Rajeshwari Tejaswi : ರಾಜೇಶ್ವರಿ ಮೇಡಮ್, ಬಂಗಾರವನ್ನು ಪತ್ತೆ ಹಚ್ಚುವುದು ಹೇಗೆಂದು ತೇಜಸ್ವಿಯವರಿಗೆ ಯಾಕೆ ಹೇಳಿಕೊಡಲಿಲ್ಲ?
Poornachandra Tejaswi : ‘ಸೀಮೆಎಣ್ಣೆ ದೀಪಗಳನ್ನು ಹಚ್ಚಿಟ್ಟು ನಾನು ಸೌದೆ ಒಲೆ ಮುಂದೆ ಕೂತು ಕೆಲಸ ಮಾಡುತ್ತಿದ್ದೆ. ಒಲೆ ಕೆಂಪಗೆ ಉರಿಯುತ್ತಿತ್ತು. ಜೀಪು ಬಂದರೂ ಯಾಕೆ ಮಕ್ಕಳು ಮಾತಾಡುವ ಸದ್ದು ಕೇಳುತ್ತಿಲ್ಲೆಂದುಕೊಂಡೇ ಸೌಟಿನಲ್ಲಿ ಸಾರು ಕೈಯಾಡಿಸುತ್ತಿದ್ದೆ. ಮೂವರೂ ಮೌನವಾಗಿ ನೆಟ್ಟಗೆ ಅಡುಗೆಮನೆಗೆ ಬಂದರು.’ ರಾಜೇಶ್ವರಿ ತೇಜಸ್ವಿ
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
‘ನನ್ನ ತೇಜಸ್ವಿ’ ಇದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತೀರಿದ ನಂತರ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಬರೆದ ನೆನಪುಗಳು.
*
ನನ್ನ ಹೊಟ್ಟೆ ಒಳಗಿಂದ ಸಂತೋಷ ಉಕ್ಕಿಸುವಂಥದೊಂದು ಇದೆ. ನೆನೆದಂತೆಲ್ಲ ಹಾಯ್! ಹಾಯ್! ಎಂದುಕೊಳ್ಳುವೆ. ಎಷ್ಟು ಚೆಂದ! ಮರುಕ್ಷಣದಲ್ಲೇ ಅಯ್ಯೋ ಎನಿಸುತ್ತೆ, ಹೊಟ್ಟೆ ಒಳಗಿಂದ ಸಂಕಟವಾಗುತ್ತೆ.
ತೀರ ಇತ್ತಿತ್ತಲಾಗಿ ನಾವಿಬ್ಬರು ಹಾಗೇ ಸುಮ್ಮನೆ ಕುಳಿತಿದ್ದೆವು. ಆಗ ಇವರು ಹೇಳಿದ್ರು, ನಿನಗೆ ಆಭರಣ ಅಂದ್ರೆ ತುಂಬ ಇಷ್ಟ, ಇಂತಿಷ್ಟು ದುಡ್ಡು ಕೊಡ್ತೀನಿ, ನಿನಗೆ ಬೇಕಾದ್ದು ಕೊಂಡುಕೊ ಅಂದ್ರು. ತುಂಬ ದುಡ್ಡು ಕೊಟ್ಟು, ತೃಣ ಮಾತ್ರವೂ ಕನಸು ಮನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ತುಂಬ ಸಂತೋಷಪಟ್ಟೆ. ನನಗೆ ಆಭರಣ ಇಷ್ಟಾನೇ ಇದ್ದರೂ ಬೇಕುಬೇಕೆನಿಸಿದೆಲ್ಲವನ್ನೂ ಕಂಡು ಕಂಡಿದ್ದೆಲ್ಲವನ್ನೂ ಕೊಳ್ಳುತ್ತಿರಲಿಲ್ಲ, ಹಾಗೆ ಆಸೆಪಟ್ಟುಕೊಳ್ಳುತ್ತಿರಲಿಲ್ಲ.
ಮೈಸೂರಿಗೆ ಹೋಗಿದ್ದಾಗ ಶಾರದ ಆಭರಣದಂಗಡಿಯಲ್ಲಿ Uncut Ruby ಬಂಗಾರದ ಸರವೊಂದನ್ನು ಟೀಕ) ನೋಡಿದ್ದೆ. ಅದನ್ನು ವಿದ್ಯಾ ಶ್ರೀರಾಂರಿಂದ ತರಿಸಿಕೊಂಡೆನು. ತೇಜಸ್ವಿಗಾದರೂ ಬಂಗಾರದ ಸರ ತೋರಿಸಿ ನಕಲಿ ಎಂದರೆ ನಂಬುವರು, ನಕಲಿದು ತೋರಿಸಿ ಬಂಗಾರದ್ದೆಂದರೆ ಅದನ್ನೂ ನಂಬುವರು. ಎರಡು ತಿಂಗಳು ಕಳೆದಮೇಲೆ ಆ ಸರ ಅಷ್ಟೊಂದು ಚೆಂದವೆನಿಸಲಿಲ್ಲ ನನಗೆ. ಮೈಸೂರಿಗೆ ಹೋದಾಗ ಇವರಿಗೆ ಹೇಳಿದೆ, ಕಾರಿನಲ್ಲಿ ಅವನಂಗಡಿಗೆ ಬಿಟ್ಟುಕೊಡಿ ಆ ಸರ ಬದಲಾಯಿಸುವೆನೆಂದೆ. ಎಲ್ಲಿ ತೋರಿಸು ನೋಡ್ತೀನಿ ಎಂದರು. ಚೆನ್ನಾಗೇ ಇದೆ ಬದಲಾಯಿಸಬೇಡ ಇಟ್ಟುಕೋ ಎಂದರು. ನನ್ನ ಕೊರಳಿಗೆ ಕೆಂಪಿನ ಕಂಠೀಸರವಾಯ್ತು. ಸಂತೋಷದಿಂದ ಧರಿಸಿ ಓಡಾಡಿದೆ. ಮಕ್ಕಳಿಗೆ ಎಲ್ಲರಿಗೆ ಹೇಳಿದ್ದೇ ಹೇಳಿದ್ದು ನಿಮ್ಮಣ್ಣ ಕೊಟ್ಟಿದ್ದು ಕಣೇ, ‘ಪ್ರೀತಿಯ ದೊಡ್ಡ ಉಡುಗೊರೆ’.
*
ಈಗ ನಾನೊಬ್ಬಳೇ ಇಲ್ಲಿ ಕೂರುವೆ. ಸುಮ್ಮನೆ. ಗುಂಡಾ, ಜಿನ್ನಿ ಬಾಲ ಅಲ್ಲಾಡಿಸುತ್ತಾ ಬಂದು ಕೂರುತ್ತವೆ ತಿಂಡಿ ನಿರೀಕ್ಷಿಸುತ್ತಾ, ಕೆರೆ ನೋಡ್ತಾಯಿದ್ದಂತೆ ಹಿಂದಿನದೆಲ್ಲ ಬಿಚ್ಚಿಕೊಳ್ಳುತ್ತೆ. ಮನಸ್ಸು ಮುದುಡಿಕೊಳ್ಳುತ್ತೆ. ನನಗೆ ಅರಿಯದಂತೆ, ತೇಜಸ್ವಿ ಕೈಗಳು ಕಿವಿಯಿಂದ ಹಿಂದೆ ಹೋದಂತೆ ನನ್ನವು ಸರಿಯುತ್ತೆ… ನೆನೆನೆನೆದು ಅಳುವಂತಾಗುತ್ತಿತ್ತು. ಅಳುವುದನ್ನು ತಪ್ಪಿಸಿಕೊಳ್ಳಬೇಕೆಂದುಕೊಂಡೇ ಇಲ್ಲಿ ಬಂದು ಕೂರುವೆನು. ಸಂಜೆ ಸರಿಯಾಗಿ ಆರೂವರೆಯಾಗುತ್ತಿದ್ದಂತೆ, ಬೆಳಗ್ಗೆಯಿಂದ ತಪಸ್ಸು ಮಾಡುತ್ತಾ ಕೂರುತ್ತಿದ್ದ ನೀರುಕಾಗೆ ಸಿಟೌಟ್ ಮೇಲೆ ಹಾರಿ ಹೋಗುತ್ತಿತ್ತು. ಇದನ್ನು ಪ್ರತಿ ದಿನ ಗಮನಿಸುತ್ತಿದ್ದೆ, ಒಂದು ದಿನ ಬಗ್ಗಿ ನೋಡಿದೆ ಹಾರಿ ಹೋಗುವಾಗ, ಅದಕ್ಕೆ ತೊಂದರೆಯಾಯಿತೇನೋ, ದಿಕ್ಕು ತೋಚದೆ ದಿಕ್ಕನ್ನು ಬದಲಿಸಿತು. ಕೆರೆಸುತ್ತ ಒಂದು ಸುತ್ತು ಹಾರಿ ಎತ್ತಲೋ ಹೋಯ್ತು. ಮೂರುನಾಲ್ಕು ದಿನ ಹೀಗೇ ಆಯ್ತು. ಬಗ್ಗಿ ನೋಡುವುದನ್ನು ನಿಲ್ಲಿಸಿದೆ. ಒಳಗೆ ಹೋಗೋಣ ಬಾ’ ಎನ್ನುವರೂ ಇಲ್ಲ. ಒಳಗೆ ಹೋದರೂ ಕತ್ತಲೆಯೇ….
*
ಮೊಮ್ಮಗಳು ವಿಹಾ ತೋಟಕ್ಕೆ ಬಂದಿದ್ದಳು. ರಜೆಗೆ ಬಂದವಳನ್ನು ರಂಜಿಸಬೇಕಿತ್ತು. ಮೆಟ್ಟಿಲ ಮೇಲೆ ಕೂತಿದ್ದೆವು. ವಿಹಾ ಇದ್ದಕ್ಕಿದ್ದಂತೆ ಆಕಾಶ ನೋಡ್ತಾ ಪಕ್ಷಿ ಸಾಲಾಗಿ ಹೋಗ್ತವೆ ಅಜ್ಜಿ ಎಂದಳು. ಎಣಿಸು ಎಂದೆ. ನೀನೇ ಎಣಿಸು ಅಜ್ಜಿ ಎಂದಳು. ಸಾಲಾಗಿ ಸ್ವಚ್ಛಂದವಾಗಿ ಹಾರಿ ಹೋಗುವುದಕ್ಕೆ ಯಾವ ದೇವರು ಕಲಿಸಿಕೊಟ್ಟನೊ ಅವಕ್ಕೆ ಅಂದೆ. ಕುವೆಂಪು ಅಜ್ಜಯ್ಯ ದೇವರು ರುಜು ಮಾಡಿರುವನೆಂದು ಹೇಳ್ತಾರೆ ಅಂದೆ. ಅಜ್ಜಯ್ಯ! ತೇಜಸ್ವಿ ಅಂದಳು. ಈಗ ಬಾವಲಿಗಳು ಸಾಲಾಗಿ ಬರುತ್ತಿದ್ದವು. ಅವನ್ನು ಎಣಿಸು ಅಜ್ಜಿ ಎಂದಳು.
ಹಿಂದೊಮ್ಮೆ ಎಣಿಸಿದಲ್ಲಿಗೆ ಹೋದೆ. ಮದುವೆಗೆ ಮುಂಚೆ ಭೂತನಕಾಡಿನಲ್ಲಿದ್ದಾಗ ತೇಜಸ್ವಿ, ಹರಕ್ಕೆ ಹೋಗೋಣ ಬಾ ಎಂದು ಕೋವಿ ತಗೊಂಡರು. ಸ್ಕೂಟರು ಹತ್ತಿ ಹೋದೆವು. ಸಂಜೆ ಸಮಯ. ಆಕಾಶದ ತುಂಬೆಲ್ಲ ಬಾವಲಿ ಗುಂಪುಗಳು ಸಾಲುಸಾಲಾಗಿ ಹೋಗುತ್ತಿವೆ, ಒಂದಾದಮೇಲೆ ಒಂದು ಸಾಲು. ಎಲ್ಲಿಂದಲೋ ಎಲ್ಲೆಲ್ಲಿಗೋ ಹೋಗುತ್ತಲೇ ಇವೆ. ರಾತ್ರಿಯ ಊಟಕ್ಕೆ ಯಾವ್ಯಾವುದೋ ಮರದ ಹಣ್ಣು ಪತ್ತೆಹಚ್ಚಿಕೊಂಡಿದ್ದಿರಬಹುದು.
ಇದೇ ಮೊದಲ ಬಾರಿ ನಾನು ಈ ದೃಶ್ಯ ನೋಡುತ್ತಿದ್ದುದು. ಕೋವಿ ಸಿದ್ಧ ಮಾಡ್ಕೊಂಡು ಯಾವ ಹಕ್ಕಿಗೆ ಹೊಡೆಯಲಿ ಹೇಳು ಎಂದರು ತೇಜಸ್ವಿ, ಏಳನೇದು ಎಂದು ಹಾಗೇ ನೋಡ್ತಿದ್ದೆ, ಕ್ಷಣ ಮಾತ್ರದಲ್ಲಿ ಢಮಾರ್ ಸದ್ದು ಹಾಕ್ತಾ ಹಾರಾ ಹೋಗಿ ಬಿತ್ತು ಆ ಬಾವಲಿ. ಇವರ ಗುರಿಯಲ್ಲಿ ಈಡಿನಲ್ಲಿ ಅಷ್ಟೊಂದು ನಿಖರತೆ ಇರೋದು ನೋಡಿ ಸಖೇದಾಶ್ಚರ್ಯ ಬೆರಗಾದೆ. ಸಂತೋಷಪಟ್ಟೆ. ಅರಣ್ಯ ಇಲಾಖೆಯವರು ಇಲ್ಲೆಲ್ಲ ಅಕೇಶಿಯ ಗಿಡಗಳನ್ನು ಎಬ್ಬಿಸಿರುವುದರಿಂದ ಹರದ ಕುರುಹೂ ಇಲ್ಲದಂತಾಗಿದೆ, ಈಗ.
ಈವತ್ತಿಗೆ ಈಚಲು ಹರವೆಂಬ ಪದವೇ ಮರೆಯಾಗಿದೆ. ಹರವೆಂದರೆ ಬಯಲು, ಮೈದಾನ, ಈಚಲು ಬಯಲಿನಲ್ಲಿಯೂ ಕೃಷಿ ಸಾಧ್ಯವಾಗಿಸಿದ್ದಾರೆ. ನೆರಳೆಬ್ಬಿಸಿ ಕಾಫಿಗಿಡ ಕೂರಿಸಿದ್ದಾರೆ. ಈಚಲು ಗಿಡಗಳು ನಿಬಿಡವಾಗಿ ಗುಂಪುಗುಂಪಾಗಿ ಬೆಳೆದಿರುತ್ತೆ.
*
ಹೇಳುವಂತೆ ಚಿಕ್ಕ ಚಿಕ್ಕ ಮೊನೆಯಾದ ಈಚಲು ಎಲೆಗಳು ಸಣ್ಣ ಚೂರಿಯಂತೆ ಮೇಲಕ್ಕೆ ಚಾಚಿಕೊಂಡು ಇಡೀ ಬಯಲನ್ನೇ ಶರತಲ್ಪದಂತೆ ಮಾಡಿರುತ್ತದೆ. ಹರದ ಅಂಚಿಗೆ ದಟ್ಟ ಕಾಡೂ ಇರಬಹುದು. ಒಂದು ತುದಿಯಲ್ಲಿ ನಿಂತು ನೋಡಿದಾಗ ಇನ್ನೊಂದು ತುದಿ ಕಾಣೋದೇ ಇಲ್ಲ ಕಲ್ಪನೆಗೂ ನಿಲುಕುವುದಿಲ್ಲ, ಗಿಡಗಳು ಬಲಿತಂತೆ ಬೇಸಗೆಯಲ್ಲಿ ಹಣ್ಣಿನ ಗೊಂಚಲು ದಪ್ಪ ಹವಳದಂತೆ ಮಿರಿಮಿರಿ ಮಿಂಚುತ್ತೆ. ಸೀಪರು ಸೀಪರು ಸಿಹಿ ಹಣ್ಣು ಬೀಜದ ಮಯ. ಹೆಚ್ಚು ಹಣ್ಣಾದಂತೆ ರಂಜದ ಬಣ್ಣದಿಂದ ಖರ್ಜೂರದಂತೆ ತಿರುಗುತ್ತೆ. ಅಲ್ಲಿ ಅಲೆಯುತ್ತ ಹಕ್ಕಿಗಳಂತೆ ಹಾರಾಡ್ತಾ ಬಾಯಿ ಸಿಹಿ ಮಾಡಿಕೊಳ್ಳೋದು ಚಂದವೇ. ಬಮಾರಲು ಬಿಳಿ ಹಣ್ಣೂ ಸಿಗಬಹುದು. ಅಲ್ಲೊಂದು ಔಷಧೀಯ ಗಜ್ಜುಗದ ಗಿಡದು ಗಟ್ಟುಗದ ಕಾಯಿಯೂ ಸಿಗಬಹುದು. ಅಷ್ಟೇ ಅಲ್ಲ, ತೇಜಸ್ವಿ ಕೋವಿಗೆ ಕಾಡುಕೋಳಿಯೂ ಬೀಳಬಹುದು. ಸಂಜೆಗಪ್ಪಿನಲಿ ನರಿಗಳು ಊಳಿಡುವ ಉವುಜೆಲವೂ ಉಂಟು. ಇಂಥ ಹರದಲ್ಲಿ ತಿರುಗಾಡುವುದೆಂದರೆ ಒಂದು ಬಗೆಯ ಕಟ್ಟು ತಿರುಗಾಟ, ಯಾಕೆಂದು ಹೇಳುವೆನು…
ಒಂದು ದಿನ ತೇಜಸ್ವಿ ಮಕ್ಕಳಿಗೆ ಮನೆಯಲ್ಲೇ ಇದ್ದು ಬೇಜಾರಾಗಿರುತ್ತೆಂದು ತಿರುಗಾಟಕ್ಕೆ ಜೀಪಿನಲ್ಲಿ ಹೊರಟರು. ಮಕ್ಕಳೂ ಅದಕ್ಕಾಗೇ ಕಾಯ್ತಾ ಇದ್ದರು. ಗೋಣಿಬೀಡಿನ ಕಡೆಯ ಹರಕ್ಕೆ ಹೋದರಂತೆ. ಹರದ ಒಳ ಭಾಗದ ರಸ್ತೆ ಬದಿ ಅಂಚಿನಲಿ ಜೀಪು ನಿಲ್ಲಿಸಿ ಮಕ್ಕಳನ್ನು ಕರೆದುಕೊಂಡು ಹೊರಟರು. ಐದು ವರ್ಷದ ಸುಸ್ಮಿತ ಮೂರು ವರ್ಷದ ಈಶಾನ್ಯ. ಹೋಗ್ತಾ ಅನ್ನಿಸ್ತಂತೆ ಈಶಾನ್ಯ ತೀರಾ ಪುಟ್ಟವಳು ದೂರ ನಡೆಯಲಾರಳೆಂದು. “ಅದೋ ಅಲ್ಲಿ ಜೀಪು ಕಾಡ್ತಾ ಇದೆಯಲ್ಲ ನೀವಿಬ್ಬರೂ ಹೋಗಿ ಅಲ್ಲೇ ಆಡಿಕೊಳ್ಳಿರಿ, ನಾನು ಈಗ ಬಂದುಬಿಡ್ತೀನಿ’ ಎಂದರಂತೆ. ಅವರಿಬ್ಬರೂ ತಲೆ ಆಡಿಸಿ ಆಯ್ಕೆಂದು ಹಿಂದಕ್ಕೆ ಹಿಂದಿರುಗಿದರು. ಇವರು ಮುಂದಕ್ಕೆ ಮುಂದುವರಿದರು. ಇವರಿಗಿಂತ ಎತ್ತರಕ್ಕೆ ಬೆಳೆದಿರುತ್ತಿಲ್ಲ ಈಚಲು ಗಿಡಗಳು, ಆ ಪುಟಾಣಿಗಳಿಗೆ ಜೀಪು ಕಂಡಿತಾ…? ಅದಾಗಲೆ ಕಿವಿ ತೀರಿಕೊಂಡಿತ್ತು. ಸ್ವಲ್ಪ ಸಮಯದನಂತರ ತೇಜಸ್ವಿ ಜೀಪಿನ ಬಳಿಗೆ ಬಂದು ನೋಡ್ತರಂತೆ ಅಲ್ಲಿ ಮಕ್ಕಳಿಲ್ಲ, ಕೂಗ್ತಾರೆ ಓಗೊಡ್ರನೂ ಇಲ್ಲ, ಒಂದು ಕ್ಷಣ ಕಳೆದರೆ ಕತ್ತಲೆ ವಿಯುತ್ತೆ. ಇವರಿಗೆ ಅನುಮಾನವಾಯ್ತು. ಸರಸರ ಹರದ ಹರವಿನೊಳಕ್ಕೆ ಕೂಗುತ್ತಾ ಹೋದರಂತೆ. ದೂರದಲ್ಲಿ ಅಣ್ಣ ಬೇಕು ಉ’ ಅಂತ ಅಳುವ ಸದ್ದು ಕೇಳಿತು. ಒಮ್ಮೆಲೆ ಜೀವ ಬಂದಿತಂತೆ ಇವರಿಗೆ. ಸುಸ್ಮಿತಾ ಎಂದು ಕೂಗುತ್ತಾ ಇವರು ಮುಂದೆ ಹೋದರು. ಸುಸ್ಮಿತಾ ಈಶಾನ್ಯ ಕೈಯನ್ನು ಗಟ್ಟಿ ಹಿಡಿದುಕೊಂಡು ಹೋಗುತ್ತಿದ್ದಳಂತೆ. ಮಬ್ಬು ಕತ್ತಲೆಯೂ ಮುಸುಕಿತು.
ಸೀಮೆಎಣ್ಣೆ ದೀಪಗಳನ್ನು ಹಚ್ಚಿಟ್ಟು ನಾನು ಸೌದೆ ಒಲೆ ಮುಂದೆ ಕೂತು ಕೆಲಸ ಮಾಡುತ್ತಿದ್ದೆ. ಒಲೆ ಕೆಂಪಗೆ ಉರಿಯುತ್ತಿತ್ತು. ಜೀಪು ಬಂದರೂ ಯಾಕೆ ಮಕ್ಕಳು ಮಾತಾಡುವ ಸದ್ದು ಕೇಳುತ್ತಿಲ್ಲೆಂದುಕೊಂಡೇ ಸೌಟಿನಲ್ಲಿ ಸಾರು ಕೈಯಾಡಿಸುತ್ತಿದ್ದೆ. ಮೂವರೂ ಮೌನವಾಗಿ ನೆಟ್ಟಗೆ ಅಡುಗೆಮನೆಗೆ ಬಂದರು. ಈಶಾನೈಯ ಕೈಯನ್ನು ಸುಸ್ಮಿತಾ ಗಟ್ಟಿಯಾಗಿ ಹಿಡಿದುಕೊಂಡೇ ನನ್ನ ಬಳಿಗೆ ಬಂದು ತಾಗಿಕೊಂಡು ನಿಂತಳು. ಇವರೂ ಸ್ಕೂಲ್ ತಗೊಂಡು ಒಲೆ ಮುಂದೆ ಕೂತು, ಮಾರಾಯ್ತಿ ಈವತ್ತೇನಾಯ್ತು ಗೊತ್ತ ಎನ್ನುತ್ತಿದ್ದರೆ ಸುಸ್ಮಿತಾ ಜೋರಾಗಿ ಅಳಲು ಶುರು ಮಾಡಿದಳು. ಅವಳನ್ನು ಸಮಾಧಾನ ಮಾಡಬೇಕಾದರೆ ನಮಗೆ ಸಾಕುಬೇಕಾಯಿತು.
*
ಸೌಜನ್ಯ : ಮೈಲ್ಯಾಂಗ್
ಇದನ್ನೂ ಓದಿ : Autobiography : ಅಭಿಜ್ಞಾನ ; ‘ನನ್ನಜ್ಜಿ ಹಾಲಿಲ್ಲದ ಮೊಲೆಗಳನ್ನು ಬಾಯಲ್ಲಿಟ್ಟು ಸಮಾಧಾನಿಸುತ್ತಿದ್ದಳು’
Published On - 10:36 am, Tue, 14 December 21