ತಮಿಳುನಾಡಿನ ಕೊಯಮತ್ತೂರಿನ (Coimbatore) ಶಾಲೆಯೊಂದು ಬೇಸಗೆ ರಜೆಯಲ್ಲಿ (Summer Vacation) ಮಕ್ಕಳ ಬದಲು ಅವರ ಪಾಲಕರಿಗೇ ಅಸೈನ್ಮೆಂಟ್ ನೀಡಿ ಬಿಡುಗಡೆ ಮಾಡಿದ್ದ ಹಳೆಯ ನೋಟಿಸ್ ಒಂದು ಇದೀಗ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಕೊಯಮತ್ತೂರಿನ ಜಿಎಂ ಮಿಲ್ಸ್, ಎಸ್ಎಂ ಪಾಳ್ಯಂನಲ್ಲಿರುವ ಅಣ್ಣೈ ವಯಲೆಟ್ ಮೆಟ್ರಿಕ್ಯುಲೇಷನ್ ಆ್ಯಂಡ್ ಹೈಯರ್ ಸೆಕೆಂಡರಿ ಸ್ಕೂಲ್ 2018ರ ಏಪ್ರಿಲ್ 19ರಂದು ಪಾಲಕರಿಗೆ ಅಸೈನ್ಮೆಂಟ್ ನೀಡಿ ನೋಟಿಸ್ ಬಿಡುಗಡೆ ಮಾಡಿತ್ತು. ಮಕ್ಕಳ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ತಂದೆ-ತಾಯಿಗೆ ಅಸೈನ್ಮೆಂಟ್ ನೀಡಿ ಶಾಲೆ ಪ್ರಕಟಿಸಿದ್ದ ನೋಟಿಸ್ ಅನ್ನು ಇದೀಗ ಕರ್ನಾಟಕದ ಮಾಜಿ ಶಿಕ್ಷಣ ಸಚಿವ, ಬಿಜೆಪಿ ನಾಯಕ ಸುರೇಶ್ ಕುಮಾರ್ ಎಸ್ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ಈ ಶಾಲೆಯ ಪ್ರಯತ್ನ ಅತ್ಯಂತ ಶ್ಲಾಘನೀಯ. ನಿಜಕ್ಕೂ ಖುಷಿಯಾಯಿತು. ಇದನ್ನು ಹಂಚಿಕೊಳ್ಳುವುದು ನನ್ನ ಕರ್ತವ್ಯ ಎಂದು ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ. ಸದ್ಯ ನೋಟಿಸ್ನ ಪ್ರತಿ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ.
ಆತ್ಮೀಯ ಪೋಷಕರೇ, ಹೃತ್ಪೂರ್ವಕ ಶುಭಾಶಯಗಳು, ಕಳೆದ 10 ತಿಂಗಳು ನಾವು ನಿಮ್ಮ ಅಮೂಲ್ಯ ಮಕ್ಕಳನ್ನು ನೋಡಿಕೊಳ್ಳುವುದನ್ನು ಆನಂದಿಸಿದ್ದೇವೆ. ಅವರೆಲ್ಲರೂ ಶಾಲೆಗೆ ಬರಲು ಇಷ್ಟಪಡುತ್ತಿದ್ದರು ಎಂಬುದನ್ನು ನೀವು ಗಮನಿಸಿರಬಹುದು. ಇನ್ನು ಎರಡು ತಿಂಗಳು ಅವರು ತಮ್ಮ ಪಾಲಕರೊಂದಿಗೆ ಕಳೆಯಲಿದ್ದಾರೆ. ಈ ಅವಧಿಯನ್ನು ಅವರಿಗೆ ಫಲಪ್ರದವನ್ನಾಗಿಸಲು ಮತ್ತು ಸಂತೋಷದ ಅವಧಿಯನ್ನಾಗಿ ಮಾಡಲು ಕೆಲವು ಸಲಹೆಗಳನ್ನು ನೀಡಲಾಗಿದೆ. ದಯಮಾಡಿ ಪಾಲಿಸಿ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ, ತಂದೆ-ತಾಯಿಗೆ ಕೆಲವು ಸಲಹೆಗಳನ್ನು ನೀಡಲಾಗಿದೆ. ಅವುಗಳು ಇಲ್ಲಿವೆ.
ನಿಮ್ಮ ಮಕ್ಕಳೊಂದಿಗೆ ಕನಿಷ್ಠ ಎರಡು ಹೊತ್ತಿನ ಊಟವನ್ನು ಮಾಡಿ. ಅವರಿಗೆ ರೈತರ ಮಹತ್ವ ಮತ್ತು ಶ್ರಮವನ್ನು ತಿಳಿಸಿ ಮತ್ತು ಆಹಾರವನ್ನು ವ್ಯರ್ಥ ಮಾಡದಂತೆ ತಿಳಿಸಿಕೊಡಿ. ಪ್ರತಿ ಬಾರಿ ಊಟ ಮಾಡಿದ ನಂತರ ಅವರು ತಮ್ಮ ತಟ್ಟೆಗಳನ್ನು ತೊಳೆಯಲಿ. ಮಕ್ಕಳು ಅಂತಹ ಅಭ್ಯಾಸಗಳಿಂದ ಶ್ರಮದ ಮಹತ್ವವನ್ನು ಕಲಿಯುತ್ತಾರೆ. ಅಡುಗೆಯಲ್ಲಿ ನಿಮಗೆ ಸಹಾಯ ಮಾಡಲು ಅವರಿಗೆ ಅನುಮತಿಸಿ. ಅವರು ಕೂಡ ಸಲಾಡ್ ಅನ್ನು ತಯಾರಿಸಲಿ ಎಂದು ಪಾಲಕರಿಗೆ ಸಲಹೆ ನೀಡಲಾಗಿದೆ.
ಇದನ್ನೂ ಓದಿ: Scholarships: ಪರ್ಲ್ ಅಕಾಡೆಮಿ ಯುಜಿ, ಪಿಜಿ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿದೆ; ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರತಿ ದಿನ 5 ಹೊಸ ಇಂಗ್ಲೀಷ್ ಪದಗಳನ್ನು ಕಲಿಯಿರಿ ಮತ್ತು ಅವುಗಳನ್ನು ನೋಟ್ ಪುಸ್ತಕದಲ್ಲಿ ಮಕ್ಕಳಿಗಾಗಿ ಪಟ್ಟಿ ಮಾಡಿಕೊಡಿ. ಕನಿಷ್ಠ 3 ಮಂದಿ ನೆರೆಹೊರೆಯವರನ್ನು ಮಕ್ಕಳಿಗೆ ಭೇಟಿ ಮಾಡಿಸಿ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಲಹೆ ನೀಡಿ. ಅಜ್ಜ-ಅಜ್ಜಿಯರನ್ನು ಭೇಟಿ ಮಾಡಿಸಿ ಮತ್ತು ನಿಮ್ಮ ಮಕ್ಕಳು ಅವರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುವಂತೆ ಮಾಡಿ. ಅವರ ಪ್ರೀತಿ ಮತ್ತು ಭಾವನಾತ್ಮಕ ಬೆಂಬಲ ನಿಮ್ಮ ಮಗುವಿಗೆ ಬಹಳ ಮುಖ್ಯ. ಅವರೊಂದಿಗೆ ಸ್ನ್ಯಾಪ್‌ಗಳನ್ನು ಕ್ಲಿಕ್ ಮಾಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.
ಮಕ್ಕಳನ್ನು ನಿಮ್ಮ ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮತ್ತು ಕುಟುಂಬವನ್ನು ಪೋಷಿಸಲು ನೀವು ತುಂಬಾ ಕಷ್ಟಪಡುತ್ತೀರಿ ಎಂಬುದನ್ನು ನಿಮ್ಮ ಮಗುವಿಗೆ ಅರ್ಥಮಾಡಿಸಿ. ಸ್ಥಳೀಯ ಹಬ್ಬ ಮತ್ತು ಸ್ಥಳೀಯ ಮಾರುಕಟ್ಟೆಗೆ ಕರೆದೊಯ್ಯುವುದನ್ನು ತಪ್ಪಿಸಬೇಡಿ. ಬೀಜಗಳನ್ನು ಬಿತ್ತುವ ಮೂಲಕ ಉದ್ಯಾನವನ್ನು ಬೆಳೆಸಲು ನಿಮ್ಮ ಮಗುವನ್ನು ನಿಧಾನವಾಗಿ ಪ್ರೋತ್ಸಾಹಿಸಿ. ಸಸ್ಯಗಳು ಮತ್ತು ಮರಗಳ ಬಗ್ಗೆ ಜ್ಞಾನವು ನಿಮ್ಮ ಮಗುವಿನ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ. ನಿಮ್ಮ ಬಾಲ್ಯ ಮತ್ತು ನಿಮ್ಮ ಕುಟುಂಬದ ಇತಿಹಾಸದ ಬಗ್ಗೆ ಕಥೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ. ನಿಮ್ಮ ಮಗುವು ಹೊರಾಂಗಣದಲ್ಲಿ ಆಟವಾಡಲು, ಗಾಯಗೊಳ್ಳಲು ಮತ್ತು ಕೊಳಕಾಗಲು ಅವಕಾಶ ಮಾಡಿಕೊಡಿ. ಅವರು ಕೆಳಗೆ ಬೀಳುವುದು ಮತ್ತು ನೋವು ಅನುಭವಿಸಿದರೆ ಪರವಾಗಿಲ್ಲ, ಆರಾಮದಾಯಕ ಜೀವನವು ನಿಮ್ಮ ಮಗುವನ್ನು ಸೋಮಾರಿಯನ್ನಾಗಿ ಮಾಡುತ್ತದೆ. ಸಾಕು ನಾಯಿ, ಬೆಕ್ಕು ಅಥವಾ ಯಾವುದೇ ಪ್ರಾಣಿ, ಪಕ್ಷಿಗಳನ್ನು ದತ್ತು ತೆಗೆದುಕೊಳ್ಳಲು ಅವರಿಗೆ ಅನುಮತಿಸಿ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.