ನವದೆಹಲಿ: ಉತ್ತರ ಪ್ರದೇಶ ಬೋರ್ಡ್ ಯುಪಿಎಂಎಸ್‌ಪಿ (UPMSP) ಮಾರ್ಚ್ 30 ರಂದು ಬುಧವಾರ ನಡೆಸಲು ಉದ್ದೇಶಿಸಲಾಗಿದ್ದ 12 ನೇ ತರಗತಿಯ ಇಂಗ್ಲಿಷ್ (English)ವಿಷಯದ ಮಧ್ಯಂತರ ಪರೀಕ್ಷೆಯನ್ನು ರದ್ದುಗೊಳಿಸಿದೆ. ಬಲ್ಲಿಯಾ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ (paper leak) ಘಟನೆಯಿಂದಾಗಿ ರಾಜ್ಯದ 24 ಜಿಲ್ಲೆಗಳಲ್ಲಿ 12 ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ರದ್ದು ಮಾಡಲಾಗಿದೆ. ವರದಿ ಪ್ರಕಾರ 12ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಮಾರುಕಟ್ಟೆಯಲ್ಲಿ 500 ರೂ.ಗೆ ಮಾರಾಟವಾಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವರದಿಯ ನಂತರ, ಯುಪಿ ಬೋರ್ಡ್ ಮಧ್ಯಂತರ ಪರೀಕ್ಷೆಯ 12 ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸರಣಿ 316 ಇಡಿ ಮತ್ತು 316 ಇಐ ಅನ್ನು ರದ್ದುಗೊಳಿಸಲು ನಿರ್ಧರಿಸಿತು. ಅಧಿಕಾರಿಗಳ ಮೂಲಗಳ ಪ್ರಕಾರ, ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಈ ವಿಷಯವನ್ನು ಪರಿಶೀಲಿಸಲು ಒತ್ತಾಯಿಸಲಾಗಿದೆ. ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಣದ ಉಸ್ತುವಾರಿ ಸಚಿವ ಗುಲಾಬ್ ದೇವಿ, “ಬಲ್ಲಿಯಾದಲ್ಲಿ 12 ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತೋರುತ್ತಿದೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು. ಬಲ್ಲಿಯಾ, ಎತಾಹ್, ಬಾಗ್‌ಪತ್, ಬದೌನ್, ಸೀತಾಪುರ್, ಕಾನ್ಪುರ್ ದೇಹತ್, ಲಲಿತ್‌ಪುರ್, ಚಿತ್ರಕೋಟ್, ಪ್ರತಾಪ್‌ಗಢ, ಗೊಂಡಾ, ಅಜಂಗಢ, ಆಗ್ರಾ, ವಾರಣಾಸಿ, ಮೈನ್‌ಪುರಿ, ಮಥುರಾ, ಅಲಿಗಢ, ಘಾಜಿಯಾಬಾದ್, ಶಹಜಹಾನ್‌ಪುರ, ಉನ್ನಾವೋ, ಜಲೌನ್, ಮಹೋಬಾ, ಅಂಬೇಡ್ಕರ್ ನಗರ ಮತ್ತು ಗೋರಖ್‌ಪುರ- ಹೀಗೆ 24 ಜಿಲ್ಲೆಗಳಲ್ಲಿ ಇಂಗ್ಲಿಷ್ ವಿಷಯದ ಮಧ್ಯಂತರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಕೇವಲ 24 ಜಿಲ್ಲೆಗಳಲ್ಲಿ ಮಾತ್ರ ಏಕೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುಲಾಬ್ ದೇವಿ, ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆ ರದ್ದಾದ 24 ಜಿಲ್ಲೆಗಳಲ್ಲಿ ಮಾತ್ರ ವಿತರಿಸಲಾಗಿದೆ ಎಂದು ಹೇಳಿದರು. ಉಳಿದ 51 ಜಿಲ್ಲೆಗಳಲ್ಲಿ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಧ್ಯಮಿಕ ಶಿಕ್ಷಣ) ಆರಾಧನಾ ಶುಕ್ಲಾ ಅವರು ರಾಜ್ಯದ 24 ಜಿಲ್ಲೆಗಳಲ್ಲಿ 12 ನೇ ತರಗತಿ ಇಂಗ್ಲಿಷ್ ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ. ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶುಕ್ಲಾ ತಿಳಿಸಿದ್ದಾರೆ.
“ಈ 24 ಜಿಲ್ಲೆಗಳಲ್ಲಿ ನಡೆಯಲಿರುವ ಮಧ್ಯಂತರ ಇಂಗ್ಲಿಷ್ ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ಯುಪಿಎಂಎಸ್ ಪಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ವರ್ಷ 10ನೇ ತರಗತಿ ಪರೀಕ್ಷೆಗೆ ಒಟ್ಟು 27,81,654 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ, ಈ ವರ್ಷ 12ನೇ ತರಗತಿ ಪರೀಕ್ಷೆಗೆ 24,11,035 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 10, 12ನೇ ತರಗತಿ ಪರೀಕ್ಷೆಗಳು ಮಾರ್ಚ್ 24 ರಿಂದ ಏಪ್ರಿಲ್ 12 ರವರೆಗೆ ನಡೆಯಲಿವೆ.