Karnataka Assembly Election 2023: ಬೆಂಗಳೂರಲ್ಲಿ 8 ಸಾವಿರ ಜನ ಮನೆಯಿಂದಲೇ ಮತದಾನ
ಬೆಂಗಳೂರಿನಲ್ಲಿ ಅಂಗವಿಕಲ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ 8,730 ಜನರು ಮನೆಯಿಂದ ಮತ ಚಲಾಯಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬೆಂಗಳೂರು: ಕಳೆದ ಬಾರಿ ಚುನಾವಣೆಯಲ್ಲಿ ನಗರದಲ್ಲಿ ಶೇ.50ರಿಂದ 60ಕ್ಕಿಂತ ಹೆಚ್ಚು ಮತದಾನ ನಡೆದಿಲ್ಲ. ಈ ಹಿನ್ನೆಲೆ ಈ ಬಾರಿ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಂಡು ಮತದಾನದ ಪ್ರಮಾಣ ಶೇ.90ರಿಂದ 100ರಷ್ಟು ಮಾಡಬೇಕೆಂದು ಚುನಾವಣಾ ಆಯೋಗ (Election Commission) ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳ್ನು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ (Above 80 Years People) , ಅಂಗವಿಕಲರಿಗೆ (Disabled) ಮನೆಗಳಿಂದಲೇ ಮತದಾನ ಮಾಡಲು ಅವಕಾಶವನ್ನೂ ಸಹ ನೀಡಿದೆ. ಈ ಸಂಬಂಧ ಚುನಾವಣಾ ಆಯೋಗ ಸರ್ವೆ ಮಾಡಿದ್ದು. ಬೆಂಗಳೂರಿನಲ್ಲಿ ಸುಮಾರು 2.36 ಲಕ್ಷ ಜನರು 80 ವರ್ಷ ಮೇಲ್ಪಟ್ಟವರಿದ್ದು, ರಾಜ್ಯಾದ್ಯಂತ 12 ಲಕ್ಷಕ್ಕೂ ಹೆಚ್ಚಿನ ಜನರಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ (Bengaluru) ಅಂಗವಿಕಲ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ 8,730 ಜನರು ಮನೆಯಿಂದ ಮತ ಚಲಾಯಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದರ ಕುರಿತಾಗಿ ಚುನಾವಣಾ ಆಯೋಗ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿಗಳು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಈ ಮತದಾರರು ಮೇ 10 ರ ಮತದಾನದ ದಿನಾಂಕಕ್ಕಿಂತ ಕನಿಷ್ಠ ನಾಲ್ಕು ಅಥವಾ ಐದು ದಿನಗಳ ಮೊದಲು ತಮ್ಮ ಮತವನ್ನು ಚಲಾಯಿಸುತ್ತಾರೆ.
ಅಂಕಿ ಅಂಶಗಳ ಪ್ರಕಾರ, ಸುಮಾರು 8,611 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 119 ಮಂದಿ ವಿಕಲಚೇತನರಿದ್ದಾರೆ. ಮನೆಯಿಂದಲೇ ಮತದಾನಕ್ಕೆ (Vote From Home)ಗೆ ಅರ್ಜಿ ಸಲ್ಲಿಸಲು ಇನ್ನು 4 ದಿನ ಸಮಯವಿರುದರಿಂದ ಈ ಅಂಕಿ-ಸಂಖ್ಯೆಗಳು ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka Assembly Polls 2023: ಈ ಬಾರಿ ಮೈಸೂರು ಜಿಲ್ಲೆಯಲ್ಲಿ 1 ಲಕ್ಷ ಜನ ಮನೆಯಿಂದಲೇ ಮತದಾನ
ಮನೆಯಿಂದಲೇ ಮತದಾನ ಮಾಡಲು ಅರ್ಜಿ ಸಲ್ಲಿಸಿದವರ ಮನೆಗಳಿಗೆ ಚುನಾವಣಾ ಅಧಿಕಾರಿಗಳು ಭೇಟಿ ನೀಡಿ ಮತದಾರರ ಭೌತಿಕ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅದೇ ರೀತಿ ಅಂಗವಿಕಲರ ಮನೆಗಳಿಗೆ ಭೇಟಿ ನೀಡಿ ಅವರ ಅಂಗವೈಕಲ್ಯತೆಯ ಪ್ರಮಾಣವನ್ನು ಪರಿಶೀಲಿಸಿದ್ದು, ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ನಂತರ ಇವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದ್ದು, ಇವರ ಮನೆಯಲ್ಲಿಯೇ ಮತದಾನ ಕೇಂದ್ರದ ಮಾದರಿಯನ್ನು ನಿರ್ಮಿಸಲು ಬಿಬಿಎಂಪಿ ಯೋಜಿಸಿದೆ. ಮತದಾನದ ದಿನದಂದು ಮತಗಟ್ಟೆಯ ಅಧಿಕಾರಿಗಳು, ಪ್ರಥಮ ಚುನಾವಣಾಧಿಕಾರಿ, ಪೊಲೀಸ್, ವಿಡಿಯೋಗ್ರಾಫರ್ಗಳು ಅವರ ಮನೆಗಳಿಗೆ ಭೇಟಿ ನೀಡಲಿದ್ದಾರೆ.
ಬಿಬಿಎಂಪಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟವರೇ ನಿರ್ಣಯಕ ಮತದಾರರಾಗಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ನೀಡಿರುವ ಅವಕಾಶ ಬಳಸಿಕೊಂಡು ಎಲ್ಲರೂ ಮತದಾನ ಮಾಡುವಂತೆ ಅನುಕೂಲ ಕಲ್ಪಿಸಲಾಗುತ್ತಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ