ಬೆಂಗಳೂರು, ಸೆಪ್ಟೆಂಬರ್ 13: ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಮತ್ತೊಂದು ಪ್ರಯೋಗಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಹೊಸ ನಿಯಮ ಅನುಷ್ಠಾನಗೊಳಿಸಲು ಮಂಡಳಿ ಸಜ್ಜಾಗಿದ್ದು, ದ್ವಿತೀಯ ಪಿಯು ಪರೀಕ್ಷೆ ಅವಧಿ ಇಳಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಸಮಯದ ಅವಧಿ ಕಡಿಮೆಯಾಗಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ಇಳಿಕೆ ಮಾಡುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಘೋಷಿಸಿದೆ. ಇದರಿಂದಾಗಿ, 3 ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆ ಅವಧಿ 2 ಗಂಟೆ 45 ನಿಮಿಷಕ್ಕೆ ಇಳಿಕೆಯಾಗಲಿದೆ.
ಇದೇ ಶೈಕ್ಷಣಿಕ ವರ್ಷದಿಂದ ಹೊಸ ನಿಯಮ ಜಾರಿಗೊಳಿಸಲಾಗುವುದು ಎಂದು ಮಂಡಳಿ ಮಾಹಿತಿ ನೀಡಿದೆ. ಆದರೆ, ಪರೀಕ್ಷೆಯ ಅವಧಿ ಕಡಿತವಾದರೂ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ನಲ್ಲಿ ಮೂರು ಗಂಟೆ ಇರಲೇಬೇಕಾಗುತ್ತದೆ. ಪರೀಕ್ಷೆಯ ಆರಂಭದ 15 ನಿಮಿಷವನ್ನು ಪ್ರಶ್ನೆಗಳನ್ನು ಓದಿಕೊಳ್ಳಲು ಬಳಸಲು ಅವಕಾಶ ನೀಡಲಾಗುತ್ತದೆ. ಲಿಖಿತ ಬರವಣಿಗೆಗೆ ಮಾತ್ರ 2 ಗಂಟೆ 45 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ 100 ಅಂಕಕ್ಕೆ ಬದಲು 80 ಅಂಕಕ್ಕೆ ಪರೀಕ್ಷೆ ಬರೆಯುವಂತೆ ಮಾಡಲಾಗುತ್ತದೆ.
ಇದನ್ನೂ ಓದಿ: ಘಟಕ ಪರೀಕ್ಷೆಗಳಿಗೂ ವೆಬ್ ಕಾಸ್ಟಿಂಗ್ ಅಸ್ತ್ರ ಪ್ರಯೋಗ; ಸರ್ಕಾರಿ ಶಾಲಾ ಶಿಕ್ಷಕರ ಪರದಾಟಕ್ಕೆ ಕಾರಣಾಯ್ತು ಇಲಾಖೆ ನಡೆ
ಈ ಹಿಂದೆಯೂ 3 ಗಂಟೆ ಅವಧಿಯ ಪರೀಕ್ಷೆ ಇದ್ದಾಗಲೂ ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷವನ್ನು ಹೆಚ್ಚುವರಿಯಾಗಿ ಕೊಡಲಾಗುತ್ತಿತ್ತು ಎಂಬುದು ಗಮನಾರ್ಹ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ