Assembly Election 2022 Voting: ಗೋವಾ, ಉತ್ತರಾಖಂಡ್, ಉತ್ತರ ಪ್ರದೇಶ ಚುನಾವಣೆ; ಸಹರಾನ್​​ಪುರದಲ್ಲಿ ಕರ್ತವ್ಯದಲ್ಲಿದ್ದ ಮತಗಟ್ಟೆ ಮುಖ್ಯಾಧಿಕಾರಿ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 14, 2022 | 7:09 PM

Assembly Polls 2022 Voting Live Update: ಗೋವಾದಲ್ಲಿ 40 ವಿಧಾನಸಭೆ ಕ್ಷೇತ್ರಗಳಿದ್ದು, 301 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಗೇ, 11 ಲಕ್ಷ ಮತದಾರರು ಇದ್ದಾರೆ. ಇನ್ನು ಉತ್ತರಾಖಂಡ್​​ನಲ್ಲಿ 70 ವಿಧಾನಸಭೆ ಕ್ಷೇತ್ರಗಳಿದ್ದು, ಒಟ್ಟು 632 ಜನ ಅಭ್ಯರ್ಥಿಗಳಿದ್ದಾರೆ.

Assembly Election 2022 Voting: ಗೋವಾ, ಉತ್ತರಾಖಂಡ್, ಉತ್ತರ ಪ್ರದೇಶ ಚುನಾವಣೆ; ಸಹರಾನ್​​ಪುರದಲ್ಲಿ ಕರ್ತವ್ಯದಲ್ಲಿದ್ದ ಮತಗಟ್ಟೆ ಮುಖ್ಯಾಧಿಕಾರಿ ಸಾವು
ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ಮತದಾನ ಮಾಡಲು ಸಾಲುಗಟ್ಟಿ ನಿಂತಿರುವ ಜನರು

ಇಂದು ಗೋವಾ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ. (Goa And Uttarakhand Assembly Election 2022) ಗೋವಾದಲ್ಲಿ ಬೆಳಗ್ಗೆ ಗಂಟೆಯಿಂದ ಮತದಾನ ಶುರುವಾಗಿದ್ದು ಉತ್ತರಾಖಂಡ್​​ನಲ್ಲಿ 8ಗಂಟೆಯಿಂದ ಮತದಾನ ಶುರುವಾಗಿದೆ. ಹಾಗೇ, ಉತ್ತರ ಪ್ರದೇಶದಲ್ಲಿ 55 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಕೂಡ ಇಂದೇ ನಡೆಯಲಿದೆ.  ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್​, ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್ ಧಮಿ, ಮಾಜಿ ಸಿಎಂ ಹರೀಶ್​ ರಾವತ್​, ಸಮಾಜವಾದಿ ಪಕ್ಷದ ಆಜಂ ಖಾನ್​ (ಜೈಲಿನಲ್ಲಿದ್ದು, ಅಲ್ಲಿಂದಲೇ ನಾಮಪತ್ರ ಸಲ್ಲಿಸಿರುವ ನಾಯಕ) ಸೇರಿ ಹಲವರು ಇಂದು ಚುನಾವಣಾ ಕಣದಲ್ಲಿದ್ದಾರೆ. ಇಂದು ಚುನಾವಣೆ ನಡೆಯುತ್ತಿರುವ ಮೂರು ರಾಜ್ಯಗಳಲ್ಲಿಯೂ ಸದ್ಯ ಬಿಜೆಪಿ ಆಡಳಿತವೇ ಇದ್ದು, ಮತ್ತೆ ಅಧಿಕಾರ ಹಿಡಿಯುವ ತವಕದಲ್ಲಿ ಬಿಜೆಪಿಯಿದೆ. ಗೋವಾದಲ್ಲಿ 40 ವಿಧಾನಸಭೆ ಕ್ಷೇತ್ರಗಳಿದ್ದು, 301 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಗೇ, 11 ಲಕ್ಷ ಮತದಾರರು ಇದ್ದಾರೆ. ಇನ್ನು ಉತ್ತರಾಖಂಡ್​​ನಲ್ಲಿ 70 ವಿಧಾನಸಭೆ ಕ್ಷೇತ್ರಗಳಿದ್ದು, ಒಟ್ಟು 632 ಜನ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ 152 ಮಂದಿ ಸ್ವತಂತ್ರ್ಯ ಅಭ್ಯರ್ಥಿಗಳು. 81 ಲಕ್ಷ ಮತದಾರರು ಇದ್ದಾರೆ. 

LIVE NEWS & UPDATES

The liveblog has ended.
  • 14 Feb 2022 04:34 PM (IST)

    ಉತ್ತರಾಖಂಡ್​​ನ 2 ಹಳ್ಳಿಗಳ ಜನರಿಂದ ಮತದಾನ ಬಹಿಷ್ಕಾರ

    ಉತ್ತರಾಖಂಡ್​ನ ಕೇದಾರನಾಥದ ಎರಡು ಹಳ್ಳಿಗಳ ಜನರು ಇಂದು ಮತದಾನ ಬಹಿಷ್ಕಾರ ಮಾಡಿದ್ದಾರೆ. ರಸ್ತೆ ನಿರ್ಮಾಣ ಮಾಡದೆ ಇರುವುದಕ್ಕೆ ಅಸಮಾಧಾನಗೊಂಡಿರುವ ಜಗ್ಗಿ ಭಗವಾನ್​ ಮತ್ತು ಚಿಲೌಂದ್​ ಗ್ರಾಮಗಳ ಜನರು, ತಾವು ಇಂದು ಮತದಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ.

  • 14 Feb 2022 04:03 PM (IST)

    ಮಧ್ಯಾಹ್ನ 3ರವರೆಗೆ: ಗೋವಾ ಶೇ.60, ಯುಪಿ ಶೇ.52, ಉತ್ತರಾಖಂಡ್​ ಶೇ.49ರಷ್ಟು ಮತದಾನ

    ಮಧ್ಯಾಹ್ನ 3ಗಂಟೆಯ ಹೊತ್ತಿಗೆ ಗೋವಾದಲ್ಲಿ ಶೇ.60.18, ಉತ್ತರ ಪ್ರದೇಶದಲ್ಲಿ ಶೇ.51.93 ಮತ್ತು ಉತ್ತರಾಖಂಡ್​ನಲ್ಲಿ ಶೇ.49.24ರಷ್ಟು ಮತದಾನವಾಗಿದೆ.

  • 14 Feb 2022 03:30 PM (IST)

    ಗೋವಾದಲ್ಲಿ ಮತಗಟ್ಟೆಗಳಿಗೆ ಅಲಂಕಾರ

    ಗೋವಾದಲ್ಲಿ ಇಂದು ಮತದಾನ ನಡೆಯುತ್ತಿದ್ದು, ರಾಜ್ಯದ ಹಲವು ಮತಗಟ್ಟೆಗಳನ್ನು ಸುಂದರವಾಗಿ ಶೃಂಗರಿಸಿದ್ದು ಕಂಡುಬಂತು.

  • 14 Feb 2022 03:27 PM (IST)

    ಸಹರಾನ್​ಪುರದಲ್ಲಿ ಕರ್ತವ್ಯ ನಿರತ ಮತಗಟ್ಟೆ ಮುಖ್ಯಾಧಿಕಾರಿ ನಿಧನ

    ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ ಮತಗಟ್ಟೆ ಮುಖ್ಯಾಧಿಕಾರಿಯಾಗಿದ್ದ ರಶೀದ್​ ಅಲಿ ಖಾನ್​ ಕರ್ತವ್ಯದಲ್ಲಿದ್ದಾಗಲೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಇವರು ಸಹರಾನ್​ಪುರದ ಸಡಕ್​ ದುಧ್ಲಿ ಶಾಲೆಯಲ್ಲಿ ಶಿಕ್ಷಕರಾಗಿದ್ದು,  ಇಂದು ನಾಕುಡ್​ ವಿಧಾನಸಭೆ ಕ್ಷೇತ್ರದ ಸಾರ್ಸವಾದ ಮತಗಟ್ಟ ಸಂಖ್ಯೆ 227ರಲ್ಲಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಕೈಲಾಶ್​ಪುರ ನಿವಾಸಿಯಾಗಿದ್ದಾರೆ.

  • 14 Feb 2022 02:11 PM (IST)

    ಮಧ್ಯಾಹ್ನ 1ಗಂಟೆವರೆಗೆ ಗೋವಾದಲ್ಲಿ ಶೇ. 44.63ರಷ್ಟು ಮತದಾನ

    ಗೋವಾ, ಉತ್ತರಾಖಂಡ್​ ಮತ್ತು ಉತ್ತರ ಪ್ರದೇಶ (ಎರಡನೇ ಹಂತ)ದಲ್ಲಿ ಮತದಾನ ಭರದಿಂದ ಸಾಗುತ್ತಿದ್ದು, ಮಧ್ಯಾಹ್ನ 1 ಗಂಟೆ ಹೊತ್ತಿಗೆ ಗೋವಾದಲ್ಲಿ ಶೇ.44.63, ಉತ್ತರ ಪ್ರದೇಶದಲ್ಲಿ ಶೇ.39.07 ಮತ್ತು ಉತ್ತರಾಖಂಡ್​​ನಲ್ಲಿ ಶೇ.35.21ರಷ್ಟು ಮತದಾನವಾಗಿದೆ.

  • 14 Feb 2022 12:51 PM (IST)

    ಮತದಾರರ ಮೇಲೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ: ಅಖಿಲೇಶ್ ಯಾದವ್ ಆರೋಪ

    ಮತಹಾಕಲು ಬಂದ ಜನರನ್ನು ಸ್ಥಳೀಯ ಜಿಲ್ಲೆಗಳ ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಮತದಾರರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಅನೇಕರು ಮತದಾನವನ್ನೇ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ ಎಂದು ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಪತ್ರ ಚುನಾವಣಾ ಆಯೋಗಕ್ಕೆ ಪತ್ರವನ್ನೂ ಬರೆದಿದ್ದಾರೆ.

  • 14 Feb 2022 12:15 PM (IST)

    ಮಧ್ಯಾಹ್ನ 11ಗಂಟೆ ಹೊತ್ತಿಗೆ ಉತ್ತರ ಪ್ರದೇಶದಲ್ಲಿ ಶೇ.23ರಷ್ಟು ಮತದಾನ

    ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ್​ ರಾಜ್ಯಗಳಲ್ಲಿ ಮತದಾನ ಬಿರುಸಿನಿಂದ ಸಾಗುತ್ತಿದ್ದು, ಬೆಳಗ್ಗೆ 11ಗಂಟೆವರೆಗೆ ಉತ್ತರ ಪ್ರದೇಶದಲ್ಲಿ ಶೇ.23.03, ಗೋವಾದಲ್ಲಿ ಶೇ.26.63 ಮತ್ತು ಉತ್ತರಾಖಂಡ್​​ನಲ್ಲಿ ಶೇ.18.97ರಷ್ಟು ಮತದಾನವಾಗಿದೆ.

  • 14 Feb 2022 11:38 AM (IST)

    ತಾಯಿಯೊಂದಿಗೆ ಮತದಾನ ಮಾಡಿದ ಆಪ್​​ನ ಗೋವಾ ಸಿಎಂ ಅಭ್ಯರ್ಥಿ

    ಆಮ್​ ಆದ್ಮಿ ಪಾರ್ಟಿಯ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್​ ಅವರು ತಮ್ಮ ತಾಯಿಯೊಂದಿಗೆ ಮತ ಚಲಾಯಿಸಿದರು.

  • 14 Feb 2022 10:34 AM (IST)

    ಮತದಾರರಿಗೆ ಬಿಜೆಪಿ ಲಿಕ್ಕರ್​-ನಗದು ಹಂಚುತ್ತಿದೆ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಹರೀಶ್ ರಾವತ್​

    ಇಂದು ಉತ್ತರಾಖಂಡ್​​ನಲ್ಲಿ ಮತದಾನ ನಡೆಯುತ್ತಿರುವ ವೇಳೆ ಬಿಜೆಪಿಯವರು ಮತದಾರರಿಗೆ ಲಿಕ್ಕರ್​ ಮತ್ತು ನಗದು ಹಂಚುವ ಮೂಲಕ ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದ್ದಾರೆ.  ಬಿಜೆಪಿ ಮುಖ್ಯಮಂತ್ರಿ ಮತ್ತು ಇತರ ಶಾಸಕರು ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಹೀಗೆ ಹಂಚಲೆಂದೇ ದೆಹಲಿಯಿಂದ ಉತ್ತರಾಖಂಡ್​​ಗೆ 100 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಹರೀಶ್​ ರಾವತ್ ಹೇಳಿದ್ದಾರೆ.

  • 14 Feb 2022 10:25 AM (IST)

    ಯುಪಿ ಸಚಿವ ಜಿತಿನ್ ಪ್ರಸಾದ್​ರಿಂದ ಮತದಾನ

    ಉತ್ತರ ಪ್ರದೇಶ ಸಚಿವ ಜಿತಿನ್ ಪ್ರಸಾದ್​ ಅವರು ಶಹಜಾನ್​ಪುರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದರು. ಇಂದು ಯುಪಿಯ 55 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ.

  • 14 Feb 2022 10:19 AM (IST)

    ತಾಯಿ, ಪತ್ನಿಯೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದ ಉತ್ತರಾಖಂಡ್​ ಮುಖ್ಯಮಂತ್ರಿ

    ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್ ಸಿಂಗ್​ ಧಮಿ ತಮ್ಮ ತಾಯಿ ಮತ್ತು ಪತ್ನಿಯೊಂದಿಗೆ ಖಟಿಮಾದ ಮತಗಟ್ಟೆಗೆ ಬಂದು ಮತದಾನ ಮಾಡಿದರು.  ಬಳಿಕ ಮಾತನಾಡಿ, ಇಲ್ಲಿನ ನಮ್ಮ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಎಲ್ಲ ಯೋಜನೆಗಳೂ  ಉತ್ತರಾಖಂಡ್​ ರಾಜ್ಯದ ಜನರಿಗೆ ಅನುಕೂಲ ಮಾಡಿದಂಥವೇ ಆಗಿವೆ. ಈ ರಾಜ್ಯದ ಅಭಿವೃದ್ಧಿಗಾಗಿ ಯಾರು ಕೆಲಸ ಮಾಡಿದ್ದಾರೆ ಎಂಬುದು ಇಲ್ಲಿನ ಜನರಿಗೆ ಸ್ಪಷ್ಟವಾಗಿ ಗೊತ್ತಿದೆ. ಇಲ್ಲಿ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.

  • 14 Feb 2022 10:16 AM (IST)

    ಮತದಾನ ಶಾಂತಿಯುತವಾಗಿ ನಡೆಯಲು ಎಲ್ಲ ರೀತಿಯ ವ್ಯವಸ್ಥೆ

    ವಿಧಾನಸಭೆ ಚುನಾವಣೆ ನಡೆಯುತ್ತಿರುವ ಉತ್ತರಾಖಂಡ್​​ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥಿತವಾಗಿದೆ. ಮೊದಲೇ ಯೋಜನೆ ರೂಪಿಸಿಕೊಂಡಂತೆ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಶಾಂತಿಯುತವಾಗಿ ಮತದಾನ ನಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಉತ್ತರಾಖಂಡ್ ಮುಖ್ಯ ಚುನಾವಣಾ ಅಧಿಕಾರಿ ಸೌಜನ್ಯಾ ತಿಳಿಸಿದ್ದಾರೆ.

  • 14 Feb 2022 10:05 AM (IST)

    ಬೆಳಗ್ಗೆ 9ಗಂಟೆವರೆಗೆ: ಗೋವಾದಲ್ಲಿ ಶೇ.11.04, ಉತ್ತರಾಖಂಡ್​​ನಲ್ಲಿ ಶೇ.5.15ರಷ್ಟು ಮತದಾನ

    ಗೋವಾ, ಉತ್ತರಾಖಂಡ್​​ನಲ್ಲಿ ಇಂದು ವಿಧಾನಸಭೆ ಚುನಾವಣೆ ಮತದಾನ ನಡೆಯುತ್ತಿದೆ. ಹಾಗೇ, ಉತ್ತರ ಪ್ರದೇಶದಲ್ಲಿ ಎರಡನೇ ಹಂತದಲ್ಲಿ ಮತ ಚಲಾವಣೆಯಾಗುತ್ತಿದೆ. ಗೋವಾ ಮತ್ತು ಉತ್ತರಪ್ರದೇಶದಲ್ಲಿ ಬೆಳಗ್ಗೆ 7ಗಂಟೆಯಿಂದ ಮತದಾನ ಶುರುವಾಗಿದ್ದು, ಉತ್ತರಾಖಂಡ್​​ನಲ್ಲಿ ಬೆಳಗ್ಗೆ 8ರಿಂದ ಮತದಾನ ಪ್ರಾರಂಭವಾಗಿದೆ. ಬೆಳಗ್ಗೆ 9ಗಂಟೆ ಹೊತ್ತಿಗೆ ಗೋವಾದಲ್ಲಿ ಶೇ.11.04, ಉತ್ತರಪ್ರದೇಶದಲ್ಲಿ ಶೇ.9.45 ಮತ್ತು ಉತ್ತರಾಖಂಡ್​​ನಲ್ಲಿ ಶೇ.5.15ರಷ್ಟು ಮತದಾನವಾಗಿದೆ.

  • 14 Feb 2022 09:37 AM (IST)

    ಭ್ರಷ್ಟಾಚಾರ ಮುಕ್ತ ಸರ್ಕಾರ ಮಾತ್ರ ರಾಜ್ಯಗಳನ್ನು ಅಭಿವೃದ್ಧಿ ಮಾಡಬಲ್ಲದು: ಅಮಿತ್ ಶಾ

    ಗೃಹ ಸಚಿವ ಅಮಿತ್​ ಶಾ ಅವರು ಇಂದು ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶ, ಉತ್ತರಾಖಂಡ್​, ಗೋವಾ ರಾಜ್ಯಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ, ಮೂರು ಟ್ವೀಟ್​ ಮಾಡಿದ್ದಾರೆ. ಹಾಗೇ ಎಲ್ಲ ರಾಜ್ಯಗಳ ಮತದಾರರೂ ಮೊದಲು ಮತದಾನ ಮಾಡಿ, ನಂತರ ಉಪಾಹಾರಾ ಮಾಡಿ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಎಲ್ಲ ವರ್ಗದ ಜನರೂ, ಅದರಲ್ಲೂ ಯುವಜನರು, ಮಹಿಳೆಯರು ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸಿ ಎಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಒಂದು ಮತ ರಾಜ್ಯದ ಉಜ್ವಲ, ಸುಭದ್ರ ಭವಿಷ್ಯ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ. ಹಾಗೇ, ಉತ್ತರಾಖಂಡ್​ ಉಲ್ಲೇಖಿಸಿ ಟ್ವೀಟ್ ಮಾಡಿದ ಗೃಹ ಸಚಿವರು, ಭ್ರಷ್ಟಾಚಾರ ಮತ್ತು ತುಷ್ಟೀಕರಣದಿಂದ ಮುಕ್ತವಾದ ಸರ್ಕಾರ ಮಾತ್ರ ದೇವಭೂಮಿ ಉತ್ತರಾಖಂಡ್​ನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ. ಹಾಗಾಗಿ ಮತದಾರರು ತಮ್ಮ ಮತದ ಮೂಲಕ ರಾಜ್ಯದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪಾಲುದಾರರಾಗಬೇಕು ಎಂದು ಹೇಳಿದ್ದಾರೆ.

    ಹಾಗೇ, ಗೋವಾ ರಾಜ್ಯದ ಜನರಿಗೆ ಮತದಾನಕ್ಕೆ ಕರೆಕೊಟ್ಟ ಅಮಿತ್​ ಶಾ, ಸ್ಥಿರ, ನಿರ್ಣಾಯಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ನಿರ್ಮಾಣಕ್ಕಾಗಿ ಮತದಾನ ಮಾಡುವಂತೆ ಗೋವಾದ ಸೋದರ-ಸೋದರಿಯರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

  • 14 Feb 2022 09:25 AM (IST)

    ಪಣಜಿಯ ಮತಗಟ್ಟೆಗಳಿಗೆ ಉತ್ಪಾಲ್​ ಪರಿಕ್ಕರ್​ ಭೇಟಿ

    ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪುತ್ರ, ಬಿಜೆಪಿಯಿಂದ ಟಿಕೆಟ್​ ಸಿಗದ ಕಾರಣ​  ಪಣಜಿಯಿಂದ ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿ, ಉತ್ಪಾಲ್​ ಪರಿಕ್ಕರ್​ ಅವರು ಪಣಜಿಯ ಮತಗಟ್ಟೆಗಳಿಗೆ ಭೇಟಿ ನೀಡಿ, ವೀಕ್ಷಿಸಿದರು.

  • 14 Feb 2022 08:50 AM (IST)

    ಮತದಾನ ರಾಷ್ಟ್ರಧರ್ಮ: ಸಿಎಂ ಯೋಗಿ ಟ್ವೀಟ್​

    ಉತ್ತರ ಪ್ರದೇಶ ಎರಡನೇ ಹಂತದ ಮತದಾನದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್​ ಅವರು ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಮತದಾರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮತದಾನ ಮಾಡುವುದು ಹಕ್ಕು ಮತ್ತು ಕರ್ತವ್ಯವಷ್ಟೇ ಅಲ್ಲ, ಅದು ರಾಷ್ಟ್ರಧರ್ಮವೂ ಹೌದು.  ಗಲಭೆ ಮುಕ್ತ ಮತ್ತು ಭಯ ಮುಕ್ತ ಉತ್ತರ ಪ್ರದೇಶ ನಿರ್ಮಾಣವನ್ನು ಮನಸಲ್ಲಿಟ್ಟುಕೊಂಡು ಮತದಾನ ಮಾಡಿ ಎಂದು  ಹೇಳಿದ್ದಾರೆ.

  • 14 Feb 2022 08:42 AM (IST)

    ಮತ ಹಾಕಲು ಕ್ಯೂನಲ್ಲಿ ನಿಂತ ಕೇಂದ್ರ ಸಚಿವ

    ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಉತ್ತರಪ್ರದೇಶದ ರಾಂಪುರದ ಮತಗಟ್ಟೆಯೊಂದರಲ್ಲಿ ಸರದಿ ಸಾಲಿನಲ್ಲಿ ನಿಂತು  ಮತದಾನಕ್ಕೆ ಕಾಯುತ್ತಿದ್ದಾರೆ.

  • 14 Feb 2022 07:50 AM (IST)

    ಮತದಾನ ಮಾಡಿ, ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ ಹೆಚ್ಚಿಸಿ: ಪ್ರಧಾನಿ ಮೋದಿ

    ಉತ್ತರಾಖಂಡ್​, ಗೋವಾದಲ್ಲಿ ವಿಧಾನಸಭೆ ಚುನಾವಣೆ ಇಂದು ನಡೆಯುತ್ತಿದ್ದು, ಉತ್ತರ ಪ್ರದೇಶದ 55 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಪ್ರಾರಂಭವಾಗಿದೆ. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಇಂದು ಉತ್ತರಾಖಂಡ್​, ಗೋವಾ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮತದಾನ ಶುರುವಾಗಿದೆ. ಯಾರೆಲ್ಲ ಮತದಾನದ ಅರ್ಹತೆ ಪಡೆದಿದ್ದೀರೋ, ಅವರು ತಪ್ಪದೆ ಮತಚಲಾಯಿಸಿ. ದಾಖಲೆಯ ಸಂಖ್ಯೆಯಲ್ಲಿ ಮತದಾನವಾಗಿ, ಈ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ ಹೆಚ್ಚಿಸಿ ಎಂದು ಹೇಳಿದ್ದಾರೆ.

  • 14 Feb 2022 07:38 AM (IST)

    ಆಂಜನೇಯನಿಗೆ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಸುರೇಶ್​ ಕುಮಾರ್​ ಖನ್ನಾ

    ಇಂದು ಮತದಾನ ಶುರುವಾಗುತ್ತಿದ್ದಂತೆ ಉತ್ತರ ಪ್ರದೇಶ ಸಚಿವ, ಶಹಜಹಾನ್‌ಪುರ ಬಿಜೆಪಿ ಅಭ್ಯರ್ಥಿ ಸುರೇಶ್​ ಕುಮಾರ್​ ಖನ್ನಾ ಅವರು ಶಹಜಹಾನ್‌ಪುರದಲ್ಲಿರುವ ಹನುಮಾನ್​ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

  • 14 Feb 2022 07:34 AM (IST)

    ಉತ್ತರಪ್ರದೇಶದ 1138 ಬೂತ್​​ಗಳಲ್ಲಿ ಬಿಗಿ ಭದ್ರತೆ, ಡ್ರೋನ್​ ಕಣ್ಗಾವಲು

    ಉತ್ತರ ಪ್ರದೇಶದಲ್ಲಿ ಇಂದು 55 ಕ್ಷೇತ್ರಗಳಿಂದ 1138 ಬೂತ್​​ಗಳಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲ ಬೂತ್​​ಗಳಲ್ಲೂ ಸೆಂಟ್ರಲ್​ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗೇ, ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ, ಡ್ರೋನ್​ ಮೂಲಕ ಕೂಡ ಮತಗಟ್ಟೆಗಳ ಸುತ್ತಮುತ್ತ ಗಮನಿಸುತ್ತಿರುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಮೊರಾದಾಬಾದ್​ ಎಸ್​ಎಸ್​ಪಿ ಬಬ್ಲೂ ಕುಮಾರ್​ ತಿಳಿಸಿದ್ದಾರೆ.

  • 14 Feb 2022 07:30 AM (IST)

    ಗೋವಾ ರಾಜ್ಯಪಾಲರಿಂದ ಮತದಾನ

    ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್​ ಪಿಳ್ಳೈ ಮತ್ತು ಅವರ ಪತ್ನಿ ರೀತಾ ಶ್ರೀಧರನ್​ ಅವರು ತಲೈಗಾವ್​​ ವಿಧಾನಸಭೆ ಕ್ಷೇತ್ರದಲ್ಲಿರುವ ಮತಗಟ್ಟೆಯೊಂದರಲ್ಲಿ ತಮ್ಮ ಮತ ಚಲಾಯಿಸಿದರು.

Published On - 7:21 am, Mon, 14 February 22

Follow us on