ತಮಿಳುನಾಡು ವಿಧಾನಸಭಾ ಚುನಾವಣೆ: ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ

ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ (ಮಾರ್ಚ್ 26) ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ನಾಳೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಡಿಎಂಕೆ, ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ: ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
| Updated By: ಸಾಧು ಶ್ರೀನಾಥ್​

Updated on: Mar 26, 2021 | 12:35 PM

ಬೆಂಗಳೂರು: ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ (ಮಾರ್ಚ್ 26) ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ನಾಳೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಡಿಎಂಕೆ, ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ತಳಿ, ಡೆಂಕಣಿಕೋಟ, ಹೊಸೂರು, ಬಾಗಲೂರು, ಬೇರಿಗೆ, ಸೂಲಗಿರಿ ಹಾಗೂ ವೇಪನಪಲ್ಲಿಯಲ್ಲಿ ಸಿದ್ದರಾಮಯ್ಯರವರು ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಅಲ್ಲಿನ ಪ್ರತಿಪಕ್ಷ ಡಿಎಂಕೆ ಈಗಾಗಲೇ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಹೇಗಾದರೂ ಅಧಿಕಾರಿ ಹಿಡಿಯಲೇಬೇಕು ಎಂದು ಹಠ ತೊಟ್ಟಿರುವ ಎಂ.ಕೆ.ಸ್ಟಾಲಿನ್​ ನೇತೃತ್ವದ ಡಿಎಂಕೆ ಕಾಂಗ್ರೆಸ್​ನೊಂದಿಗೆ ಮೈತ್ರಿಯನ್ನೂ ಮಾಡಿಕೊಂಡಿದೆ. ಇದೀಗ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವನ್ನೇ ನೀಡಿದೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಡಾಟಾ ಕಾರ್ಡ್​ ಜತೆ ಉಚಿತ ಕಂಪ್ಯೂಟರ್​ ಟ್ಯಾಬ್ಲೆಟ್​ ನೀಡುವ ಮತ್ತು ರಾಜ್ಯದ ಉದ್ಯಮಗಳಲ್ಲಿ ಶೇ.75ರಷ್ಟು ಉದ್ಯೋಗ ಸ್ಥಳೀಯರಿಗೇ ಮೀಸಲಿಡಬೇಕು ಎಂಬ ಕಾನೂನುನ್ನು ಹೊರತರುವುದಾಗಿ ಹೇಳಿಕೊಂಡಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೇ ಮೊದಲ ಆದ್ಯತೆ ನೀಡಲಾಗುವುದು. ಹಾಗೇ ಖಾಸಗೀ ವಲಯಗಳಲ್ಲಿ ಮೀಸಲಾತಿ ತರುವುದು, ಸಣ್ಣ ರೈತರಿಗೆ ಸಬ್ಸಿಡಿ ನೀಡುವುದು ನಮ್ಮ ಪ್ರಮುಖ ಯೋಜನೆಗಳಾಗಿವೆ ಎಂದು ತಿಳಿಸಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 5 ರೂ. ಮತ್ತು ಡೀಸೆಲ್​ ಬೆಲೆಯನ್ನು ಲೀಟರ್​ಗೆ 4 ರೂ.ಕಡಿಮೆ ಮಾಡುತ್ತೇವೆ. ಹಾಗೇ, ಎಲ್​​ಪಿಜಿ ಸಿಲಿಂಡರ್​ಗೆ 100 ರೂ.ಸಬ್ಸಿಡಿ ನೀಡುತ್ತೇವೆ. ಹಾಗೇ ಹಿಂದೂ ದೇವಾಲಯಗಳ ನವೀಕರಣಕ್ಕೆ 1000 ಕೋಟಿ ರೂ. ಹಾಗೂ ಚರ್ಚ್​ ಮತ್ತು ಮಸೀದಿಗಳಿಗೆ 200 ಕೋಟಿ ರೂ.ಮೀಸಲಿಡಲಾಗುವುದು ಎಂದೂ ಸ್ಟಾಲಿನ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪ್ರಮುಖ ಹಿಂದೂ ದೇವಾಲಯಗಳಿಗೆ ಯಾತ್ರೆಗೆ ಹೋಗುವ ಒಂದು ಲಕ್ಷ ಜನರಿಗೆ ತಲಾ 25,000ರೂ.ನೆರವು ನೀಡುವುದು, ಮಾತೃತ್ವ ರಜೆ ವಿಸ್ತರಣೆ ಮತ್ತು NEET ರದ್ದು ಮಾಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸ್ಟಾಲಿನ್​ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದಾರೆ.

ಇದಿಷ್ಟರ ಹೊರತಾಗಿ ಸ್ವಚ್ಛ ಕುಡಿಯುವ ನೀರು ಸರಬರಾಜು, ಉತ್ತಮ ಜಲ ನಿರ್ವಹಣೆ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹೆಚ್ಚಳ, ಹಿರಿಯರ ಪಿಂಚಣಿಯಲ್ಲಿ ಏರಿಕೆ ಮಾಡಲಾಗುವುದು ಎಂದು ಹೇಳಿರುವ ಎಂ.ಕೆ. ಸ್ಟಾಲಿನ್​, ಬಡವರ ಹಸಿವು ನೀಗಿಸಲು ರಾಜ್ಯಾದ್ಯಂತ ಕಲೈನಾರ್ ಉಣವಗಂ ಉಪಾಹಾರ ಗೃಹ ಪ್ರಾರಂಭಿಸುವುದಾಗಿಯೂ ತಿಳಿಸಿದ್ದಾರೆ.

ಇನ್ನೂ ಒಂದು ಮಹತ್ವದ ವಿಚಾರವನ್ನು ಡಿಎಂಕೆ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ. 2016ರಲ್ಲಿ ಅಂದಿನ ಜಯಲಲಿತಾ ಮೃತಪಟ್ಟಾಗ ಹಲವು ಅನುಮಾನಗಳು ಎದ್ದಿದ್ದವು. ಹಾಗಾಗಿ ಅವರ ಸಾವಿನ ಬಗ್ಗೆ ತನಿಖೆ ಮಾಡಲು ಅರುಮುಗಸಾಮಿ ಸಮಿತಿಯನ್ನು ರಚಿಸಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಈ ಸಮಿತಿ ತ್ವರಿತವಾಗಿ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಟಾಲಿನ್​ ಹೇಳಿದ್ದಾರೆ.

ಇದನ್ನೂ ಓದಿ: DMK ಮಾಜಿ ಸಂಸದನ ರೌದ್ರಾವತಾರ ನೋಡಿ, ಪೊಲೀಸ್ ಪೇದೆ ಮಾಡಿದ ತಪ್ಪೇನು?