ಚೆನ್ನೈ: ಮತದಾನದ ದಿನಾಂಕ ಸಮೀಪಿಸುತ್ತಿರುವ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ತಾರಾ ಪ್ರಚಾರ ಮತ್ತು ನಿಂದನಾತ್ಮಕ ಹೇಳಿಕೆಗಳು ದೇಶದ ಗಮನ ಸೆಳೆಯುತ್ತಿವೆ. ಈ ನಡುವೆ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿರುದ್ಧ ಮಾಜಿ ಕೇಂದ್ರ ಸಚಿವ ಎ.ರಾಜಾ ಮಾಡಿರುವ ಆಕ್ಷೇಪಾರ್ಹ ಹೇಳಿಕೆ ದೊಡ್ಡ ವಿವಾದ ಹುಟ್ಟುಹಾಕಿದೆ. ಎ.ರಾಜಾ ನೀಡಿದ ಹೇಳಿಕೆಯಿಂದ ನೊಂದುಕೊಂಡ ಪಳನಿಸ್ವಾಮಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಕಣ್ಣೀರು ಹಾಕಿದರು. ತಮ್ಮ ಹೇಳಿಕೆಯ ಬಿಸಿ ಅರ್ಥ ಮಾಡಿಕೊಂಡ 57ರ ಹರೆಯದ ಎ.ರಾಜಾ ಮುಖ್ಯಮಂತ್ರಿಯ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೇಳಿಕೆಯ ವಿವಾದ ಯಾವ ಸ್ವರೂಪ ಪಡೆದುಕೊಳ್ಳತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಿರುವ ಎ.ರಾಜಾ, ‘ಇಬ್ಬರು ನಾಯಕರ ಬಗ್ಗೆ ವೈಯಕ್ತಿಕವಾಗಿ ಟೀಕಿಸುವುದು ನನ್ನ ಹೇಳಿಕೆಯ ಉದ್ದೇಶವಾಗಿರಲಿಲ್ಲ. ಇಬ್ಬರು ನಾಯಕರ ಸಾರ್ವಜನಿಕ ಬದುಕನ್ನು ಹೋಲಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ಹೇಳಿದರು.
ದೇಶದ ಗಮನ ಸೆಳೆದಿದ್ದ ವಿವಾದಾತ್ಮಕ 2ಜಿ ಹಗರಣದಲ್ಲಿ ರಾಜಾ ಅವರ ಹೆಸರು ಕೇಳಿಬಂದಿತ್ತು. ನಂತರ ದಿನಗಳಲ್ಲಿ ರಾಜಾ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ಪ್ರಸಕ್ತ ವಿವಾದದ ಬಗ್ಗೆ ವಿಷಾದ ವ್ಯಕ್ತಪಡಿಸುವ ಸಂದರ್ಭದಲ್ಲಿಯೂ ರಾಜಾ ಟೆಲಿಕಾಂ ಹಗರಣದ ಬಗ್ಗೆ ನ್ಯಾಯಮೂರ್ತಿ ಸೈನಿ ಅವರ ತೀರ್ಪು ಉಲ್ಲೇಖಿಸಿದರು. (ಯಾವುದೇ ದಾಖಲೆಗಳನ್ನು) ತಪ್ಪಾಗಿ ಓದಿಕೊಳ್ಳುವುದು, ಬೇಕಿರುವಷ್ಟನ್ನೇ ಓದಿಕೊಳ್ಳುವುದು, ಸಂದರ್ಭಕ್ಕೆ ಹೊರತಾಗಿ ಓದಿಕೊಳ್ಳುವುದು ಮತ್ತು ಓದದೇ ಇರುವ ಲೋಪಗಳ ಬಗ್ಗೆ ಎ.ರಾಜಾ ನೆನಪಿಸಿಕೊಂಡರು.
‘ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ನನ್ನ ಮಾತಿನಿಂದ ನೋವಾಗಿರುವ ವಿಷಯ ತಿಳಿದು ನನಗೂ ಬೇಸರವಾಯಿತು. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಯಿತು. ಆದರೂ ನಾನು ಹೃದಯದ ಆಳದಿಂದ ವಿಷಾದ ವ್ಯಕ್ತಪಡಿಸುತ್ತೇನೆ. ರಾಜಕೀಯ ಕಾರಣಗಳನ್ನು ಹೊರತುಪಡಿಸಿ ಪಳನಿಸ್ವಾಮಿ ಅವರಿಗೆ ನೋವಾಗಿದ್ದರೆ ನಾನು ಹೃದಯಪೂರ್ವಕ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದರು.
ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರ ತಾಯಿಯ ಬಗ್ಗೆ ಎ.ರಾಜಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಪಳನಿಸ್ವಾಮಿ ಆತುರಕ್ಕೆ ಹುಟ್ಟಿದವರು, ಗರ್ಭಾವಧಿ ಪೂರ್ಣಗೊಳ್ಳುವ ಮೊದಲೇ ಭೂಮಿಗೆ ಬಂದವರು. ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರ ಚಪ್ಪಲಿಗಿಂತಲೂ ಪಳನಿಸ್ವಾಮಿ (ವ್ಯಕ್ತಿತ್ವದ) ಬೆಲೆ ಒಂದು ರೂಪಾಯಿ ಕಡಿಮೆ ಎಂದು ಎ.ರಾಜಾ ವ್ಯಂಗ್ಯವಾಡಿದ್ದರು. ಈ ಹೇಳಿಕೆಯು ನಂತರ ವಿವಾದದ ಸ್ವರೂಪ ಪಡೆದುಕೊಂಡಿತ್ತು.
‘ಸ್ಟಾಲಿನ್ ಒಂದು ವರ್ಷ ಮೀಸಾ (ಆಂತರಿಕ ಭದ್ರತಾ ಕಾಯ್ದೆ) ಕಾಯ್ದೆಯಡಿ ಒಂದು ವರ್ಷ ಜೈಲಿನಲ್ಲಿದ್ದರು. ಜಿಲ್ಲಾ ಕಾರ್ಯದರ್ಶಿ, ಕೇಂದ್ರ ಸಮಿತಿ ಸದಸ್ಯರು, ಯುವ ವಿಭಾಗದ ಮುಖ್ಯಸ್ಥರು, ಪಕ್ಷದ ಕಾರ್ಯದರ್ಶಿ, ಖಜಾಂಚಿ, ಕಾರ್ಯಕಾರಿ ಅಧ್ಯಕ್ಷರಾಗಿ ರಾಜಕಾರಣದಲ್ಲಿ ಹಂತಹಂತವಾಗಿ ಮೇಲೇರಿದರು. ಕರುಣಾನಿಧಿ ನಿಧನದ ನಂತರ ಪಕ್ಷದ ಅಧ್ಯಕ್ಷರಾದರು. ಮದುವೆ ವಿಧಿವಿಧಾನದ ನಂತರ ಸರಿಯಾದ ರೀತಿಯಲ್ಲಿ ಸ್ಟಾಲಿನ್ ಹುಟ್ಟಿದರು ಎಂದು ಯಾರು ಬೇಕಾದರೂ ಹೇಳಬಹುದು. ಆದರೆ ಎಡಪ್ಪಾಡಿ ಹೀಗಲ್ಲ. ಅವರು ಇದ್ದಕ್ಕಿದ್ದಂತೆ ಹುಟ್ಟಿದ ಆತುರದ ಮಗು’ ಎಂದು ರಾಜಾ ಜರಿದಿದ್ದರು.
ಬೆಲ್ಲದ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಪಳನಿಸ್ವಾಮಿ ಇದ್ದಕ್ಕಿದ್ದಂತೆ ರಾಜಕಾರಣದಲ್ಲಿ ಮೇಲೇರಿದರು. ಸ್ಟಾಲಿನ್ಗೆ ಅವರು ಹೇಗೆ ಸ್ಪರ್ಧೆ ನೀಡಲು ಸಾಧ್ಯ’ ಎಂದು ಮಾಜಿ ಕೇಂದ್ರ ಸಚಿವ ರಾಜಾ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದ್ದರು.
ಈ ಹೇಳಿಕೆಯ ಬಗ್ಗೆ ಭಾನುವಾರ ಉತ್ತರ ಚೆನ್ನೈನ ತಿರುವೊಟ್ಟಿಯೂರ್ನಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಪಳನಿಸ್ವಾಮಿ, ‘ನಾನು ನನ್ನೊಬ್ಬನ ಬಗ್ಗೆ ಮಾತಾಡುತ್ತಿಲ್ಲ. ಇಲ್ಲಿರು ಎಲ್ಲ ತಾಯಂದಿರು ಮತ್ತು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಮುಖ್ಯಮಂತ್ರಿಯ ತಾಯಿಯ ಬಗ್ಗೆ ಈ ರೀತಿ ಮಾತನಾಡಿದರೆ ಉಳಿದವರ ಪಾಡೇನು? ಅವರು ಅಧಿಕಾರಕ್ಕೆ ಏನಾಗಬಹುದು’ ಎಂದು ಪ್ರಶ್ನಿಸಿದ್ದರು. ರಾಜಾ ನನ್ನ ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಕಣ್ಣೀರು ಹಾಕಿದ್ದರು.
‘ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕು ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ಇಲ್ಲಿರುವ ತಾಯಂದಿರನ್ನು ನೋಡಿ ನಾನು ಭಾವುಕನಾದೆ. ಸಮಾಜದಲ್ಲಿ ತಾಯಿಗೆ ದೊಡ್ಡಸ್ಥಾನವಿದೆ. ಆಕೆ ಶ್ರೀಮಂತೆ ಅಥವಾ ಬಡವಳಾದರೂ ಸರಿ, ಮಹಿಳೆಯನ್ನು ನಿಂದಿಸಿದವರಿಗೆ ದೇವರು ತಕ್ಕಶಿಕ್ಷೆ ಕೊಡಬೇಕು. ಮಾತೃನಿಂದನೆ ಮಾಡುವ ರಾಜಾರಂಥ ನಾಯಕರಿಗೆ ಜನರು ಮತದಾನದ ದಿನ ಸರಿಯಾದ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಖ್ಯಾತ ನಟಿ ಶಕೀಲಾ ಕಾಂಗ್ರೆಸ್ಗೆ ಸೇರ್ಪಡೆ; ತಮಿಳುನಾಡು ರಾಜಕಾರಣಕ್ಕೆ ತಾರಾಮೆರುಗು
ಇದನ್ನೂ ಓದಿ: ತಮಿಳುನಾಡು ವಿಧಾನಸಭಾ ಚುನಾವಣೆ: ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ
Published On - 3:34 pm, Mon, 29 March 21