ಬೆಂಗಳೂರು: ಪ್ರತಿ ಜಿಲ್ಲೆಯಲ್ಲಿ ಒಂದು ಎಂಜಿನಿಯರಿಂಗ್ (Engineering) ಕಾಲೇಜನ್ನು ಶ್ರೇಷ್ಠ ಗುಣಮಟ್ಟದ ಕಾಲೇಜು ಆಗಿ ಅಭಿವೃದ್ಧಿಪಡಿಸುವ ಸೂಪರ್ 30 ಯೋಜನೆಗೆ ಸಂಬಂಧಿಸಿದ ಉನ್ನತ ಮಟ್ಟದ ವರದಿಯನ್ನು ವಿಕಾಸಸೌಧದಲ್ಲಿ (Vikassoudh) ವಿಟಿಯು (VTU) ವಿಸಿ ಪ್ರೊ. ಕರಿಸಿದ್ದಪ್ಪ ಅವರು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ (Ashwath Narayan) ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಡಾ. ಅಶ್ವಥ್ ನಾರಾಯಣ ಮಾತನಾಡಿ ಸೂಪರ್ 30 ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. 30 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ, 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ 16 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 30 ಕಾಲೇಜುಗಳನ್ನು ಇನ್ಕ್ಯುಬೇಷನ್, ಆಕ್ಸಲೇಟರ್ ಮತ್ತು ಸೂಪರ್ 30 ಅಂತ ಮೂರು ಹಂತಗಳಲ್ಲಿ ಗುರುತಿಸಲಾಗಿದೆ. ಸರ್ಕಾರಿ ಕಾಲೇಜುಗಳಿಗೆ ಗೌವರ್ನಿಂಗ್ ಕೌನ್ಸಿಲ್ ಮಾಡಲಾಗುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ನೀಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಟೆಕ್ನಾಲಜಿ ಬಳಸಿಕೊಂಡು ಉನ್ನತೀಕರಣ ಮಾಡಬೇಕಿದೆ. ಶೈಕ್ಷಣಿಕ ವಿಚಾರದಲ್ಲಿ ಐಐಟಿ ಸೇರಿದಂತೆ, ಇಡೀ ಭಾರತದಲ್ಲಿ ನಾವು ನಾಲ್ಕನೇ ಸ್ಥಾನದಲ್ಲಿದ್ದೇವೆ. 80 ಕಾಲೇಜುಗಳು ಎನ್ಬಿಎ ರ್ಯಾಂಕಿಂಗ್ ಪಡೆದುಕೊಂಡಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಎಂದೂ ಎನ್ಬಿಎಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಇನ್ನು ಮುಂದೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಕೂಡ ಎನ್ಬಿಎಗೆ ಅರ್ಜಿ ಸಲ್ಲಿಸುತ್ತವೆ ಎಂದು ಹೇಳಿದರು.
ಈ ಅಭಿವೃದ್ಧಿ ಆಗುತ್ತಿರುವ ಕಾಲೇಜುಗಳಲ್ಲಿ 50 ಜನ ಬಂದು ಓದುವಂತಾಗಬೇಕು. ಅವರಿಗೆ ಇಲ್ಲಿಯೇ ಪ್ಲೇಸ್ ಮೆಂಟ್ ಸಿಗುವಂತೆ ಮಾಡಲಾಗುವುದು. ಶೇ 33ರಷ್ಟು ಇಂಡಸ್ಟ್ರಿಗಳು ಶೇ 33 ರಷ್ಟು ವಿಟಿಯು ಹಾಗೂ ಶೇ 33 ರಷ್ಟು ಇನ್ಸ್ಟಿಟ್ಯೂಷನ್‌ಗಳು ಆರ್ಥಿಕ ಸಹಾಯ ಮಾಡಲಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಸರ್ಕಾರವೇ ಸಂಪೂರ್ಣ ಆರ್ಥಿಕ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಈ ವೇಳೆ ಉಪ ಸಮಿತಿ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಮತ್ತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Published On - 3:21 pm, Tue, 19 July 22