Chittapur Election Result 2023: ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಹ್ಯಾಟ್ರಿಕ್
ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಣಿಕಾಂತ ರಾಥೋಡ್ ಅವರನ್ನು ಮಣಿಸಿ ಕಾಂಗ್ರೆಸ್ ಹಾಲಿ ಶಾಸಕ, ಎಐಸಿಸಿ ಅಧ್ಯಕ್ಷರ ಪುತ್ರ ಪ್ರಿಯಾಂಕ್ ಖರ್ಗೆ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಅವರು ಸತತ ಮೂರು ಬಾರಿ ಗೆಲುವು ಸಾಧಿಸಿದಂತಾಗಿದೆ.
ಕಲಬುರಗಿ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದ್ದು, ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ (Chitapur Assembly Constituency) ಬಿಜೆಪಿಯ ಮಣಿಕಾಂತ ರಾಥೋಡ್ ಅವರನ್ನು ಮಣಿಸಿ ಕಾಂಗ್ರೆಸ್ ಹಾಲಿ ಶಾಸಕ, ಎಐಸಿಸಿ ಅಧ್ಯಕ್ಷರ ಪುತ್ರ ಪ್ರಿಯಾಂಕ್ ಖರ್ಗೆ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಅವರು ಸತತ ಮೂರು ಬಾರಿ ಗೆಲುವು ಸಾಧಿಸಿದಂತಾಗಿದೆ. ಇವರನ್ನು ಹೇಗಾದರೂ ಮಣಿಸಲೇಬೇಕು ಎಂದು ಬಿಜೆಪಿ ಪಣತೊಟ್ಟಿತ್ತು. ಇಲ್ಲಿ ಎಎಪಿಯಿಂದ ಜಗದೀಶ್ ಸಾಗರ್ ಅವರು ಸ್ಪರ್ಧಿಸಿದ್ದರು.
ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೊಸ ಮುಖವನ್ನು ಕಣಕ್ಕಿಳಿಸಿತ್ತು. ಸತತ 3ನೇ ಬಾರಿಗೆ ಗೆಲ್ಲುವ ಉಮೇದಿನಲ್ಲಿರುವ ಪ್ರಿಯಾಂಕ್ ಖರ್ಗೆಯವರು ಅಭಿವೃದ್ಧಿ ಮಂತ್ರ ಪಠಿಸಿದ್ದರೆ, ಮಣಿಕಂಠ ರಾಠೋಡರನ್ನ ಕಣಕ್ಕಿಳಿಸಿರುವ ಬಿಜೆಪಿ ಇಲ್ಲಿ ಹೊಸ ಮುಖ ತಂತ್ರದ ದಾಳ ಉರುಳುಸಿತ್ತು. ಹೀಗಾಗಿ ಚಿತ್ತಾಪುರ ಕದನ ಕಣ ರೋಚಕ ತಿರುವು ಪಡೆದುಕೊಂಡಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ 4,393 ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ವಾಲ್ಮೀಕಿ ನಾಯಕ್ ಪ್ರಬಲ ಪೈಪೋಟಿ ನೀಡಿದ್ದರು. ಬಿಎಸ್ಪಿಯ ದೇವರಾಜ ವಿಕೆ ಮೂರನೇ ಸ್ಥಾನ ಪಡೆದಿದ್ದರು. ನೋಟಾ ಹೊರತುಪಡಿಸಿ 8 ಮಂದಿ ಸ್ಪರ್ಧಿಸಿದ್ದರು. ಬಹಳ ಜಿದ್ದಾಜಿದ್ದಿನ ಪೈಪೋಟಿ ಬಳಿಕ ಪ್ರಿಯಾಂಖ್ ಖರ್ಗೆ ಗೆಲುವಿನ ನಗೆ ಬೀರಿದ್ದರು.
ಈ ಹಿಂದೆ 2013 ಮತ್ತು 2018ರಲ್ಲಿ ಪ್ರಿಯಾಂಕ್ ಖರ್ಗೆ ಗೆದ್ದಿದ್ದರು. 2008ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸ್ಥಾನವನ್ನು ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದರು. ಪ್ರಿಯಾಂಕ್ ಕೆಪಿಸಿಸಿಯ ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ತನ್ನ ವೃತ್ತಿಯನ್ನು ಉದ್ಯಮ ಎಂದು ಘೋಷಿಸಿರುವ ಪ್ರಿಯಾಂಕ್ ಖರ್ಗೆ ಒಟ್ಟು 16.83 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಅವರು ಐಪಿಸಿ ಸೆಕ್ಷನ್ 141, 143, 147, 149, 188, 290, 341, 499 ಮತ್ತು 500 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯಾಗಿಲ್ಲ.
Published On - 1:51 pm, Sat, 13 May 23