಡಿದ್ದ ಟ್ವೀಟ್ಗೆ ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ (PM Modi Tweet On Kannada alphabets), “ಭಾಷೆ ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡಲು ಒಂದು ಸೃಜನಶೀಲ ಮಾರ್ಗ, ಸುಂದರವಾದ ಕನ್ನಡ ಭಾಷೆ” ಎಂದು ಬಣ್ಣಿಸಿದ್ದಾರೆ.
ಇನ್ನು, ತಮ್ಮ ಕಲೆಯನ್ನು ಭಾರತದ ಪ್ರಧಾನಿ ಗುರುತಿಸಿದ ಬಗ್ಗೆ ನಂಜುಂಡಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಕ್ಕಳಿಗಾಗಿ ಕ್ಯಾಲಿಗ್ರಫಿ ಮೂಲಕ ಕನ್ನಡ ವರ್ಣಮಾಲೆಯನ್ನು ಸೃಜನಾತ್ಮಕವಾಗಿ ಕಲಿಸುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಶಿಕ್ಷಕಿ ಪುಷ್ಪಮ್ಮ ಎಂಬವರ ಮನವಿ ಮೇರೆಗೆ ಈ ಕಲೆ ರಚಿಸಿದ್ದೆ. ಇದೀಗ ನನ್ನ ಕಲೆಯನ್ನು ಪ್ರಧಾನಿಯವರು ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿ, ಅಷ್ಟೇ ಸಂತೋಷವನ್ನು ನೀಡುತ್ತಿದೆ, ಕಲೆಯನ್ನು ಗುರುತಿಸಿರುವುದಕ್ಕೆ ಪ್ರಧಾನಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಟಿವಿ9 ಜೊತೆ ಮಾಹಿತಿ ಹಂಚಿಕೊಂಡರು.
A creative way to make learning languages a fun activity, in this case the beautiful Kannada language. https://t.co/OC8XQxh8Sa
— Narendra Modi (@narendramodi) February 6, 2023
ಒಂದು ಕಲೆ ಸಮಾಜದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದಕ್ಕೆ ನಂಜುಂಡಸ್ವಾಮಿ ರಚಿಸಿರುವ ಕಲೆ ನಿದರ್ಶನವಾಗಿ ನಿಲ್ಲುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಹೀಗಾಗಿ ಕಲೆ ಮತ್ತು ಕಲೆಗಾರರನ್ನು ನೋಡುವ ಸಮಾಜದ ಮನಸ್ಥಿತಿ ಇನ್ನಷ್ಟು ಬದಲಾಗಬೇಕಿದೆ. ಕಲೆಯನ್ನು ಫ್ಯಾಶನ್ ಆಗಿ ಮಾಡಲಾಗುತ್ತಿದೆ. ಇದರ ಹೊರತಾಗಿ ನಂಜುಂಡಸ್ವಾಮಿ ಅವರು ರಚಿಸಿದ ಈ ಕಲೆ ಸಮಾಜಕ್ಕೊಂದು ಪಾಠವಾಗಿ ನಿಂತಿದೆ.
ಇದನ್ನೂ ಓದಿ: COMEDK Exam Date 2023: ಕಾಮೆಡ್-ಕೆ UGET ಅಪ್ಲಿಕೇಶನ್ ಫೆಬ್ರವರಿ 15 ರಿಂದ ಲಭ್ಯ, ಪರೀಕ್ಷಾ ವೇಳಾಪಟ್ಟಿ ಹೀಗಿದೆ
‘ಅ’ ಅಕ್ಷರದೊಳಗೆ ಅಳಿಲನ್ನು ಕೂರಿಸಿ, ‘ಆ’ದಲ್ಲಿ ಆನೆ ಸೊಂಡಿಲು ಮೂಡಿಸಿ, ‘ಇ’ಯಲ್ಲಿ ಇಲಿಯನ್ನಿಟ್ಟು, ‘ಈ’ಯಲ್ಲಿ ಈರುಳಿಯನ್ನೇ ಬೆಳೆಸಿರುವ ಬಾದಲ್ ನಂಜುಂಡಸ್ವಾಮಿ, ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಸರಿಹೊಂದುವ ಚಿತ್ರಗಳನ್ನು ಆಯಾ ಅಕ್ಷರದಲ್ಲಿ ಕೈಬರಹದಲ್ಲೇ ಬಿಡಿಸಿದ್ದಾರೆ. ಇದು ಸಣ್ಣ ಮಕ್ಕಳ ಗಮನವನ್ನು ಅಕ್ಷರಗಳ ಮೇಲೆ ಕೇಂದ್ರೀಕರಿಸಲು ಹಾಗೂ ಅಕ್ಷರಗಳನ್ನು ಗ್ರಹಿಸಲು ನೆರವಾಗಲಿದೆ.
ಕಳೆದ 20 ವರ್ಷಗಳಿಂದ ಕ್ಯಾಲಿಗ್ರಫಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅನೇಕ ಕಲೆಯನ್ನು ಬಿಡಿಸಿರುವ ನಂಜುಂಡಸ್ವಾಮಿ, ಇಂತಹ ಪ್ರಯತ್ನ ಮಾಡಿದ್ದು ಇದೇ ಮೊದಲಾಗಿತ್ತು. ಇದಕ್ಕೂ ಮುನ್ನ, ಗುಂಡಿ ಬಿದ್ದ ರಸ್ತೆಯಲ್ಲಿ ಮೊಸಳೆ, ಬಾಯ್ತೆರೆದ ಮೋರಿಯಲ್ಲಿ ರಕ್ಕಸನ ಚಿತ್ರ, ಮುರಿದು ನಿಂತ ಸೂಚನಾ ಫಲಕಕ್ಕೊಂದು ಬ್ಯಾಂಡೇಜು, ರಸ್ತೆಯ ನಡುವಲ್ಲಿ 3ಡಿ ಕೊರೊನಾ ವೈರಸ್, ಹೀಗೆ ಯಾವುದೇ ವಿಚಾರದ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಕಲೆಯ ಮೂಲಕ ಪ್ರಸ್ತುತ ಪಡಿಸುವುದರಲ್ಲಿ ಬಾದಲ್ ನಂಜುಂಡಸ್ವಾಮಿ ಸೈ ಎನಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Tue, 7 February 23