ಟ್ರಾಮಾಕೇರ್ ಬಂದ್ಗೆ ಮುಂದಾದ ವಿಮ್ಸ್; ಹೊರಗುತ್ತಿಗೆ ಸಿಬ್ಬಂದಿಗಳ ಕೆಲಸಕ್ಕೆ ಕೊಕ್ಕೆ
ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕೊರೊನಾ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡಿತ್ತು. ಆಸ್ಪತ್ರೆಯಲ್ಲಿ ಬೆಡ್ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಐಸಿಯು ಸಿಗದೇ ಕೊವಿಡ್ ಸೋಂಕಿತರು ಸಾಕಷ್ಟು ತೊಂದರೆ ಪಡುವಂತಾಗಿತ್ತು.
ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಶುರುವಾಗಿದೆ. ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸ್ಫೋಟಗೊಳ್ಳುತ್ತಿದೆ. ಈ ನಡುವೆ ಸೋಂಕಿತರಿಗೆ ಸುಸಜ್ಜಿತವಾಗಿ ಚಿಕಿತ್ಸೆ ಸಿಗುತ್ತಿದ್ದ ಟ್ರಾಮಾಕೇರ್ ನಿರ್ವಹಣೆಗೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಟ್ರಾಮಾಕೇರ್ ಸೆಂಟರ್ ಆಸ್ಪತ್ರೆಯನ್ನು ಬಂದ್ ಮಾಡಲು ವಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ. ಇದರಿಂದ ಟ್ರಾಮಾಕೇರ್ ಸೆಂಟರ್ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರಿಗೂ ಈಗ ಕೆಲಸಕ್ಕೆ ಕೊಕ್ಕೆ ಬೀಳಲಿದೆ.
ಸರ್ಕಾರಕ್ಕೆ ಪತ್ರ ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕೊರೊನಾ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡಿತ್ತು. ಆಸ್ಪತ್ರೆಯಲ್ಲಿ ಬೆಡ್ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಐಸಿಯು ಸಿಗದೇ ಕೊವಿಡ್ ಸೋಂಕಿತರು ಸಾಕಷ್ಟು ತೊಂದರೆ ಪಡುವಂತಾಗಿತ್ತು. ಈ ನಡುವೆ ಆಗಿನ ಜಿಲ್ಲಾಧಿಕಾರಿಯಾಗಿದ್ದ ಎಸ್.ಎಸ್.ನಕುಲ್, ನಗರದ ಟಿಬಿ ಸ್ಯಾನಿಟೋರಿಯಂನಲ್ಲಿರುವ ಸೂಪರ್ ಸ್ಪೆಷಾಲಿಟಿ ಟ್ರಾಮಾಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದರು. ಜಿಲ್ಲಾ ಖನಿಜ ನಿಧಿಯಿಂದ ಈ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಾಗುತ್ತಿತ್ತು. ಜೊತೆಗೆ ಹೊರಗುತ್ತಿಗೆ ಆಧಾರದ ಮೇಲೆ ಸುಮಾರು ನೂರಕ್ಕೂ ಹೆಚ್ಚು ಹೊರ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈಗ ನಿರ್ವಹಣೆ ವೆಚ್ಚ ಅಧಿಕವಾಗುತ್ತಿದೆ. ಜೊತೆಗೆ ಪ್ರತಿ ತಿಂಗಳಿಗೆ ಅಂದಾಜು 12 ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಬರುತ್ತಿದೆ. ಹೀಗಾಗಿ ಟ್ರಾಮಾಕೇರ್ ಸೆಂಟರ್ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗುತ್ತಿದೆ. ಇದರ ಪರ್ಯಾಯವಾಗಿ ಹಳೆಯ ದಂತ ಮಹಾವಿದ್ಯಾಲಯ ಕಾಲೇಜಿನಲ್ಲಿ ಕೊವಿಡ್ ಪಾಸಿಟಿವ್ ಕೇಸ್‌ಗಳನ್ನು ದಾಖಲಿಸಲು ಅನುಕೂಲವಾಗಲಿದೆ. ಅನುದಾನದ ಕೊರತೆ ಇರುವುದರಿಂದ ಜಿಲ್ಲಾಡಳಿತ ಹಾಗೂ ವಿಮ್ಸ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ನಿರ್ಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಮ್ಸ್ ನಿರ್ದೇಶಕರು ಹೇಳುತ್ತಿದ್ದಾರೆ.
ಆರ್ಥಿಕ ನಿರ್ವಹಣೆ ಸಮಸ್ಯೆಯಿಂದಾಗಿ ಟ್ರಾಮಾಕೇರ್ ಮುಂದಿನ ತಿಂಗಳಿಂದ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಈ ಟ್ರಾಮಾಕೇರ್ ಬಂದ್ ಮಾಡುವುದರಿಂದ ಸುಮಾರು ನೂರಕ್ಕೂ ಅಧಿಕ ಹೊರಗುತ್ತಿಗೆ ನೌಕರರಿಗೆ ಸಂಕಷ್ಟ ಎದುರಾಗಿದೆ. ಈ ತಿಂಗಳುವರೆಗೆ ಮಾತ್ರ ಹೊರಗುತ್ತಿಗೆ ನೌಕರರಿಗೆ ಕೆಲಸ ಕೊಡಲು ವಿಮ್ಸ್ ಮುಂದಾಗಿದೆ. ಇದರಿಂದಾಗಿ ಕೊರನಾ ಮಹಾಮಾರಿ ವಿರುದ್ಧ ಕೊರೊನಾ ವಾರಿಯರ್ಸ್ಗಳಾಗಿ ಕೆಲಸ ಮಾಡಿದ್ದ ನೂರಕ್ಕೂ ಅಧಿಕ ಹೊರಗುತ್ತಿಗೆ ನೌಕರರಿಗೆ ಈಗ ಕೆಲಸ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ನಮ್ಮನ್ನ ಸೇವೆಯಿಂದ ಮುಂದುವರಿಸಿ ಅಂತಾ ಹೊರಗುತ್ತಿಗೆ ನೌಕರರು ಟ್ರಾಮಾಕೇರ್ ಸೆಂಟರ್ನಲ್ಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ಕಳೆದ ನಾಲ್ಕೈದು ತಿಂಗಳಿಂದ ಬಾಕಿ ವೇತನ ಕೂಡ ಬಿಡುಗಡೆ ಮಾಡಿಲ್ಲ. ಕೂಡಲೇ ಬಾಕಿ ವೇತನ ಬಿಡುಗಡೆ ಮಾಡುವಂತೆ ಹೊರಗುತ್ತಿಗೆ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಬಾಗಲಕೋಟೆಯ ಆ ಏಳು ಗ್ರಾಮದ ಜನರು ಹೋಳಿ ಹಬ್ಬ ಆಚರಿಸಲ್ಲ: ಕಾರಣ ಇಷ್ಟೆ..
ಸ್ನೋ ಸ್ಪೇಯಿಂದ ಬೆಂಕಿ; ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳಬಹುದು ಜೋಕೆ