ಬೆಳಗಾವಿ: ನಿಪ್ಪಾಣಿ ಶಾಸಕಿ, ಮುಜರಾಯಿ ಸಚಿವೆ, ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಶಿಕಲಾ ಜೊಲ್ಲೆ (Shashikala Jolle) ಅವರ ಕುಟುಂಬದ ಬಳಿ ಬರೋಬ್ಬರಿ ಬರೊಬ್ಬರಿ 68.58 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ನಿಂದ ತಿಳಿದುಬಂದಿದೆ. ಶಶಿಕಲಾ ಜೊಲ್ಲೆ ಬಳಿ 11.6 ಕೋಟಿ ರೂ. ಮೌಲ್ಯದ ಚರಾಸ್ತಿ ಇದ್ದರೆ, 56.98 ಕೊಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಶಶಿಕಲಾ ಜೊಲ್ಲೆ ಹೆಸರಲ್ಲಿ 3.9 ಕೋಟಿ ರೂ., ಪತಿ ಅಣ್ಣಾಸಾಹೇಬ ಜೊಲ್ಲೆ ಹೆಸರಲ್ಲಿ 5.73 ಕೋಟಿ ರೂ. ಪುತ್ರರ ಹೆಸರಲ್ಲಿ 1.17 ಕೋಟಿ ರೂ. ಹಾಗೂ ಇತರರ ಹೆಸರಲ್ಲಿ 26 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.
ಸಚಿವೆ ಶಶಿಕಲಾ ಜೊಲ್ಲೆ ಹೆಸರಲ್ಲಿ 24.13 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತಿ ಹೆಸರಲ್ಲಿ 15.04 ಕೋಟಿ ರೂ., ಪುತ್ರನ ಹೆಸರಲ್ಲಿ 17.81 ಕೋಟಿ ರೂ. ಸೇರಿ ಒಟ್ಟು 56.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 42.81 ಲಕ್ಷ ರೂ. ಹಣ ಶಶಿಕಲಾ ಜೊಲ್ಲೆರವರ ಬ್ಯಾಂಕ್ ಖಾತೆಯಲ್ಲಿದೆ.
ಶಶಿಕಲಾ ಜೊಲ್ಲೆ ಅವರ ಇಡೀ ಕುಟುಂಬದವರ ಬ್ಯಾಂಕ್ ಖಾತೆಯಲ್ಲಿರುವ ಒಟ್ಟು ಹಣ 2.19 ಕೋಟಿ ರೂ. ಇದಲ್ಲದೆ, 1.87 ಕೋಟಿ ರೂ. ಮೌಲ್ಯದ ವಿವಿಧ ಷೇರು ಹಾಗೂ ಬಾಂಡ್‌ಗಳನ್ನು ಅವರು ಖರೀದಿಸಿದ್ದಾರೆ. ಶಶಿಕಲಾ ಜೊಲ್ಲೆ ಬ್ಯಾಂಕುಗಳಿಂದ 80 ಲಕ್ಷ ರೂ. ವೈಯಕ್ತಿಕ ಸಾಲ ಹಾಗೂ 9.05 ಕೋಟಿ ರೂ. ಮೌಲ್ಯದ ವಿವಿಧ ಸಾಲ ಪಡೆದಿದ್ದಾರೆ. ಜೊಲ್ಲೆ ಕುಟುಂಬದ ಮೇಲೆ ಒಟ್ಟು 22.41 ಕೋಟಿ ರೂ. ಸಾಲವಿದೆ.
73 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿರುವ ಶಶಿಕಲಾ ಜೊಲ್ಲೆ ಬಳಿ ಒಟ್ಟಾರೆಯಾಗಿ 1.45 ಕೋಟಿ ರೂ. ಮೌಲ್ಯ ಚಿನ್ನ ಹಾಗೂ ಬೆಳ್ಳಿ ಆಭರಣ ಇವೆ. ವಿವಿಧ ಗ್ರಾಮಗಳಲ್ಲಿ 3.9 ಕೋಟಿ ರೂ. ಮೌಲ್ಯದ ಕೃಷಿ ಜಮೀನು ಹೊಂದಿದ್ದಾರೆ. 11.76 ಕೋಟಿ ರೂ. ಮೌಲ್ಯದ ಜಮೀನು ಇದೆ. 15.20 ಕೋಟಿ ರೂ. ಮೌಲ್ಯದ ವಾಣಿಜ್ಯ ಭೂಮಿಯನ್ನೂ ಹೊಂದಿದ್ದಾರೆ. ಒಟ್ಟಾರೆಯಾಗಿ ಜೊಲ್ಲೆ ಕುಟುಂಬ ಬಳಿ 21.85 ಕೋಟಿ ರೂ. ಮೌಲ್ಯದ ವಾಣಿಜ್ಯ ಭೂಮಿಯಿದೆ.
ಜೊಲ್ಲೆ ಕುಟುಂಬದ ಬಳಿ 10 ಹೈಬ್ರೀಡ್ ಹಸುಗಳು, 17 ದೇಸಿ ಹಸುಗಳು, 6 ಎಮ್ಮೆ, ಒಂದು ಕುದುರೆ ಹಾಗೂ 4 ನಾಯಿಗಳು ಇವೆ.
ಕಲಬುರಗಿ ಜಿಲ್ಲೆ ಜೇವರ್ಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್ 42 ಕೋಟಿ ಆಸ್ತಿಯ ಒಡೆಯ ಎಂಬುದು ಅಫಿಡವಿಟ್ನಿಂದ ತಿಳಿದುಬಂದಿದೆ. ಅಜಯ್ ಸಿಂಗ್ ಹೆಸರಲ್ಲಿ 20.22 ಕೋಟಿ ರೂ. ಮೌಲ್ಯದ ಚರಾಸ್ತಿ, 21.44 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅಜಯ್ ಸಿಂಗ್ ಪತ್ನಿ ಹೆಸರಲ್ಲಿ 8.95 ಕೋಟಿ ರೂ. ಚರಾಸ್ತಿ, 3.40 ಕೋಟಿ ರೂ. ಸ್ಥಿರಾಸ್ತಿ ಇದೆ. ಅಜಯ್ ಸಿಂಗ್ ಮಕ್ಕಳಿಬ್ಬರು 2.5 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ನೆಲೋಗಿ ಗ್ರಾಮ ಸೇರಿದಂತೆ ಅನೇಕ ಕಡೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಸೈಟ್ಗಳನ್ನು ಸಹ ಹೊಂದಿದ್ದಾರೆ. ಅನೇಕ ಕಂಪನಿಗಳ ಷೇರುಗಳನ್ನೂ ಡಾ.ಅಜಯ್ ಸಿಂಗ್ ಹೊಂದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ