ಅಹಮದಾಬಾದ್: ಸತತ 7 ನೇ ಬಾರಿಗೆ ಗುಜರಾತ್‌ನಲ್ಲಿ ಅಧಿಕಾರಕ್ಕೇರಲೇ ಬೇಕೆಂದು ಖುದ್ದು ಪ್ರಧಾನಿ ನರೇಂದ್ರ ಮೋದಿ(Narendra Modi) ಏಕಾಂಗಿಯಾಗಿ ಸಮಾವೇಶ ರ್ಯಾಲಿ ನಡೆಸಿ ಗುಜರಾತ್ ಚುನಾವಣೆ (Gujarat Assembly Elections 2022) ಅಖಾಡದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದರು. ಚುನಾವಣಾ ಅಖಾಡ ರಂಗೇರಿಸೋ ರಣಕಹಳೆ ಮೊಳಗಿಸಿದ್ದರು. ಗುಜರಾತ್‌ನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚರಿಸಿದ್ದರು. ಇದೀಗ ಎಲ್ಲರ ಚಿತ್ತ ಡಿಸೆಂಬರ್ 8ಕ್ಕೆ ಹೊರಬೀಳಲಿರುವ ಫಲಿತಾಂಶದತ್ತ ನೆಟ್ಟಿದೆ. ಅದಕ್ಕೂ ಮೊದಲು ಚುನಾವಣೆ ಮತಗಟ್ಟೆ ಸಮೀಕ್ಷೆಗಳು(Gujarat exit polls 2022) ಹೊರಬಿದ್ದಿದ್ದು, ಈ ಬಾರಿಯೂ ಸಹ ಬಿಜೆಪಿಗೆ ಪ್ರಚಂಡ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.
ಹೌದು… ಮೋದಿ ಕಂಡರೆ ಗುಜರಾತ್ ಜನರಿಗೆ ಎಷ್ಟು ಕ್ರೇಜ್ ಇದೆ ಎಂದು ಚುನಾವಣೆ ರ್ಯಾಲಿಗಳಲ್ಲಿ ನೋಡಿದ್ದೇವೆ. ಇದಕ್ಕೆ ಅನ್ನೋದು ಮೋದಿ ಅಂದ್ರೆ ಗುಜರಾತ್. ಗುಜರಾತ್ ಎಂದ್ರೆ ಮೋದಿ ಅಂತ. ಆ ಪರಿ ಅಲ್ಲಿನ ಜನಕ್ಕೆ ನರೇಂದ್ರ ದಾಮೋದರ್ ದಾಸ್ ಮೋದಿ ಅಂದ್ರೆ ಪಂಚಪ್ರಾಣ. ಗುಜರಾತ್ ಜನರ ಇದೇ ಕ್ರೇಜ್ ಎಕ್ಸಿಟ್ ಪೋಲ್ ಪ್ರಕಾರ ಮತ್ತೊಂದು ಅವಧಿಗೆ ಬಿಜೆಪಿಗೆ ಅಧಿಕಾರ ಕೊಡಲು ಕಾರಣವಾಗಿದೆ.
16 ವಿಧಾನಸಭಾ ಕ್ಷೇತ್ರ.. 50 ಕಿಲೋ ಮೀಟರ್..!
ಪ್ರಧಾನಿ ನರೇಂದ್ರ ಮೋದಿ, ರೋಡ್ ಶೋ ಮೂಲಕ ದಾಖಲೆ ಮಾಡಿದ್ದಾರೆ. ಭಾರತೀಯ ರಾಜಕಾರಣಿಯೊಬ್ಬರು ಈವರೆಗೂ ನಡೆದಂತ ಅತಿ ದೊಡ್ಡ ರೋಡ್ ಶೋ ನಡೆಸಿದ್ದಾರೆ. ಗುಜರಾತ್‌ನ 2ನೇ ಹಂತದ ಮತದಾನಕ್ಕೂ ಮುನ್ನ, ಪ್ರಧಾನಿ ಮೋದಿ ತಮ್ಮ ತವರಿನಲ್ಲಿ 50 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 16 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು.
ನರೋಡಾ ಗಾಮ್ ನಿಂದ ಪ್ರಾರಂಭವಾದ ಪ್ರಧಾನಿ ನರೇಂದ್ರ ಮೋದಿಯ 50 ಕಿ.ಮೀ ವ್ಯಾಪ್ತಿಯ ರೋಡ್ ಶೋ ಥಕ್ಕರ್ಬಾಪನಗರ, ಬಾಪುನಗರ, ನಿಕೋಲ್, ಅಮ್ರೈವಾಡಿ, ಮಾನಿನಗರ, ದಾನಿಲಿಂಬ್ಡ, ಜಮಾಲ್ಪುರ ಖಾಡಿಯಾ, ಎಲಿಸ್‌ಬ್ರಿಡ್ಜ್, ವೆಜಾಲ್ಪುರ್, ಘಟ್ಲೋಡಿಯಾ, ನಾರಾಣ್ಪುರ್ ಮತ್ತು ಸಬರಮತಿ ಸೇರಿದಂತೆ 16 ವಿಧಾನಸಭೆ ಕ್ಷೇತ್ರಗಳ ಮೂಲಕ ಹಾದುಹೋಗಿ, ಗಾಂಧಿನಗರ ದಕ್ಷಿಣ ಭಾಗದಲ್ಲಿ ಸಮಾಪ್ತಿಗೊಂಡಿತ್ತು. ಸತತ 4 ಗಂಟೆಗಳ ಕಾಲ ಈ ರೋಡ್ ಶೋ ನಡೆದಿತ್ತು. ಪಕ್ಷದ ಬಾವುಟ ಹಿಡಿದು ಸಾವಿರಾರು ಮಂದಿ ಕಾರ್ಯಕರ್ತರು ಈ ದಾರಿಯಲ್ಲಿ ಹೆಜ್ಜೆ ಹಾಕಿದ್ದು, ಮೋದಿ ಗೆಲುವಿಗೆ ಕಾರಣ ಅಂತಿದೆ ಎಕ್ಸಿಟ್‌ಪೋಲ್ ರಿಪೋರ್ಟ್.
ಖರ್ಗೆಯ ‘ರಾವಣ’ ಹೇಳಿಕೆಯಿಂದ ಬಿಜೆಪಿಗೆ ಲಾಭ
ಗುಜರಾತ್‌ನ ಅಹಮದಾಬಾದ್‌ನ ಬೆಹ್ರಾಮ್‌ಪುರದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿ ವೇಳೆ. ಎಐಸಿಸಿ ಅಧ್ಯಕ್ಷ ಖರ್ಗೆ, ನಾವು ನಿಮ್ಮ ಮುಖವನ್ನು ಕಾರ್ಪೊರೇಷನ್ ಚುನಾವಣೆಗಳಲ್ಲಿ, ಎಂಎಲ್‌ಎ ಚುನಾವಣೆಗಳಲ್ಲಿ ಹಾಗೂ ಎಂಪಿ ಚುನಾವಣೆಗಳಲ್ಲಿ, ಹೀಗೆ ಎಲ್ಲ ಕಡೆಯೂ ನೋಡುತ್ತೇವೆ. ನಿಮಗೆ ರಾವಣನ ರೀತಿ 100 ತಲೆಗಳಿವೆಯೇ ಎಂದು ಮೋದಿಯನ್ನ ಟೀಕೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮೋದಿ, ರಾಮ ಭಕ್ತರ ನಾಡಿನಲ್ಲಿ, ಯಾರನ್ನಾದರೂ ರಾವಣ ಎಂದು ಕರೆಯುವುದು ಸರಿಯಲ್ಲ. ಗುಜರಾತ್ ನನಗೆ ನೀಡಿದ ಶಕ್ತಿ ಕಾಂಗ್ರೆಸ್‌ಗೆ ತೊಂದರೆಯಾಗಿದೆ. ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ನಾಯಕರೊಬ್ಬರು ಮತ್ತಿನ್ಯಾರೋ ರಾವಣ ಎಂದು ಹೇಳಿದರು. ಯಾರೋ ರಾಕ್ಷಸ ಎಂದು ಹೇಳಿದರು ಇಂತಹ ಪದಗಳನ್ನು ಬಳಸಿದರೂ ಕಾಂಗ್ರೆಸ್ ಎಂದಿಗೂ ಪಶ್ಚಾತ್ತಾಪ ಪಡುವುದಿಲ್ಲ. ಈ ದೇಶದ ಪ್ರಧಾನಿ ಮೋದಿಯನ್ನು ಅವಮಾನಿಸುವುದು ಅವರ ಹಕ್ಕು ಎಂದು ಕಾಂಗ್ರೆಸ್ ಭಾವಿಸುತ್ತದೆ ಎಂದು ತಿರುಗೇಟು ನೀಡಿದ್ದರು. ಆದ್ರೆ ಖರ್ಗೆ ನೀಡಿದ್ದ ರಾವಣ ಹೇಳಿಕೆ ಬಿಜೆಪಿಗೆ ವರದಾನವಾಗಿದೆಯಂತೆ. ಇದಿಷ್ಟೇ ಅಲ್ಲ, ಕಳೆದ ವರ್ಷವೇ ಆಡಳಿತ ವಿರೋಧಿ ಅಲೆ ಮೆಟ್ಟಲು ಪಿಎಂ ಮೋದಿ, ಸರಕಾರದಲ್ಲಿ ಹೊಸ ಪ್ರಯೋಗ ಮಾಡಿದ್ದರು.
35ಕ್ಕೂ ಹೆಚ್ಚು ರ್ಯಾಲಿ
ಬಿಜೆಪಿಗೆ ಗುಜರಾತ್‌ನಲ್ಲಿ ಮೋದಿ ಬಲವೇ ಪ್ರಮುಖ ಅಸ್ತ್ರವಾಗಿದೆ. ಪ್ರಧಾನಿ ಮೋದಿ 35 ಕ್ಕೂ ಹೆಚ್ಚು ರ್ಯಾಲಿ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಮೋದಿ ಗುಜರಾತ್‌ನಲ್ಲಿ ನಿರಂತರ ಪ್ರವಾಸ ಮಾಡಿದ್ದಾರೆ. ಗುಜರಾತ್‌ನ ಮಣ್ಣಿನ ಮಗ ನಾನು, ತನ್ನ ತವರಲ್ಲಿ ಬಿಜೆಪಿ ಸೋಲಬಾರದು ಎನ್ನುವುದು ಮೋದಿ ಛಲವಾಗಿದೆ. ಒಂದು ವೇಳೆ ಗುಜರಾತ್‌ನಲ್ಲಿ ಸೋತರೆ ಪಕ್ಷದ ಒಳಗೂ ಹೊರಗೂ ಹಿಡಿತ ಕಡಿಮೆಯಾಗಲಿದೆ. ಹೀಗಾಗಿಯೇ ಗುಜರಾತ್ ಗೆಲ್ಲುವುದು ಮೋದಿಗೆ ಬಹುಮುಖ್ಯವಾಗಿದೆ. ಅದೇ ಕಾರಣಕ್ಕೆ ಚುನಾವಣೆಯಲ್ಲಿ ನಾನೇ ಮುಂದೆ ನಿಂತು ಪ್ರಚಾರದ ನೇತೃತ್ವ ವಹಿಸಿದ್ದರು.
ಕಳೆದ ಬಾರಿ ಪಟೇಲ್ ಸಮುದಾಯ ಮೀಸಲಾತಿಗೆ ಬೇಡಿಕೆ ಇಟ್ಟು ಬಿಜೆಪಿ ವಿರುದ್ಧ ನಿಂತಿತ್ತು. ಆದ್ರೆ ಈ ಬಾರಿ ಮೀಸಲಾತಿ ಹೋರಾಟವಿಲ್ಲ, ಪಟೇಲ್ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಟೇಲ್ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹಿರಿಯರಿಗೆ ಕೋಕ್ ನೀಡಿ ಯಂಗ್ ಟೀಂ ಕಣಕ್ಕಿಳಿಸಿದೆ. ಪಟೇಲ್ ಸಮುದಾಯದ ನಾಯಕ ಭೂಪೇಂದ್ರ ಪಟೇಲ್ ಗೆ ಸಿಎಂ ಹುದ್ದೆ ನೀಡಲಾಗಿದೆ. ಕೇಂದ್ರ ಮಂತ್ರಿಗಳು, ಬಿಜೆಪಿ ರಾಜ್ಯಗಳ ಸಿಎಂಗಳು ಗುಜರಾತ್‌ನಲ್ಲಿ ಪ್ರಚಾರ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ಬಾರಿ ದಾಖಲೆಯ 50 ಕಿಲೋ ಮೀಟರ್ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ನಗರ ಪ್ರದೇಶದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದೆ. ಇನ್ನು ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಪ್ರಬಲ ವಿರೋಧ ಪಕ್ಷವಿಲ್ಲದಿರುವುದು, ಕಮಲ ಪಡೆಗೆ ಲಾಭವಾಗಿದೆ. ಕಳೆದ ಬಾರಿ ನೆಕ್ ಟು ನೆಕ್ ಫೈಟ್ ನೀಡಿದ್ದ ಕಾಂಗ್ರೆಸ್, ಎಕ್ಸಿಟ್ ಪೋಲ್ ಪ್ರಕಾರ ಗುಜರಾತ್ ಎಲೆಕ್ಷನ್ ನಲ್ಲಿ ಮುಗ್ಗರಿಸಿ ಬಿದ್ದಿದೆ. ಇದಕ್ಕೆ ಕಾರಣಗಳು ಏನು ಎನ್ನುವುದು ಈ ಕೆಳಗಿನಂತಿದೆ.
ಅಹಮದ್ ಪಟೇಲ್ ನಿಧನದ ಬಳಿಕ ಗುಜರಾತ್ ‘ಕೈ’ ಖಾಲಿ
ಅಹಮದ್ ಪಟೇಲ್ ನಿಧನದ ಬಳಿಕ ಗುಜರಾತ್ ಕಾಂಗ್ರೆಸ್ ಮನೆ ಖಾಲಿಯಾಗಿದೆ. ಗುಜರಾತ್ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕತ್ವ ಇಲ್ಲ. ಕಳೆದ ಚುನಾವಣೆಯನ್ನ ಸೀರಿಯಸ್ ಆಗಿ ತೆಗೆದುಕೊಂಡಿದ್ದ ರಾಹುಲ್, ಈ ಬಾರಿ ಒಂದು ದಿನ ಮಾತ್ರ ನಾಮ್ ಕಾವಸ್ತೆಗೆ ಗುಜರಾತ್‌ನಲ್ಲಿ ಪ್ರಚಾರ ಮಾಡಿದ್ದಾರೆ. ಕೇವಲ ಎರಡು ಪ್ರಚಾರ ಮಾಡಿ ಭಾರತ್ ಜೋಡೋ ಯಾತ್ರೆಯಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ. ಅಳ್ಲದೇ, ಕಾಂಗ್ರೆಸ್ ತೊರೆದು ಅನೇಕ ನಾಯಕರು ಅಂದ್ರೆ, ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್, ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಬಿಜೆಪಿ ಸೇರಿದ್ದಾರೆ. ಇದ್ರಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಬಲ ಕುಗ್ಗಿ ಹೋಗಿದೆ.
ಮೂರು ದಶಕಗಳ ಕಾಲ ಕಾಂಗ್ರೆಸ್ ಬಿಜೆಪಿ ನಡುವೆ ಗುಜರಾತ್‌ನಲ್ಲಿ ದೊಡ್ಡ ಗುದ್ದಾಟವೇ ನಡೆಯುತ್ತಿದೆ. ಆದ್ರೆ ಈ ಬಾರಿ ಮೂರನೇ ಶಕ್ತಿಯಾಗಿ ಆಮ್ ಆದ್ಮಿ ಪಕ್ಷ ಗುಜರಾತ್ ಕಣಕ್ಕೆ ಕಾಲಿಟ್ಟಿತ್ತು. ಕಳೆದೊಂದು ವರ್ಷದಿಂದ ಗುಜರಾತ್‌ನಲ್ಲಿ ಮಿಂಚಿನ ಸಂಚಾರ ನಡೆಸಿದ್ದ ಆಪ್‌ನ ಘಟಾನುಘಟಿ ನಾಯಕರ ಪೊರಕೆ, ಮೋದಿ ಅಲೆಯ ಮುಂದೆ ಸದ್ದು ಮಾಡಿದೆ. ಆದ್ರೆ ಎಕ್ಸಿಟ್ ಪೋಲ್ ಪ್ರಕಾರ ಆಪ್ ಸಾಧನೆ ನಿರಾಶಾದಾಯಕವಾಗಿದ್ದು, ಕಾಂಗ್ರೆಸ್ ಮತಗಳಿಗೆ ಕೈ ಹಾಕಿ, ಗುಜರಾತ್‌ನಲ್ಲಿ ಕಮಲವನ್ನ ಗುಡಿಸುವಲ್ಲಿ ಆಮ್ ಆದ್ಮಿ ವಿಫಲವಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:08 pm, Tue, 6 December 22