ಬೆಳಗಾವಿ: ರಮೇಶ್ ಜಾರಕಿಹೊಳಿ(Ramesh Jarkiholi) ರಾಜ್ಯ ರಾಜಕೀಯದಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿರುವ ಹೆಸರು, ಸಮ್ಮಿಶ್ರ ಸರ್ಕಾರ ಬೀಳಿಸಿದ್ದರಿಂದ ಹಿಡಿದು ಸಿಡಿ ಕೇಸ್ವರೆಗೂ ಬಹಳಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದವರು. ಇದೀಗ ಚುನಾವಣೆ ಬರುತ್ತಿದ್ದಂತೆ ಮತ್ತೆ ಆ್ಯಕ್ಟೀವ್ ಆಗಿದಷ್ಟೇ ಅಲ್ಲದೇ ಹೈಕಮಾಂಡ್ಗೂ ಆಗಾಗ ಭೇಟಿಯಾಗಿ ಚುನಾವಣೆ ಕುರಿತು ಚರ್ಚೆ ಕೂಡ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಪ್ಲ್ಯಾನ್ ಮಾಡುತ್ತಿರುವ ಬಿಜೆಪಿ ಹೈಕಮಾಂಡ್ಗೆ ಇಲ್ಲಿರುವ ಬಣ ಬಡಿದಾಟ ತಲೆನೋವಾಗಿದೆ. ಇದು ಸರಿಯಾಗುತ್ತೆ ಎನ್ನುವಾಗಲೇ ರಮೇಶ್ ಜಾರಕಿಹೊಳಿ ಆಪ್ತರು ಇದೀಗ ಟಿಕೆಟ್ ವಿಚಾರದಲ್ಲಿ ಜಿದ್ದಿಗೆ ಬಿದ್ದಿರುವುದು ಮೂಲ ಬಿಜೆಪಿಗರ ನಿದ್ದೆಗೆಡುವಂತೆ ಮಾಡಿದೆ.
ಹೌದು ರಮೇಶ್ ಜಾರಕಿಹೊಳಿಯ ಆ ಒಂದು ನಡೆಯಿಂದ ಐದು ಕ್ಷೇತ್ರದಲ್ಲಿರುವ ಹಾಲಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಕಂಗಾಲಾಗುವಂತೆ ಮಾಡಿದೆ. ಇಡೀ ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಸಾಹುಕಾರ್ ಇದೀಗ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವ ಕೆಲಸಕ್ಕೆ ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ಈ ನಡೆಯೇ ಕೆಲವರಿಗೆ ನಡುಕ ಹುಟ್ಟುವಂತೆ ಮಾಡಿದೆ. ಬಿಜೆಪಿಯ ಹಾಲಿ ಶಾಸಕರಿರುವ ಕ್ಷೇತ್ರಗಳ ಮೇಲೆಯೂ ಕಣ್ಣಿಟ್ಟು ಹಾಲಿ ಶಾಸಕರನ್ನ ಬಿಟ್ಟು ತಮ್ಮ ಆಪ್ತರಿಗೆ ಟಿಕೆಟ್ ನೀಡುವಂತೆ ರಮೇಶ್ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ರಮೇಶ್ ಆಪ್ತರೆನಿಸಿಕೊಂಡವರು ಇದೀಗ ಶಾಸಕರಿರುವ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗುವುದರ ಜೊತೆಗೆ ಬಹಿರಂಗವಾಗಿ ಟಿಕೆಟ್ಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ.
ಯಾವ ಯಾವ ಕ್ಷೇತ್ರದಲ್ಲಿ ಮೂಲ ಬಿಜೆಪಿಗರಿಗೆ ರಮೇಶ್ ಜಾರಕಿಹೊಳಿ ತಲೆನೋವಾಗಿದ್ದಾರೆ?
ಬೆಳಗಾವಿ ದಕ್ಷಿಣ ಕ್ಷೇತ್ರ, ಇಲ್ಲಿ ಸದ್ಯ ಬಿಜೆಪಿ ಶಾಸಕರಾಗಿ ಅಭಯ್ ಪಾಟೀಲ್ ಇದ್ದು ಮೂರನೇ ಬಾರಿ ಗೆಲ್ಲಲೂ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಹಾಲಿ ಶಾಸಕರಿದ್ರೂ ರಮೇಶ್ ತಮ್ಮ ಆಪ್ತ ಕಿರಣ್ ಜಾಧವ್ಗೆ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ. ಈಗಾಗಲೇ ಬಿಜೆಪಿ ಹಿರಿಯ ನಾಯಕರಿಗೂ ಭೇಟಿ ಮಾಡಿಸಿ ಟಿಕೆಟ್ಗೆ ಡಿಮ್ಯಾಂಡ್ ಮಾಡಿದ್ದಾರೆ. ಇತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ತಮಗೆ ಟಿಕೆಟ್ ಸಿಗುತ್ತೆ ಎನ್ನುವ ಆಶಾ ಭಾವನೆಯಲ್ಲಿದ್ದಾಗಲೇ ರಮೇಶ್ ತನ್ನ ಶಿಷ್ಯ ನಾಗೇಶ್ ಮನ್ನೋಳ್ಕರ್ಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ.
ಇತ್ತ ಹುಕ್ಕೇರಿ ಕ್ಷೇತ್ರದಲ್ಲಿ ಉಮೇಶ್ ಕತ್ತಿ ಪುತ್ರ ನಿಖಿಲ್ ಕತ್ತಿಗೆ ಟಿಕೆಟ್ ಕೊಡಬೇಕೆಂದು ಮನವಿ ಮಾಡಿದ್ರೆ, ಇಲ್ಲಿ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಕೂಡ ಟಿಕೆಟ್ ಕೇಳುತ್ತಿದ್ದು ರಮೇಶ್ ಅವರ ಈ ನಡೆಯಿಂದ ಒಂದೇ ಮನೆಯಲ್ಲಿ ಇದೀಗ ಟಿಕೆಟ್ ಫೈಟ್ ಶುರುವಾಗಿದೆ. ಇತ್ತ ಅಥಣಿ ಕ್ಷೇತ್ರದಲ್ಲಿ ಆಪ್ತ ಮಹೇಶ್ ಕುಮಟಳ್ಳಿಗೆ ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸಲು ಓಡಾಡುತ್ತಿದ್ದು, ಇಲ್ಲಿ ಎಂಎಲ್ಸಿ ಲಕ್ಷ್ಮಣ ಸವದಿ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಬ್ಬರ ಫೈಟ್ ನಡುವೆ ಕುಮಟಳ್ಳಿಗೆ ಟಿಕೆಟ್ ನೀಡಲೇಬೇಕು ಎಂದು ರಮೇಶ್ ಪಟ್ಟು ಹಿಡಿದಿದ್ದಾರೆ. ಟಿಕೆಟ್ ನೀಡದಿದ್ದರೆ ನಾವು ಗೋಕಾಕ್ದಿಂದ ಸ್ಪರ್ಧೆ ಮಾಡಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಕರ್ನಾಟಕ ವಿರೋಧಿಸಿದರೂ ಬೆಳಗಾವಿ ಗಡಿ ಪ್ರದೇಶದಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸಿಯೇ ಸಿದ್ಧ; ಮಹಾರಾಷ್ಟ್ರ ಶಾಸಕ
ಇತ್ತ ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ನಿದ್ದೆಗೆಡಿಸಿರುವ ರಮೇಶ್ ಆಪ್ತ ಉತ್ತಮ್ ಪಾಟೀಲ್ ಮೂಲಕ ಕ್ಷೇತ್ರ ಹಿಡಿಯಲು ರಣತಂತ್ರ ಹೆಣೆಯುತ್ತಿದ್ದಾರೆ ರಮೇಶ್. ಹೌದು ನಿಪ್ಪಾಣಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶಶಿಕಲಾ ಜೊಲ್ಲೆ ವಿರುದ್ದ ಉತ್ತಮ ಪಾಟೀಲ್ ನಿಲ್ಲಿಸಲು ಮುಂದಾಗಿದ್ದಾರೆ. ರಮೇಶ್ ತಮ್ಮ ಆಪ್ತರಾಗಿದ್ದು ರಾಜಕೀಯ ಗುರುಗಳು ಕೂಡ ಎನ್ನುತ್ತಿರುವ ಉತ್ತಮ ಪಾಟೀಲ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಇತ್ತ ಲಕ್ಷ್ಮಣ ಸವದಿ ಕೂಡ ಇದೀಗ ಕಾರ್ಯಕರ್ತರ ಜೊತೆಗೆ ಸಭೆಗಳ ಮೇಲೆ ಸಭೆ ಮಾಡುತ್ತಿದ್ದೂ ಅವರು ಕೂಡ ಟಿಕೆಟ್ ಆಕಾಂಕ್ಷಿ ಎ.ಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಬಣ ಬಡಿದಾಟದ ನಡುವೆ ರಮೇಶ್ ಜಾರಕಿಹೊಳಿಯ ಹೊಸ ಗೇಮ್ ಇದೀಗ ಮೂಲ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ದೆಹಲಿಗೆ ತೆರಳಿ ನಿನ್ನೆ(ಮಾ.18) ಅಮಿತ್ ಶಾ ಅವರನ್ನ ಕೂಡ ಭೇಟಿ ಮಾಡಿ ಟಿಕೆಟ್ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಈ ನಡೆ ಕೆಲವರು ಕಂಗಾಲಾಗುವಂತೆ ಮಾಡಿದೆ. ಸದ್ಯ ರಮೇಶ್ ಅವರ ಈ ನಡೆಯೇ ಪಕ್ಷದಲ್ಲಿ ಮತ್ತೆ ಅಸಮಾಧಾನ ಭುಗಿಲೆಳುವ ಲಕ್ಷಣಗಳು ಕಾಣಿಸುತ್ತಿದ್ದು ಯಾವ ರೀತಿ ಹೈಕಮಾಂಡ್ ಇದನ್ನ ಬಗೆ ಹರಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ