AAP: ಅಹಮದಾಬಾದ್ ಆಪ್ ಕಚೇರಿಯ ಮೇಲೆ ಗುಜರಾತ್ ಪೊಲೀಸರ ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 12, 2022 | 10:27 AM

Arvind Kejriwal: ಗುಜರಾತ್ ಜನರಿಂದ ಆಪ್​ಗೆ ಸಿಗುತ್ತಿರುವ ಬೆಂಬಲವು ಬಿಜೆಪಿಯಲ್ಲಿ ಅಭದ್ರತೆ ಹುಟ್ಟುಹಾಕಿದೆ. ಆಪ್ ಪರವಾದ ಅಲೆಯೇ ಬೀಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

AAP: ಅಹಮದಾಬಾದ್ ಆಪ್ ಕಚೇರಿಯ ಮೇಲೆ ಗುಜರಾತ್ ಪೊಲೀಸರ ದಾಳಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Follow us on

ದೆಹಲಿ: ಅಹಮದಾಬಾದ್​ನಲ್ಲಿರುವ ಆಪ್ ಆದ್ಮಿ ಪಕ್ಷದ (Aam Aadmi Party – AAP) ಕಚೇರಿ ಮೇಲೆ ಗುಜರಾತ್ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ. ಗುಜರಾತ್​ನಲ್ಲಿ ಆಪ್​ಗೆ ಸಿಗುತ್ತಿರುವ ಬೆಂಬಲದಿಂದ ಕಂಗಾಲಾಗಿರುವ ಬಿಜೆಪಿಯು ಸಲ್ಲದ ಕ್ರಮಗಳ ಮೂಲಕ ಪಕ್ಷವನ್ನು ಕಟ್ಟಿಹಾಕಲು ಯತ್ನಿಸುತ್ತಿದೆ ಎಂದು ಆಪ್ ಆರೋಪ ಮಾಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಹಮದಾಬಾದ್​ ಭೇಟಿಯ ನಂತರ ಈ ದಾಳಿ ನಡೆದಿದೆ ಎಂದು ಆಪ್​ ಪಕ್ಷದ ಗುಜರಾತ್ ಘಟಕವು ಟ್ವೀಟ್ ಮೂಲಕ ತಿಳಿಸಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ‘ಗುಜರಾತ್ ಪೊಲೀಸರಿಗೆ ಪಕ್ಷದ ಕಚೇರಿಯಲ್ಲಿ ಏನೂ ಸಿಗಲಿಲ್ಲ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಪ್ರಾಮಾಣಿಕತೆಯು ಶಂಕಿಸಲು ಆಗದಷ್ಟು ಸ್ವಚ್ಛವಾಗಿದೆ’ ಎಂದು ಹೇಳಿದ್ದಾರೆ. ಆಪ್ ಪಕ್ಷದ ಆರೋಪದ ಬಗ್ಗೆ ಗುಜರಾತ್ ಪೊಲೀಸರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಗುಜರಾತ್ ಜನರಿಂದ ಆಪ್​ಗೆ ಸಿಗುತ್ತಿರುವ ಬೆಂಬಲವು ಬಿಜೆಪಿಯಲ್ಲಿ ಅಭದ್ರತೆ ಹುಟ್ಟುಹಾಕಿದೆ. ಆಪ್ ಪರವಾದ ಅಲೆಯೇ ಬೀಸುತ್ತಿದೆ’ ಎಂದು ಅರವಿಂದ್ ಕೇಜ್ರಿವಾಲ್​ ಹಿಂದಿಯಲ್ಲಿ ಮಾಡಿರುವ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ‘ದೆಹಲಿಯ ನಂತರ ಗುಜರಾತ್​ನಲ್ಲಿ ದಾಳಿಗಳು ಆರಂಭವಾಗಿವೆ. ದೆಹಲಿಯಲ್ಲಿಯೂ ಅವರಿಗೆ ಏನೂ ಸಿಗಲಿಲ್ಲ, ಗುಜರಾತ್​ನಲ್ಲಿಯೂ ಏನೂ ಸಿಗುವುದಿಲ್ಲ. ನಾವು ದೇಶಭಕ್ತ ಪ್ರಾಮಾಣಿಕ ಜನರಿದ್ದೇವೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅಹಮದಾಬಾದ್​ಗೆ ಕೇಜ್ರಿವಾಲ್ ಭೇಟಿ ನೀಡಿದ ಕೇವಲ 2 ಗಂಟೆಗಳ ನಂತರ ಈ ದಾಳಿಗಳು ನಡೆದಿವೆ ಎಂದು ಆಪ್ ಪಕ್ಷದ ಗುಜರಾತ್ ಘಟಕದ ನಾಯಕ ಐಸೂದನ್ ಗಾಧ್ವಿ ಆರೋಪ ಮಾಡಿದ್ದಾರೆ. ಕಚೇರಿಯಲ್ಲಿ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಹುಡುಕಾಡಿದರು. ಅವರಿಗೆ ಏನೂ ಸಿಗಲಿಲ್ಲ. ಅವರು ಖಂಡಿತ ಮತ್ತೊಮ್ಮೆ ಬರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಇದೇ ವರ್ಷದ ಅಂತ್ಯದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.

Published On - 10:21 am, Mon, 12 September 22