
ಬೆಂಗಳೂರು, ಅಕ್ಟೋಬರ್ 07: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಜೆಟ್ ಹಾಗೂ ಮಧ್ಯಮ ವರ್ಗದ ಖಾಸಗಿ ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಒಂದು ಕಾಲದಲ್ಲಿ ಪೋಷಕರ ಮೊದಲ ಆಯ್ಕೆಯಾಗಿದ್ದ ಖಾಸಗಿ ಶಾಲೆಗಳಲ್ಲಿ ಇದೀಗ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ನಿರ್ವಹಣೆ ಸಾಧ್ಯವಾಗದೆ ನೂರಾರು ಶಾಲೆಗಳು ಮಾರಾಟದ ಹಂತಕ್ಕೆ ಬಂದು ನಿಂತಿವೆ.
ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಟ ಶುರುವಾಗಿದೆ. ಮಕ್ಕಳ ದಾಖಲಾತಿ ಕುಸಿತದ ಬೆನ್ನಲ್ಲೇ ನೂರಾರು ಖಾಸಗಿ ಶಾಲೆಗಳು ಮಾರಾಟಕ್ಕೆ ಮುಂದಾಗಿವೆ. ಕಾರ್ಪೊರೇಟ್ ಶಾಲೆಗಳ ಜೊತೆ ಸ್ಪರ್ಧಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, ಒಂದೆಡೆ ವಿದ್ಯಾರ್ಥಿಗಳ ಸಂಖ್ಯೆ ಕೂಡ ಇಳಿಕೆ ಆಗಿದೆ. ಮತ್ತೊಂದೆಡೆ ಶಾಲೆಗಳ ನಿರ್ವಹಣಾ ವೆಚ್ಚ ಏರಿಕೆ ಸೇರಿದಂತೆ ಸಿಬ್ಬಂದಿ ವೇತನ, ನೀರು, ವಿದ್ಯುತ್ ವೆಚ್ಚ ಭರಿಸುವುದು ಸವಾಲಾಗಿದೆ. ಹೆಚ್ಚುತ್ತಿರುವ ಖರ್ಚು, ವೆಚ್ಚದಿಂದ ಶಾಲಾ ಕಟ್ಟಡಗಳನ್ನು ಮಾರಾಟ ಮಾಡಲು ಮಾಲೀಕರ ಮುಂದಾಗಿದ್ದಾರೆ.
ಇದನ್ನೂ ಓದಿ: ದಸರಾ ರಜೆಯಲ್ಲೂ ಖಾಸಗಿ ಶಾಲೆಗಳ ಕಳ್ಳಾಟ: ಸಿಡಿದೆದ್ದ ಹಿಂದೂಪರ ಸಂಘಟನೆಗಳು
ಇತ್ತೀಚಿನ ದಿನಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಕೇವಲ ಬೆಂಗಳೂರು ಅಥವಾ ಕರ್ನಾಟಕ ಅಷ್ಟೇ ಅಲ್ಲ ದೇಶದ 23 ರಾಜ್ಯಗಳ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿತ ಕಂಡಿದೆ. ಇದರಿಂದ ಮಧ್ಯಮ ವರ್ಗದ ಶಾಲೆಗಳನ್ನ ನಡೆಸಲು ಆಗದೇ ಮುಚ್ಚುವ ಹಂತ ತಲುಪಿವೆ. ಇನ್ನೂ ಇದಕ್ಕೆ ಕಾರಣ ಮಕ್ಕಳು ಹುಟ್ಟುವ ಸಂಖ್ಯೆ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ನಾನಾ ಕಾರಣಗಳಿಂದ ಮಕ್ಕಳ ಜನನ ಪ್ರಮಾಣ ಕುಸಿಯುತ್ತಿರುವುದು ಹಾಗೂ ಹೆಚ್ಚಿನ ಸಂಖ್ಯೆಗಳಲ್ಲಿ ಶಾಲೆಗಳನ್ನ ತೆರೆಯುತ್ತಿರುವುದು. ನಿರಂತರ ದಾಖಲಾತಿ ಕುಸಿತದಿಂದ ಮಧ್ಯಮ ವರ್ಗದ ಬಜೆಟ್ ಶಾಲೆಗಳಿಗೆ ಹೊಡೆತ ಬಿದಿದ್ದೆ. ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳಲ್ಲೂ ದಾಖಲಾತಿ ಕುಸಿತದ ಪರಿಣಾಮ ಶಾಲೆಗಳ ಮಾರಾಟಕ್ಕೆ ಮುಂದಾಗಿವೆ.
ಕಳೆದ ಬಾರಿ ಅಂದರೆ 2025-26ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಕೆಲ ಶಾಲೆಗಳಲ್ಲಿ ಶೇ 40ರಷ್ಡು ದಾಖಲಾತಿ ಕುಸಿದಿದೆ. ಮಕ್ಕಳು ಶಾಲೆಗೆ ಬಾರದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಶಾಲೆ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ಹಣಕಾಸಿನ ಸಮಸ್ಯೆ ಎದುರಾಗಿರುವುದರಿಂದ ಮಾಲೀಕರು ಶಾಲೆಗಳನ್ನ ಬಂದ್ ಮಾಡಲು ಮುಂದಾಗುತ್ತಿದ್ದಾರೆ.
ಈ ಕುರಿತಾಗಿ ಪೋಷಕರಾದ ವಿದ್ಯಾ ಅವರು ಮಾತನಾಡಿದ್ದು, ‘ಹಲವು ಕಾರಣದಿಂದ ಮಕ್ಕಳು ಹುಟ್ಟುವ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಅಡ್ಮಿಷನ್ ಕಡಿಮೆಯಾಗಿದೆ. ಹೆಚ್ಚಿನ ಹಣ ಕೊಟ್ಟು ದೊಡ್ಡಮಟ್ಟದ ಸ್ಕೂಲ್‌ಗಳಿಗೆ ಕಳುಹಿಸಲು ಅನೇಕ ಪೋಷಕರಿಗೆ ಕಷ್ಟವಾಗುತ್ತಿರುವ ಹಿನ್ನೆಲೆ ಅಡ್ಮಿಷನ್‌ಗಳು ಕಡಿಮೆಯಾಗಿರಬಹುದು’ ಎಂದಿದ್ದಾರೆ.
ಜಾಗತಿಕವಾಗಿ ಮಕ್ಕಳ ಜನನ ಪ್ರಮಾಣ ಕುಸಿತವೂ ವಿದ್ಯಾರ್ಥಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ದೇಶದ 23 ರಾಜ್ಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತ ಕಂಡುಬರ್ತಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಶಾಲಾ ದಾಖಲಾತಿ ಕುಸಿತವಾಗುತ್ತಿದೆ. 2023-24ನೇ ಸಾಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ದಾಖಲಾತಿ ಸುಮಾರು 2 ಲಕ್ಷದಷ್ಟು ಇಳಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ 2023-24ರಲ್ಲಿ 1,19,26,303 ಇದ್ದ ದಾಖಲಾತಿ ಸಂಖ್ಯೆ, 2024-25ರಲ್ಲಿ 1,17,80,251ಕ್ಕೆ ಕುಸಿದು, ಒಂದೇ ವರ್ಷದಲ್ಲಿ 1,46,052 ವಿದ್ಯಾರ್ಥಿಗಳ ಇಳಿಕೆ ದಾಖಲಾಗಿದೆ. ಅಲ್ಲದೆ, ಕಳೆದ 15 ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಶೇಕಡ 30ರಷ್ಟು (ಸುಮಾರು 17 ಲಕ್ಷ ವಿದ್ಯಾರ್ಥಿಗಳು) ಕುಸಿತ ಕಂಡಿದ್ದು, ಈ ಪ್ರವೃತ್ತಿ ಇದೀಗ ಖಾಸಗಿ ಬಜೆಟ್ ಶಾಲೆಗಳ ಮೇಲೂ ತೀವ್ರ ಹೊಡೆತ ಬೀರಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.